ಪೊಲೀಸ್ ವಿಭಾಗಗಳ ಸಂಖ್ಯೆ 11ಕ್ಕೆ ಏರಿಕೆ,ನಕ್ಸಲ್ ನಿಗ್ರಹ ದಳ ವಿಸರ್ಜನೆ ಫೋಷಿಸಿದ ಸಿಎಂ

Share

ಪೊಲೀಸ್ ವಿಭಾಗಗಳ ಸಂಖ್ಯೆ 11ಕ್ಕೆ ಏರಿಕೆ,ನಕ್ಸಲ್ ನಿಗ್ರಹ ದಳ ವಿಸರ್ಜನೆ ಫೋಷಿಸಿದ ಸಿಎಂ

by- ಕೆಂಧೂಳಿ

ಬೆಂಗಳೂರು,ಮಾ,09-ಪೊಲೀಸ್ ಇಲಾಖೆಯನ್ನು ಪರಿಣಾಮ ಕಾರಿಗೊಳಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ರಿಂದ 11 ಪೂಲೀಸ್ ವಿಭಾಗಗಳನ್ನು ಹೆಚ್ಚಿಸಲಾಗುವುದು ಮತ್ತು ನಕ್ಸಲ್ ನಿಗ್ರಹದಳವನ್ನು ವಿಸರ್ಜಿಸುವುದಾಗಿ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.

2025-26ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು, ಬೆಂಗಳೂರಿನಲ್ಲಿ ಇನ್ನೂ ಮೂರು ಪೊಲೀಸ್ ವಿಭಾಗಗಳೊಂದಿಗೆ, ಪೊಲೀಸ್ ಠಾಣೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ನಗರದಲ್ಲಿ ಇನ್ನೂ ಮೂವರು ಐಪಿಎಸ್ ಅಧಿಕಾರಿಗಳನ್ನು ಡಿಸಿಪಿಗಳಾಗಿ ನೇಮಿಸಲಾಗುವುದು. ಪ್ರತಿದಿನ ಹೆಚ್ಚಿನ ಸೈಬರ್ ಅಪರಾಧಗಳು ವರದಿಯಾಗುತ್ತಿರುವುದರಿಂದ ಐದು ಕೋಟಿ ರೂ. ಅನುದಾನದೊಂದಿಗೆ ಸೈಬರ್ ಅಪರಾಧ ವಿಭಾಗವನ್ನು ಸಹ ಬಲಪಡಿಸಲಾಗುವುದು ಎಂದರು.
ಶೀಘ್ರದಲ್ಲೇ ಏಳು ಪೊಲೀಸ್ ಠಾಣೆ ಕಟ್ಟಡಗಳು ಪೂರ್ಣಗೊಳ್ಳಲಿವೆ. ಇದಲ್ಲದೆ, 30 ಕೋಟಿ ರೂ. ವೆಚ್ಚದಲ್ಲಿ 12 ಪೊಲೀಸ್ ಠಾಣೆಗಳು, ಒಂದು ಉಪವಿಭಾಗ ಕಚೇರಿ, ಎರಡು ವೃತ್ತ ಕಚೇರಿಗಳು ಮತ್ತು ಒಂದು ಪೊಲೀಸ್ ಔಟ್ ಪೋಸ್ಟ್ ಕಟ್ಟಡದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಈ ವರ್ಷ ಬಳ್ಳಾರಿ, ದಾವಣಗೆರೆ, ಮೈಸೂರು ಮತ್ತು ಬೆಂಗಳೂರು ಕೇಂದ್ರ ವಲಯಗಳಲ್ಲಿ ನಾಲ್ಕು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ತಿಳಿಸಿದರು.

ಪೊಲೀಸ್ ಸಿಬ್ಬಂದಿಯನ್ನು ಸದೃಢವಾಗಿ ಮತ್ತು ಆರೋಗ್ಯವಾಗಿಡಲು, ಪೊಲೀಸ್ ಸಿಬ್ಬಂದಿಗೆ ವಾರ್ಷಿಕ ವೈಯಕ್ತಿಕ ಆರೋಗ್ಯ ತಪಾಸಣೆಗಾಗಿ ನೀಡಲಾಗುವ ಮೊತ್ತವನ್ನು ಪ್ರಸ್ತುತ ರೂ. 1000 ರಿಂದ ರೂ. 1500 ಕ್ಕೆ ಹೆಚ್ಚಿಸಲಾಗುವುದು. ಬಂದೋಬಸ್ತ್ ಕರ್ತವ್ಯದಲ್ಲಿರುವ ಪೊಲೀಸರು ಮತ್ತು ಸಿಬ್ಬಂದಿಗೆ ನೀಡಲಾಗುವ ಆಹಾರ ಭತ್ಯೆಯನ್ನು ರೂ. 200 ರಿಂದ 300 ರೂ. ಗೆ ಹೆಚ್ಚಿಸಲಾಗುವುದು ಎಂದರು.

ನಕ್ಸಲ್ ನಿಗ್ರಹ ಪಡೆ ವಿಸರ್ಜನೆ

ರಾಜ್ಯವು ನಕ್ಸಲ್ ಮುಕ್ತವಾಗಿದ್ದು, ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ 6 ಜನ ಭೂಗತ ನಕ್ಸಲರು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಸಮಿತಿಯ ಮುಂದೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ವಿಸರ್ಜನೆ ಮಾಡಲಾಗುತ್ತಿದೆ. ಶರಣಾಗಿರುವ ನಕ್ಸಲರನ್ನು ಮುಖ್ಯವಾಹಿನಿಗೆ ಸೇರ್ಪಡೆಗೊಳಿಸಲು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು 10 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಲಾಗುವುದು ಎಂದು ಸಿಎಂ ತಿಳಿಸಿದರು.

Girl in a jacket
error: Content is protected !!