ಕೊಹ್ಲಿ ದಾಖಲೆ ಶತಕ ; ಪಾಕ್ ವಿರುದ್ಧ ಭಾರತಕ್ಕೆ ೬ ವಿಕೆಟ್ ಜಯ

Share

ಕೊಹ್ಲಿ  ದಾಖಲೆಶತಕ ; ಪಾಕ್ ವಿರುದ್ಧ ಭಾರತಕ್ಕೆ ೬ ವಿಕೆಟ್ ಜಯ

ಕೆಂಧೂಳಿ
ದುಬೈ: ಒಂದೂವರೆ ವರ್ಷದ ಬಳಿಕ ವಿರಾಟ್ ಕೊಹ್ಲಿ(೧೦೦) ಬಾರಿಸಿದ ಶತಕ ವೈಭವದ ನೆರವಿನಿಂದ ಭಾನುವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಭಾರತ, ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ೬ ವಿಕೆಟ್ ಅಂತರದಿಂದ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ೨೦೧೭ರ ಫೈನಲ್ ಸೋಲಿಗೂ ಸೇಡು ತೀರಿಸಿಕೊಂಡಿದೆ. ಸೋಲು ಕಂಡ ಪಾಕಿಸ್ತಾನ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಭಾರತ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಬಹುತೇಕ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ತನ್ನ ಅಂತಿಮ ಲೀಗ್ ಪಂದ್ಯವನ್ನು ನ್ಯೂಜಿಲ್ಯಾಂಡ್ ವಿರುದ್ಧ ಮಾ.೨ ರಂದು ಆಡಲಿದೆ.

ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ೪೯.೪ ಓವರ್‌ಗಳಲ್ಲಿ ೨೪೧ ರನ್ ಬಾರಿಸಿತು, ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಭಾರತ ೪೨.೩ ಓವರ್‌ಗಳಲ್ಲಿ ೪ ವಿಕೆಟ್‌ನಷ್ಟಕ್ಕೆ ೨೪೪ ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ದಾಖಲೆಯ ಕೊಹ್ಲಿ ಶತಕ

ಕಳೆದೊಂದು ವರ್ಷದಿಂದ ತೀವ್ರ ರನ್ ಬರಗಾಲ ಅನುಭವಿಸಿದ್ದ ಕಿಂಗ್ ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಜತೆಗೆ ತಮ್ಮ ನಿವೃತ್ತಿ ಬಗ್ಗೆ ಮಾತನಾಡುತ್ತಿದ್ದವರಿಗೆ ತಕ್ಕ ಉತ್ತರವನ್ನು ನೀಡಿದರು. ಇದು ಕೊಹ್ಲಿ ಬಾರಿಸಿದ ೫೧ನೇ ಏಕದಿನ ಶತಕ. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ೮೨ನೇ ಶತಕ ಇದಾಗಿದೆ. ಕೊನೆಯ ಬಾರಿಗೆ ಕೊಹ್ಲಿ ಶತಕ ಬಾರಿಸಿದ್ದು ೨೦೨೩ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ. ಅಂದು ಕೊಹ್ಲಿ ವಾಖೆಂಡೆಯಲ್ಲಿ ಶತಕ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ಗರಿಷ್ಠ ೪೯ನೇ ಏಕದಿನ ಶತಕ ದಾಖಲೆಯನ್ನು ಮುರಿದು ವಿಶ್ವದಾಖಲೆ ನಿರ್ಮಿಸಿದ್ದರು.

ಪಾಕ್ ಪಂದ್ಯಕ್ಕೂ ಮುನ್ನ ದಿನವಾದ ಶನಿವಾರ ಕೊಹ್ಲಿ ಅಭ್ಯಾಸಕ್ಕೆ ೩ ಗಂಟೆಗೂ ಮುಂಚಿತವಾಗಿ ಬಂದು ಅಭ್ಯಾಸ ನಡೆಸಿದ ಪ್ರತಿಫಲ ಈ ಪಂದ್ಯದಲ್ಲಿ ಕಾಣಿಸಿತು. ಯಾರ್ಕರ್, ಗೂಗ್ಲಿ ಯಾವುದೇ ಅಸ್ತ್ರಗಳಿಗೆ ಜಗ್ಗದ ಕೊಹ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ಕೊಹ್ಲಿ(೨೮೭ ಇನಿಂಗ್ಸ್) ೧೫ ರನ್ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ೧೪ ಸಾವಿರ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಸವಿನ್ ತೆಂಡೂಲ್ಕರ್(೩೫೦ ಇನಿಂಗ್ಸ್) ಮತ್ತು ಕುಮಾರ ಸಂಗಕ್ಕರ (೩೭೮ ಇನಿಂಗ್ಸ್) ಕ್ರಮವಾಗಿ ೨ ಮತ್ತು ೩ನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಜತೆ ಮೂರನೇ ವಿಕೆಟ್‌ಗೆ ಜತೆಯಾದ ಶ್ರೇಯಸ್ ಅಯ್ಯರ್ ಕೂಡ ಅರ್ಧಶತಕ ಬಾರಿಸಿ ಮಿಂಚಿದರು. ೬೭ ಎಸೆತ ಎದುರಿಸಿದ ಅಯ್ಯರ್ ೫ ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ೫೬ ರನ್ ಬಾರಿಸಿದರು. ಕೊಹ್ಲಿ ಜತೆಗೂಡಿ ಮೂರನೇ ವಿಕೆಟ್‌ಗೆ ೧೧೪ ರನ್‌ಗಳ ಜತೆಯಾಟ ನಡೆಸಿದರು. ಶುಭಮನ್ ಗಿಲ್ ೩೫ ರನ್ ಗಳಿಸಿದ್ದ ವೇಳೆ ಜೀವದಾನ ಸಿಕ್ಕರೂ ಇದರ ಲಾಭವೆತ್ತಲು ಸಾಧ್ಯವಾಗಲಿಲ್ಲ. ೪೬ ರನ್ ಗಳಿಸಿ ಔಟಾದರು. ರೋಹಿತ್ ಶರ್ಮ ಮತ್ತೆ ಶಾಹೀನ್ ಶಾ ಅಫ್ರಿದಿ ವಿರುದ್ಧ ವೈಫಲ್ಯ ಕಂಡರು. ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಅವರ ಗಳಿಗೆ ೨೦ ರನ್. ಅಂತಿಮ ಹಂತದಲ್ಲಿ ಪಾಂಡ್ಯ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಗಿ ೮ ರನ್‌ಗೆ ವಿಕೆಟ್ ಕಳೆದುಕೊಂಡರು. ಅಂತಿಮ ಹಂತದವರೆಗೂ ಬ್ಯಾಟಿಂಗ್ ನಡೆಸಿದ ಕೊಹ್ಲಿ ೧೧೧ ಎಸೆತಗಳಿಂದ ಭರ್ತಿ ೧೦೦ ರನ್ ಬಾರಿಸಿ ಅಜೇಯರಾಗಿ ಉಳಿದರು. ಕೊಹ್ಲಿ ಬೌಂಡರಿ ಮೂಲಕ ಶತಕ ಮತ್ತು ಭಾರತದ ಗೆಲುವನ್ನು ಸಾರಿದರು.

ಫೀಲ್ಡಿಂಗ್‌ನಲ್ಲಿಯೂ ಮಿಂಚಿದ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಕ್ಯಾಚ್ ಪಡೆದ ಮೊದಲ ಭಾರತೀಯ ಹಾಗೂ ವಿಶ್ವದ ಮೂರನೇ ಫೀಲ್ಡರ್ ಎನಿಸಿಕೊಂಡರು. ಇದೇ ವೇಳೆ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಅಜರುದ್ದೀನ್(೧೫೬) ದಾಖಲೆ ಪತನಗೊಂಡಿತು. ಕೊಹ್ಲಿ ೧೫೮* ಕ್ಯಾಚ್ ಹಿಡಿದಿದ್ದಾರೆ. ವಿಶ್ವ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(೨೧೮) ಹೆಸರಿನಲ್ಲಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನಕ್ಕೆ ಆಸರೆಯಾದದ್ದು ನಾಯಕ ರಿಜ್ವಾನ್ ಮತ್ತು ಶಕೀಲ್. ತಾಳ್ಮೆಯುತ ಬ್ಯಾಟಿಂಗ್ ಮೂಲಕ ಕೆಲ ಕಾಲ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕೊನೆಗೆ ಅಕ್ಷರ್ ಪಟೇಲ್ ಬೇರ್ಪಡಿಸಿದರು. ೪೬ ರನ್ ಗಳಿಸಿದ್ದ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ರಿಕ್ವಾನ್ ವಿಕೆಟ್ ಪತನಗೊಂಡು ೮ ರನ್ ಅಂತರದಲ್ಲಿ ಶಕೀಲ್ ವಿಕೆಟ್ ಕೂಡ ಬಿತ್ತು. ಮೂರನೇ ವಿಕೆಟ್‌ಗೆ ಶಕೀಲ್ ಮತ್ತು ರಿಜ್ವಾನ್ ೧೦೪ ರನ್ ರಾಶಿ ಹಾಕಿದರು. ಶಕೀಲ್ ೫ ಬೌಂಡರಿ ನೆರವಿನಿಂದ ೬೨ ರನ್ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು.

 

Girl in a jacket
error: Content is protected !!