ಬೆಂಗಳೂರು,ಮೇ,13: ಆಮ್ಲಜನಕ ಟ್ಯಾಂಕರ್ ಖರೀದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಖನಿಜ ಅಭಿವೃದ್ಧಿ ನಿಧಿ (ಎಂಡಿಎಫ್) ಅಡಿಯಲ್ಲಿ ಲಭ್ಯವಿರುವ ಹಣವನ್ನು ಬಳಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಎಂಡಿಎಫ್ ಅಡಿಯಲ್ಲಿ ಆಕ್ಸಿಜನ್ ಸಂಗ್ರಹಿಸಲು ಅಗತ್ಯವಾದ ಆಮ್ಲಜನಕ ಟ್ಯಾಂಕರ್ ಖರೀದಿಸಲು ಮತ್ತು ಅದನ್ನು ಜಿಲ್ಲೆಯ ಆಸ್ಪತ್ರೆಗಳಿಗೆ ಸಾಗಿಸಲು ಕೋವಿಡ್ -19 ಗೆ ಚಿಕಿತ್ಸೆ ನೀಡಲು ಸಚಿವ ಮುರುಗೇಶ್ ನಿರಾಣಿ ಅವಕಾಶ ಮಾಡಿಕೊಟ್ಟಿದ್ದಾರೆ.
ಅತ್ಯಂತ ಕ್ಷಿಪ್ರಗತಿಯಲ್ಲಿ ಸ್ಪಂಧನೆ ಮಾಡಿದ ಅವರ ಕಾಯ೯ಶೈಲಿಗೆ ಕಟೀಲು ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಚಿವ ಮುರುಗೇಶ್ ನಿರಾಣಿಯವರ ಜೊತೆ ಮಾತುಕತೆ ನಡೆಸಿ ಜಿಲ್ಲೆಯಲ್ಲಿ ಕರೋನಾ ವೈರಸ್ ಸೋಂಕು ತಡೆಗಟ್ಟಲು ಮತ್ತು ಸೋಂಕು ನಿವಾರಣೆಗೆ ಅವಶ್ಯವಿರುವ ಆಕ್ಸಿಜನ್ ಸಂಗ್ರಹಿಸಲು ಮತ್ತು ಸಾಗಿಸಲು 24 ಮೆಟ್ರಿಕ್ ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕರ್ ಖರೀದಿ ಮಾಡಲು ಎಂಡಿಎಫ್ ನಿಧಿ ಬಳಸಿಕೊಳ್ಳುವಂತೆ ಮನವಿ ಮಾಡಿದ್ದರು.
ಅಧ್ಯಕ್ಷರ ಮನವಿ ಮೇರೆಗೆ ಸಚಿವ ನಿರಾಣಿ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅಗತ್ಯವಿರುವ ಕಡೆ ಆಕ್ಸಿಜನ್ ಟ್ಯಾಂಕರ್ ಖರೀದಿಸಲು ತೀರ್ಮಾನಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಬೇಡಿಕೆ ಬಂದರೆ ಸಕಾರಾತ್ಮಕವಾಗಿ ಪರಿಗಣಿಸಲು ಸಚಿವ ನಿರಾಣಿ ತೀಮಾ೯ನಿಸಿದ್ದಾರೆ.
ರಾಜ್ಯದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಗಳು ಅಸ್ತಿತ್ವದಲ್ಲಿದ್ದು,ಇದರಡಿ ಅನೇಕ ಸಮಾಜಿಕ ಕೆಲಸಗಳನ್ನು ಮಾಡಬಹುದಾಗಿದೆ.
ಕುಡಿಯುವ ನೀರು,ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಅಳತೆ,ಆರೋಗ್ಯ,
ಶಿಕ್ಷಣ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಬಂದಿಸಿದ ಕಾರ್ಯಕ್ರಮಗಳನ್ನು ನಡೆಸಬಹುದು.