ಸಿದ್ದಾರೂಢರು ಸಾವಿನ ನಂತರವೂ ಬದುಕಿದ್ದಾರೆ: ಬಸವರಾಜ ಬೊಮ್ಮಾಯಿ
by-ಕೆಂಧೂಳಿ
ಹುಬ್ಬಳ್ಳಿ,ಫೆ20- ಸಿದ್ದಾರೂಢರ ಅದ್ವೈತ ವಿಚಾರ ಸೂರ್ಯನಷ್ಟೇ ಪ್ರಕಾಶಮಾನವಾಗಿದ್ದು, ಅದನ್ನು ನಾವು ನಮ್ಮ ಬದುಕಿನಲ್ಲಿ ಎಷ್ಟು ಅಳವಡಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಬದುಕು ಪ್ರಕಾಶಮಾನವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಇರಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಹುಬ್ಬಳ್ಳಿಯಲ್ಲಿ ನಡೆದ ಶ್ರೀ ಸಿದ್ದಾರೂಢರ 190 ನೇ ಜಯಂತಿ ಹಾಗೂ ಶ್ರೀ ಗುರುನಾಥಾರೂಢರ 115 ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಿದ್ದಾರೂಢರ ಆಶೀರ್ವಾದ ನಮ್ಮ ಮೇಲಿದೆ. ನಮ್ಮ ತಾಯಿ ಸಿದ್ದರೂಢರ ಪರಮ ಭಕ್ತೆ. ನಮ್ಮ ತಂದೆಯವರಿಗೆ ಬಹಳ ಭಕ್ತಿ ಇತ್ತು ಅವರ ಆಶೀರ್ವಾದ ದಿಂದಲೇ ನಾನು ಸಂಸ್ಕಾರ, ಒಳ್ಳೆಯ ಜ್ಞಾನ ಪಡೆಯಲು ಸಾಧ್ಯವಾಯಿತು. ಸಿದ್ದಾರೂಢರ ಆಸೀರ್ವಾದ ನನ್ನ ಮೇಲಿದೆ. ನಾನು ಪ್ರತಿ ದಿನ ಸಿದ್ದಾರೂಢರ ಧ್ಯಾನ ಮಾಡುತ್ತೇನೆ ಎಂದು ಹೇಳಿದರು.
ದೇವರು ನಮ್ಮನ್ನು ಯಾಕೆ ಹಟ್ಟಿಸಿದ್ಸಾನೆ ಪ್ರತಿಯೊಬ್ಬರಿಗೆ ಒಂದೊಂದು ಅಸ್ತಿತ್ವ ನೀಡಿದ್ದಾನೆ. ದ್ವೈತ ಅದ್ವೈತದ ವಿಚಾರ ಮನುಷ್ಯನಲ್ಲಿ ಭಗವಂತ ಭಗವಂತನಲ್ಲಿ ಮನುಷ್ಯ ಎನ್ನುವುದು. ಮಾನವ ಧರ್ಮ, ಮನುಷ್ಯ ನಿರ್ಮಿತವಾದ ಧರ್ಮ, ಒಬ್ಬ ಮನುಷ್ಯನನ್ನು ಗೌರವದಿಂದ ಕಾಣುವ ಕೆಲಸ ಆಗಬೇಕು. ಮಾನವ ಧರ್ಮ ಹಾಗೂ ಲೌಕಿಕ ಧರ್ಮಕ್ಕೆ ಇರುವ ವ್ಯತ್ಯಾಸ ಏನಂದರೆ ಮಾನವ ಧರ್ಮದಲ್ಲಿ ಒಬ್ಬ ಮನುಷ್ಯನನ್ನು ಇನ್ನೊಬ್ಬ ಗೌರವಿಸುವ ಕೆಲಸ ಆಗಬೇಕು. ಮಾನವ ಧರ್ಮ ಸತ್ಯ ಹೇಳು ಧರ್ಮದಿಂದ ನಡೆದುಕೊಂಡರೆ ನಿನಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತದೆ. ಲೌಕಿಕ ಧರ್ಮ ಸುಳ್ಳು ಹೇಳಬೇಡ, ಅಧರ್ಮದಿಂದ ನಡೆದುಕೊಳ್ಳಬೇಡ ಎಂದು ಹೇಳುತ್ತದೆ. ಅಧರ್ಮದಿಂದ ನಡೆದುಕೊಂಡರೆ ನಿನಗೆ ಶಿಕ್ಷೆ ಇದೆ. ಮಾನವ ಧರ್ಮ ಪುಣ್ಯ ಪ್ರಾಪ್ತಿಯ ಧರ್ಮ, ನಿಮಗೆ ಮೋಕ್ಷವನ್ನು ಕೊಡುವ ಧರ್ಮ. ಲೌಕಿಕ ಧರ್ಮ ಶಿಕ್ಷೆ ಆಧಾರಿತ ಧರ್ಮ. ಮನುಷ್ಯ ಹಾಗೂ ಮಾನವರಿಗಿರುವ ವ್ಯತ್ಯಾಸ ಕಂಡುಕೊಳ್ಳಬೇಕಿದೆ. ಅದೇ ವೇದಾಂತ ಎಂದರು.
ಸಿದ್ದಾರೂಢರು ಪರಮಾತ್ಮ ಮೆಚ್ಚುವ ರಿತಿಯಲ್ಲಿ ಬದುಕಿದ್ದಾರೆ. ಸಿದ್ದರೂಢರು ಮತ್ತು ಗುರುನಾಥಾರೂಢರ ನಡುವಿನ ಗುರು ಶಿಷ್ಯರ ಸಂಬಂಧ ಎಷ್ಡಿತ್ತು ಅಂತ ತಿಳಿಯಬೇಕು. ಗುರು ಶಿಷ್ಯರ ಸಂಬಂಧ ಎಂದರೆ ಗುರುವಿನಲ್ಲಿ ಕರಗಿ ಲೀನವಾಗಬೇಕು. ಆ ರೀತಿಯ ಭಕ್ತಿಯ ಭಾವ ಗರು ಶಿಷ್ಯರಲ್ಲಿ ಕಾಣುವಂಥದ್ದು, ಆ ರೀತಿಯ ಭಕ್ತಿಯ ಭಾವ ಗುರು ಶಿಷ್ಯರಲ್ಲಿ ಕಾಣಿಸುತ್ತದೆ. ಸಿದ್ದಾರೂಢರು ತಮ್ಮ ಬದುಕಿನ ಮೂಲಕ ಈ ಆದರ್ಶಗಳನ್ನು ಹೇಳಿದ್ದು, ಅದು ಹುಬ್ಬಳ್ಳಿಯಲ್ಲಿ ನಡೆದಿರುವುದು, ಹುಬ್ಬಳ್ಳಿಯಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಭಾಗ್ಯ, ಸೂರ್ಯ ಚಂದ್ರ ಇರುವವರೆಗೂ ಸಿದ್ದಾರೂಢರ ಅದ್ವೈತ ವಿಚಾರ ಸೂರ್ಯನಷ್ಟೇ ಪ್ರಕಾಶಮಾನವಾಗಿರುತ್ತದೆ. ಅದನ್ನು ನಾವು ನಮ್ಮ ಬದುಕಿನಲ್ಲಿ ಎಷ್ಟು ಅಳವಡಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಬದುಕು ಪ್ರಕಾಶಮಾನವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಇರಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನೇಕ ಮಠಾಧೀಶರು, ರಾಜಕೀಯ ನಾಯಕರು ಹಾಜರಿದ್ದರು.