ನಗರ ಪ್ರದೇಶ ವಸತಿ ಹಂಚಿಕೆಯಲ್ಲಿ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಳ: ಡಿ.ಕೆ. ಶಿವಕುಮಾರ್

Share

ಬೆಂಗಳೂರು, ಜೂ.19-“ವಸತಿ ಇಲಾಖೆಯಿಂದ ನಗರ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ವಸತಿಗಳು ಹೆಚ್ಚಾಗಿ ಖಾಲಿ ಇದ್ದು, ಅಲ್ಪಸಂಖ್ಯಾತರು ಈ ಮನೆಗಳಿಗೆ ಹೋಗಲು ಮುಂದಾಗಿದ್ದಾರೆ. ಹೀಗಾಗಿ ಅವರಿಗೆ ನೀಡಲಾಗಿದ್ದ ವಸತಿ ಹಂಚಿಕೆ ಮೀಸಲಾತಿಯನ್ನು ಶೇ. 10 ರಿಂದ 15 ಕ್ಕೆ ಏರಿಕೆ ಮಾಡುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.ಕೆಲವು ನಗರ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಶೇ. 20-30 ರಷ್ಟು ಬಡವರು ಇದ್ದಾರೆ. ಹೀಗಾಗಿ ಅವರಿಗೆ ಮೀಸಲಾತಿ ಹೆಚ್ಚಳ ಮಾಡಲು ಪ್ರಸ್ತಾವನೆ ಬಂದಿದೆ. ಈ ಮನೆಗಳಿಗೆ ಹಣ ಪಾವತಿ ಮಾಡಬೇಕು. ಇತರರು ಇದಕ್ಕೆ ಹೆಚ್ಚಿನ ಆಸಕ್ತಿ ತೋರಿಲ್ಲ. ಬೆಂಗಳೂರಿನಲ್ಲೂ ಅನೇಕ ವಸತಿ ಕಟ್ಟಡಗಳಲ್ಲಿ ಮನೆಗಳು ಖಾಲಿ ಇವೆ. ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಸಹಾಯಧನ ತೀರಾ ಕಡಿಮೆ ಇದೆ. ಈ ಮನೆಗಳನ್ನು ಕಟ್ಟಿದ ನಂತರ ಖಾಲಿ ಬಿದ್ದಿವೆ. ಇವುಗಳನ್ನು ಯಾರಿಗೆ ನೀಡಬೇಕು? ಎಂದು ಪ್ರಶ್ನಿಸಿದರು.

ಮಂಡ್ಯದಲ್ಲಿಯೂ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿಗೆ ಯಾರು ಹೋಗದೇ ಖಾಲಿ ಬಿದ್ದಿವೆ. ಈ ಮನೆಗಳಿಗೆ ಹೋಗಲು ಅಲ್ಪಸಂಖ್ಯಾತರು ಮುಂದಾಗಿದ್ದಾರೆ. ಹೀಗಾಗಿ ಸರ್ಕಾರ ಈ ತೀರ್ಮಾನ ಮಾಡಿದೆ” ಎಂದರು.

ಇದು ಓಲೈಕೆ ರಾಜಕಾರಣ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಯಾರು ಏನಾದರೂ ಹೇಳಿಕೊಳ್ಳಲಿ. ನಾವು ಬಡ ವರ್ಗದ ಜನರಿಗೆ ನೆರವು ನೀಡುತ್ತಿದ್ದೇವೆ. ಈ ಮನೆಗಳಿಗೆ ಯಾರೂ ಅರ್ಜಿ ಹಾಕದೇ ಇದ್ದಾಗ ನಾವು ಏನು ಮಾಡಬೇಕು? ಮನೆಯನ್ನು ಹಾಗೇ ಖಾಲಿ ಬಿಡಬೇಕೇ? ಉಳಿದ ವಿಚಾರವನ್ನು ಕಾನೂನು ಸಚಿವರು ವಿವರಿಸಲಿದ್ದಾರೆ” ಎಂದು ತಿಳಿಸಿದರು.

Girl in a jacket
error: Content is protected !!