ಬೆಂಗಳೂರು, ಮೇ 17-“ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ಕನಕಪುರ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ” ಎಂದು ನಿಕಟಪೂರ್ವ ಸಂಸದ ಡಿ.ಕೆ.ಸುರೇಶ್ ಅವರು ತಿಳಿಸಿದರು.
ಬಮೂಲ್ ಕಚೇರಿಯಲ್ಲಿ ಶನಿವಾರ ನಾಮಪತ್ರ ಸಲ್ಲಿಕೆ ನಂತರ ಹಾಗೂ ಅದಕ್ಕೂ ಮುನ್ನ ತಮ್ಮ ಸದಾಶಿವನಗರ ನಿವಾಸದಲ್ಲಿ ಡಿ.ಕೆ. ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
“ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಎಲ್ಲಾ ಹಿರಿಯ ನಾಯಕರು, ಶಾಸಕರು ಹಾಗೂ ಹಾಲು ಉತ್ಪಾದಕರ ಸಲಹೆ ಹಾಗೂ ಪಕ್ಷದ ನಾಯಕರ ಸೂಚನೆ ಮೇರೆಗೆ ಇಂದು ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಕನಕಪುರ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಮುಖಂಡರ ತೀರ್ಮಾನ ಹಾಗೂ ಸಹಕಾರದೊಂದಿಗೆ ನಾಮಪತ್ರ ಸಲ್ಲಿಸಲಾಗಿದೆ” ಎಂದು ತಿಳಿಸಿದರು.
ವಿಶ್ರಾಂತಿ ಅವಧಿ ಮುಗಿಸಿದ ಮೇಲೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಕಣ್ಣಿಟ್ಟಿದ್ದಾರೆ ಎಂದು ಕೇಳಿದಾಗ, “ಸಧ್ಯಕ್ಕೆ ಕೆಎಂಎಫ್ ವಿಚಾರ ಚರ್ಚೆಯಲ್ಲಿಲ್ಲ. ಕಳೆದ 10 ವರ್ಷಗಳಿಂದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ನಮ್ಮ ಪಕ್ಷದ ಮುಖಂಡರು ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಇದರಲ್ಲಿ ವಿಶೇಷತೆ ಏನೂ ಇಲ್ಲ. ನಾನು ಅವರೆಲ್ಲರ ಜೊತೆ ಇರಬೇಕು ಎಂದು ಒತ್ತಾಯ ಮಾಡಿದ ಕಾರಣಕ್ಕೆ ಜೊತೆಯಾಗಿ ನಿಂತಿದ್ದೇನೆ” ಎಂದರು.
ಮುಂದೆ ನೀವು ಕೆಎಂಎಫ್ ಅಧ್ಯಕ್ಷ ಸ್ಥಾನದ ಅಲಂಕರಿಸುವ ಲೆಕ್ಕಾಚಾರದೊಂದಿಗೆ ನಿಮ್ಮ ನಾಮಪತ್ರ ಕುತೂಹಲ ಮೂಡಿಸಿದೆ ಎಂದು ಕೇಳಿದಾಗ, “ಮಾಧ್ಯಮಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಲೆಕ್ಕಾಚಾರಗಳು ಚರ್ಚೆಯಾಗುತ್ತಿವೆ. ಬೆಂಗಳೂರು ಹಾಲು ಒಕ್ಕೂಟಕ್ಕೆ ಸೇರುವ ಎಲ್ಲಾ ತಾಲೂಕುಗಳು ಹಾಲು ಉತ್ಪಾದನೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಅನೇಕ ರೈತರು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಲು ಹಾಗೂ ರೇಷ್ಮೆ ನಮ್ಮ ರೈತರ ಜೀವನಾಡಿ. ಇವೆರಡಕ್ಕೂ ನ್ಯಾಯ ಕೊಡಿಸುವುದು ಒಕ್ಕೂಟಕ್ಕೆ ಸೇರಿದ ಎಲ್ಲಾ ನಾಯಕರ ಅಭಿಪ್ರಾಯ. ಅವರ ತೀರ್ಮಾನದಂತೆ ಅರ್ಜಿ ಸಲ್ಲಿಸಿದ್ದೇನೆ” ಎಂದರು.
ನಿಮ್ಮ ಸ್ಪರ್ಧೆಯಿಂದ ಡಿ.ಕೆ ಸಹೋದರರು ಹಾಗೂ ದೇವೇಗೌಡರ ಕುಟುಂಬದ ನಡುವಣ ಹೋರಾಟ ಎಂದು ಬಿಂಬಿತವಾಗುತ್ತಿದೆ ಎಂದು ಕೇಳಿದಾಗ, “ಚರ್ಚೆ ಮಾಡುವವರು ಯಾವ ರೀತಿ ಬೇಕಾದರೂ ಚರ್ಚೆ ಮಾಡುತ್ತಾರೆ. ನಮ್ಮ ಉದ್ದೇಶ ರೈತರ ಹಿತ ಕಾಪಾಡುವುದು. ಕ್ಷೀರ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ತರಬೇಕು ಎಂಬ ರೈತರ ಇಚ್ಛೆಗೆ ಕೆಲಸ ಮಾಡಬೇಕು. ಅದನ್ನು ಪಾಲಿಸಲು ನಾನು ಬದ್ಧನಾಗಿದ್ದೇನೆ” ಎಂದರು.
ನಿಮ್ಮ ವಿರುದ್ಧ ಅಭ್ಯರ್ಥಿ ಹಾಕುವ ಬಗ್ಗೆ ರಾಮನಗರದಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿಯಿಲ್ಲ” ಎಂದು ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆಗೆ ಒಪ್ಪದ ನೀವು ಈಗ ನಿರ್ದೇಶಕ ಸ್ಥಾನಕ್ಕೆ ಒಪ್ಪಿರುವುದು ಕುತೂಹಲಕ್ಕೆ ಕಾರಣವಾಗಿ ಎಂದು ಕೇಳಿದಾಗ, “ಜಿಲ್ಲೆಯ ಶಾಸಕರು, ಮಾಜಿ ನಿರ್ದೇಶಕರು, ಅಧ್ಯಕ್ಷರುಗಳು, ಅನೇಕ ಜಿಲ್ಲೆಯ ನಾಯಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದಾಗ ನಾನು ಅವರ ಮಾತುಗಳಿಗೆ ಪಕ್ಷದ ಕಾರ್ಯಕರ್ತನಾಗಿ ತಲೆಬಾಗಬೇಕಾಗುತ್ತದೆ. ಹಿರಿಯರ ಮಾತುಗಳನ್ನು ಸ್ವೀಕಾರ ಮಾಡಿದ್ದೇನೆ, ಕಾದು ನೋಡೋಣ” ಎಂದರು.