ಟೆನಿಸ್‌ನಲ್ಲಿ ಪೂಣಚ್ಚ-ಪ್ರಜ್ವಲ್ ಜೋಡಿ ತಂದ ಚಿನ್ನ

Share

ಟೆನಿಸ್‌ನಲ್ಲಿ ಪೂಣಚ್ಚ-ಪ್ರಜ್ವಲ್ ಜೋಡಿ ತಂದ ಚಿನ್ನ

 by-ಕೆಂಧೂಳಿ
ಬೆಂಗಳೂರು,ಫೆ,೧೨- ಟೆನಿಸ್‌ನ ಪುರುಷರ ಡಬಲ್ಸ್‌ನಲ್ಲಿ ಪೂಣಚ್ಚ-ಪ್ರಜ್ವಲ್ ಜೋಡಿಯ ಅಮೋಘ ಆಟದಿಂದ ಚಿನ್ನ ತಂದುಕೊಟ್ಟರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ೩೮ನೇ ರಾಷ್ಟ್ರೀಯ ಕ್ರೀಡಾಕೂಟದ ಟೆನಿಸ್‌ನ ಪುರುಷರ್ ಡಬಲ್ಸ್‌ನಲ್ಲಿ ಈ ಜೋಡಿ ಈ ಸಾಧನೆ ಮಾಡಿದೆ
ಪ್ರಜ್ವಲ್- ಪೂಣಚ್ಚ ಜೋಡಿಯು ಸೋಮವಾರ ನಡೆದ ಫೈನಲ್ ಹಣಾಹಣಿಯಲ್ಲಿ ೬-೩, ೬-೧ರಿಂದ ಅಗ್ರ ಶ್ರೇಯಾಂಕದ ಸರ್ವಿಸಸ್‌ನ ಇಶಾಕ್ ಇಕ್ಬಾಲ್ ಮತ್ತು ಫೈಸಲ್ ಕಮರ್ ಅವರನ್ನು ಮಣಿಸಿ, ರಾಷ್ಟ್ರೀಯ ಕ್ರೀಡಾಕೂಟದ ಇತಿಹಾಸದಲ್ಲಿ ಈ ವಿಭಾಗದಲ್ಲಿ ಕರ್ನಾಟಕಕ್ಕೆ ಮೊದಲ ಚಿನ್ನ ತಂದುಕೊಟ್ಟರು.
ಗೋವಾದಲ್ಲಿ ನಡೆದಿದ್ದ ೩೬ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಜ್ವಲ್ ಅವರು ಆದಿಲ್ ಕಲ್ಯಾಣಪುರ್ ಅವರೊಂದಿಗೆ ಬೆಳ್ಳಿ ಪದಕ ಗೆದ್ದಿದ್ದರು. ಆದರೆ, ಈ ಬಾರಿ ಪೂಣಚ್ಚ ಅವರೊಂದಿಗೆ ಪದಕದ ಬಣ್ಣವನ್ನು ಬದಲಾಯಿಸಿಕೊಂಡಿದ್ದಾರೆ.
ಡಬಲ್ ಕಂಚು: ಸಿಂಗಲ್ಸ್ ಸ್ಪರ್ಧೆಯಲ್ಲಿ ಕರ್ನಾಟಕ ಆಟಗಾರರು ಡಬಲ್ ಕಂಚಿನ ಸಾಧನೆ ಮಾಡಿದರು. ಪ್ರಜ್ವಲ್ ದೇವ್ ಅವರು ಪುರುಷರ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ೭-೫, ೪-೬, ೧-೬ರಿಂದ ಸರ್ವಿಸಸ್‌ನ ಇಶಾಕ್ ಇಕ್ಬಾಲ್ ಅವರಿಗೆ ಮಣಿದು, ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಮೊದಲ ಸೆಟ್‌ನಲ್ಲಿ ಮುನ್ನಡೆ ಸಾಧಿಸಿದ್ದ ಮೈಸೂರಿನ ಆಟಗಾರ ನಂತರದ ಸೆಟ್‌ಗಳಲ್ಲಿ ಹಿಡಿತ ಕಳೆದುಕೊಂಡರು.ಫೈನಲ್‌ನಲ್ಲಿ ಇಸಾಕ್ ಅವರು ಗುಜರಾತ್‌ನ ದೇವ್ ಜಾವಿಯಾ ಅವರನ್ನು ಎದುರಿಸಲಿದ್ದಾರೆ. ಜಾವಿಯಾ ಅವರು ಮತ್ತೊಂದು ಸೆಮಿಫೈನಲ್‌ನಲ್ಲಿ ೬-೨, ೩-೬, ೬-೪ರಿಂದ ತಮಿಳುನಾಡಿನ ಮನೀಷ್ ಸುರೇಶ್ ಕುಮಾರ್ ಅವರನ್ನು ಸೋಲಿಸಿದರು.ಕರ್ನಾಟಕದ ಉದಯೋನ್ಮುಖ ಆಟಗಾರ್ತಿ ಅಮೋದಿನಿ ವಿ. ನಾಯ್ಕ್ ಅವರು ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ವೈಷ್ಣವಿ ಅಡ್ಕರ್ ಅವರಿಗೆ ಶರಣಾಗಿ, ಕಂಚು ತಮ್ಮದಾಗಿಸಿಕೊಂಡರು. ಕ್ವಾರ್ಟರ್ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಅದಿತಿ ರಾವತ್ ಅವರಿಗೆ ಆಘಾತ ನೀಡಿದ್ದ ಕರ್ನಾಟಕದ ಆಟಗಾರ್ತಿ ಮೊದಲ ಸೆಟ್ ಅನ್ನು ೦-೬ರಿಂದ ಕಳೆದುಕೊಂಡ ಬಳಿಕ ಸ್ಪರ್ಧೆಯಿಂದ ಹಿಂದೆ ಸರಿದರು.ಫೈನಲ್‌ನಲ್ಲಿ ವೈಷ್ಣವಿ ಅವರು ಗುಜರಾತ್‌ನ ವೈದೇಹಿ ಚೌಧರಿ ಅವರನ್ನು ಎದುರಿಸುವರು. ವೈದೇಹಿ ಮತ್ತೊಂದು ಸೆಮಿಫೈನಲ್‌ನಲ್ಲಿ ೬-೨, ೬-೦ಯಿಂದ ಮಹಾರಾಷ್ಟ್ರದ ಆಕಾಂಕ್ಷಾ ನಿಟ್ಟರ್ ಅವರನ್ನು ಸೋಲಿಸಿದರು.

Girl in a jacket
error: Content is protected !!