ಚಾಮರಾಜನಗರ, ಜೂ,27-ಮಲೇಮಹಾದೇಶ್ವರ ಬೆಟ್ಟದ ಅರಣ್ಯಪ್ರದೇಶದಲ್ಲಿ ಐದು ಹುಲಿಗಳ ಸಾವಿಗೆ ಸಂಬಂಧಿಸಿದಂತೆ ನಾಲ್ವರು ದನಗಾಹಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಹನೂರು ತಾಲೂಕಿನ ಗಾಜನೂರಿನ ನಾಲ್ವರನ್ನ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಹುಲಿಗಳ ಕಳೇಬರ ಸಿಕ್ಕ ಸ್ಥಳದಲ್ಲಿ ಹಸುವಿನ ದೇಹ ಪತ್ತೆಯಾಗಿದ್ದು, ಬೇಟೆಯಾಡಿದ್ದ ಹಸುವಿಗೆ ಕೀಟನಾಶಕ ಸಿಂಪಡಣೆ ಮಾಡಿರುವ ಶಂಕೆ ಹಿನ್ನೆಲೆ ದನಗಾಹಿಗಳನ್ನ ವಶಕ್ಕೆ ಪಡೆಯಲಾಗಿದೆ.
ಮೃತಪಟ್ಟಿರುವ ಹಸು ಯಾರದ್ದು ಎಂಬುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚುತ್ತಿದ್ದು, ಹಸು ಕೊಂದ ಕೋಪಕ್ಕೆ ದನಗಾಹಿಗಳು ವಿಷ ಇಟ್ಟರಾ ಇಲ್ಲವೇ ಇದು ಬೇಟೆಗಾರರ ಕೃತ್ಯವೇ ಎಂಬುದರ ಬಗ್ಗೆ ತನಿಖೆ ನಡೆಯಲಿದೆ. ಮೃತಪಟ್ಟ ಹುಲಿಗಳಲ್ಲಿ ನಾಲ್ಕು ಹೆಣ್ಣು ಹುಲಿ, ಒಂದು ಗಂಡು ಹುಲಿಗಳಾಗಿದ್ದು ಕೆಲವೇ ತಿಂಗಳುಗಳಲ್ಲಿ ಟೆರಿಟರಿ ಮಾಡಿಕೊಳ್ಳುವ ಹಂತದಲ್ಲಿದ್ದವು.
ಇನ್ನು ಪ್ರಕರಣ ಕುರಿತು ತನಿಖೆ ನಡೆಸಲು ಪಿಸಿಸಿಎಫ್ ಬಿ.ಪಿ.ರವಿ ನೇತೃತ್ವದಲ್ಲಿ 6 ಮಂದಿ ತನಿಖಾ ತಂಡ ನೇಮಿಸಲಾಗಿದ್ದು ತಂಡ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. 14 ದಿನದಲ್ಲಿ ಹುಲಿ ಸಾವಿನ ಸಮಗ್ರ ವರದಿ ಕೊಡಲು ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದೆ. ಇಂದು 4 ಮರಿಗಳ ಮರಣೋತ್ತರ ಪರೀಕ್ಷೆ ಬಳಿಕ ಎನ್ ಟಿಸಿಎ ಮಾರ್ಗಸೂಚಿ ಅನ್ವಯ 5 ಹುಲಿಗಳ ಕಳೇಬರ ಅಂತ್ಯಕ್ರಿಯೆ ನಡೆಯಲಿದೆ.