ಬೆಂಗಳೂರು,ಸೆ,18-ಬೆಂಗಳೂರಿನ ದಾಸನಪುರ, ಕೋಲಾರ ಮತ್ತು ಮೈಸೂರು ಎಪಿಎಂಸಿಗಳಲ್ಲಿ ತಲಾ 50 ಟಿಪಿಡಿ ಬಯೋ ಸಿಎನ್ಜಿ ಪ್ಲಾಂಟ್ ನಿರ್ಮಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಎಪಿಎಂಸಿಗಳಲ್ಲಿ ಪ್ರತಿ ದಿನ ಸಂಗ್ರಹವಾಗುವ ತ್ಯಾಜ್ಯದಿಂದ ಪ್ರಕೃತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದ್ದು, ಶೂನ್ಯ ತ್ಯಾಜ್ಯ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಲು ಈ ತ್ಯಾಜ್ಯ ಬಳಕೆ ಮಾಡಿಕೊಂಡು ಬಯೋ ಸಿಎನ್ಜಿ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ.
ಈ ಮೂರು ಎಪಿಎಂಸಿಗಳಲ್ಲಿ ಪ್ರತಿದಿನ 20ರಿಂದ 30 ಟನ್ ಘನ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ಕಸ ಬಳಕೆ ಮಾಡಿಕೊಂಡು ಬಯೋ ಸಿಎನ್ಜಿ ಪ್ಲಾಂಟ್ ಸ್ಥಾಪನೆ ಮಾಡುವುದರಿಂದ ಸಿಎಪಿಎಂಸಿಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದಷ್ಟೇ ಅಲ್ಲ, ತ್ಯಾಜ್ಯವನ್ನು ಸದ್ಭಳಕೆ ಮಾಡಿಕೊಳ್ಳಬಹುದು.
ಈ ಹಿನ್ನೆಲೆಯಲ್ಲಿ ತಲಾ 24.96 ಕೋಟಿ ರೂ. ವೆಚ್ಚದಲ್ಲಿ ಮೂರು ಎಪಿಎಂಸಿಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್ಜಿ ಪ್ಲಾಂಟ್ ನಿರ್ಮಾಣಕ್ಕೆ ರೂಪಿಸಿರುವ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಇತರ ಕೆಲವು ಎಪಿಎಂಸಿಗಳಲ್ಲೂ ಬಯೋ ಸಿಎನ್ಜಿ ಪ್ಲಾಂಟ್ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದರೂ ತ್ಯಾಜ್ಯ ಪ್ರಮಾಣ ಕಡಿಮೆ ಇರುವ ಕಾರಣ ಹಾಗೂ ನಗರಸಭೆ, ನಗರಪಾಲಿಕೆ ವ್ಯಾಪ್ತಿಯ ತ್ಯಾಜ್ಯ ಮಿಶ್ರಿತವಾಗುತ್ತಿದ್ದು, ಗುಣಮಟ್ಟ ಖಾತರಿ ಇರುವುದಿಲ್ಲ. ಹೀಗಾಗಿ ಸದ್ಯಕ್ಕೆ ಕನಿಷ್ಟ 20ರಿಂದ 30 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿರುವ ಈ ಮೂರು ಎಪಿಎಂಸಿಗಳಲ್ಲಿ ಮಾತ್ರ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.