ಮತ್ತೆ ರಾಜ್ಯಪಾಲರ ಸರ್ಕಾರದ ನಡುವೆ ವಾರ್
by-ಕೆಂಧೂಳಿ
ಬೆಂಗಳೂರು, ಫೆ, 22-ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಮತ್ತೆ ವಾರ್ ಶುರುವಾಗಿದೆ,ಸರ್ಕಾರದ ಜಾರಿಗೆ ತಂದ ವಿಧೇಯಕಗಳಿಗೆ ಸಹಿ ಹಾಕದೆ ವಾಪಾಸ್ ಕಳಿಸಿರುವುದು ಮತ್ತೊಂದು ಕಿಡಿ ಹೊತ್ತಿಕೊಂಡಿದೆ.
ರಾಜ್ಯಪಾಲರ ಅಧಿಕಾರ ಮೊಟಕು ಮಾಡುವ ಉದ್ದೇಶದಿಂದ ಜಾರಿಗೆ ತಂದಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹಾಗೂ ಮುಡಾ ತಿದ್ದುಪಡಿ ವಿಧೇಯಕಕ್ಕೆ ಸ್ಪಷ್ಟನೆ ಕೋರಿ ವಾಪಸ್ ಕಳುಹಿಸಿದ್ದಾರೆ.
ವಿಶ್ವವಿದ್ಯಾನಿಲಯಗಳಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ವಿಚಾರ ಸರಕಾರ ಹಾಗೂ ರಾಜಭವನದ ಮಧ್ಯೆ ಪ್ರತಿಷ್ಠೆಯ ವಿಚಾರವಾಗಿ ಪರಿಣಮಿಸಿದೆ. ಗ್ರಾಮೀಣಾಭಿವೃದ್ಧಿ ಮಸೂದೆಯನ್ನು ಈ ಹಿಂದೆ ವಾಪಸ್ ಕಳುಹಿಸಿದ್ದ ರಾಜ್ಯಪಾಲರು ಈ ಬಗ್ಗೆ ಸರಕಾರ ಸ್ಪಷ್ಟನೆ ಕೊಟ್ಟಿದ್ದರೂ 2ನೇ ಬಾರಿಗೆ ವಾಪಸ್ ಕಳುಹಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ (ತಿದ್ದುಪಡಿ) ವಿಧೇಯಕದಲ್ಲಿ ಕುಲಾಧಿಪತಿ ಸ್ಥಾನ ರಾಜ್ಯಪಾಲರ ಬದಲು ಮುಖ್ಯಮಂತ್ರಿ ಅಲಂಕರಿಸುತ್ತಾರೆ. ರಾಜ್ಯಪಾಲರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಜತೆಗೆ ಕುಲಪತಿ ನೇಮಕ ಅಧಿಕಾರ ಮುಖ್ಯಮಂತ್ರಿಯವರಿಗೆ ಸಿಗಲಿದೆ. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ವಿಪಕ್ಷಗಳ ವಿರೋಧದ ಮಧ್ಯೆಯೂ ಸರಕಾರ ಮಸೂದೆಗೆ ಅನುಮೋದನೆ ಪಡೆದಿತ್ತು. ವಿಶ್ವವಿದ್ಯಾ ನಿಲಯ ಕಾಯ್ದೆ ವ್ಯಾಪ್ತಿಯಲ್ಲಿ ಈ ವಿ.ವಿ. ಬರುವು ದಿಲ್ಲ ಎಂದು ರಾಜ್ಯ ಸರಕಾರ ವಾದಿಸಿತ್ತು. ಈ ಮಸೂದೆಯ ಅನಿವಾರ್ಯತೆ, ಅಗತ್ಯತೆ ಪ್ರಸ್ತಾವಿಸಿ ಸರಕಾರದ ಸ್ಪಷ್ಟನೆ ಬಯಸಿದ್ದರು. ಜನವರಿಯಲ್ಲಿ ಒಮ್ಮೆ ಸ್ಪಷ್ಟನೆ ನೀಡಲಾಗಿತ್ತು.
ಗುಜರಾತ್‌ನಲ್ಲಿ ರಾಜ್ಯ ಸರಕಾರವೇ ಕುಲಪತಿಗಳ ನೇಮಕ ಮಾಡುತ್ತದೆ ಎಂದು ಸಚಿವರು ಹೊರಗೆ ಸಮಜಾಯಿಷಿ ನೀಡಿದ್ದರಾದರೂ ರಾಜ್ಯಪಾಲರಿಗೆ ನೀಡಿದ ಸ್ಪಷ್ಟನೆಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ಉತ್ತಮ ಆಡಳಿತ ತರಲು, ಕುಲಾಧಿಪತಿ ಸ್ಥಾನವನ್ನು ಮುಖ್ಯಮಂತ್ರಿ ವಹಿಸಿ ಕೊಳ್ಳುವುದು ಸೂಕ್ತ ಎಂದು ವಾದಿಸಿತ್ತು. ಆದರೆ ರಾಜ್ಯಪಾಲರು ಇದಕ್ಕೆ ಮನ್ನಣೆ ನೀಡಿಲ್ಲ. ಇದು ರಾಜಭವನದ ಸಾಂವಿಧಾನಿಕ ಜವಾಬ್ದಾರಿಗೆ ಧಕ್ಕೆ ತರುತ್ತಿದೆ. ಈಗಿನ ವ್ಯವಸ್ಥೆಯಿಂದ ಸೃಷ್ಟಿಯಾಗಿರುವ ಸಮಸ್ಯೆ ಏನೆಂದು ವಿವರಣೆ ಕೊಡಿ ಎಂದು ಸ್ಪಷ್ಟನೆ ಕೋರಿದ್ದಾರೆ.
ಹಾಲಿ ಇರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ರದ್ದುಪಡಿಸಿ ಬಿಡಿಎ ರೀತಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಬೆಳಗಾವಿ ಅಧಿವೇಶನದಲ್ಲಿ ಅಂಗೀಕೃತಗೊಂಡ ಮುಡಾ ತಿದ್ದುಪಡಿ ಮಸೂದೆಗೂ ರಾಜ್ಯಪಾಲರು ಸ್ಪಷ್ಟನೆ ಕೋರಿದ್ದಾರೆ. ಮುಡಾ ಬಗ್ಗೆ ತನಿಖೆ ನಡೆಯುತ್ತಿದೆ. ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ಹಂತದಲ್ಲಿ ವಿಧೇಯಕ ಜಾರಿಗೆ ತರುವುದು ನೈತಿಕವಾಗಿ ಸಮಂಜಸವೇ? ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ. ಜತೆಗೆ ಸಹಕಾರ ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆಗೆ ಸಂಬಂಧಿಸಿದ ಮಸೂದೆಗೂ ಸ್ಪಷ್ಟನೆ ಕೋರಿದ್ದಾರೆ.