ಕಾಂಗ್ರೆಸ್ ಜನಪ್ರತಿನಿಧಿಗಳ ಪ್ರಧೇಶಾಭಿವೃದ್ಧಿ ಹಣ ಬಿಡುಗಡೆಗೆ ಸಿದ್ದು ಸಿಎಂಗೆ ಪತ್ರ

Share

ಬೆಂಗಳೂರು,ಮೇ,೧೫: ಕಾಂಗ್ರೆಸ್ ಪಕ್ಷದ ಶಾಸಕರು, ವಿಧಾನಸಭಾ ಸದಸ್ಯರ,ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ತಲಾ ಒಂದು ಕೋಟಿರೂ ಗಳನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಕೋರಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಸದಸ್ಯರ ಕ್ಷೇತ್ರಗಳ ಅಭಿವೃದ್ಧಿಗೆಂದು ನೀಡಲಾಗುವ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ೧ ಕೋಟಿ ರೂಪಾಯಿಗಳನ್ನು ಲಸಿಕೆ ಖರೀದಿಸಿ ಜನರಿಗೆ ನೀಡಲು ಉದ್ದೇಶಿಸಿದ್ದೇವೆ. ಇದರಿಂದ ಸುಮಾರು ೯೦ ಕೋಟಿ ರೂಗಳಷ್ಟು ಸಂಗ್ರಹವಾಗುತ್ತದೆ. ಇನ್ನುಳಿದ ಹತ್ತು ಕೋಟಿ ರೂಗಳನ್ನು ಪಕ್ಷದ ವತಿಯಿಂದ ನೀಡಿ ಒಟ್ಟು ೧೦೦ ಕೋಟಿ ರೂಗಳಲ್ಲಿ ಲಸಿಕೆ ಖರೀದಿಸಿ ಐಸಿಎಂಆರ್ ನಿಗಧಿಪಡಿಸಿರುವ ನಿಯಮಗಳಂತೆ ಲಸಿಕೆ ನೀಡುತ್ತೇವೆ. ಆದ್ದರಿಂದ ವಿಳಂಬಕ್ಕೆ ಅವಕಾಶ ನೀಡದೆ ಕೂಡಲೇ ಈ ಯೋಜನೆಗೆ ಅನುಮೋದನೆ ನೀಡಬೇಕು ಮತ್ತು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ .
ಸರ್ಕಾರದ ಸ್ವಯಂಕೃತ ಅಪರಾಧದಿಂದ ಆಡಳಿತದಲ್ಲಿ ಅರಾಜುಕತೆ ಉಂಟಾಗಿದೆ ಹಾಗಾಗಿ ಜವಾಬ್ಧಾರಿಯುತ ಪ್ರತಿ ಪಕ್ಷವಾದ ನಾವು ಸುಮ್ಮನೇ ಕೈಕಟ್ಟಿ ಕೂರಲಾಗದು. ಆದ್ದರಿಂದ ನಮ್ಮ ಪಕ್ಷದ ಮೇಲ್ಮನೆ ಮತ್ತು ಕೆಳಮನೆಯನ್ನು ಪ್ರತಿನಿಧಿಸುತ್ತಿರುವ ಶಾಸಕರು, ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಕೊರೊನಾ ಪ್ರಕ್ರಿಯೆಗೆ ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಹೋಗುತ್ತಿದೆ. ಇದು ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಕೋವಿಡ್ ಅನ್ನು ನಿಯಂತ್ರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಯತ್ನಗಳು ಏನೇನೂ ಸಾಲವು. ಲಸಿಕೆ ವಿಚಾರದಲ್ಲೂ ಕೇಂದ್ರ ಸರ್ಕಾರ ಸಂಪೂರ್ಣ ಯಾಮಾರಿದೆ. ನೀವು ತಪ್ಪು ಮಾಡಿದ್ದೀರಿ ಎಂದರೆ ಬಿಜೆಪಿಯ ಹಲವು ಮುಖಂಡರು ಜನರನ್ನು, ವಿರೋಧ ಪಕ್ಷಗಳನ್ನು, ಮಾಧ್ಯಮಗಳನ್ನು ನಿಂದಿಸುತ್ತಾ ಕೂತಿದ್ದಾರೆ. ಅವರಿಗೆ ಕೋವಿಡ್ ನಿಗ್ರಹಕ್ಕಿಂತ ಜನರಿಗೆ ಸುಳ್ಳು ಹೇಳುವ ಪ್ರಾಪಗಾಂಡ ಮಾಡುವುದೇ ತುರ್ತು ಆದ್ಯತೆಯಾಗಿದೆ ಎಂದಿದ್ದಾರೆ.
ಕುಂಭಮೇಳವನ್ನು ನಡೆಸಲು ಅವಕಾಶ ಕೊಟ್ಟವರಾರು? ಅಲ್ಲಿ ಲಕ್ಷಾಂತರ ಜನ ಸೇರಿದಾಗ ಅದನ್ನು ನೋಡಿ ದೇಶದ ಪ್ರಜ್ಞಾವಂತ ಜನರು ಭಯಪಡುತ್ತಿದ್ದಾಗ ಬಿಜೆಪಿಯ ಹಿರಿಯ ನಾಯಕರು ಉಢಾಫೆ ಮಾತನಾಡಿದರು. ಪಶ್ಚಿಮ ಬಂಗಾಳದ ಚುನಾವಣಾ ರ್ಯಾಲಿಗಳಲ್ಲಿ ಹೆಚ್ಚು ಜನ ಸೇರಿದಾಗ ಪ್ರಧಾನ ಮಂತ್ರಿಗಳೇ ಸಂಭ್ರಮ ಪಟ್ಟು ಮಾತನಾಡಿದರು. ಜನರನ್ನು ಸೇರಿಸಿ ನಡೆಸುತ್ತಿದ್ದ ರ್ಯಾಲಿಗಳ ಕುರಿತು ನ್ಯಾಯಾಲಯಗಳು ಛೀಮಾರಿ ಹಾಕಿದವು. ಇದನ್ನೆಲ್ಲ ಪ್ರಶ್ನಿಸಿದರೆ ಈಗ ಸರ್ಕಾರಗಳಲ್ಲಿರುವ ಜನರು ನಮ್ಮನ್ನು ಟೀಕಿಸಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ
ಕೊರೋನ ನಿಯಂತ್ರಿಸಬೇಕಾದರೆ ಲಸಿಕೆಯೊಂದೇ ಪರಿಹಾರ ಎಂದು ನಾವು ಆರಂಭದಿಂದಲೂ ಹೇಳುತ್ತಾ ಬಂದಿದ್ದೇವೆ. ಆದರೆ ಲಸಿಕೆಗಳ ಪರಿಣಾಮಗಳ ಕುರಿತು, ಸುರಕ್ಷತೆಯ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದೂ ಸಹ ಒತ್ತಾಯಿಸುತ್ತಾ ಬಂದಿದ್ದೇವೆ. ಲಸಿಕೆ ಹಾಕಬೇಡಿ ಎಂದು ನಾವುಗಳಾರು ಇದುವರೆಗೂ ಹೇಳಿಲ್ಲ. ಆದರೆ ಕೇಂದ್ರ ಸರ್ಕಾರ ಮಾಡಿದ್ದೇನು? ಅಮೆರಿಕ, ಯುರೋಪಿಯನ್ ಒಕ್ಕೂಟ, ಇಂಗ್ಲೆಂಡ್, ಬ್ರೆಜಿಲ್, ಏಷ್ಯಾದ ಅನೇಕ ದೇಶಗಳು ಕಳೆದ ವರ್ಷದ ಜುಲೈ, ಆಗಸ್ಟ್ ತಿಂಗಳಲ್ಲೇ ಲಸಿಕೆಗಳ ಕುರಿತಂತೆ ಬೇಡಿಕೆಯನ್ನು ಮಂಡಿಸಿ ಕಂಪೆನಿಗಳಿಗೆ ಸರಬರಾಜು ಆದೇಶಗಳನ್ನು ನೀಡಿದ್ದವು. ಅಮೇರಿಕ ೮೦ ಕೋಟಿ, ಯುರೂಪಿಯನ್ ಒಕ್ಕೂಟ ೧೨೦ ಕೋಟಿ, ಬ್ರೆಜಿಲ್ ೯ ಕೋಟಿ ಲಸಿಕೆಗಳಿಗೆ ಆದೇಶ ನೀಡಿದ್ದವು. ಆದರೆ ನಮ್ಮ ದೇಶ ೨೦೨೧ ರ ಜನವರಿಯಲ್ಲಿ ಆದೇಶ ನೀಡಿದ್ದು ಕೇವಲ ೧.೬೫ ಲಕ್ಷ ಡೋಸ್ ಗಳಿಗೆ ಮಾತ್ರ. ಇದರ ಹೊಣೆಯನ್ನು ಯಾರು ಹೊರಬೇಕು? ವಿರೋಧ ಪಕ್ಷಗಳೇ? ನ್ಯಾಯಾಲಯಗಳೇ? ಮಾಧ್ಯಮಗಳೇ? ಇಲ್ಲ ಜನರೇ? ಆಳುವ ಬಿಜೆಪಿಯ ಮುಖಂಡರ ನಾಲಿಗೆಗೆ ಹೇಗೆ ಇಷ್ಟೊಂದು ಸುಳ್ಳು ಹೇಳಲು ಸಾಧ್ಯ ಎನ್ನುವುದನ್ನು ಹಿಂತಿರುಗಿ ನೋಡಿ ನಿಮಗೆ ತಿಳಿಯುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Girl in a jacket
error: Content is protected !!