ಮನುಷ್ಯ ಮಾಡಲೇ ಬೇಕಾದ ಅಪರಾಧ ಪ್ರೇಮ; ಬೋದಿಲೇರ್

Share

ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು

ಅದೊಂದೇ.. ಒಂದೇ ಪರಿಹಾರ ಸಮಸ್ಯೆಗೆ

ಏನನ್ನು ಕುಡಿಯುವುದು? ವೈನ್‌,ಕಾವ್ಯ,ಋಜುತ್ವ..

ಯಾವುದನ್ನಾದರೂ ಕುಡಿಯುತ್ತಿರಬೇಕು…”

ಲಂಕೇಶ್‌ ಎಂಬ ವಿಸ್ಮಯದ ಬೆರಳಿಡಿದು ಕನ್ನಡಿಗರ ಮನದ ಅಂಗಳಕ್ಕೆ ಮೊದಲು ಇಳಿದ ಲೇಖಕ ಬೋದಿಲೇರ್.‌ ಇಂಗ್ಲೀಷ್‌ ಸಾಹಿತ್ಯದಲ್ಲಿ ವಿಕ್ಷಿಪ್ತ ಬರಹಗಾರರ ಒಂದು ಪರಂಪರೆಯೇ ಇದೆ. ಅಂತಹ ಗಂಡು ಹೆಣ್ಣೆನ್ನದ ಕಪ್ಪು ಮುಖದ ಅನೇಕ ಸಾಹಿತಿಗಳನ್ನು ಯೋಗಪ್ಪನವರ್‌ ಅವರು ರೂಪಕ ಎಂಬ ಪುಸ್ತಕದಲ್ಲಿ ಪರಿಚಯಿಸಿದ್ದಾರೆ. ಈ ಸಾಲಿನಲ್ಲಿ ಜಡಗೊಂಡ ಓದುಗನನ್ನು ಬೆಚ್ಚಿಬೀಳಿಸಲೆಂದೇ ಬರೆದ ಲೇಖಕ ಬೋದಿಲೇರ್.‌

“ ಮನುಷ್ಯ ಸದಾ ರೋಗದ ಬಂಧಿ. ನಮಗೆ ಗೊತ್ತಿರುವುದು ವೈದ್ಯರಿಂದ ವಾಸಿಯಾಗುವ ರೋಗ ಆದರೆ ಮನ ಕೆಡಿಸುವ ರೋಗಗಳು ಹಲವು” ಎಂದು ಹೇಳುವ ಕವಿ ಚಾರ್ಲ್ಸ ಬೋದಿಲೇರ್.‌

ಕವಿ ಲೇಖಕ,ಅನುವಾದಕ,ಕಲಾವಿಮರ್ಶಕ ಮೊದಲಾದ ಪ್ರಕಾರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡರೂ ಬೋದಿಲೇರ್ ಎಂದೊಡನೆ ಎಲ್ಲರ ಕಣ್ಣೆದುರು ಸುಳಿವುದು ಆತನ ʼಪಾಪದ ಹೂಗಳುʼ ಎಂಬ (ದಿ ಪ್ಲವರ್ಸ ಆಫ್ ಇವಿಲ್) ಕೃತಿ.” ಪ್ರೆಂಚ್‌ ಸಾಹಿತ್ಯವನ್ನ ಕುಲಗೆಡಿಸಲೆಂದೇ ಬರೆದ” ಎನ್ನುತ್ತಿದ್ದ ವಿಮರ್ಶಕರು ಅದರ ಸ್ಥಾನ ಯಾವುದು? ಎಂದು ಗುರುತಿಸಲೂ ತಿಣುಕಾಡುತ್ತಿದ್ದರು. ಇದು ರೊಮಾಂಟಿಕ್‌ ಕೋಣೆಯಲ್ಲಿಡಲು ತಕ್ಕುದಲ್ಲ ಅಭಿರುಚಿ ಹೀನ ಅಸ್ಲೀಲತೆಯನ್ನ ಬಿಂಬಿಸುತ್ತದೆ. ಅಥವಾ. ಇದನ್ನು ಕ್ಲಾಸಿಕಲ್‌ ಜಾಗದಲ್ಲೊ ಇಡೋಣವೆಂದರೆ ಇದು ಪರಮ ಪೋಲಿ ಭಾವಗಳ,ಕಾಮದ ಹಾವಳಿಯ ಅವಿವೇಕದ ಧೋರಣೆಯನ್ನು ಹೊತ್ತಿದೆ. ಎಂದರು.

ಈ ಪುಸ್ತಕವು ಪ್ರಕಟವಾದಾಗ ಕೆಲವರಿಗೆ ಅರ್ಥವಾಗಲಿಲ್ಲ. ಕೆಲವರಿಗೆ ಕೊಳಕು ಹುಂಬತನದ ಪುಸ್ತಕ ಎನಿಸಿತು.

ಪರಂಪರೆಯ ವಿರುದ್ಧದ ಯೋಚನೆಯನ್ನು, ಪ್ರಾಯೋಗಿಕ ನೆಲೆಯ ಹೊಸ ಕಾವ್ಯವನ್ನು ಬೋದಿಲೇರ್ ಸೃಷ್ಟಿಸಿದ. ಸಾಂಪ್ರದಾಯಿಕ ಯೋಚನೆಗಳಿಗೆ ಬೆಂಕಿ ಹಚ್ಚಿ ; ಕವಿಗಳೆಂದರೆ ನವಿರಾದ, ಚಲುವಾದ, ಸೌಮ್ಯವಾದ ನಿಗರ್ವಿ ಜನರೆನ್ನುವ ಆ ಕಾಲದಲ್ಲಿಯೇ ಕವಿಗಳೆಂದರೆ ವಿಕ್ಷಿಪ್ತರೂ ಹೌದೆಂಬುದನ್ನ ತೋರಿದಾತ ಬೋದಿಲೇರ್.‌

ತನ್ನ ಜೀವನ ವಿಧಾನದಿಂದ,ಸದಾಕಾಲವೂ.. ನಿಶೆ ,ಜೂಜಾಟ, ಕೊಳೆಗೇರಿಯ ವೇಶ್ಯೆಯರ ಸಹವಾಸಗಳಿಂದ ಉರಿದ ಬೋದಿಲೇರ್ ಕೌಟುಂಬಿಕ ನಿಯತಿಗಳನ್ನು ತೂರಿ ಬಿಸಾಕಿದ ಬಂಡುಕೋರ ಲೇಖಕ.

ತನ್ನ ಕೃತಿಯ ಸುತ್ತಲೂ ಕಾಲದ ಹಂಗಿಲ್ಲದೇ ಜತ್ತಿನಾದ್ಯಂತ ಲಕ್ಷ ಲಕ್ಷ ನಿಷ್ಟಾವಂತ ಅನುಯಾಯಿಗಳನ್ನು ಸೂಜಿಗಲ್ಲಿನಂತೆ ಸೆಳೆದುಕೊಂಡ ಅಪರೂಪದ ಲೇಖಕ ಬೋದಿಲೇರ್.

ಸಮಾಜಿಕರಿಂದ, ಆಳುವವರಿಂದ, ಚಾಂಡಾಳನೆಂದು ಕರೆಸಿಕೊಂಡವ. ಸ್ವತಃ ಬೋದಿಲೇರನೇ “ ನಾನು ಈ ಪರಮ ನೀಚ ಪುಸ್ತಕದೊಳಕ್ಕೆ ನನ್ನೆಲ್ಲಾ ಹೃದಯವನ್ನು, ನನ್ನೆಲ್ಲಾ ಪ್ರೀತಿ, ಧರ್ಮ,ನನ್ನೆಲ್ಲಾ ದ್ವೇಷವನ್ನೂ ಹಾಕಿದ್ದೇನೆ” ಎನ್ನುತ್ತಾನೆ.

ದಿಕ್ಕುತಪ್ಪಿದವರ ಜೀವನವು ಮನೆಯಿಂದ ಮನೆಯವರ ನಡೆಗಳಿಂದಲೇ ಶುರುವಾಗುತ್ತದೆ ಎನ್ನುವುದಾದರೆ ಅದಕ್ಕೊಂದು ಉದಾಹರಣೆ ಬೋದಿಲೇರ್.

ಬೋದಿಲೇರ್‍ನ ತಂದೆ ಪ್ರಾಂಕೋಲಿನ್ ಜೋಸೆಪ್ ಮೂಲತಹ ಪಾದ್ರಿ ತನ್ನ ಅರವತ್ತನೇ ವಯಸ್ಸಿನಲ್ಲಿ ಇಪ್ಪತ್ತಾರರ ಕ್ಯಾರೋಲಿನ್ ಎಂಬುವಳನ್ನು ವಿವಾಹವಾದ. ಈ ಅವಸರ್ಪಿಣಿ ಸಂಬಂಧವೇ ಬಹುಶಃ ಬೋದಿಲೇರ್ ನ ದಿಕ್ಕುತಪ್ಪಿದ ಜೀವನಕ್ಕೆ ಬುನಾದಿಯಾಯಿತು. ಬೋದಿಲೇರ್ ಹುಟ್ಟಿದ ಆರನೇ ವಯಸ್ಸಿಗೇ ಅಪ್ಪನನ್ನು ಕಳೆದುಕೊಂಡ.ಇತ್ತ ಆತನ ತಾಯಿ ಮರುವರ್ಷಕ್ಕೇ ಜಾಕ್ವೆಸ್ ಅಪೀಕ್ ಎಂಬ ಸೈನಿಕನನ್ನು ವಿವಾಹವಾದಳು.ಹೊಸ ಮಲತಂದೆಯ ಆಗಮನ ಬಾಲಕ ಬೋದಿಲೇರ್ ಗೆ ಹಿಡಿಸಲಾರದಾಯಿತು.ಇದರ ಪರಿಣಾಮವೇ ಆತನ ಬದುಕಿನೊಳಗೆ ಕರಾಳ ಜಗತ್ತಿನ ಘಾಟು ಪರಿಮಳ ಹೊಮ್ಮತೊಡಗಿತು! ಬೋದಿಲೇರ್ ದುಂದು ವೆಚ್ಚಕ್ಕೆ ಬಿದ್ದ. ಅಮ್ಮನ ಹಾಗೂ ಹೊಸ ಅಪ್ಪನ ಹಣವನ್ನು ಹೊಳೆಯಂತೆ ಹರಿಸತೊಡಗಿದ.

ಆರಂಭದಲ್ಲಿ ಪ್ರಾನ್ಸನ ಸ್ಯನಿಕ್ ಬೋರ್ಡಿಂಗ್‍ಸ್ಕೂಲ್ ನಲ್ಲಿ ಸೇರಿಸಲ್ಪಟ್ಟ ಆತ ಮೊದಲಬಾರಿಗೆ ಅಪ್ಪನಿಲ್ಲದ ನೋವಿನ ಜೊತೆಗೆ ಅಮ್ಮನ ಸಾಂಗತ್ಯವನ್ನೂ ಕಳೆದುಕೊಳ್ಳತೊಡಗಿದ. ವಾತ್ಸಲ್ಯದ ಸಾಂಗತ್ಯವಿಲ್ಲದ ಆತ ಕರಾಳ ಹಾದಿಗಳಲ್ಲೇ ಸಂತೋಷಗಳನ್ನು ಅರಸುತ್ತಾ..ಕೆಂಪು ಲೋಕಕ್ಕೆ ಕಾಲಿಟ್ಟು ಉಡಾಳನಾಗಿ ಮಾರ್ಪಟ್ಟ.ಗೆಳೆಯರ ನಡುವೆ ದುಂದುಗಾರಿಕೆಗೆ ಬಹುಬೇಗನೇ ಹೆಸರಾದ.

ಒಮ್ಮೆ ತರಗತಿಯ ನಡುವೆಯೇ ಗೆಳೆಯನು ಬರೆದ ದುಷ್ಟ ಚೀಟಿಯನ್ನು ಶಿಕ್ಷಕರು ನೋಡಿ ಕೇಳಿದಾಗ ಅದನ್ನು ನೀಡದೇ ಆ ಚೀಟಿಯನ್ನೇ ನುಂಗಿ ಶಾಲೆಯಿಂದಲೇ ಹೊರಹಾಕಲ್ಪಟ್ಟ.ಬೋದಿಲೇರನ ದುಂದುಗಾರಕೆಯನ್ನು ಸರಿದೂಗಿಸಲಾರದ ಮಲ ಅಪ್ಪನ ತಾಳ್ಮೆಯೂ ಚಲ್ಲವರಿಯಿತು. ಬೋದಿಲೇರನಿಗೆ ಪ್ರಾನ್ಸನ ಹೆಸರಾಂತ ಬಾರ್ ಗಳು, ಸಂಗೀತದ ಕಛೇರಿಗಳು, ಪ್ರಸಿದ್ಧ ಉಡುಪಿನ ವಾಂಛೆಗಳು ಹಾಗೂ ಮಾಂಸದ ಅಡ್ಡೆಯ ಬಿಸುಪಿನ ಕೋಣೆಗಳು ಕಾಡತೊಡಗಿದವು.

ಬೋದಿಲೇರ್ ನ ಈ ನಡೆಗೆ ಮಲತಂದೆ ಸೋತುಹೋದ. ಪತ್ನಿಯ ಅಸಹಾಯಕತೆಯ ನಡುವೆಯೇ ಒಂದು ದಿಟ್ಟ ನಿಲುವಿಗೆ ಬಂದು ಆತ ಬೋದಿಲೇರ್ ನನ್ನು ಭಾರತದ ಕಡೆಗೆ ಹೊರಟ ಹಡಗಿಗೆ ಹತ್ತಿಸಿದ.ಮಹಾ ಉಡಾಳ ಬೋದಿಲೇರ್ ಹಡಗಿನಲ್ಲಿ ಹೊರಟರೂ ಮಾರಿಷಷ್ ಬರುವುದರೊಳಗೇ ಹಡಗು ಇಳಿದು ನಿಂತು ಬಿಟ್ಟ! ಕೆಲವು ದಿನ ಅಲ್ಲಿಯ ಚಲುವಿನ ಸವಿಯನ್ನು ಆಸ್ವಾದಿಸಿ ಹಣದ ಥೈಲಿಯು ಖಾಲಿಯಾದೊಡನೆ ಮತ್ತೆ ಪ್ರಾನ್ಸಿಗೆ ಹೊರಟು ಬಂದುಬಿಟ್ಟ.

ಅಪ್ಪನ ಹಣದ ಹರಿವನ್ನು ಕಳೆದುಕೊಂಡು,ಅಮ್ಮನ ವಾತ್ಸಲ್ಯದ ನೆರಳನ್ನು ಬಿಡಿಸಿಕೊಂಡು ಬೀದಿಯ ಬಿಸಿಲಿಗೆ ಬಿದ್ದ! ಮೊದಲಬಾರಿಗೆ ಅಪ್ಪಟ ಅನಾಥ ಬದುಕನ್ನ ಬದುಕತೊಡಗಿದ.

ವೆಲ್ವೆಟ್‌ ಕೋಟು, ಚಿನ್ನದ ಬೆಲ್ಟು ತೊಡುತಿದ್ದವ, ಸದಾ ಕ್ಲಾಸಿಕ್ ಎನ್ನುತಿದ್ದವ ಅನಿವಾರ್ಯವಾಗಿ ಕೊಳಗೇರಿಯಲ್ಲಿ ಬಿದ್ದು ನರಳತೊಡಗಿತು. ಕೊಳಕು ಬದುಕನ್ನ ಹೀನಾತಿ ಹೀನ ಮತ್ತಿನಲ್ಲಿ ಜೀವಿಸತೊಡಗಿದ. ಈ ಕಾಲದಲ್ಲಿಯೇ.. ಬೋದಿಲೇರ್ ʼನನ್ನು ಇನ್ನಿಲ್ಲದಂತೆ ಬೆನ್ನಟ್ಟಿದ ರಕ್ಕಸಿಯೇ ಜೀನ್ ದುವಾಲ್ ಎಂಬ ಅರೆ ನೀಗ್ರೋ ಹೆಣ್ಣು.

ಜೀನ್‌ ಗೆ ಬದುಕಿನ ನೀತಿ ಹೇಳುವುದೆಂದರೆ ಹುಲಿ ಕರಡಿಗೆ ನೀತಿ ಹೇಳಿದಂತೆ. ಅವಳನ್ನ ಓ ರಾಕ್ಷಸಿ, ನರಕದ ರಾಣಿ ಎಂದ. “ ಮನುಷ್ಯನಾದವ ಮಾಡಲೇ ಬೇಕಾದ ಅಪರಾಧ ಪ್ರೇಮ.” ಎಂದ.

ಆ… ಹೊಸ ಹೊಸ ಬದುಕುಗಳನ್ನೇ ಆತ ಹಾಳೆಗಳ ಮೇಲೆ ಹರವತೊಡಗಿದ. ಬರಹವನ್ನ ಕಾಲ್ಪನಿಕ ಲೋಕದಿಂದ ಬಿಡಿಸಿ ತನ್ನ ಅನುಭವಗಳ ಕಂಪಿನಿಂದಲೇ ಬೆಚ್ಚಿಬೀಳಿಸುವಂತೆ ಬರೆಯತೊಡಗಿದ! ಕಾಲನ ಕತ್ತರಿಯ ನಡುವೆ ಸಿಕ್ಕ ಸುಂದರಿಯರ- ಧ್ಯಾನದಲ್ಲಿರುವಂತೆ ಕಾಣುವ ಬೋದಿಲೇರ್ʼನ ಬರಹವು ವಿಮರ್ಶಕರಿಗೆ ಸಡ್ಡು ಹೊಡೆವಷ್ಟು ಪ್ರಯೋಗಶೀಲವಾಗಿತ್ತು. ಪ್ರಾಮಾಣಿಕತೆಯ ಅಸಲಿ ಸತ್ಯವನ್ನ ಹೇಳುವ ಪುಸ್ತಕ ಅದಾಗಿತ್ತು.

ವಿಮರ್ಶಕ ಸೇಂಟ್ ಬೀವ್ ಈ ಬರಹಗಳನ್ನು ನೋಡಿ ಇವು ಅವಿವೇಕದ ಹೂಗಳು ಎಂದುಬಿಟ್ಟ.” ಬೋದಿಲೇರ್‌ ಓದುಗರನ್ನು ಬೆಚ್ಚಿ ಬೀಳಿಸಿದ್ದ.” ಯಾವನೇ ಲೇಖಕ ಓದುಗರನ್ನು ಬೆಚ್ಚಿಬೀಳಿಸದಿದ್ದರೆ ಹೊಸದನ್ನು ಹೇಳಲಾರ ಎಂಬುದು ಆತನ ನಂಬಿಕೆಯಾಗಿತ್ತು.” ಬೋದಿಲೇರ್ ಹೇಳುವಂತೆಯೇ “ ನನ್ನ ಪುಸ್ತಕ ‘ಪಾಪದ ಹೂಗಳುʼ ದುಷ್ಟವೂ, ಮೈಜುಮ್ಮೆನಿಸುವಷ್ಟು ಸುಂದರವೂ ಆಗಿದೆ. “ ನನ್ನ ಜೀವನದಲ್ಲಿ ಮೊದಲ ಬಾರಿಗೆ ತೃಪ್ತಿ ದೊರೆತಿದೆ. ನನ್ನ ಪುಸ್ತಕ ತುಂಬಾ ಚನ್ನಾಗಿದೆ. ನಾನು ಎಲ್ಲದರ ಬಗ್ಗೆ ತಾಳಿದ ಅಸಹ್ಯ ಮತ್ತು ದ್ವೇಷಕ್ಕೆ ಇದು ನಿತ್ಯಸಾಕ್ಷಿಯಾಗಿ ನಿಲ್ಲುತ್ತದೆ.” ಎಂಬ ನಂಬಿಕೆ ಆತನದು.

“ನಮ್ಮ ರೋಗ ಮತ್ತು ಸಾವು ನಮ್ಮಲ್ಲಿ ಉರಿವ ಎಲ್ಲ ಬೆಂಕಿಗಳನ್ನು ಬೂದಿಯಾಗಿಸುತ್ತವೆ.

ಖರೆಯ, ಅಕ್ಕರೆಯ ಆ ಸುಂದರ ಕಣ್ಣುಗಳನ್ನ; ಮುದ್ದಿನಂತೆ

ಪ್ರಬಲವಾದ ಮುತ್ತುಗಳನ್ನ; ಸೂರ್ಯನ ಪ್ರಖರ ರೇಖೆಗಳಂಥ ಹರ್ಷವನ್ನ.

ಉಳಿವುದೆನು? ಹೇಳಲು ವಿಷಾದವಾಗುತ್ತದೆ.”

ಅಪ್ಪನ ಆಸ್ತಿಯಿಂದ ಬಂದ ಹಣ, ಮಲತಂದೆಯ ಸಹಾಯ, ಅಮ್ಮನ ಹಣ, ಹು ಹೂ.. ಯಾವುವೂ.. ಆತನ ಮನದ ತೀರದ ಅಮಲುಗಳನ್ನು ತೀರಿಸಲಾಗಲಿಲ್ಲ. ಹುಣ್ಣಿಮೆಯ ಅಲೆಗೆ ಹೆಡೆಬಿಚ್ಚಿ ಕೂಡುವ ಸರ್ಪಸಂಬಂಧಗಳಂತೆಯೇ… ಅತನ ದುಂದುಗಾರಿಕೆಯ ತೀವ್ರತೆ ಏರುತ್ತಲೇ ಇತ್ತು.

ಬೋದಿಲೇರ್‌ ಬರು ಬರುತ್ತಾ ಮತ್ತುಗಳೆದುರು ನಿಲ್ಲುವ ತ್ರಾಣವನ್ನೂ ಕಳೆದುಕೊಳ್ಳುವುದರ ಜೊತೆಗೆ ಹಣವಿಲ್ಲದೆಯೂ.. ಆತ ಹತಾಶೆಗೊಂಡ. ಪ್ರಾನ್ಸಿನ ಪುಟ್ ಪಾತ್ ಗಳಲ್ಲಿ ಕೊಳೆಗೇರಿಗಳಲ್ಲಿ ಸಿಕ್ಕ ಸಿಕ್ಕ ವೇಶ್ಯೆಯರ ಹಾಳಾದ ದೇಹಗಳಲ್ಲಿ ಆತ ಆನಂದವನ್ನು ಅರಸತೊಡಗಿದ. ಹಾತೊರೆದ.ಹುತ್ತಗಟ್ಟದೆ ತೆರೆದೂ..ತೊರೆದೂ ಬರೀ ಬೆತ್ತಲಾದ… ಬಯಲಾದ, ಮರುಳುಗಾಡಾದ.ಕಗ್ಗತ್ತಲು ಜಗತ್ತು ಪ್ರವೇಶಿಸಿ ಪಾತಾಳಕ್ಕೆ ಇಳಿಯುತ್ತಾ ಇಳಿಯುತ್ತಾ ಬೋದಿಲೇರ್ ಹಿಂದಿರುಗಿ ಬಾರದಷ್ಟು ದೂರ ಮುಟ್ಟಿಬಿಟ್ಟ. ಕಣ್ಣಿನ ಚಲುವು ಕರಗಿತು,ಮೈಗೆ ಮದನರೋಗವೇ ಹತ್ತಿತು. ಯೌವ್ವನದ ಆತನ ಮೈಯ್ಯ ಕಟ್ಟಡ ಅರ್ಧದಲ್ಲಿಯೇ ಕುಸಿಯಿತು!

ಜನರ ಕಣ್ಣ ಬಣ್ಣಗಳೂ ಕರಗಿದ್ದನ್ನ ನೋಡುವಾಗಲೇ ಆತನ ಕಣ್ಣು ಸಾಮಾಜಿಕ ಅಂದಾಜನ್ನೂ ಕಳಕೊಂಡಿತು. ಆಗ ಬಂದು ಆತನೊಳಗೆ ಒಲವು ಬಿತ್ತಿದ ಚಲುವೆಯೇ ಸಭಾಸ್ಟಿಯರ್.

“ ಬೇಸರದಿಂದ ಮುಖ ಸಿಂಡರಿಸಿಕೊಂಡು ಹೊರಟ ದಾರಿ ಹೋಕ

ನಿನ್ನ ಭುಜ ತಾಕಿದೊಡನೆ ತನಿನ್ನ ತೋಳಿನಿಂದ ಹೊಮ್ಮುವ ಆರೋಗ್ಯದಿಂದ ಉಲ್ಲಾಸಗೊಳ್ಳುತ್ತಾನೆ.” ಎಂದು ಆಕೆಯನ್ನು ಕಂಡು ಬರೆದ. ಸಭಾಸ್ಟಿಯರ್’ಳ ಗುಲಾಬಿ ಸ್ಪರ್ಷ ಮತ್ತು ಹೊರಳು ನೋಟ ಆತನನ್ನ ದಿನವೆಲ್ಲಾ ಕಾಡಿದರೂ ಕೊನೆಗೆ ತನ್ನ ಕವಿತೆಯನ್ನು ! ತಂಗಿ ಎಂಬ ಮಾತಿನೊಂದಿಗೆ ಕೊನೆಗೊಳಿಸಿ ಕಳಿಸಿದ.

ಬೋದಿಲೇರ್’ಗೆ ಸಬಾಸ್ಟಿಯರ್ ಸಂಕೋಚ, ವಿನಯ, ದೇಹವನ್ನು ಮೀರಿದ ಆಕರ್ಷಣೆ ಎಲ್ಲವನ್ನೂ ಕೆರಳಿಸಿದ್ದಳು. ಒಳ್ಳೆಯತನವನ್ನೇ ಮರೆತ ಬೋದಿಲೇರ್ ಸಬಾಸ್ಟಿಯರ್’ಳ ಸಹಾಯವನ್ನು,ಅವಳ ಆಪತ್ಕಾಲದ ನೆರವನ್ನು ಮರೆತುಬಿಟ್ಟ. ಸಖಿಯಾಗಿ ಅರ್ಪಿಸಿಕೊಂಡವಳ ಜೊತೆಗೆ ಇರದಾಗದೇ ಅವಳನ್ನೇ ತಿರಸ್ಕರಿಸಿದ.

ಬೋದಿಲೇರ್‌ ಕುಸಿಯುತಿದ್ದ. ಕಪ್ಪು ರಕ್ಕಸಿಯ ಕಾಮಕ್ಕೆ ಶರಣಾದ. ಜೀನ್ ದುವಾಲ್ ಮತ್ತೆ ಮತ್ತೆ ಅವನನ್ನು ಹಂಗಿಸಿದಳು,ಅವಮಾನಿಸಿದಳು. ಅಚ್ಚರಿ ಹುಟ್ಟಿಸಿದಳು. ತನ್ನ ವಿಟರ ದಲ್ಲಾಳಿಯಾಗಿಸಿದಳು. ಆತ ಮಾತ್ರ ಎಲ್ಲವನ್ನೂ ಎತ್ತಿ ಬಿಸಾಡಿ ಅವಳೆದೆಯಲ್ಲಿ ಮುಖವಿಟ್ಟು ಮರೆತುಬಿಡುತಿದ್ದ.ಬೋದಿಲೇರ್ ದುವಾಲ್ ಕೂದಲ ಮೇಲೊಂದು ಕವಿತೆ ಬರೆದ.

“ ನಿನ್ನ ಕೂದಲಿನ ಭುಗಿಲೆನ್ನುವ ಒಲೆಯಲ್ಲಿ ಹೊಗೆಸೊಪ್ಪಿನ, ಅಫೀಮಿನ ಸಕ್ಕರೆಯ ಸ್ವಾದ ಕಾಣುತ್ತೇನೆ, ನಿನ್ನ ಕೂದಲ ರಾತ್ರಿಯಲ್ಲಿ ಉಷ್ಣವಲಯದ ಅನಂತ ಕಾಂತಿ ಕಾಣುತ್ತೇನೆ. ನಿನ್ನ ಗುಂಗುರುಗಳ ತೀರದಲ್ಲಿ ಟಾರು, ಎಣ್ಣೆ, ಕಂದು, ಗಂಧಗಳ ಗೊಂದಲ ಕಾಣುತ್ತೇನೆ.

ಇರು, ನಿನ್ನ ಘನ ಕೇಶರಾಶಿಯನ್ನು ಕಚ್ಚುವೆ; ಹೀಚುವ , ಬಂಡೇಳುವ ನಿನ್ನ ಕೂದಲನ್ನು ಹಲ್ಲಿನ ನಡುವೆ ಕಚ್ಚಿಕೊಂಡಾಗ ನಾನು ನನ್ನ ನೆನಪುಗಳನ್ನು ತಿನ್ನುತ್ತಿರುವೆ, ಅನ್ನಿಸುತ್ತದೆ.”

ಬೋದಿಲೇರ್ ತನ್ನ ಕವಿತೆಗಳಿಂದ ಮಾತ್ರವಲ್ಲ ತನ್ನ ಲೇಖನಗಳಿಂದಲೂ ಪ್ರಸಿದ್ಧನಾದ. ಪ್ರಾನ್ಸಗೆ ಪ್ರಾನ್ಸ ಕ್ರಾಂತಿಗೆ ತನ್ನನ್ನ ಅರ್ಪಿಸಿಕೊಂಡ ಆತ ಎಂದಿಗೂ ಮರೆಯಬಾರದ ಜೀವ. ಮೇಜು ಮೇಜುವಾನಿಕೆ ಪ್ರೇಮ ಕಾಮ ಮತ್ತು ಮತ್ತುಗಳು ಮಾತ್ರದಿಂದ ಅವನನ್ನು ಅಳೆಯಬಾದು. ಕಲ್ಪನೆ ಆದರ್ಶಕ್ಕಿಂತಲೂ ವರ್ತಮಾನಕ್ಕೆ ಮಿಡಿದ ಆತನ ಸಾಲುಗಳನ್ನ ಸಾಹಿತ್ಯ ಲೋಕ ದೊಡ್ಡ ಬೆಲೆ ನೀಡಿಯೇ ಕಾಲಾಂತರದಲ್ಲಿ ಸ್ವಾಗತಿಸಿರುವುದನ್ನ ಮರೆಯಬಾರದು.

ದೇಹಲೋಕಗಳ ಆಚೆ ವಿಮೋಚನೆಯ ಕ್ರಾಂತಿಯೂ ಆತನನ್ನ ಸೆಳೆದಿತ್ತು.1848ರ ಪ್ರಾನ್ಸನ ಕ್ರಾಂತಿಯ ಚರಿತ್ರೆಯಲ್ಲಿ ಈತನ ಪಾಲೂ ಇರುವಂತೆ ಬೋದಿಲೇರ್ ಪತ್ರಿಕೆಗಳಲ್ಲಿ ತನ್ನ ಲೇಖನಗಳಿಂದಲೇ ಬೋದಿಲೇರ್ ಗಮನ ಸೆಳದಾತ.

ಬೋದಿಲೇರ್’ನ ಜೀವನ ಚರಿತ್ರೆ ಹೆಣ್ಣಿಗಾಗಿ ಮಾತ್ರ ಪೋಲಾಗದಂತೆ ಕಂಡರೂ ಆಳದಲ್ಲಿ ಆತನ ಜೀವನ ಕಥನವು ಗೆಳೆತನಕ್ಕಾಗಿ ಮಿಡಿದದ್ದನ್ನು ಗೆಳೆತನದಿಂದ ಹೊಳಪುಗೊಂಡದ್ದನ್ನು ಕಾಣಬಹುದು.

ಬಾಲ್ಯದಲ್ಲಿ ಗೆಳೆಯನಿಗೆ ಶಿಕ್ಷೆಯಿಂದ ಪಾರುಮಾಡಬೇಕೆಂದೇ ತಾನೇ ತಪ್ಪು ಮೇಲೆಳೆದುಕೊಂಡು ಡಿಬಾರ್ ಎಂಬ ಆದೇಶಕ್ಕೆ ಈಡಾದ. ಕಾಲಾಂತರದಲ್ಲಿ ಆಧುನಿಕ ಪ್ರಾನ್ಸನ ಹೆಸರಾಂತ ಲೇಖಕ ಗೆಳೆಯ ಎಡ್ವರ್ಡ ಮಾನೆಟ್ ನ ಸಹಕಾರದಿಂದಲೇ ಬೋದಿಲೇರ್ ತನ್ನೊಳಗಿನ ಕಲಾವಿದನನ್ನು ಹಾಗೂ ಸಂಗೀತಗಾರನನ್ನೂ ಕವಿಯನ್ನೂ ಬೆಳಳಕಿಗೆ ತರಲು ಸಾಧ್ಯವಾಯಿತು.

ಬೋದಿಲೇರ್ ಮನೆಯ ಚೌಕಟ್ಟನ್ನೂ ಮನದ ಬಯಲನ್ನೂ ಬಿಡದೆ ಬೆನ್ನಟ್ಟಿ ಬರೆದ.

“ ಎಲ್ಲೋ ಒಬ್ಬ ಮಾತ್ರ ತನ್ನ ಮನೆಯ ಬೆಚ್ಚಗಿನ ಬೆಂಕಿಯ ಹತ್ತಿರ ಪ್ರೀತಿಸುವ ವ್ಯಕ್ತಿಯೊಂದಿಗೆ ಉಣ್ಣಲು ಉಳಿಯುತ್ತಾನೆ. ಬಹುಪಾಲು ಜನಕ್ಕೆ ಮನೆಯೆಂದರೇನೆಂದು ಗೊತ್ತಿಲ್ಲ.- ಅವರು ಬದುಕಿಯೇ ಇರುವುದಿಲ್ಲ!”

Girl in a jacket
error: Content is protected !!