ಮಡಿವಾಳ ಸಮಾಜದ ಬೇಡಿಕೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

Share

ಬೆಂಗಳೂರು, ಏ.18-“ಮಡಿವಾಳ ಸಮುದಾಯ ಸದಾ ನಮ್ಮ ಬೆಂಬಲಕ್ಕೆ ನಿಂತಿದೆ. ಅವರ ಬೇಡಿಕೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕೆಂಗೇರಿಯಲ್ಲಿ ಮಾಚಿದೇವ ಗುರುಪೀಠ ವಿಶ್ವಸ್ತ ಸಮಿತಿ ವತಿಯಿಂದ ಹೊಸದಾಗಿ ನಿರ್ಮಿಸಿರುವ ಕಲ್ಯಾಣ ಮಂಟಪ ‘ಕಲಿದೇವ ಕನ್ವೆನ್ಷನ್ ಹಾಲ್’ ಉದ್ಘಾಟನೆ ಸಮಾರಂಭದಲ್ಲಿ ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.

“ಈ ಸಮಾಜದ ಜತೆಗಿನ ಒಡನಾಟದಲ್ಲಿ ನಿಮ್ಮ ಸಮಸ್ಯೆ, ಹೋರಾಟವನ್ನು ನಾನು ನೋಡಿದ್ದೇನೆ. ನಮ್ಮ ತಾಲೂಕು ಹಾಗೂ ಜಿಲ್ಲೆಯಲ್ಲಿ ಕೂಡ ಗಮನಿಸಿದ್ದೇನೆ. ಈ ಸಮುದಾಯದ ಜನ ನೂರಕ್ಕೆ 99 ರಷ್ಟು ಭಾಗ ನಮಗೆ ಬೆಂಬಲವಾಗಿ ನಿಂತಿದ್ದಾರೆ. ನಿಮ್ಮೆಲ್ಲರ ಪರವಾಗಿ ತುಮಕೂರಿನಲ್ಲಿ ದೊಡ್ಡ ಸಮಾರಂಭ ಮಾಡಿದ್ದೆವು. ಏನಾದರೂ ಮಾಡಿ ವಿಧಾನಸಭೆಯಲ್ಲಿ ನಿಮಗೆ ಒಂದು ಸೀಟು ಅವಕಾಶ ಮಾಡಿಕೊಡಬೇಕು ಎಂಬ ಆಲೋಚನೆ ನಮ್ಮಲ್ಲಿತ್ತು. ಆದರೆ ಕಾರಣಾಂತರಗಳಿಂದ ಸಮೀಕ್ಷೆ ವರದಿ ಆಧರಿಸಿ ತೀರ್ಮಾನ ಮಾಡಬೇಕಾಯಿತು” ಎಂದರು.

“17 ರಾಜ್ಯಗಳಲ್ಲಿ ನಿಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ ಎಂದು ರವಿ ಕುಮಾರ್ ಅವರು ತಿಳಿಸಿದರು. ನಮ್ಮ ರಾಜ್ಯದಲ್ಲೂ ಸೇರಿಸಬೇಕು ಎಂದು ಕೇಳಿದ್ದೀರಿ. ಮುಖ್ಯಮಂತ್ರಿಗಳು ಹಾಗೂ ನಾವು ಮುಂದಿನ ದಿನಗಳಲ್ಲಿ ಈ ವಿಚಾರ ಚರ್ಚೆ ಮಾಡುತ್ತೇವೆ. ಈ ಸಮುದಾಯದಿಂದ ಕೆಲವೇ ಕೆಲವರು ಮಾತ್ರ ಅಧಿಕಾರಿಗಳಿದ್ದಾರೆ. ನಿಮ್ಮಲ್ಲಿ ಬಹುತೇಕರು ಕುಲಕಸುಬು ಬಿಟ್ಟಿಲ್ಲ. ನಮ್ಮ ಸರ್ಕಾರ ನಿಮ್ಮ ಬೇಡಿಕೆಗೆ ಸ್ಪಂದಿಸಲು ಬದ್ಧವಾಗಿದೆ” ಎಂದು ಭರವಸೆ ನೀಡಿದರು.

“ದೇವರು ವರ ಅಥವಾ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ನಮ್ಮ ನಿಮ್ಮ ಮಧ್ಯೆ ಪರಸ್ಪರ ನಂಬಿಕೆ, ವಿಶ್ವಾಸ ಗಟ್ಟಿಯಾಗಿದೆ. ನಾವು ಇದನ್ನು ಉಳಿಸಿಕೊಂಡು ಹೋಗುತ್ತೇವೆ. ನೀವು ನಮ್ಮ ಬೆಂಬಲಕ್ಕೆ ನಿಲ್ಲಬೇಕು. ನೀವು ಮಾನಸಿಕವಾಗಿ ಕುಗ್ಗಬಾರದು, ಅಂಜಬಾರದು. ನಮ್ಮ ಸರ್ಕಾರ ನಿಮ್ಮ ಪರವಾಗಿದೆ” ಎಂದು ತಿಳಿಸಿದರು.

 

Girl in a jacket
error: Content is protected !!