ಗ್ಯಾರಂಟಿ ಹಣ ಭರ್ತಿ ಮಾಡಲು  ಜನರ ಮೇಲೆ ದರ ಏರಿಕೆ ಬರೆ- ಎಚ್ ಡಿ ಕೆ ಕಿಡಿ 

Share

ಗ್ಯಾರಂಟಿ ಹಣ ಭರ್ತಿ ಮಾಡಲು  ಜನರ ಮೇಲೆ ದರ ಏರಿಕೆ ಬರೆ- ಎಚ್ ಡಿ ಕೆ ಕಿಡಿ 

  by-ಕೆಂಧೂಳಿ
ಹಾವೇರಿ (ರಾಣಿಬೆನ್ನೂರು),ಫೆ,09-ಒಂದು ಕಡೆ ಗ್ಯಾರಂಟಿ ಕೊಡುತ್ತೇವೆ ಎಂದು ಜನರ ಕಣ್ಣೊರೆಸುವ ನಾಟಕ ಆಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ; ಇನ್ನೊಂದು ಕಡೆ ಜನರಿಂದ ದರ ಏರಿಸಿ ಸುಲಿಗೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದಲ್ಲಿ ಜಾತ್ಯತೀತ ಜನತಾದಳ ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು.ಅಧಿಕಾರಕ್ಕೆ ಬಂದ ಮೇಲೆ ಒಂದಾದ ಮೇಲೆ ಒಂದರಂತೆ ಗ್ಯಾರಂಟಿಗಳನ್ನೇನೋ ರಾಜಯ ಸರಕಾರ ಕೊಟ್ಟಿದೆ. ಆದರೆ, ಗ್ಯಾರಂಟಿ ಹಣವನ್ನು ಜನರಿಂದಲೇ ವಸೂಲಿ ಮಾಡಿ ಖಜಾನೆ ತುಂಬಿಸಿಕೊಳ್ಳುತ್ತಿದೆ. ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ ಏರಿಕೆ, ಮದ್ಯದ ದರ ಏರಿಕೆ, ಬಸ್ ದರ ಏರಿಕೆ ಸೇರಿದಂತೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಸರಕಾರ ದರ ಏರಿಕೆ ದಂಡ ಪ್ರಯೋಗ ಮಾಡುತ್ತಿದೆ. ಈಗ ಬೆಂಗಳೂರು ನಗರದ ಮೆಟ್ರೋ ರೈಲು ಪ್ರಯಾಣ ದರವನ್ನು ಜನರೇ ಬೆಚ್ಚಿ ಬೀಳುವಷ್ಟರ ಮಟ್ಟಿಗೆ ಶೇ.40ರಿಂದ 50ರಷ್ಟು ಏರಿಕೆ ಮಾಡಿದೆ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.

Adavatigement

ಅಭಿವೃದ್ಧಿ ಎಂದರೆ ಈ ಸರಕಾರದ ಪಾಲಿಗೆ ಕೇವಲ ದರ ಏರಿಕೆ ಎನ್ನುವಂತೆ ಆಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಸತ್ತು ಹೋಗಿದೆ. ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತವಾಗಿದೆ. ಮಹಿಳೆಯರಿಗೆ ಬರೀ ಎರಡು ಸಾವಿರ ಕೊಟ್ಟು ಬೇರೆ ಕಡೆ ಸಾಲ ಮಾಡಿ ಅದರ ಹೊರೆಯನ್ನು ಜನರ ಮೇಲೆಯೇ ಹೇರುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಗ್ಯಾರಂಟಿ ಕೊಡಲಿಕ್ಕೂ ಕಾಂಗ್ರೆಸ್ ಸರಕಾರ ಸಾಲ ಮಾಡುತ್ತಿದೆ. ಈಗಾಗಲೇ ರಾಜ್ಯದ ಸಾಲ ಏಳು ಲಕ್ಷ ಕೋಟಿಗೆ ಮುಟ್ಟಿದೆ. ಆ ಸಾಲ ತೀರಿಸೋದು ಕೂಡ ನೀವೇ. ಬಳ್ಳಾರಿ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಬಾಣಂತಿಯರು, ನವಜಾತ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಸರಕಾರಕ್ಕೆ ಈ ಬಗ್ಗೆ ಚಿಂತೆ ಇಲ್ಲ ಎಂದು ಅವರು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರಕಾರ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಜನರು ಇವರಿಗೆ ಮತ ಹಾಕಿದ್ದಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನಮ್ಮ ಪಕ್ಷ ಜನರ ಪರವಾಗಿ ದನಿಯೆತ್ತಿ ಹೋರಾಟ ನಡೆಸುತ್ತಿದೆ. ಕಾರ್ಯಕರ್ತರು, ಮುಖಂಡರು ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕೇಂದ್ರ ಸಚಿವರು ಕರೆ ನೀಡಿದರು.

ಮೈಕ್ರೋ ಫೈನಾನ್ಸ್ ಉಪಟಳಕ್ಕೆ ರಾಜ್ಯದ ಬಡಜನರು ತತ್ತರಿಸಿ ಹೋಗಿದ್ದಾರೆ. ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಾಲ ಮಾಡಿದ್ದೀರಿ, ಅಪರಾಧ ಮಾಡಿಲ್ಲ. ಹೀಗಾಗಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯ ಇಲ್ಲ. ನಮ್ಮ ರಾಜ್ಯ ಸರಕಾರವೇ ಏಳು ಲಕ್ಷ ಕೋಟಿ ಸಾಲ ಮಾಡಿ ಧೈರ್ಯವಾಗಿದೆ, ಇನ್ನೂ ಲೂಟಿ ಹೊಡೆಯುತ್ತಿದೆ. ಹೀಗಿದ್ದ ಮೇಲೆ ಅಲ್ಪಸ್ವಲ್ಪ ಸಾಲ ಮಾಡಿರುವ ಜನರು ಯಾಕೆ ಹೆದರಬೇಕು. ಯಾವುದೇ ಕಾರಣಕ್ಕೂ ಹೆದರಬೇಡಿ. ನಿಮ್ಮ ಜತೆ ನಾವಿದ್ದೇವೆ ಎಂದು ಕೇಂದ್ರ ಸಚಿವರು ಧೈರ್ಯ ತುಂಬಿದರು.

ಪಕ್ಷ ಸಂಘಟನೆಗೆ ಒತ್ತು:

ರಾಜ್ಯದಲ್ಲಿ ತಳಮಟ್ಟದಿಂದ ಜೆಡಿಎಸ್ ಸಂಘಟನೆಗೆ ಒತ್ತು ಕೊಡಲಾಗುವುದು. ಹಾಗೆಯೇ ಉತ್ತರ ಕರ್ನಾಟಕದ ಭಾಗದಲ್ಲಿಯೂ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಪ್ರಯತ್ನ ಮಾಡಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.

 

Girl in a jacket
error: Content is protected !!