ಬೆಂಗಳೂರು,ಏ.೨೦-ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರನ್ನು ಅವರ ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಎಚ್ ಎಸ್ ಆರ್ ಲೇಔಟ್ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ.
ಕರ್ನಾಟಕದ ಕೇಡರ್ ೧೯೮೧ರ ಬ್ಯಾಚ್ ಐಪಿಎಸ್ ಅಧಿಕಾರಿ ಆಗಿದ್ದ ಓಂ ಪ್ರಕಾಶ್ ಅವರು ೨೦೧೫ರಲ್ಲಿ ರಾಜ್ಯದ ಡಿಜಿ, ಐಜಿಪಿ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರು ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ದರು. ಇನ್ನು ಭಾನುವಾರ ಮಧ್ಯಾಹ್ನದ ವೇಳೆ ಓಂ ಪ್ರಕಾಶ್ ಅವರು ಮನೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದರು. ಪರಿಶೀಲನೆ ಮಾಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಇನ್ನು ಓಂ ಪ್ರಕಾಶ್ ಅವರನ್ನು ಸ್ವತಃ ಅವರ ಹೆಂಡತಿ ಪಲ್ಲವಿ ಅವರೇ ಕೊಲೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಈ ಘಟನೆ ತಿಳಿದ ಬೆನ್ನಲ್ಲಿಯೇ ಸ್ಥಳಕ್ಕೆ ತೆರಳಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಹೆಂಡಿಯೇ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ
ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಓಂ ಪ್ರಕಾಶ್:
ಓಂ ಪ್ರಕಾಶ್ ಕುಟುಂಬದಲ್ಲಿ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಡಿಜಿ ಮತ್ತು ಐಜಿಪಿ ಅಧಿಕಾರಿ ಓಂ ಪ್ರಕಾಶ್ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಹಣಕಾಸಿನ ವಿಚಾರವಾಗಿ ಆಗಾಗ್ಗೆ ಮನೆಯಲ್ಲಿ ಜಗಳ ಕೂಡ ನಡೆಯುತ್ತಿತ್ತು. ಇದೇ ಜಗಳ ಕೊಲೆಗೆ ಕಾರಣ ಆಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ.
ಪತ್ನಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು
ಹಲವಾರು ವರ್ಷಗಳಿಂದ ಆಸ್ತಿಗೆ ಸಂಬಂಧಿಸಿದಂತೆ ಓಂಪ್ರಕಾಶ್ ರಾವ್ ಮತ್ತು ಪತ್ನಿಗೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗಿದೆ ಇದೇ ಕಾರಣಕ್ಕೆ ಪತ್ನಿ ಪಲ್ಲವಿ ಅವರು ಸ್ಕಜೋಫ್ರೇನಿಯಾ ಎಂಬ ಮಾನಸಿಕ ಖಾಯಿಲೆಯಿಂದಲೂ ಬಳಲಸುತ್ತಿದ್ದರು. ಒಮ್ಮೆ ವಿಚಾರ ತಲೆಗೆ ಹಾಕಿಕೊಂಡರೆ ಅದರ ಬಗ್ಗೆಯೇ ಯೋಚಿಸುತ್ತಾ ಆತಂಕ ಪಡುತ್ತಿದ್ದರು ಹೀಗಾಗಿ ಅವರಿಗೆ ಚಿಕಿತ್ಸೆಯನ್ನೂ ಕೊಡಿಸಲಾಗುತ್ತಿತ್ತು ಎನ್ನಲಾಗಿದೆ
ಪಲ್ಲವಿ ಅವರು ತನ್ನ ಗಂಡ ಓಂ ಪ್ರಕಾಶ್ ನನಗೆ ಗನ್ ಹಿಡಿದುಕೊಂಡು ಜೀವ ಭಯ ಹಾಕುತ್ತಿದ್ದಾರೆ ಎಂದು ಹಲವು ಬಾರಿ ಸಂಬಂಧಿಕರಿಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಫ್ಯಾಮಿಲಿ ಗ್ರೂಪ್ನಲ್ಲಿ ಕೂಡ ಮೆಸೇಜ್ ಮಾಡಿದ್ದರು. ಆದರೆ, ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿರಲಿಲಿಲ್ಲ. ಕುಟುಂಬದವರು ತಲೆ ಕೆಡಿಸಕೊಂಡಿಲ್ಲವೆಂದು, ನಂತರ ಗಂಡನ ಮೊಬೈಲ್ ನಂಬರ್ನಿಂದ ಐಪಿಎಸ್ ಅಧಿಕಾರಿಗಳ ಗ್ರೂಪ್ನಲ್ಲಿ ಗಂಡನಿಂದ ತನಗೆ ಜೀವಭಯವಿದೆ ಎಂದು ಮೆಸೇಜ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಓಂ ಪ್ರಕಾಶ್ ಪತ್ನಿ ಸ್ಕಿಜೋಫ್ರೇನಿಯಗೆ ಚಿಕಿತ್ಸೆ ಪಡೆಯುತ್ತಿದ್ದ ಮಾಹಿತಿ ಗೊತ್ತಿದ್ದರಿಂದ ನಿರ್ಲಕ್ಷ್ಯ ಮಾಡಿದ್ದರು.
ಕೆಲ ದಿನಗಳ ಹಿಂದೆ ವಾಟ್ಸಪ್ ಗ್ರೂಪ್ ಒಂದರಲ್ಲಿ ಗಂಡ ಓಂ ಪ್ರಕಾಶ್ ವಿರುದ್ಧ ಪತ್ನಿ ಪಲ್ಲವಿ ಅಸಮಾಧಾನ ವ್ಯಕ್ತಪಡಿಸಿದ್ದರು. ತನಗೆ ತನ್ನ ಪತಿ ಓಂ ಪ್ರಕಾಶ್ ಅವರಿಂದ ತೀರಾ ಹಿಂಸೆ ಆಗುತ್ತಿದೆ ಎಂದು ಮೆಸೇಜ್ ಮಾಡಿದ್ದರು. ಆಸ್ತಿಯ ವಿಚಾರದಲ್ಲಿ ಪದೇ ಪದೇ ಕಿರಿಕ್ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ಬದುಕಿರಬಾರದು ಎಂದು ಮೆಸೇಜ್ ಮಾಡಿದ್ದರು. ವಾಟ್ಸಾಪ್ ಗ್ರೂಪ್ಗೆ ಇಂತಹ ಗಂಭೀರವಾದ ಮೆಸೇಜ್ ಅನ್ನು ಪಲ್ಲವಿ ಮಾಡಿದ್ದರು. ಇದಾದ ನಂತರ ಓಂ ಪ್ರಕಾಶ್ ವಿರುದ್ಧ ಪೊಲೀಸರು ಸೂಮೋಟೋ ಪ್ರಕರಣ ದಾಖಲಿಸಿಕೊಂಡು ಕ್ರಮತೆಗದುಕೊಳ್ಳಬೇಕು ಎಂದು ಮೆಸೇಜ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಓಂ ಪ್ರಕಾಶ್ ಕೊಲೆಗೆ ಇದೇ ಕಾರಣ ಇರಬಹುದು ಎಂದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಪತ್ನಿ ಪಲ್ಲವಿ ಜೊತೆಗೆ ಓಂ ಪ್ರಕಾಶ್ ಅವರಿಗೆ ಜಗಳ ಯಾಕಾಗಿತ್ತು ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಓಂ ಪ್ರಕಾಶ್ಗೆ ೧೦ ಬಾರಿ ಚಾಕು ಚುಚ್ಚಿದ ಪತ್ನಿ:
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ತಮ್ಮ ಸೇವಾ ಅವಧಿಯಲ್ಲಿ ಗಂಭೀರ ಕೊಲೆ ಪ್ರಕರಣಗಳನ್ನು ನೋಡಿ, ಕೇಸಿನ ಇತ್ಯರ್ಥವನ್ನೂ ಮಾಡಿರುತ್ತಾರೆ. ಸಂಬಂಧಪಟ್ಟ ಆರೋಪಿಗಳು ಶಿಕ್ಷೆ ಅನುಭವಿಸುವಂತೆಯೂ ಮಾಡಿರುತ್ತಾರೆ. ಆದರೆ, ಸ್ವತಃ ತಾವೇ ಹೀಗೆ ಬರ್ಬರವಾಗಿ ಹತ್ಯೆಗೀಡಾಗುತ್ತೇವೆ ಎಂಬುದನ್ನು ಎಂದಿಗೂ ಊಹಿಸಿರಲೂ ಸಾಧ್ಯವಿಲ್ಲ. ಆದರೆ, ಓಂ ಪ್ರಕಾಶ್ ಅವರ ಕೊಲೆಯ ಳಿಕ ಅವರ ಮೃತದೇಹದ ಪ್ರಾಥಮಿಕ ಪರಿಶೀಲನೆ ಮತ್ತು ತನಿಖೆ ವೇಳೆ ೮-೧೦ ಬಾರಿ ಚಾಕು ಇರಿತವಾಗಿರುವುದು ಬೆಳಕಿಗೆ ಬಂದಿದೆ.
ಓಂ ಪ್ರಕಾಶ್ ಅವರ ಎದೆ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಚಾಕು ಇರಿತವಾಗಿದೆ. ಇದರಲ್ಲಿ ಹೊಟ್ಟೆ ಭಾಗಕ್ಕೆ ಸುಮಾರು ೪-೫ ಬಾರಿ ಚಾಕು ಇರಿತವಾಗಿದ್ದು, ದೇಹದ ಇತರೆ ಭಾಗಗಳಿಗಿಂತ ಹೊಟ್ಟೆ ಭಾಗಕ್ಕೆ ಹೆಚ್ಚು ಚಾಕು ಇರಿಯಲಾಗಿದೆ. ಆದ್ದರಿಂದ ದೇಹದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದ್ದು, ಕೊಲೆಯಾದ ಕೆಳಗಿನ ಮಹಡಿಯ ಹಾಲ್ ತುಂಬಾ ರಕ್ತ ಹರಿದಿದೆ. ಓಂ ಪ್ರಕಾಶ್ ಸುಮಾರು ೧೫-೨೦ ನಿಮಿಷಗಳ ಕಾಲ ಒದ್ದಾಡಿ ಪ್ರಾಣವನ್ನು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಗಂಡ ಸಾಯುತ್ತಿದ್ದರೂ ಅವರನ್ನು ಆಸ್ಪತ್ರೆಗೆ ಸೇರಿಸುವ ಬದಲು ಅವರ ಮುಖವನ್ನು ನೋಡಲಾಗದೇ ಮುಖಕ್ಕೆ ಬಟ್ಟೆ ಕಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.