ಶಿವಮೊಗ್ಗ, ಏಪ್ರಿಲ್ ೨೦ – ಬೀದರ್ ಸಿಇಟಿ ಪರಿಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಜನಿವಾರ ತಗೆಸಿದ ಪ್ರಕರಣ ವ್ಯಾಪಕ ವಿರೋಧವಾಗುತ್ತಿರುವ ಬೆನ್ನಲ್ಲೆ ಇನ್ನೊಂದು ಪ್ರಕರಣ ಬಯಲಾಗಿದೆ.
ಶಿವಮೊಗ್ಗ ಜಿಲ್ಲೆಸಾಗರ ತಾಲೂಕಿನ ಹಳೆ ಇಕ್ಕೇರಿ ಗ್ರಾಮದ ಪಾರ್ಥ ಎಸ್. ರಾವ್ ಎಂಬ ವಿದ್ಯಾರ್ಥಿ ತನ್ನ ಶಿಕ್ಷಣ ಭವಿಷ್ಯಕ್ಕಾಗಿ ಏಪ್ರಿಲ್ ೧೬ರಂದು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹಾಜರಾದರು. ಆದರೆ, ಪಾರ್ಥನು ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪಡೆಯುವಾಗ, ಭದ್ರತೆಗಾಗಿ ನಿಯೋಜಿತ ಪೊಲೀಸ್ ಸಿಬ್ಬಂದಿ ಹಾಗೂ ಪರೀಕ್ಷಾ ಮೇಲ್ವಿಚಾರಕರು ಅವನ ಬಳಿಗಿದ್ದ ಜನಿವಾರವನ್ನು ಕಂಡು ಪ್ರಶ್ನಿಸಿದರು.
ಜನಿವಾರವನ್ನು ನೋಡಿ “ನೀನು ಬ್ರಾಹ್ಮಣನಾ?” ಎಂದು ಪ್ರಶ್ನಿಸಿ, “ಪರೀಕ್ಷೆ ಬರೆಯಬೇಕಾದರೆ ಈ ಜನಿವಾರವನ್ನು ತೆಗೆಯಲೇಬೇಕು” ಎಂದು ತಿಳಿಸಿದರು. ವಿದ್ಯಾರ್ಥಿ ನಿರಾಕರಿಸಿದರೂ, ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯ ಒತ್ತಡಕ್ಕೆ ಒಳಗಾಗಿ ಜನಿವಾರವನ್ನು ಕತ್ತರಿಸಿ ಹಾಕಿ, ನಂತರ ಅವನನ್ನು ಪರೀಕ್ಷಾ ಕೊಠಡಿಗೆ ಕಳುಹಿಸಲಾಯಿತು.
ಈ ಘಟನೆಯಿಂದ ವಿದ್ಯಾರ್ಥಿ ಬೆದರಿದ ಮನಸ್ಥಿತಿಯಲ್ಲಿ ಪರೀಕ್ಷೆ ಬರೆದಿದ್ದಾನೆ. ಈ ಬಗ್ಗೆ ತಕ್ಷಣವೇ ಯಾರಿಗೂ ಮಾಹಿತಿ ನೀಡದ ಪಾರ್ಥ, ನಂತರ ತನ್ನ ತಂದೆ ಶ್ರೀನಿವಾಸ್ ಅವರಿಗೆ ಮನೆಯಲ್ಲಿ ವಿಷಯ ತಿಳಿಸಿದ್ದಾನೆ. ತಮ್ಮ ಪುತ್ರನಿಗೆ ಆಗಿದ್ದ ಅನ್ಯಾಯದಿಂದ ಶ್ರೀನಿವಾಸ್ ಅವರು ಶನಿವಾರ ಸಂಜೆ ಸಾಗರ ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ವಕ್ತಿಗಳು, ಸಂಘಟನೆಗಳು ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಿವಾರ ಧಾರಣೆ ಯಾಕೆ ಪರೀಕ್ಷೆಗೆ ಅಡ್ಡಿಯಾಗಬೇಕು? ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
ಶ್ರೀನಿವಾಸ್ ಅವರು ಸಲ್ಲಿಸಿದ ದೂರಿನಲ್ಲಿ, ಈ ಅನ್ಯಾಯದ ಹಿನ್ನೆಲೆಯಲ್ಲಿ ಘಟನೆಗೆ ಕಾರಣರಾಗಿರುವ ಸೆಕ್ಯೂರಿಟಿ ಸಿಬ್ಬಂದಿ, ಪರೀಕ್ಷಾ ಮೇಲ್ವಿಚಾರಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತರ, ಶಿಕ್ಷಣ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಲಾಗುತ್ತಿದೆ.