“1990s” ಚಿತ್ರದ ಟ್ರೇಲರ್ ಅನಾವರಣ
by-ಕೆಂಧೂಳಿ
ಕನ್ನಡದಲ್ಲಿ ಹೊಸತಂಡದ ಹೊಸಪ್ರಯತ್ನಗಳಿಗೆ ಕನ್ನಡ ಕಲಾಭಿಮಾನಿಗಳು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅಂತಹ ಹೊಸತಂಡವೊಂದರ ಹೊಸಪ್ರಯತ್ನ “1990s”.
ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ “1990s” ಚಿತ್ರ 90ರ ಕಾಲಘಟ್ಟದಲ್ಲಿ ನಡೆಯುವ ಪ್ರೇಮಕಥೆ. ಈಗಾಗಲೇ ಹಾಡು ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. “ತಟ್ ಅಂತ ಹೇಳಿ” ಕಾರ್ಯಕ್ರಮ ಹಾಗೂ ತಮ್ಮ ಪರಿಶುದ್ಧ ಕನ್ನಡದ ಮಾತಿನ ಮೂಲಕ ಜನಪ್ರಿಯರಾಗಿರುವ ಡಾ|ನಾ.ಸೋಮೇಶ್ವರ ಹಾಗೂ ಪತ್ರಕರ್ತ, ನಟ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ “1990s” ಚಿತ್ರದ ಟ್ರೇಲರ್ ಅನಾವರಣ ಮಾಡಿದರು.
ಟ್ರೇಲರ್ ವೀಕ್ಷಿಸಿ, ಮಾತನಾಡಿದ ನಾ. ಸೋಮೇಶ್ವರ್ ಅವರು ತಮ್ಮದೇ ಅದ ಶುದ್ದ ಕನ್ನಡದ ಮಾತುಗಳ ಮೂಲಕ ಟ್ರೇಲರ್ ಹಾಗೂ ಹಾಡಿನ ವಿಮರ್ಶೆ ಮಾಡಿ, ಹೊಸಬರ ಪ್ರಯತ್ನ ಯಶಸ್ವಿಯಾಗಲಿ ಎಂದರು.
ಚಿತ್ರದ ಹೆಸರೆ ಹೇಳುವಂತೆ ನಮ್ಮ ಚಿತ್ರದ ಕಥೆ 90 ರ ಕಾಲಘಟ್ಟದ್ದು. ಪ್ರೇಮಕಥೆಯೇ ಪ್ರಧಾನವಾದರೂ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ನಿರ್ದೇಶಕ ಸಿ.ಎಂ.ನಂದಕುಮಾರ್ ತಿಳಿಸಿದರು.
ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ತಿಳಿಸಿದ ನಿರ್ಮಾಪಕರಲ್ಲೊಬ್ಬರಾದ ಅರುಣ್ ಕುಮಾರ್ ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.
ನಮ್ಮ ಚಿತ್ರಕ್ಕೆ ಮೊದಲಿನಿಂದಲೂ ಎಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಇದೇ 28 ರಂದು ಬಿಡುಗಡೆಯಾಗಲಿರುವ ನಮ್ಮ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲೇ ನೋಡಿ. ಬೆಂಬಲ ನೀಡಿ ಎಂದರು ನಾಯಕ ಅರುಣ್ ಹಾಗೂ ನಾಯಕಿ ರಾಣಿ ವರದ್.
ನಟ ದೇವ್, ಸಂಗೀತ ನಿರ್ದೇಶಕ ಮಹಾರಾಜ, ಛಾಯಾಗ್ರಾಹಕ ಹಾಲೇಶ್,ಸಾಹಸ ನಿರ್ದೇಶಕ ಅಶೋಕ್, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್, ಸಂಕಲನಕಾರ ಕೃಷ್ಣ ಮುಂತಾದ ಚಿತ್ರತಂಡದ ಸದಸ್ಯರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.