ಬೆಂಗಳೂರು, ಜೂ, 26-ನಿನ್ನೆ ದೇವನಹಳ್ಳಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ಗಳನ್ನು ಏಕಾಏಕಿ ಬಂಧಿಸಿರುವ ಪೊಲೀಸರ ಕ್ರಮ ನಿಜಕ್ಕೂ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಅಮಾನವೀಯ ನಡೆ. ಇದನ್ನು ನಾಡಿನ ಎಲ್ಲ ಜನತೆ ಖಂಡಿಸಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಿ ನೆರೆದಿದ್ದ ಸಾವಿರಾರು ರೈತರುಗಳು ತಮ್ಮ ವಂಶಾನುಗತ ಕೃಷಿ ಭೂಮಿಯ ಹಕ್ಕಿಗಾಗಿ ಕಳೆದ ಸಾವಿರ ದಿವಸಗಳಿಂದ ಹೋರಾಟ ನಡೆಸುತ್ತಿದ್ದಾರೆ. ಮಹಿಳೆಯರು ವೃದ್ಧರು ಎಂಬುದನ್ನು ಸಹ ಪರಿಗಣಿಸದೆ ಪೊಲೀಸರು ಬಂಧನದ ವೇಳೆಯಲ್ಲಿ ನಡೆಸಿದ ದೌರ್ಜನ್ಯ ಯಾವುದೇ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದು. ಈ ಹಿಂದೆ ಯಡಿಯೂರಪ್ಪನವರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ಸಿದ್ದರಾಮಯ್ಯನವರಿಗೊ ಸಹ ರಾಜ್ಯದ ಜನ ತಕ್ಕಪಾಠ ಕಲಿಸುವ ಕಾಲ ಸನ್ಹಿತವಾಗಿದೆ. ಈ ಘಟನೆಗೆ ಸರ್ಕಾರ ಉತ್ತರದಾಯಿತ್ವವಾಗಿರುತ್ತದೆ.
ರಾಜ್ಯದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಎಲ್ಲ ರೈತಾಪಿ ವರ್ಗಗಳ ಮೇಲೆ ಈ ರೀತಿಯ ದೌರ್ಜನ್ಯವನ್ನು ಪಕ್ಷವು ಖಂಡಿಸುತ್ತದೆ ಮತ್ತು ಅವರ ಹೋರಾಟದಲ್ಲಿ ಸದಾಕಾಲ ನಿಲ್ಲುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.