ಬೆಂಗಳೂರು,ಏ,19– ಬೀದರ್ ನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿ ಜನಿವಾರ ಹಾಕಿರುವ ಕಾರಣಕ್ಕೆ ಪರೀಕ್ಷೆಗೆ ಅವಕಾಶ ನಿರಾಕರಣೆ ಮಾಡಿದ್ದು, ಶಿವಮೊಗ್ಗದಲ್ಲಿ ವಿದ್ಯಾರ್ಥಿ ಹಾಕಿಕೊಂಡಿದ್ದ ಜನಿವಾರ ಕಿತ್ತು ಹಾಕಿರುವುದು ಅತ್ಯಂತ ಹೀನ ಕೃತ್ಯವಾಗಿದ್ದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ನಮ್ಮ ದೇಶದ ಸಂಸ್ಕೃತಿ ಆಚಾರ, ವಿಚಾರ, ನಂಬಿಕೆಗಳ ಬಗ್ಗೆ ಅರಿವಿಲ್ಲದಿರುವ ಕಾಂಗ್ರೆಸ್ ಸರ್ಕಾರ ನಿಯಮಗಳ ಪಾಲನೆಯ ಹೆಸರಿನಲ್ಲಿ ಧರ್ಮ ದ್ರೋಹ ಮಾಡುವುದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಜನಿವಾರ ಹಾಕಿಕೊಳ್ಳುವುದರಿಂದ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಏನು ಅಡ್ಡಿಯಾಗುತ್ತಿತ್ತು. ಸಂಸ್ಕಾರವೇ ಗೊತ್ತಿಲ್ಲದ ಸರ್ಕಾರದಲ್ಲಿ ಅಧಿಕಾರಿಗಳು ಹೃದಯ ಶೂನ್ಯರಾಗಿ ನಡೆದುಕೊಂಡಿರುವುದು ಅತ್ಯಂತ ಖಂಡನೀಯ. ಎಂಜನೀಯರ್ ಆಗಬೇಕೆಂದು ಕನಸು ಕಟ್ಟಿಕೊಂಡು ಅನಾಗರಿಕ ಅಧಿಕಾರಿಗಳಿಂದ ಈಗ ಸಿಇಟಿ ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಿ ಅವರ ಮುಂದಿನ ಶೈಕ್ಷಣಿಕ ಬದುಕಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡು ಈ ರೀತಿಯ ಘಟನೆಗಳು ಮರುಕಳಿಸದಂತೆ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.