ಆವಿಷ್ಕಾರ ಕ್ಷೇತ್ರದಲ್ಲಿ ಅನುಕೂಲಕರ ಪರಿಸರ ವ್ಯವಸ್ಥೆಅಭಿವೃದ್ಧಿ ಸರ್ಕಾರದ ಬದ್ಧತೆ: ಸಚಿವ ಪ್ರಿಯಾಂಕ್ ಖರ್ಗೆ
by-ಕೆಂಧೂಳಿ
ಬೆಂಗಳೂರು, ಫೆ, 27-ಆವಿಷ್ಕಾರವನ್ನು ಪೋಷಿಸುವ ತಂತ್ರಜ್ಞಾನ ವಲಯಕ್ಕೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಕರ್ನಾಟಕ ಸರ್ಕಾರ ಗಮನ ಮತ್ತು ಬದ್ಧತೆಯನ್ನು ಹೊಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆಬಗ್ಗೆ ತಿಳಿಸಿದರು.
ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (KITS), ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ನಾಸ್ಕಾಂ (Nasscom) ನಡುವೆ, ಕರ್ನಾಟಕದ ಅಭಿವೃದ್ಧಿ ಹೊಂದುತ್ತಿರುವ ಟೆಕ್ ವಲಯದಲ್ಲಿನ ನಾವೀನ್ಯತೆ ಮತ್ತು ಬೌದ್ಧಿಕ ಆಸ್ತಿ (IP) ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಇಂದು ಒಡಂಬಡಿಕೆಗೆ (MoU) ಸಹಿ ಮಾಡಲಾಯಿತು. ನಾಸ್ಕಾಮ್ ಅಧ್ಯಕ್ಷರ ರಾಜೇಶ್ ನಂಬಿಯಾರ್ ಮತ್ತು ಕಿಟ್ಸ್ ಜಿಎಂ ಇ.ಚಂಪಾ ಒಡಂಬಡಿಕೆಗೆ ಸಹಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ತಂತ್ರಜ್ಞಾನ ಕ್ಷೇತ್ರದ ಆವಿಷ್ಕಾರದಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ರಾಜ್ಯವು ಈ ಸ್ಥಾನವನ್ನು ಉಳಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. “ನಾಸ್ಕಾಂ ಜೊತೆಯ ಈ ಸಹಯೋಗವು ಅವಿಷ್ಕಾರದ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿರುತ್ತದೆ, ಇದು ರಾಜ್ಯದಾದ್ಯಂತ ನಾವೀನ್ಯತೆಯನ್ನು ಹೆಚ್ಚಿಸಲು ಉದ್ಯಮ, ಶೈಕ್ಷಣಿಕ ಮತ್ತು ಸರ್ಕಾರದ ನಡುವಿನ ತಡೆರಹಿತ ಸಹಯೋಗದಿಂದ ಬೌದ್ಧಿಕ ಆಸ್ತಿಯ ಮೇಲೆ ರಚನಾತ್ಮಕ ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡುವ ಮೂಲಕ ಕರ್ನಾಟಕದಲ್ಲಿ ತಂತ್ರಜ್ಞಾನ ಉದ್ಯಮವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ” ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅಭಿವೃದ್ಧಿ ಮತ್ತು ವಾಣಿಜ್ಯೀಕರಣದ ಮೂಲಕ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಏಕ್ರೂಪ್ ಕೌರ್ ತಿಳಿಸಿದ್ದು, ಈ ಒಪ್ಪಂದವು ಕೆಳಕಂಡ ಆಂಶಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದಿದ್ದಾರೆ.
ರಚನಾತ್ಮಕ ಮಾರ್ಗದರ್ಶನ ಮತ್ತು ಬೆಂಬಲ ಕಾರ್ಯವಿಧಾನಗಳ ಮೂಲಕ ಕರ್ನಾಟಕದಲ್ಲಿ ನಾವೀನ್ಯತೆ ಮತ್ತು ಪೇಟೆಂಟ್ ಫೈಲಿಂಗ್ಗಳನ್ನು ಉತ್ತೇಜಿಸಲು ಬೌದ್ಧಿಕ ಆಸ್ತಿ (Intellectual Property) ಸಕ್ರಿಯಗೊಳಿಸುವಿಕೆ. ಕಾರ್ಯಕ್ರಮವನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು
ಶೈಕ್ಷಣಿಕ ಸಂಸ್ಥೆಗಳಾದ್ಯಂತ ಬೌದ್ಧಿಕ ಆಸ್ತಿ (Intellectual Property) ಮಾರ್ಗದರ್ಶನ, ಜಾಗೃತಿ ಕಾರ್ಯಾಗಾರಗಳು ಮತ್ತು ಸಾಮರ್ಥ್ಯ ನಿರ್ಮಾಣದ ಉಪಕ್ರಮಗಳ ಮೂಲಕ ಸಮಗ್ರ ತಾಂತ್ರಿಕ ಬೆಂಬಲವನ್ನು ತಲುಪಿಸುವುದು
ಈ ಒಪ್ಪಂದದ ಪ್ರಮುಖ ಅಂಶವಾದ ನಾಸ್ಕಾಂ ಬೌದ್ಧಿಕ ಆಸ್ತಿ ಸಕ್ರಿಯಗೊಳಿಸುವ ಕಾರ್ಯಕ್ರಮವು (NASSCOM Intellectual Property Enablement Program), ಕರ್ನಾಟಕದ ಐಟಿ ಉದ್ಯಮಕ್ಕೆ ರಚನಾತ್ಮಕ ಮಾರ್ಗದರ್ಶನ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ, ಸ್ಟಾರ್ಟ್ಅಪ್ಗಳು ಮತ್ತು ಎಸ್ಎಂಇ (SME)ಗಳ ಮೇಲೆ ವಿಶೇಷ ಗಮನಹರಿಸುತ್ತದೆ, ಅವರ ಬೌದ್ಧಿಕ ಆಸ್ತಿ ನಿರ್ವಹಣೆ ಮತ್ತು ನಾವೀನ್ಯತೆ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ. ಈ ಉಪಕ್ರಮವು ಪೇಟೆಂಟ್ ಫೈಲಿಂಗ್ಗಳನ್ನು ವೇಗಗೊಳಿಸಲು ಮತ್ತು ರಾಜ್ಯದಾದ್ಯಂತ ತಾಂತ್ರಿಕ ಪ್ರಗತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.