ಮುಲ್ಲಾನ್ಪುರ,ಏ,೨೦– ತವರಿನ ಅಂಗಳ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಪಂಜಾಪ್ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಐದನೇ ಗೆಲುವು ಪಡೆದಿದ್ದಾರೆ.
ತವರಿನಲ್ಲಿ ಅನುಭವಿಸಿದ್ದ ಸೋಲಿಗೆ ಬೆಂಗಳೂರು ಬಾಯ್ಸ್, ಪಂಜಾಬ್ಗೆ ನುಗ್ಗಿ ಅಯ್ಯರ್ ಪಡೆಯನ್ನು ಬಗ್ಗುಬಡಿದಿದೆ. ಈ ಮೂಲಕ ಸೋಲಿನ ಲೆಕ್ಕಾಚಾರ ಚುಕ್ತ ಮಾಡುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಶಸ್ವಿಯಾಗಿದೆ. ೧೫೮ ರನ್ಗಳ ಗುರಿಯನ್ನು ೭ ವಿಕೆಟ್ ಅಂತರದಲ್ಲಿ ಆರ್ಸಿಬಿ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಪಂಜಾಬ್ ಕಿಂಗ್ಸ್ ನೀಡಿದ್ದ ೧೫೮ ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಆರ್ಸಿಬಿ ತಂಡವು ಮೊದಲ ಓವರ್ನಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಫಿಲ್ ಸಾಲ್ಟ್ ಕೇವಲ ಒಂದು ರನ್ ಗಳಿಸಿ ಅರ್ಶದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಜತೆಯಾದ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯಿತು.
ಆರಂಭದಿಂದಲೇ ಚುರುಕಾಗಿ ರನ್ ಗಳಿಸಿದ ಈ ಜೋಡಿ ಎರಡನೇ ವಿಕೆಟ್ಗೆ ಆಕರ್ಷಕ ೧೦೩ ರನ್ಗಳ ಜತೆಯಾಟವಾಡಿತು. ಸ್ಪೋಟಕ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ ೩೫ ಎಸೆತಗಳನ್ನು ಎದುರಿಸಿ ೫ ಬೌಂಡರಿ ಹಾಗೂ ೪ ಸಿಕ್ಸರ್ ಸಹಿತ ೬೧ ರನ್ ಗಳಿಸಿ ಹಪ್ರೀತ್ ಬ್ರಾರ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ೫೪ ಎಸೆತಗಳನ್ನು ಎದುರಿಸಿ ೭ ಬೌಂಡರಿ ಹಾಗೂ ೧ ಸಿಕ್ಸರ್ ಸಹಿತ ೭೩ ರನ್ ಗಳಿಸಿ ಅಜೇಯರಾಗುಳಿದರು. ಇನ್ನು ಮತ್ತೊಂದು ತುದಿಯಲ್ಲಿ ನಾಯಕ ೧೨ ರನ್ ಗಳಿಸಿದರೆ, ಜಿತೇಶ್ ಶರ್ಮಾ ೧೧ ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆಯಿತಾದರೂ, ಕೃನಾಲ್ ಪಾಂಡ್ಯ ಹಾಗೂ ಸುಯಾಶ್ ಶರ್ಮಾ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಪಂಜಾಬ್ ಕಿಂಗ್ಸ್ ಆರಂಭಿಕ ಬ್ಯಾಟರ್ಗಳಾದ ಪ್ರಿಯಾನ್ಶ್ ಆರ್ಯಾ ಹಾಗೂ ಪ್ರಭ್ಸಿಮ್ರನ್ ಸಿಂಗ್ ಜೋಡಿ ಕೇವಲ ೪.೨ ಓವರ್ಗಳಲ್ಲಿ ೪೨ ರನ್ಗಳ ಜತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೃನಾಲ್ ಪಾಂಡ್ಯ ಯಶಸ್ವಿಯಾದರು. ೨೨ ರನ್ ಗಳಿಸಿದ್ದ ಪ್ರಿಯಾನ್ಶ್ ಆರ್ಯಾ ಹಾಗೂ ೩೩ ರನ್ ಗಳಿಸಿದ ಪ್ರಭ್ಸಿಮ್ರನ್ ಸಿಂಗ್ ಅವರನ್ನು ಬಲಿ ಪಡೆಯುವಲ್ಲಿ ಕೃನಾಲ್ ಪಾಂಡ್ಯ ಯಶಸ್ವಿಯಾದರು.
ಇನ್ನು ಲಿಯಾಮ್ ಲಿವಿಂಗ್ಸ್ಟೋನ್ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ರೊಮ್ಯಾರಿಯೋ ಶೆಫರ್ಡ್ ತಾವೆಸೆದ ಮೊದಲ ಓವರ್ನಲ್ಲೇ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಕಳೆದ ಪಂದ್ಯದಲ್ಲಿ ಆರ್ಸಿಬಿ ಸೋಲಿಗೆ ಕಾರಣವಾಗಿದ್ದ ನೆಹಾಲ್ ವದೇರಾ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಇನ್ನು ೨೯ ರನ್ ಗಳಿಸಿದ್ದ ವಿಕೆಟ್ ಕೀಪರ್ ಬ್ಯಾಟರ್ ಹಾಗೂ ಒಂದು ರನ್ ಗಳಿಸಿದ ಮಾರ್ಕಸ್ ಸ್ಟೋನಿಸ್ ಅವರನ್ನು ಒಂದೇ ಓವರ್ನಲ್ಲಿ ಬಲಿ ಪಡೆಯುವಲ್ಲಿ ಸುಯಾಶ್ ಶರ್ಮಾ ಯಶಸ್ವಿಯಾದರು.