ಬೆಂಗಳೂರು, ಏ, 24– ಸಾರ್ವಜನಿಕರಿಮದ ದೂರುಗಳು ಬಾರದ ರೀತಿಯಲ್ಲಿ ಘನತ್ಯಾಜ್ಯದ ಸೂಕ್ತ ನಿರ್ವಹಣೆ ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಕೆಲಸ ನಿರ್ವಹಿಸಬೇಕೆಂದು ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್. ಪಾಟೀಲ್ ಸೂಚಿಸಿದರು.
ಕಸ ವಿಲೇವಾರಿ, ಬೀದಿ ನಾಯಿಗಳ ಹಾವಳಿ, ಕೆರೆ ನೈರ್ಮಲೀಕರಣ ಹಾಗೂ ಇನ್ನಿತರ ವಿಷಯಗಳ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿ ಬಿ.ಬಿ.ಎಂಪಿ ವಲಯದ ಅಧಿಕಾರಿಗಳನ್ನು ಪ್ರಕರಣ ಸಂಬಂಧ ಇಂದು ತಮ್ಮ ಕಚೇರಿಯಲ್ಲಿ ವಿಚಾರಣೆ ನಡೆಸಿದರು.
ನಗರದಲ್ಲಿ ಬೀದಿ ನಾಯಿಗಳ ನಿರ್ವಹಣೆಗೆ ಸಂಬಂಧಿಸಿದಂತೆ, ಇವುಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗುತ್ತಿದೆ. ನಗರದಲ್ಲಿ ಒಟ್ಟು ಎರಡು ಲಕ್ಷ ಎಪ್ಪತೊಂಭತ್ತು ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ಇವುಗಳಲಗಲಿ ಮೂವತ್ತೈದು ಸಾವಿರಕ್ಕೂ ಹೆಚ್ಚು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ. ಇದಕ್ಕೆ ಸರ್ಕಾರದಿಂದ 60 ಕೋಟಿ ಅನುದಾನ ದೊರೆತಿದ್ದು, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸಹಯೋಗದಿಂದ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ ನಂತರ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿಗಳು, ನಗರ ಪ್ರದೇಶ ಅಷ್ಟೇ ಅಲ್ಲದೆ ಗ್ರಾಮಪಂಚಾಯತಿ ಮಟ್ಟದಲ್ಲಿಯೂ ಸಹ ಈ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವ, ಸಂವಹನ ಸಹ ಮುಖ್ಯ. ಪ್ರಾಣಿಗಳಿಗೆ ಕ್ರೌರ್ಯ ತೋರದೆ ಸಹನೆಯಿಂದ ವರ್ತಿಸಬೇಕೆಂದು ತಿಳಿಸಿದರು.
ಕೆರೆ ಮಾಲಿನ್ಯ, ಘನತ್ಯಾಜ್ಯ ಕೆರೆಗಳಿಗೆ ಪ್ರವೇಶಿಸುವುದನ್ನು ತಡೆಯಲು ಬಿ.ಬಿ.ಎಂ.ಪಿ. ಹಾಗೂ ಜಲಮಂಡಳಿಯ ಅಧಿಕಾರಿಗಳು ಜಂಟಿಯಾಗಿ ಕೆಲಸ ನಿರ್ವಹಿಸಬೇಕು. ಜಕ್ಕೂರು ಕೆರೆಯನ್ನು ತ್ಯಾಜ್ಯ ಮುಕ್ತ ಕೆರೆಯನ್ನಾಗಿ ಮಾಡಬೇಕು ಎಂದರು.
ಕಸ ವಿಲೇವಾರಿ ಕುರಿತು ಬಿ.ಬಿ.ಎಂ.ಪಿ ಹಣಕಾಸು ಹಾಗೂ ಕಸ ವಿಲೇವಾರಿ ವಿಭಾಗದ ವಿಶೇಷ ಆಯುಕ್ತರಾದ ಕೆ. ಹರೀಶ್ ಕುಮಾರ್ ಮಾತನಾಡಿ, ಹಸಿಕಸ, ಒಣಕಸ ಹಾಗೂ ನೈರ್ಮಲ್ಯ ತ್ಯಾಜ್ಯಗಳನ್ನು ಬಿ.ಬಿ.ಎಂ.ಪಿ ವತಿಯಿಂದ “ಮನೆಯಿಂದ ಮನೆಗೆ” ಸಂಗ್ರಹ ಮಾಡಲಾಗುತ್ತಿದೆ. 100 ಕೆ.ಜಿ.ಗಿಂತ ಹೆಚ್ಚಾಗಿ ಉತ್ಪಾದನೆಯಾದ ಕಸವನ್ನು ಸಗಟು ಕಸ ಎಂದು ಪರಿಗಣಿಸಲಾಗುವುದು. ಬಹುತೇಕರು ಸಗಟು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದ ಕಸ ವಿಲೇವಾರಿಯಲ್ಲಿ ತೊಡಕಾಗುತ್ತದೆ. ಕಸ ವಿಲೇವಾರಿ ನಿರ್ವಹನೆಗೆ 24 ಗಂಟೆಗಳ ಕಮಾಂಡ್ ಸೆಂಟರ್ ಕಾರ್ಯ ನಿರ್ವಹಿಸುತ್ತದೆ. ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಕೆಲಸವನ್ನು ಬಿ.ಬಿ.ಎಂಪಿ ಮಾಡಿದೆ ಎಂದರು.
ಕಸ ವಿಲೇವಾರಿಗೆ ಈಗ ಹೊಸ ರೂಪವನ್ನು ನೀಡಲಾಗುವುದು. ತಂತ್ರಜ್ಞಾನ ಹಾಗೂ ಕೃತಕ ಬುದ್ದಿಮತ್ತೆ ಆಧಾರಿತ ವಿಧಾನಗಳನ್ನು ಅಳವಡಿಸುವ ಚಿಂತನೆ ನಡೆಯುತ್ತಿದೆ. ಸಾರ್ವಜನಿಕರಿಂದ ಕಸ ವಿಲೇವಾರಿಗೆ ಸಂಗ್ರಹವಾದ ಹಣ ಹಾಗೂ ಆಸ್ತಿ ತೆರಿಗೆ ಹಣವನ್ನು ಸಹ ಇದಕ್ಕೆ ಸದಬಳಕೆ ಮಾಡಿಕೊಳ್ಳಲಾಗುವುದು. ರಸ್ತೆಗಳನ್ನು ಶುಚಿಯಾಗಿಟ್ಟು, ನಿಗದಿತ ಸಮಯದಲ್ಲಿ ಸಂಪನ್ಮೂಲ ಬಳಸಿ ಸಮರ್ಪಕವಾಗಿ ನಾವು ಕೆಲಸ ನಿರ್ವಹಿಸಬೇಕೆಂದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕಯುಕ್ತ ನ್ಯಾಯಮೂರ್ತಿಗಳು ಕಸ ವಿಲೇವಾರಿಯಲ್ಲಿ ಯಾವುದೇ ಲೋಪವಾಗದಂತೆ ಬಿ.ಬಿ.ಎಂಪಿ ನಿಗದಿತ ಗುರಿ ಮುಟ್ಟಬೇಕು. ಸಾರ್ವಜನಿಕರಿಂದ ಯಾವುದೇ ದೂರು ಬಾರದ ರೀತಿಯಲ್ಲಿ ನಡೆಯಬೇಕು. ಬೇಕಾಬಿಟ್ಟಿ ಕಸ ಎಸೆಯುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳ ಕಾರ್ಯದರ್ಶಿಗಳು ಹಾಗೂ ಹಿರಿಯ ನ್ಯಾಯಮೂರ್ತಿಗಳಾದ ಶ್ರೀನಾಥ್. ಕೆ ಉಪಸ್ಥಿತರಿದ್ದರು.