ಬೆಂಗಳೂರು ವಿ.ವಿ.ಯಲ್ಲಿ ಆತ್ಮೀಯ ಬಿಳ್ಕೊಡಿಗೆ ಸಮಾರಂಭ

Share

ಬೆಂಗಳೂರು ,ಆ,02- ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಸ್.ಹರಿಪ್ರಸಾದ್ ಹಾಗೂ ಆಡಳಿತ ವಿಭಾಗದ ಅಧೀಕ್ಷಕರಾದ ಟಿ.ಪದ್ಮಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿ ಅಭಿನಂದಿಸಲಾಯಿತು.

ಸೆಂಟ್ರಲ್ ಕಾಲೇಜಿನ ಸರ್ ಸಿ.ವಿ.ರಾಮನ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪ್ರಭಾರ ಕುಲಪತಿಗಳಾದ ಪ್ರೊ. ಕೆ.ಆರ್.ಜಲಜಾ, ನೂತನ ಕುಲಸಚಿವರಾದ ನವೀನ್ ಜೋಸೆಫ್, ಕುಲಸಚಿವ (ಮೌಲ್ಯಮಾಪನ) ಪ್ರೊ. ಬಿ.ರಮೇಶ್ ಹಾಗೂ ವಿತ್ತಾಧಿಕಾರಿಗಳಾದ ಎಂ.ವಿ. ವಿಜಯಲಕ್ಷ್ಮಿ ಉಭಯತ್ರರನ್ನು ಸನ್ಮಾನಿಸಿ ಅಭಿನಂದಿಸಿದರು.
ವಿಶ್ವವಿದ್ಯಾನಿಲಯದ ಪ್ರಗತಿಯ ಹಾದಿಯಲ್ಲಿ ಇದರಿಬ್ಬರ ಅತ್ಯಮೂಲ್ಯ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸಿ ನಿವೃತ್ತ ಜೀವನ ಸಂತೋಷಕರವಾಗಿರಲಿ ಎಂದು ಅವರೆಲ್ಲರೂ ಶುಭ ಹಾರೈಸಿದರು.
ಸೆಂಟ್ರಲ್ ಕಾಲೇಜಿನಲ್ಲಿಯೇ ಎಂಎಸ್ಸಿ ಪದವಿ ಪಡೆದು ರಸಾಯನ ಶಾಸ್ತ್ರ ವಿಭಾಗದಲ್ಲಿ ಸುಮಾರು ಮೂರು ದಶಕಗಳ ಕಾಲ ಬೋಧನೆ ಮತ್ತು ಸಂಶೋಧನೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪ್ರೊ. ಹರಿಪ್ರಸಾದ್ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಭಾವಪರಶರಾದರು.
ಪ್ರಖ್ಯಾತ ನೃತ್ಯಗಾರ್ತಿ ಮಾಯಾರಾವ್ ತಂಡದಲ್ಲಿ ಸಂಗೀತ ನಿರ್ದೇಶಕರಾಗಿದ್ದ ತಮ್ಮ ತಂದೆ ಎಂ.ಸುರೇಶ್ ರವರು ಸರ್ ಸಿ.ವಿ.ರಾಮನ್ ಇದೇ ಕೊಠಡಿಯಲ್ಲಿ ಬೆಳಕು ಮತ್ತು ಶಬ್ದ ತರಂಗಗಳ ಕುರಿತು ನಡೆಸಿದ ಪ್ರಯೋಗಕ್ಕಾಗಿ ಅನೇಕ ದಿನಗಳ ಕಾಲ ತಬಲ ನುಡಿಸಿದ್ದ ಸನ್ನಿವೇಶದ ನೆನಪಿನ ಬುತ್ತಿಯನ್ನು ಅವರು ಹೆಮ್ಮೆಯಿಂದ ಬಿಚ್ಚಿಟ್ಟಾಗ ಸಭಿಕರೆಲ್ಲರೂ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ತರಗತಿಯ ಕೊಠಡಿಯಲ್ಲಿಯೇ ಸರ್ ಸಿ ವಿ ರಾಮನ್ ತಮಗೆ ನೊಬೆಲ್ ಪುರಸ್ಕಾರ ತಂದುಕೊಟ್ಟ ಬೆಳಕಿನ ವಕ್ರರೇಖೆಯ ಕುರಿತ ಅನ್ವೇಷಣೆಯ ಸಿದ್ಧಾಂತವನ್ನು ಪ್ರಥಮ ಬಾರಿಗೆ 1928 ಮಾರ್ಚ್ 16ರಂದು ಮಂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Girl in a jacket
error: Content is protected !!