ತೆರಿಗೆ ಹಾಕುತ್ತಾರೆ, ಆದರೆ ರಸ್ತೆಗುಂಡಿ ಮುಚ್ಚಿಸಲ್ಲ, ಇದು ದುಬಾರಿ ಬೆಂಗಳೂರು:  ಆರ್‌.ಅಶೋಕ ಆಕ್ರೋಶ

Share

ಬೆಂಗಳೂರು, ನ, 8-ಕಾಂಗ್ರೆಸ್‌ ಸರ್ಕಾರ ಬೆಂಗಳೂರಿನ ಜನರಿಂದ ತೆರಿಗೆ ಸಂಗ್ರಹ ಮಾಡುತ್ತಿದೆ. ಆದರೆ ರಸ್ತೆಗುಂಡಿ ಮುಚ್ಚಿಸಲ್ಲ, ಕಸ ವಿಲೇವಾರಿ ಮಾಡಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇವಲ ಗ್ಯಾರಂಟಿಯ ಹೆಸರು ಹೇಳಿಕೊಂಡ ಕಾಂಗ್ರೆಸ್‌ ಸರ್ಕಾರ ಎರಡು ವರ್ಷಗಳಲ್ಲಿ ಬೆಂಗಳೂರಿಗೆ ಅನುದಾನ ನೀಡಿಲ್ಲ. 1,800 ಕೋಟಿ ರೂ. ಖರ್ಚು ಮಾಡಿ ರಸ್ತೆಗುಂಡಿ ಮುಚ್ಚಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಮುಚ್ಚಿಸಿದ ಗುಂಡಿಗಳು ಮತ್ತೆ ಸೃಷ್ಟಿಯಾಗಿದೆ. ಬೆಂಗಳೂರಿನ ಜನರಿಗೆ ಈ ಸರ್ಕಾರದ ಕಾರ್ಯವೈಖರಿ ದೊಡ್ಡ ಶಾಪವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವಾರ ಗಡುವು ಕೇಳಿದ್ದು, ಈಗ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಕೇಳಿ ಎನ್ನುತ್ತಿದ್ದಾರೆ. ಈ ಸರ್ಕಾರದ ನಡುವೆ ಹೊಂದಾಣಿಕೆಯೇ ಇಲ್ಲ. ಇದು ಜವಾಬ್ದಾರಿ ಇಲ್ಲದ ಮಾತುಗಳು ಎಂದರು.

ರಸ್ತೆಗುಂಡಿಯಿಂದಾಗಿ ಜನರು ಸಾಯುತ್ತಿದ್ದಾರೆ. ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ವಹಿಸಬೇಕಿತ್ತು. ರಸ್ತೆಗಳನ್ನು ದುರಸ್ತಿ ಮಾಡಿಲ್ಲವೆಂದರೆ ಈ ಸರ್ಕಾರ ಸತ್ತುಹೋಗಿದೆ ಎಂದೇ ಹೇಳಬೇಕು. ಜಲಮಂಡಳಿಯವರು ರಸ್ತೆ ಅಗೆದರೆ ನಂತರ ಅದರಲ್ಲೇ ಬೈಕ್‌ ಹೋಗಬಹುದು. ಇಂತಹ ಸುರಂಗ ಮಾರ್ಗಗಳನ್ನು ಇವರು ತೋಡುತ್ತಿದ್ದಾರೆ. ಪಣತ್ತೂರಿನಲ್ಲೇ ಇದೇ ರೀತಿಯಾಗಿದೆ. ಪಾದಚಾರಿ ಮಾರ್ಗಗಳಲ್ಲೂ ಓಡಾಡಲು ಆಗುತ್ತಿಲ್ಲ. ಬೆಂಗಳೂರನ್ನು ದುಬಾರಿ ಮಾಡಿದ್ದಾರೆ ಎಂದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಗುತ್ತಿಗೆದಾರರು ಕೆಲಸ ಮಾಡಲು ಆಗುತ್ತಿಲ್ಲ. ಇದರಿಂದಾಗಿ ರಸ್ತೆ ಬದಿಗಳಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಒಂದು ಮನೆಗೆ 720 ರೂ. ಕಸ ಶುಲ್ಕ ಸಂಗ್ರಹಿಸುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳಿಗೆ 1800 ರೂ. ಇದ್ದ ಶುಲ್ಕವನ್ನು 17,800 ರೂ. ಮಾಡಿದ್ದಾರೆ. ಆಸ್ಪತ್ರೆಗಳಿಗೆ 9600 ರೂ. ಶುಲ್ಕವಿದ್ದು ಅದನ್ನು 2 ಲಕ್ಷ ರೂ. ಮಾಡಿದ್ದಾರೆ. ಹೀಗೆ ಕಸಕ್ಕಾಗಿ ಕೋಟ್ಯಂತರ ಶುಲ್ಕ ಸಂಗ್ರಹಿಸಿದರೂ ಕಸದ ಮುಕ್ತ ಆಗಿಲ್ಲ. ಇದು ಗಾರ್ಬೇಜ್‌ ಸಿಟಿಯಾಗಿದೆ ಎಂದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದರೆ ದೇಶದ್ರೋಹಿಗಳಿಗೆ ಅನುಕೂಲವಾಗುತ್ತದೆ. ಜೈಲುಗಳಲ್ಲಿ ಮೊಬೈಲ್‌, ಸಿಮ್‌ ಎಲ್ಲವೂ ದೊರೆಯುತ್ತದೆ. ಪರಪ್ಪನ ಅಗ್ರಹಾರ ಉಗ್ರರ ಸ್ವರ್ಗವಾಗಿದೆ ಎಂದರು.

Girl in a jacket
error: Content is protected !!