ನವದೆಹಲಿ,ಮೇ,೧೯: ಕಳೆದ ಎರಡು ದಿನಗಳಿಂದ ತೌತೆ ಚಂಡ ಮಾರುತದ ಅಬ್ಬರ ಹೆಚ್ಚಾಗಿದ್ದು ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದು ಎರಡು ರಾಜ್ಯಗಳಲ್ಲಿ ಒಟು ೩೩ ಮಂದಿ ಸಾವನ್ನಪ್ಪಿದ್ದಾರೆ
೧೦೦ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ, ಸೋಮವಾರ ಬೆಳಗಿನಿಂದಲೂ ಆರಂಭವಾಗಿದ್ದು ಈ ಚಂಡಮಾರುತದ ತೀವ್ರತೆ ಈ ಎರಡು ರಾಜ್ಯಗಳ ಕಡಲ ತೀರದಲ್ಲಿ ದೈತ್ಯ ಅಲೆಗಳಿಗೆ ಕೆಲವು ಐತಿಹಾಸಿಕ ಸ್ಮಾರಕಗಳು ಹಾನಿಗೊಳಗಾಗಿವೆ.
ಮಂಗಳವಾರ, ಮಹಾರಾಷ್ಟ್ರ ಕರಾವಳಿಯಲ್ಲಿ ಚಂಡಮಾರುತದ ಪರಿಣಾಮ ಗಾಳಿಗೆ ಎದ್ದ ಸಮುದ್ರದ ದೈತ್ಯ ಅಲೆಗಳು ಗೇಟ್ವೇ ಆಫ್ ಇಂಡಿಯಾ, ಚೌಪಾಟಿ ಮತ್ತು ಮೆರಿನ್ ಡ್ರೈವ್ ಪ್ರದೇಶದಲ್ಲಿ ಟನ್ಗಟ್ಟಲೆ ಕಸವನ್ನು ತಂದುಹಾಕಿವೆ.
ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ತಿಳಿಸಿದ್ದಾರೆ ಗೇಟ್ವೇ ಆಫ್ ಇಂಡಿಯಾ ಬಳಿ ಸಮುದ್ರಕ್ಕೆ ಮುಖಮಾಡಿರುವ ಸುರಕ್ಷತಾ ಗೋಡೆ ಮತ್ತು ಕಬ್ಬಿಣದ ಗೇಟ್ಗಳನ್ನು ಚಂಡಮಾರುತ ಹಾನಿಗೊಳಿಸಿದೆ. ಗಾಳಿಯ ಹೊಡೆತಕ್ಕೆ ಸುತ್ತಮುತ್ತಲಿನ ಕೆಲವು ಕಲ್ಲುಗಳು ಸಹ ಸ್ಥಳಾಂತರಗೊಂಡಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಐತಿಹಾಸಿಕ ಸ್ಮಾರಕದ ಮುಖ್ಯ ರಚನೆಗೆ ಯಾವುದೇ ಹಾನಿಯಾಗಿಲ್ಲ. ಆದರೆ ಅದರ ಸಮೀಪವಿರುವ ಫುಟ್ಪಾತ್ನ ಒಂದು ಭಾಗ ಹಾನಿಗೊಂಡಿದೆ.ನಿರೀಕ್ಷೆಯಂತೆ, ಸೌರಾಷ್ಟ್ರ ಕರಾವಳಿಯ ಮೂಲಕ ತೌತೆ ಚಂಡಮಾರುತವು ಸೋಮವಾರ ಮಧ್ಯರಾತ್ರಿ ಗುಜರಾತ್ ಪ್ರವೇಶಿಸಿತು. ನೆಲಪ್ರವೇಶದ ನಂತರ ಚಂಡಮಾರುತದ ತೀವ್ರತೆ ಕಡಿಮೆಯಾಗಿದೆ. ನೆಲ ಪ್ರವೇಶಿಸುವಾಗ ಗಾಳಿಯು ಪ್ರತಿಗಂಟೆಗೆ ೧೫೦-೧೭೦ ಕಿ.ಮೀ. ವೇಗದಲ್ಲಿ ಬೀಸುತ್ತಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ೧೨೦ ಕಿ.ಮೀ. ವೇಗಕ್ಕೆ ಕುಸಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ತೌತೆ ಚಂಡಮಾರುತವು ಇತ್ತೀಚಿನ ದಶಕಗಳಲ್ಲಿಯೇ ಅತ್ಯಂತ ತೀವ್ರವಾದುದಾಗಿತ್ತು. ಆದರೆ, ಅತ್ಯುತ್ತಮ ಮುನ್ಸೂಚನೆ ವ್ಯವಸ್ಥೆಯಿಂದಾಗಿ ಅಪಾಯದ ಪ್ರದೇಶದಲ್ಲಿದ್ದ ಸುಮಾರು ಎರಡು ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಹಾಗಾಗಿ, ಸಾವು ನೋವಿನ ಪ್ರಮಾಣ ಗಣನೀಯವಾಗಿ ತಗ್ಗಿದೆ