ಸಂಗಾರೆಡ್ಡಿ (ತೆಲಂಗಾಣ),ಜು,01- ಜಿಲ್ಲೆಯ ಪಾರ್ಮಾಸ್ಯೂಟಿಕಲ್ ಘಟಕವೊಂದರಲ್ಲಿ ಸೋಮವಾರ ಬೆಳಗ್ಗೆ ರಿಯಾಕ್ಟರ್ ಸ್ಫೋಟ ಸಂಭವಿಸಿ 34 ಮಂದಿ ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ತೆಲಂಗಾಣ ಆರೋಗ್ಯ ಸಚಿವ ದಾಮೋದರ ರಾಜಾ ನರಸಿಂಹ ತಿಳಿಸಿದ್ದಾರೆ.
ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆರ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾರ್ಮಿಕ ಸಚಿವ ಜಿ. ವಿವೇಕ್ ವೆಂಕಟಸ್ವಾಮಿ, ”ಇಂದು ಬೆಳಗ್ಗೆ 8 ಮಂದಿ ಸಾವನ್ನಪ್ಪಿದ್ದರು. ಮತ್ತೆ ನಾಲ್ಕು ಮಂದಿಯ ಮೃತದೇಹ ಪತ್ತೆಯಾಗಿದೆ” ಎಂದು ಹೇಳಿದ್ದಾರೆ.
ಪಾಶಮಿಲಾರಾಂ ಕೈಗಾರಿಕಾ ಎಸ್ಟೇಟ್ನಲ್ಲಿರುವ ಸಿಗಾಚಿ ಫಾರ್ಮಾ ಘಟಕದ ರಿಯಾಕ್ಟರ್ನಲ್ಲಿ ಸ್ಪೋಟ ಸಂಭವಿಸಿದೆ. ಸಂದೇಹಾಸ್ಪದ ರಾಸಾಯನಿಕ ಕ್ರಿಯೆಯಿಂದ ಅಲ್ಲಿ ಬೆಂಕಿ ಕೂಡ ಹತ್ತಿಕೊಂಡಿದೆ.
ಸ್ಫೋಟ ಸಂಭವಿಸಿದ ಸಂದರ್ಭ ಅಲ್ಲಿ ಸುಮಾರು 150 ಜನರು ಇದ್ದರು ಎಂದು ಕಾರ್ಖಾನೆ ಮೂಲಗಳು ಅಂದಾಜಿಸಿವೆ ಎಂದು ಐಜಿಪಿ (ಮಲ್ಟಿರೆನ್) ವಿ. ಸತ್ಯನಾರಾಯಣ ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಕೂಡಲೇ ಘಟಕದ ನಿರ್ವಾಹಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಅವರು ಅಗ್ನಿ ಶಾಮಕ ಇಲಾಖೆಗೆ ತಿಳಿಸಿದರು. ಬೆಂಕಿ ನಂದಿಸಲು 10 ಅಗ್ನಿ ಶಾಮಕ ವಾಹನಗಳನ್ನು ನಿಯೋಜಿಸಲಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಎಫ್) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಅನಂತರ ಬೆಂಕಿಯನ್ನು ನಂದಿಸಲಾಯಿತು.
ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ‘ಎಕ್ಸ್’ನ ಪೋಸ್ಟ್ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.