ಶಾಸಕರನ್ನು ಸೆಳೆಯಲು ಡಿ.ಕೆ ಶಿವಕುಮಾರ್ ಹೊಸ ತಂತ್ರಕ್ಕೆ ಮಾರು ಹೋದ್ರಾ!?
ವರದಿ-ಬಾಲು.ಡಿ
ಬೆಂಗಳೂರು, ಮಾ,13-ಕಾಂಗ್ರೆಸ್ ಪಕ್ಷದಲ್ಲಿ ದಿನ ಬೆಳಗಾದರೆ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ,ಅದರಲ್ಲೂ ಮುಖ್ಯಮಂತ್ರಿ ಬದಲಾವಣೆ ಕುರಿತಂತೂ ಶಾಸಕರು ಒನ್ನೊಂದು ಹೇಳಿಕೆ ನೀಡುವ ಮೂಲಕ ಸಿಎಂ ಹುದ್ದೆ ಚರ್ಚೆಗಳು ಗಂಭೀರ ಪಡೆಯುತ್ತಿವೆ.
ಇದೇ ವೇಳೆ ಶಾಸಕರನ್ನು ಸೆಳೆಯುವ ಪ್ರಯತ್ನವೂ ನಡೆಯುತ್ತಿದೆ ಎನ್ನಲಾಗಿದೆ ಇದೇ ಹೊತ್ತಿನಲ್ಲಿ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಶಾಸಕರಿಗೆ ಔತಣಕೂಟ ಏರ್ಪಡಿಸಿರುವುದು ಹಲವು ವ್ಯಾಖ್ಯಾನಗಳಿಗೆ ಇಂಬು ನೀಡಿದೆ.
ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಚರ್ಚೆಗಳು ಈಗ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರ ನಡುವೆ ಶಾಸಕರನ್ನು ಸೆಳೆಯುವುದಕ್ಕೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೊಸ ತಂತ್ರ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಎಲ್ಲಾ ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಆಯೋಜಿಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಡಿ.ಕೆ ಶಿವಕುಮಾರ್ ಅವರು ಏಕಕಾಲಕ್ಕೆ ಹಲವು ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ನೀರಾವರಿ ಸಚಿವ, ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಅವರಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದರು. ಸಚಿವ ಸತೀಶ್ ಜಾರಕಿಹೊಳಿ ಅವರು ಸೇರಿದಂತೆ ಹಲವರು ಕೆಪಿಸಿಸಿ ಅಧ್ಯಕ್ಷರ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಶಾಸಕರನ್ನು ಸೆಳೆಯಲು ಮುಂದಾದ ಡಿ.ಕೆ ಶಿವಕುಮಾರ್: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇರುವಷ್ಟು ಶಾಸಕರ ಬೆಂಬಲ ಡಿ.ಕೆ ಶಿವಕುಮಾರ್ ಅವರಿಗೆ ಇಲ್ಲ ಎನ್ನುವ ಮಾತಿದೆ. ಈ ಕಾರಣದಿಂದ ಪಕ್ಷದಲ್ಲಿ ಅವರಿಗೆ ಅಲ್ಪ ಪ್ರಮಾಣದ ಹಿನ್ನಡೆಯಾಗುತ್ತಿದೆ ಎನ್ನಲಾಗಿದ್ದು. ಇದನ್ನು ಸರಿಪಡಿಸಿಕೊಳ್ಳುವುದಕ್ಕೆ ಹಾಗೂ ಪಕ್ಷದ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳುವುದಕ್ಕೆ ಡಿ.ಕೆ ಶಿವಕುಮಾರ್ ಅವರು ಈ ಔತಣ ಕೂಟ ಆಯೋಜಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಬರೋಬ್ಬರಿ 5 ವರ್ಷ ಪೂರೈಸಿದ್ದಾರೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಡಿಕೆ ಶಿವಕುಮಾರ್ ಅವರು ಸಹ ಶ್ರಮಿಸಿದ್ದರು. ಗೆದ್ದ ಮೇಲೆ ಮಾಡಿರುವ ಕೆಲಸಕ್ಕೆ ಕೂಲಿ ಅಂದರೆಸಿ.ಎಂ ಹುದ್ದೆ ಕೊಡಿ ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಮಾಡಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಔತಣಕೂಟ ಆಯೋಜಿಸಿದ್ದಾರೆ ಎಂದು ಹೇಳಲಾಗಿದೆ.