ಶಿವಮೊಗ್ಗ,ನ,19-ಯಾವುದೇ ವಿಶ್ವವಿದ್ಯಾನಿಲಯಗಳು ಮುಕ್ತ ವಿಚಾರದ ನೆಪದಲ್ಲಿ ಮತೀಯವಾಗಬಾರದು ಎಂದು ಖ್ಯಾತ ಸಾಹಿತಿ, ಸಂಸ್ಕೃತಿ ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಯಾವುದೇ ವಿಶ್ವವಿದ್ಯಾನಿಲಯ ಮುಕ್ತವಾಗಿ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡಿದರೂ ವಿನಃ, ಅಂತಿಮವಾಗಿ ಅದು ಮತೀಯವಾಗದೆ ಇರುವಂತಹ ವಾತಾವರಣವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ತಿಳಿದುಕೊಂಡಿದ್ದೇನೆ ಎಂದರು.
ವಿಶ್ವವಿದ್ಯಾನಿಲಯಗಳು ಅದು ಕೇಳಬೇಕು ಇದು ಕೇಳಬೇಕು ನಿಜ, ಆದರೆ ಯಾರು ಸುಂದರವಾದ ಸುಳ್ಳನ್ನು ಹೇಳುತ್ತಾರೋ ಅದನ್ನು ನಂಬಿ ಬಿಡುತ್ತಾರೆ ನಮ್ಮ ಜನ. ಸುಳ್ಳು ಸುಂದರವಾಗಿರುತ್ತೆ. ಸತ್ಯ ಕಠೋರವಾಗಿರುತ್ತದೆ. ಸುಳ್ಳಿಗೆ ಸಾಕ್ಷಿ ಬೇಕಿಲ್ಲ. ಸತ್ಯಕ್ಕೆ ಸಾಕ್ಷಿ ಕೇಳುವ ಕಾಲ ಇದಾಗಿದೆ. ಹಾಗಾಗಿ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಮುಕ್ತವಾಗಿರೋಣ, ಆದರೆ ಅದನ್ನು ಪ್ರತಿಪಾದಿಸುವಲ್ಲಿ ನಮಗೊಂದು ನಿರ್ದಿಷ್ಠತೆ ಇರಬೇಕು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ವಿಚಾರಗಳಲ್ಲಿ ಮುಕ್ತವಾಗಿರೋಣ, ಆದರೆ ಇಡೀ ಸಮಾಜ ಮತೀಯವಾಗಿರದಂತೆ ನೋಡಿಕೊಳ್ಳೋಣ ಎಂದು ವಿವಿಯಲ್ಲಿ ನಡೆದ ನೆನ್ನೆಯ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರ ಸಂಕಿರಣ ಕುರಿತಾಗಿ ಎಚ್ಚರಿಕೆ ನೀಡಿದರು.
ಯಾವುದೇ ವಿಚಾರಗಳ ಬಗ್ಗೆ ನಮಗೆ ನಿರ್ಧಿಷ್ಟವಾದ ನಿಲುವು ಇರಬೇಕಾಗುತ್ತದೆ. ಅನಂತಮೂರ್ತಿ ಅವರೂ ಇದನ್ನೆ ಹೇಳಿದ್ದು ಬೇರೆಯವರ ವಿಚಾರ ಕೇಳಬಾರದು ಎಂದಲ್ಲ. ಕೇಳುವಾಗ ಸಹ ಮಕ್ಕಳಲ್ಲಿ ಏನು ಪರಿಣಾಮ ಆಗಬಹುದು ಎಂಬುದನ್ನು ಯೋಚಿಸಿ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಶರತ್ ಅನಂತಮೂರ್ತಿ ಅವರನ್ನು ಆಗ್ರಹಿಸಿದರು.
ಸಮಾರಂಭದ ಮುಖ್ಯಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟೀ ನಿರ್ದೇಶಕರಾದ ಅಶೋಕ್ ಎನ್. ಚಲವಾದಿ ಭಾಗವಹಿಸಿದ್ದರು. ಕನ್ನಡ ಭಾರತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕುಲಸಚಿವ ಎ. ಎಲ್ ಮಂಜುನಾಥ್, ಪ್ರೋ. ಶ್ರೀಕಂಠಕೂಡಿಗೆ, ಪ್ರೊ. ಸಣ್ಣರಾಮ, ಪ್ರೊ. ಕೇಶವಶರ್ಮ, ಪ್ರೊ. ಕುಮಾರಚಲ್ಯ ಅವರುಗಳನ್ನು ಗೌರವಿಸಲಾಯಿತು.
