ಅರಮನೆ ಮೈದಾನ ಭೂಮಿ ಸ್ವಾಧೀನಕ್ಕೆ ಠೇವಣಿ ಇಡಲು ಸುಪ್ರೀಂ ತಾಕೀತು

Share

ಅರಮನೆ ಮೈದಾನ ಭೂಮಿ ಸ್ವಾಧೀನಕ್ಕೆ ಠೇವಣಿ ಇಡಲು ಸುಪ್ರೀಂ ತಾಕೀತು

   by-ಕೆಂಧೂಳಿ

ನವದೆಹಲಿ,ಫೆ,೨೮- ಬೆಂಗಳೂರಿನ ಅರಮನೆ ಮೈದಾನದ ಭೂಮಿ ಸ್ವಾದೀನಪಡಿಸಿಕೊಳ್ಳುವ ಸಂಬಂಧ ಕರ್ನಾಟಕ ಸರ್ಕಾರ ೩೪೦೦ ಕೋಟಿಗೂ ಹೆಚ್ಚಿನ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿಹಕ್ಕು (ಟಿಡಿಆರ್) ಪ್ರಮಾಣಪತ್ರವನ್ನು ಒಂದುವಾರದೊಳಗೆ ಠೇವಣಿ ನೀಡುವಂತೆ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಗುರುವಾರ ಬೆಂಗಳೂರಿನ ರಮನೆ ಮೈದಾನದ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸ್ವಾದೀನ ಪಡಿಸಿಕೊಳ್ಲುವ ಸಂಬಧ ಸುಪ್ರೀಕೋರ್ಟ್ ಈ ಆದೇಶ ನೀಡಿದೆ
ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರ ಪೀಠವು ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು. ಸರ್ಕಾರದ ನಿಲುವು ಏಕರೂಪವಾಗಿಲ್ಲ. ಸರ್ಕಾರ ಆಗಾಗ ನಿಲುವನ್ನು ಬದಲಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅರಮನೆ ಮೈದಾನ ಒಟ್ಟು ೪೭೨ ಎಕರೆ ೧೬ ಗುಂಟೆ ಜಾಗ ಹೊಂದಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕಾನೂನುಬದ್ಧ ಉತ್ತರಾಧಿಕಾರಿ ಮತ್ತು ಇತರರು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಗಳು ಮತ್ತು ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ರಸ್ತೆ ವಿಸ್ತರಣೆ ಉದ್ದೇಶಕ್ಕಾಗಿ ಪಡೆದ ಅರಮನೆ ಜಾಗವನ್ನು ಮೌಲ್ಯೀಕರಿಸಿ, ವರ್ಗಾವಣೆ ಮಾಡಬಹುದಾದ ಟಿಡಿಆರ್ ನೀಡುವಂತೆ ನಿರ್ದೇಶನ ನೀಡಿತ್ತು. ಗುರುವಾರ ನಡೆದ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಬಿಡಿಎ ಆಯುಕ್ತ ಎನ್.ಜಯರಾಂ ಹಾಜರಿದ್ದರು. ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ‘ಅರಮನೆ ಮೈದಾನ ವಿವಾದದಲ್ಲಿ ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ತೀರ್ಪು ಬಂದಿದೆ. ಮುಖ್ಯ ಮೇಲ್ಮನವಿಯನ್ನು ನ್ಯಾಯ ಪೀಠ ಇತ್ಯರ್ಥಪಡಿಸಬೇಕು ಎಂದು ಕೋರಿದರು.‘ರಾಜ್ಯ ಸರ್ಕಾರದ ಪರವಾಗಿ ಹೈಕೋರ್ಟ್ ತೀರ್ಪು ನೀಡಿದೆ. ಜತೆಗೆ, ಸರ್ಕಾರವು ಈಚೆಗೆ ಸುಗ್ರೀವಾಜ್ಞೆ ಹೊರಡಿಸಿದೆ. ಈ ಜಾಗವನ್ನು ೨೦೨೪ರಲ್ಲಷ್ಟೇ ಸ್ವಾಧೀನಕ್ಕೆ ತೆಗೆದುಕೊಂಡಿದ್ದೇವೆ’ ಎಂದು ಕಪಿಲ್ ಸಿಬಲ್ ಪ್ರತಿಪಾದಿಸಿದರು. ರಾಜವಂಶಸ್ಥರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಎ.ಕೆ. ಗಂಗೂಲಿ, ರಾಕೇಶ್ ದ್ವಿವೇದಿ, ಮಾಧವಿ ದಿವಾನ್ ಮತ್ತು ಗೋಪಾಲ್ ಶಂಕರನಾರಾಯಣನ್, ‘ರಾಜ್ಯ ಸರ್ಕಾರದ ಅಧಿಕಾರಿಗಳು ೨೦೨೪ರ ಡಿಸೆಂಬರ್ ೧೦ರಂದು ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದಾರೆ’ ಎಂದರು.‘ಸರ್ಕಾರವು ಒಂದು ವಾರದೊಳಗೆ ಟಿಡಿಆರ್ ಠೇವಣಿ ಇಡಲಿ. ನಾವು ಈ ಎಲ್ಲ ವಿಷಯವನ್ನು ಪರಿಗಣಿಸುತ್ತೇವೆ’ ಎಂದು ಹೇಳಿದ ಪೀಠವು ವಿಚಾರಣೆಯನ್ನು ಮಾರ್ಚ್ ೨೦ಕ್ಕೆ ಮುಂದೂಡಿತು.
ಹಿರಿಯ ವಕೀಲ ದೇವದತ್ತ ಕಾಮತ್ ಕೋರಿಕೆಯ ಮೇರೆಗೆ, ಮುಂದಿನ ವಿಚಾರಣೆಯಂದು ಮುಖ್ಯ ಕಾರ್ಯದರ್ಶಿ ಮತ್ತು ವಿಶೇಷ ಭೂಸ್ವಾಧೀನ ಅಧಿಕಾರಿಯ ಕಡ್ಡಾಯ ಹಾಜರಾತಿಗೆ ಪೀಠ ವಿನಾಯಿತಿ ನೀಡಿತು. ಆದಾಗ್ಯೂ, ಬಿಬಿಎಂಪಿ ಮತ್ತು ಬಿಡಿಎ ಆಯುಕ್ತರು ಹಾಜರಿರಬೇಕು ಎಂದು ಸ್ಪಷ್ಟಪಡಿಸಿತು.ರಸ್ತೆ ವಿಸ್ತರಣೆ ಉದ್ದೇಶಕ್ಕಾಗಿ ಬಳಕೆಯಾಗುವ ೧೫.೩೬ ಎಕರೆ ಭೂಮಿಗೆ ಪರಿಹಾರವಾಗಿ ೩,೦೧೪ ಕೋಟಿ ಮೊತ್ತದ ಟಿಡಿಆರ್ ನೀಡಬೇಕು ಎಂದು ಸುಪ್ರೀಂಕೋರ್ಟ್ ಡಿಸೆಂಬರ್‌ನಲ್ಲಿ ಆದೇಶ ನೀಡಿತ್ತು. ಸಣ್ಣ ಜಾಗಕ್ಕೆ ಭಾರಿ ಮೊತ್ತವನ್ನು ಪಾವತಿಸಬೇಕಾದ ಹೊರೆಯಿಂದ ತಪ್ಪಿಸಿಕೊಳ್ಳಲು ಸುಗ್ರೀವಾಜ್ಞೆಯ ಆಸರೆ ಪಡೆಯಲು ಸರ್ಕಾರ ತೀರ್ಮಾನಿಸಿತ್ತು. ಬೆಂಗಳೂರು ಅರಮನೆ ಅಧಿನಿಯಮ೧೯೯೬ ಕ್ಕೆ ಸಂಬಂಧಪಟ್ಟ ಸಿವಿಲ್ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಸರ್ಕಾರವು ಇತ್ತೀಚೆಗೆ ಮೇಲ್ಮನವಿ ಸಲ್ಲಿಸಿತ್ತು.

Girl in a jacket
error: Content is protected !!