ಗಂಗೆ ಎಂಬ ನೀರ ಜೋಳಿಗೆಯ ಎದುರು
ಗಂಗೆ ಎಂಬ ನೀರಿನ ಪದವು ಒಂದು ಕಡೆ ಸಾಮಾಜಿಕ ಕಥನಗಳ ದಾಖಲೆಗಳಿಗೆ ಕಾರಣವಾದರೆ ಮತ್ತೊಂದು ಕಡೆಗೆ ಧಾರ್ಮಿಕ ಸಂಕಥನಗಳನ್ನು ಸೃಷ್ಟಿಸುವ ಆವರಣಗಳ ಸೃಷ್ಟಿಗೆ ಕಾರಣವಾಗಿದೆ.ಗಂಗೆ ಎಂಬುವ ನೀರಿನ ಚರ್ಚೆಯು ಎರಡು ಸ್ಥರಗಳನ್ನು ,ಎರಡು ಭಿನ್ನ ಧೋರಣೆಗಳನ್ನು ರೂಪಿಸುವಂತೆಯೇ ಎರಡು ತಾತ್ವಿಕ ಸಂಘರ್ಷಗಳ ನೋಟಗಳನ್ನು ಹುಟ್ಟುಹಾಕಿದೆ.ಗಂಗೆ ಎಂಬ ನೀರ ಪದವು ನಮ್ಮೊಳಗೆ ತಾಯಾಗಿ,ದೇವಿಯಾಗಿ,ಮಾಯೆಯಾಗಿ ಕಾಣಿಸುವ ಸರಳ ನೋಟಗಳನ್ನೂ ನೀಡಿದೆ.
ಇಲ್ಲಿ ʼನೀರುʼ ಎಂಬ ಪದಕ್ಕೆ ʼಗಂಗೆʼ ಎಂಬ ಪದವು ತಾಕಿದೊಡನೆಯೇ ಅದಕ್ಕೆ ಪಾವಿತ್ರ್ಯದ ಆವರಣವು ಅಂಟಿಕೊಂಡು ಅದಕ್ಕೆ ಶ್ರೇಷ್ಟತೆಯ ವ್ಯಸನವೇ ಧಾವಿಸಿ ಬಿಡುತ್ತದೆ. ನಿತ್ಯವೂ ಕುಡಿಯುವ ಮನೆಯ ನಲ್ಲಿಯ ನೀರೇ ಗಂಗಮ್ಮನ ಪೂಜೆ ಎಂದೊಡನೆ ಅದಕ್ಕೆ ಪಾವಿತ್ರ್ಯದ ಸಂಸ್ಕಾರಗಳು ಶುರುವಾಗುತ್ತದೆ. ಮನೆ ಮಗಳು ಮೈನೆರತರೆ, ಹೊಸ ಮದುಮಗಳು ಮನೆಗೆ ಪ್ರವೇಶವಾದರೆ, ಹೊಸ ಕೂಸಿನ ಆಗಮವಾದರೆ ಗಂಗೆಯ ಪೂಜೆ ಮೊದಲಾಗುತ್ತದೆ. ಬಹುಶಃ ಈ ಕಾರಣದಿಂದಲೇ ನದಿ ಮೂಲವನ್ನು ಹುಡುಕಬಾರದು ಎಂದರೋ ಏನೋ?
ಜನರೆಲ್ಲಾ ನಿತ್ಯ ಈಜುವ, ಎಮ್ಮೆ ಕುರಿ,ಹಸುಗಳ ಮೈತೊಳೆವ,ಅವರಿವರು ಬಟ್ಟೆ ಒಗೆವ,ಪಾತ್ರೆ ತೊಳೆವ,ಅದಕು ಇದಕು ಎದಕೂ ಬಳಸುವ ಮತ್ತೆ ಬಳಸಿದ ನೀರೇ ಹರಿದು ಬಂದು ಸೇರುವ ಜಾಗದಲ್ಲೇ ಗಂಗೆಯ ಪೂಜೆ ಎಂದೊಡನೆ ಜನ ಸಂಸ್ಕಾರಗಳಲ್ಲಿ ಅದಕ್ಕೆ ಪಾವಿತ್ರ್ಯದ ಬೆಳಕು ಬಂದು ಬಿಡುತ್ತದೆ. ಮನುಷ್ಯರ ಆಚರಣೆಯಂತೆಯೇ ಮಾನವಾತೀತ ದೇವರುಗಳ ಕೇಲುಗಳು ಕೂಡಾ ಅದೇ ನೀರ ಹೊತ್ತು ಮೆರವಣಿಗೆ ಹೊರಡೋದು ಕೂಡಾ ಇಲ್ಲಿಂದಲೇ..
ಊರ ದೇವರಿಗೆ ಹೊಸದಾಗಿ ಮೂರ್ತಿ ಮಾಡಿಸಿದರೆ ಹೊಸದಾಗಿ ಜಾತ್ರೆ ಆರಂಭಿಸಿದರೆ ಕುಂಬಾರರ ಮನೆಯ ಕೇಲುಗಳು ಇಲ್ಲಿಗೆ ತಂದೇ ಗಂಗೆಗೆ ಹೋಗಿ ಕೇಲು ತುಂಬಿಸಿಕೊಂಡು ಹೊರಟಾಗಲೇ ದೇವರ ಮುಂದಿನ ಕಾರ್ಯಗಳು ಶುರುವಾಗುತ್ತವೆ. ಊರ ದೇವರ ಅಗ್ನಿಗೂ ದೇವರಾದಿಯಾಗಿ ಭಕ್ತರು ಕೂಡಾ ಇದೇ ಕೆರೆ ಹಳ್ಳ ಬಾವಿಗಳಲ್ಲಿ ಮಿಂದು ಆ ಒದ್ದೆಯ ಬಟ್ಟೆಯಲ್ಲೇ ಊರಲ್ಲೆಲ್ಲಾ ನಡೆದು ಬಂದು ದೇವರ ಕೂಡ ನಿಗಿ ನಿಗಿ ಕೆಂಡದ ಅಗ್ನಿಯನ್ನು ದಾಟಬೇಕು.
ಜನರಿಗೆ ಗಂಗೆ ಎಂಬ ಪದವೇ ಮೂಲ ಮೀರುವ, ಮೀಯುವ ಮತ್ತು ಪವಿತ್ರ ಹೊರುವ ಪದವಾಗಿದೆ. ಆದರೆ ಗಂಗೆಯಿಂದ ಜಾತ್ರೆ ತೆಗೆಸುವ, ತೇರುಮಾಡುವ, ಹರಕೆ ತೀರಿಸುವ ಹಾದಿಗಳ ನಡುವೆ ಊರ ಅನೇಕರೂ ಬಂದು ಹೋಗುವ ರೀತಿಗಳಿವೆ. ಇದರಾಚೆಗೆ ಊರ ಹಬ್ಬ ಘೋಷಿಸುವ ಆಡಳಿತ ಕೇಂದ್ರಗಳಿಗೆ ಗಂಗೆ ಎಂಬ ಪದವು ʼಸೇವೆʼ ಮತ್ತು ʼಭಕ್ತಿಯʼ ಪದದಾಚೆಗೂ ಸಂಪತ್ತಿನ ವಹಿವಾಟದ ಪದವೂ ಆಗಿದೆ. ಜಾತ್ರೆಗಳು, ಪರಿಶೆಗಳು, ತೇರುಗಳು, ಹಬ್ಬಗಳು ಜನರಿಗೆ ಭಕ್ತಿಯ ಮೂಲದ ಸೇವೆಯಾದರೆ; ಜನ ನಿಯಂತ್ರಕರಿಗೆ ಅವು ಶಕ್ತಿ ಪ್ರದರ್ಶನಗಳ ಕೇಂದ್ರಗಳಾಗಿವೆ. ಆದಾಯಗಳ ಮೂಲ ಬಿಂದುವಾಗಿವೆ.ಭಕ್ತಿಯನ್ನು, ಪಾವಿತ್ರ್ಯವನ್ನು,ಸಾಧಕರ ಸಾಧನೆಗಳ ಸಂಗಮಗಳ ಎಳೆಗಳ ಹೊತ್ತ ಕುಂಭಮೇಳವೂ ಜನಕ್ಕೆ ಶುದ್ಧತೆಯ ಹುರುಪು ಏರಿಸಿದರೆ ಅಲ್ಲಿನ ಆಡಳಿತ ವರ್ಗಕ್ಕೆ ಅದು ಶಕ್ತಿಯ ಸಂಪಾದನೆಯ ಹಣ ಮೂಲ ಎಂಬುದನ್ನು ನಮ್ಮ ಮಾಧ್ಯಮಗಳೇ ವಿವರಿಸಿವೆ.
ನೀರೆಂಬ ಹರಿಯುವ ಕ್ರಿಯೆ:
ಗಂಗೆ ಎನ್ನುವ ಪದವು ಜೀವಿಯ ಹುಟ್ಟಿನಿಂದಲೇ ಶುರುವಾಗುವ ನೀರಂತೆಯೇ ಹರಿವ ವಿಧಿಗಳು ಬೆಳೆದಂತೆಲ್ಲಾ… ನಾಮಕರಣಕ್ಕೆ ಎರಡು ಜೀವಗಳ ಮಿಲನಕ್ಕೆ, ವಿವಾಹದ ಹೆಸರಲ್ಲಿ ಬಳಗದ ಪೂಜೆಗೆ, ಅರಿಸಿಣ ಶಾಸ್ತ್ರಕ್ಕೆ, ಸುರಗಿ ಸುತ್ತಲಿಕ್ಕೆ, ಗಂಗಾ ಪೂಜೆಗೆ,ಸೀಮಂತಕ್ಕೆ,ಕೊನೆಗೆ ತುಳಸಿಯ ಜೊತೆಗೆ ಸಾವಿಗೆ ಜೊತೆಗೇ ಬರುವ ಇರುವ ಜೀವದ್ರವ್ಯವಾಗಿದೆ. ಜೀವಿಯು ಸತ್ತ ನಂತರವೂ ಆ ದೇಹದ ಪವಿತ್ರ ಸ್ನಾನಕ್ಕೆ,ಆ ಚಿತೆಯನ್ನು ಬಳಸುವ ಮೂರು ಸುತ್ತು ಪ್ರದರ್ಶನಕ್ಕೆ ಗಂಗೆ ಪದವು ಬಳಸಲ್ಪಡುತ್ತದೆ.
ಜೀವದ ಸಂಸ್ಕಾರಕ್ಕೆ ಹೋದವರೂ ಕೆರೆ ಹಳ್ಳ ಬಾವಿಗಳ ಬಳಿ ಹೋಗಿ ಶುದ್ಧರಾಗಿಯೇ ಬಂದು ದೈವ ದರ್ಶನ ಮಾಡಿ ಸತ್ತ ಮನೆಯವರಿಗೆ ಎಲೆ ಅಡಿಕೆ ನೀಡಿ ವಿಷದ ಬಾಯಿ ತೊಳೆಸುವ ನೀರ ಕ್ರಿಯೆ ಮೂಲಕ ಮತ್ತೆ ಗಂಗೆಯ ಆಚರಣೆ ಶುರುವಾಗುತ್ತದೆ. ಜೀವ ಶವವಾಗಿ ಮೆರವಣಿಗೆ ಹೋದೊಡನೆ ಮನೆಯ ಅಂಗಳವೂ ಶುದ್ಧಿಯ ಹೆಸರಲ್ಲಿ ಮೈಲಿಗೆಯಿಂದ ಮಡಿಯಾಗುವುದು ಗಂಗಮ್ಮನ ಕೃಪೆಯಿಂದಲೇ.ಆ ನಂತರ ಮೂರು ದಿನ ಅಥವಾ ಐದು ದಿನದ ಹಿಂಡೇ ಕೂಳಿಗೆ, ಮನೆ ಒಳಗೆ ಕರೆದು ಕೊಳ್ಳುವ ಶಾಸ್ತ್ರಕ್ಕೆ, ನೀರಿನೊಳಗೆ ದೇಹದ ಬೂದಿಯ ತರ್ಪಣದ ಶಾಸ್ತಕ್ಕೆ, ಕೊನೆಗೆ ವರ್ಷಕ್ಕೊಂದಾವರ್ತಿಯ ತಿಥಿಗೆ, ಬರು ಬರುತ್ತಾ ಹಿರಿಯರ ಹಬ್ಬಕ್ಕೆ, ಗಂಗೆಯು ಬಗೆ ಬಗೆಯ ಹೆಸರೊತ್ತು ಗೋಚರಿಸುತ್ತಾಳೆ.
ಗಂಗೆಯ ನೀರೆಂಬ ಉರಿ ಜೋಳಿಗೆಗಳು:
ನೀರು ಜನರಿಗೆ ಜೀವದ ವಿಷಯವಾದಂತಯೇ ನೀರು ಜನ ಸಮುದಾಯಕ್ಕೆ ಮಡಿ ಮೈಲಿಗೆಯ ಕ್ರಿಯೆಯೂ ಆಗಿದೆ. ಜಾತಿ ಮೂಲ ಪ್ರದೇಶಗಳಾದ ಈ ನಾಡಿನಲ್ಲಿ ಇಂದಿಗೂ ನೀರು ಜಾತಿ ತಾರತಮ್ಯದ ಬಹುದೊಡ್ಡ ಕೇಂದ್ರವಾಗಿದೆ.ದಲಿತರು ನೀರನ್ನು ಮುಟ್ಟಿದರೆ ಊರಿಂದಲೇ ಹೊರ ಹಾಕುವ,ಶಿಕ್ಷಿಸುವ,ನೀರಿಗಿಳಿದರೆ ಅಲ್ಲೇ ಸಾಯಬಡಿವ, ನೀರನ್ನು ಕದ್ದು ತಂದ ಕೇರಿಗಳನ್ನೇ ಸುಟ್ಟು ಹಾಕುವ ಸುಡು ಚಿತ್ರಗಳು ಇಂದಿಗೂ ಹಳ್ಳಿಗಳ ಒಡಲಲ್ಲಿ ವಿಷ ಕಕ್ಕುತ್ತಲೇ ಇವೆ.
ಹಿಂದೆ ಆಳುವವರು ಅಥವಾ ಉಳ್ಳವರು ಪುಣ್ಯಗಳಿಸಿಕೊಳ್ಳಲು ಇಲ್ಲವೇ ದೇಹ ತ್ಯಜಿಸಲು ಸ್ವರ್ಗದಲ್ಲಿ ತಮ್ಮ ಸ್ಥಾನವನ್ನು ನಿಗಧಿ ಪಡಿಸಿಕೊಳ್ಳಲು ಗಂಗಾ ಯಾತ್ರೆಯನ್ನು ಮಾಡುತಿದ್ದರು. ಆದೇ ನೆಲದ ಕೂಲಿಗಳು ಜೀತಗಾರರು, ಒಪ್ಪತ್ತು ಕುಡಿವ ನೀರಿಗಾಗಿ ಹತ್ತಾರು ಮೈಲು ನಡೆಯುತಿದ್ದರು. ಬಂಡೆಗಳ ಮೇಲೆ, ಬಂಡೆಗಳ ಕೆಳಗಿನ ವರತೆಗಳಿಂದ,ಹಳ್ಳವೋ ಯಾವುದಾದರೊಂದು ಮೂಲೆಯಿಂದ ಹೊತ್ತು ತರುತಿದ್ದರು.
ನೀರೆಂಬ ಕ್ರಿಯೆಯೂ ಕೇರಿಗಳಿಗೆ ರಾತ್ರಿಯಿಡೀ ಹೊತ್ತು ತರುವ ಕಾಯಕವಾಗಿತ್ತು. ಮನೆಯಲ್ಲಿ ಗರ್ಭಿಣಿಯ ಹೆರಿಗೆಗೆ,ಹಬ್ಬ ಹರಿದಿನಕೆ,ಒಳ್ಳೆಯ ಕೆಟ್ಟ ಆಚರಣೆಗೆ ಹಿಂಡು ಹಿಂಡಾಗಿ ಕೊಡ ಹೊತ್ತು ಸಾಗಬೇಕಿತ್ತು.ಹತ್ತಿರದ ಊರ ಬಾವಿಗಳು,ನೀರ ತೊಟ್ಟಿಗಳು ಇವರಿಗೆ ದೂರದಿಂದ ನೋಡಲಿಕ್ಕೆ ಮಾತ್ರ ಸೀಮಿತ. ಕೆಲವು ಕಡೆ ನೀರನ್ನ ಎತ್ತಿ ಹಾಕಿಸಿಕೊಂಡು ಬರಬೇಕಿತ್ತು.ಅದೂ ಅವರು ಪ್ರಸನ್ನರಾದರೆ ಮಾತ್ರ. ಗಂಗೆ ದೇವರಾದರೂ ಈ ನಾಡ ಅಸ್ಪೃಷ್ಯರು ಗಂಗೆ ಪುರಾಣಗಳ ಬರೆದರೆ ಅದರ ತುಂಬಾ ರಕ್ತ ಸಿಕ್ತ ಕಥೆಗಳೇ ತುಂಬಿಕೊಳ್ಳುತ್ತವೆ.
ನೀರನ್ನು ನೋಡುವ ಆನಂದ ಮೂಲಗಳು ನೀರನ್ನ ತಾಯಾಗಿ ದೇವಿಯಾಗಿ ಆವೇಶಗೊಂಡು ಹಾಡಿ ಹರಿದಾಡಿದರೆ. ಶೋಕ ಮೂಲವಾಗಿ (ಜೀವ ಮೂಲವಾಗಿ) ನೋಡುವ ಕಥನಗಳು ಮನುಷ್ಯರನ್ನು ಪ್ರಾಣಿಗಳಿಗಿಂತಲೂ ಕಂಡ ಈ ನಾಡ ಜನರ ಪ್ರತಿ ಚರಿತ್ರೆಗಳಾಗಿ ಕಾಣುತ್ತವೆ. ಗಂಗೆ ಬಳಕೆಯ ಮೂಲವಾದಂತೆಯೇ ಗಂಗೆ ಹೆಸರಿನ ಆನಂದ ಮತ್ತು ಶೋಕ ಮೂಲಗಳೆರಡೂ ಹೆಣ್ಣನ್ನ ಬಳಸಿ ದೂರ ತಳ್ಳುವ ಸಂಕಥನವಾಗಿವೆ.
ಗಂಗೆಯನ್ನು ಶಂತನು ಕೈ ಹಿಡಿದು ಕೈ ಬಿಟ್ಟು ಸತ್ಯವತಿ ಬಳಿ ಬಂದು “ಬಾ ಪೋಪೆಂ” ಎಂದು ಕರೆವಲ್ಲಿಯೇ ಹೆಣ್ಣಿನ ಅಸ್ತಿತ್ವ ಪರಾವಲಂಬಿಯಾದುದು ಎಂದು ಕಾಣುತ್ತದೆ. ಹೆಣ್ಣು ಗಂಡು ನೋಟದಲ್ಲಿ ಹೀಗೆ ಗೋಚರಿಸಿದರೆ. ಜನಪದರ ಹೆಣ್ಣು ಹೆಣ್ಣಿನ ನೋಟದಲ್ಲಿಯೂ ಅಲಕ್ಷಿತಳಾಗಿಯೇ ಅತಂತ್ರಳಾಗಿಯೇ ಕಾಣುತ್ತಾಳೆ. ಗಂಗೆ ಗೌರಿ ಹಾಡಿನೊಳಗೆ ಗಂಗೆ ಬಡತನ ಮಾತ್ರವಲ್ಲ ಅಸ್ಪೃಷ್ಯತೆಯ ಹೊರೆ ಹೊತ್ತವಳಾಗಿಯೇ ಕಾಣುತ್ತಾಳೆ. ಮೈಲಿಗೆಯ ರೂಪವಾದ ಆಕೆ ಗೌರಿಯ ಕಣ್ಣಿಗೆ ದೂಷಣೆಯ ವಸ್ತುವಾಗಿದ್ದಾಳೆ. ಕಪ್ಪು ವರ್ಣದವಳೇ, ಮೀನು ಮಾಂಸ ತಿನ್ನುವವಳೇ, ಬೆಸ್ತರವಳೇ,ಕೀಳು ಕೆಲಸದವಳೇ,ಸುಣ್ಣಮಾರುವ, ದೋಣಿ ಓಡಿಸುವ ಸೇವಾ ಮೂಲದವಳೇ,ಇವೆಲ್ಲದರಾಚೆಗೆ ಬಡವಳೇ,ಓಡಿ ಬಂದವಳೇ ಎಂಬೆಲ್ಲಾ ಹಂಗಿಸುವಿಕೆಗೆ ಒಳಗಾಗುತ್ತಾಳೆ. ಶಿವನ ಪತ್ನಿ ಎಂಬ ವೈದಿಕ ಮೂಲವು ಗಂಗೆಯನ್ನು ಶಿರದಿಂದ,ಕೈಲಾಸದಿಂದ,ಬೆಳ್ಳಿ ಬೆಟ್ಟದಿಂದ ನೋಡಿದರೆ ಜನಪದರ ಹಾಡು ತಳವರ್ಗದಿಂದ ತಳಮೂಲದಿಂದ ಮೈಲಿಗೆಯ ನೆಲೆಯಿಂದ ಬಹಿಷ್ಕೃತ ಮೂಲದಿಂದ ಹೊರಡುತ್ತದೆ. ಇಲ್ಲಿ ಉತ್ತಮ ಎನಿಸಿಕೊಳ್ಳುವ ಗೌರಿಯನ್ನು ಗಂಗೆ ಜಡೆ ಎಳೆದು ನಡ ಮುರಿಯುವಂತೆ ಬಡಿವ ರೂಪಕವೇ ವಿಶಿಷ್ಟ.
ಈಗಲೂ ಕರೆ ಕಟ್ಟುವವರು , ಕಾಯುವವರು, ತೂಬೆತ್ತಿ ನೀರು ಬಿಡುವವರು ತಳಮೂಲದವರೇ. ನೀರ ಮೂಲವಾದ ಗಂಗೆ ಇಳೆಗೆ ಬಾರದ ಮಳೆಯಾಗದಿದ್ದಾಗಲೂ ಭಜನೆ,ವ್ರತ,ಗುರ್ಚಿ,ಜೋಕಪ್ಪ ಆಚರಣೆ ಮಾಡುವ ಕಡೆಗೆ ಕಾಡು ಸೋಸುವ ಜನರೇ ತಳಸಮುದಾಯಗಳು. ಶಿರ ಏರಿಯೂ ಒಳ್ಳೆಯ ಬದುಕನ್ನ ಗಂಗೆ ಪಡೆಯಲಿಲ್ಲ ಹಾಗೆಯೇ ಕರೆ ಕಟ್ಟಿ ನೀರು ತಂದ ಮೇಲೆ ಗಂಗೆಯ ಪೂಜೆಗೆ ಕೊನೆಗೆ ಕರೆಯ ನೀರಿಗೂ ಮೈಲಿಗೆ ಎಂದು ದೂರವಾಗುವವರು ಈ ನಾಡ ದಲಿತರು.
ನುಡಿಗೆಡಿಸೋ ನಡೆಗೆಡಿಸೋ ನೀರು:
ನೀರ ಪೂಜೆಗಳಲ್ಲಿ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುವ ಅಪವಿತ್ರಗೊಳಿಸುವ ಕಾಮುಕ ಕಥೆಗಳೂ ಈ ಸಂಸ್ಕಾರಗಳಲ್ಲಿ ಇವೆ. ನೀರ ಮಡಿಲು ದೇವ ದಾಸಿಯರನ್ನು ಸೃಷ್ಟಿಸುವ ಕೇಂದ್ರವಾಗಿತ್ತು. ಊರ ದೇವರ ಗುಡಿ ಮುಂದೆ ನಡೆವ ಓಕಳಿನೀರ ಆಚರಣೆಯು ಕೇರಿಗಳ ಹೆಣ್ಣ ಮೈ ನೋಡುವ ಊರ ಜನರ ವಾಂಛೆಯಾಗಿತ್ತು. ಮಡಿಯ, ಹರಕೆಯ, ಶುದ್ಧತೆಯ ಹೆಸರಲ್ಲಿ ಹೆಣ್ಣ ಮೈ ನೋಡುವ ಉಮೇದೂ ಇಂದಿಗೂ ಬದಲಾಗಿಲ್ಲ. ಹಿಂದೆ ಹೊಸ ಮದುಮಗಳ ಗಂಗಾ ಪೂಜೆಯ ಕೊಡಹೊತ್ತ ಮೆರವಣಿಗೆಗಳು ಊರ ಗೌಡರ,ಕುಲಕರ್ಣಿಗಳ ಹಾಸಿಗೆ ಸಿಂಗಾರಕ್ಕೆ ನಾಂದಿಯೂ ಆಗಿದ್ದವು ಎಂಬುದನ್ನ ಅನೇಕ ಕಥನಗಳು ಕಾಣಿಸಿವೆ.
ಅನಾಚಾರ ಶಿಕ್ಷೆಗೆ ಗಂಡು ದೂರ ಉಳಿದು ಹೆಣ್ಣು ಶಿಕ್ಷೆಗೆ ಬಲಿಯಾಗುವ ಜಲ ಶಿಕ್ಷೆ ಆಚರಣೆಯಲ್ಲಿತ್ತು. ನೀರಲ್ಲಿ ಗಂಡು ಕೂಸು ಎಸೆದರೂ ಹರಿದು ಬಂದ ಕಥೆ ಕರ್ಣನದಾದರೆ ಎಸೆದರೆ ಎಂದಿಗೂ ಬಾರದ ಲಕ್ಷಾಂತರ ಹೆಣ್ಣಕೂಸುಗಳ ಕತೆ ಅನಾಥ ಗಾಳಿಗಳಲ್ಲೇ ಉಳಿದಿವೆ.
ನೀರು ಜನ ವಸತಿಗಳ ಫಲವಂತಿಕೆಯ ಮೂಲವೂ ಹೌದು. ನೀರು ಜನ ಜನಗಳ ನಡುವೆ ಎಂದಿಗೂ ಬಗೆ ಹರಿಯದ ಕದನ ಮೂಲವೂ ಹೌದು. ನೀರು ಪವಿತ್ರ್ಯ ಮತ್ತು ಅಪವಿತ್ರ್ಯ ಎರಡೂ ರೂಪ ಹೊತ್ತದ್ದು. ಬಳಕೆ ಮತ್ತು ಬಹಿರ್ದೆಸೆಗಳ ನೀರ ಮಡಿಲು ಜನಕ್ಕೆ ಮಡಿಯನ್ನೂ ಮೈಲಿಗೆಯನ್ನೂ ಅಂಟಿಸುತ್ತದೆ. ಈ ನೆಲೆಯಲ್ಲಿ ಗಂಗೆಯ ಕಥೆಯೇ ಕಾರುಣ್ಯವನ್ನು ಸಾರುವ ಕಥನವೂ ಹೌದು. ಕರುಣೆಯ ಕಥೆಯೂ ಹೌದು. ಗಂಗೆ ಕಥನವೇ ಉದ್ದಕ್ಕೂ ಕೆಲವರಿಗೆ ವರ ಮತ್ತೆ ಕೆಲವರಿಗೆ ಶಾಪದ ಕಥನ. ಗಂಗೆ ಒಂದು ಕೇಂದ್ರಕ್ಕೆ ಜನ ಸೇರಿಸುವ ಧನ್ಯತೆಯ ದಿವ್ಯ ಚರಿತ್ರೆಗೆ ಕುರುಹಾದರೆ ಇನ್ನೊಂದು ಕೇಂದ್ರಕ್ಕೆ ದೂರವಿಟ್ಟ ನೀರಿನಿಂದಲೇ ಒಂದು ಬೊಗಸೆ ಕುಡಿದು ಜನ ಕ್ರಾಂತಿಗೆ ನಾಂದಿ ಹಾಡಿದ ಜನ ಚರಿತ್ರೆಗೆ ಕುರುಹಾಗಿದೆ. ಈ ಎರಡರಲ್ಲಿ ಯಾವುದು ಪವಿತ್ರ್ಯ? ಯಾವುದು ಅಪವಿತ್ರ್ಯ! ಉತ್ತರ ಸರಳ ಅಲ್ಲ.