ಮೆಟ್ರೋ ಪ್ರಯಾಣ ದರ ಹೆಚ್ಚಳ ಸಮಿತಿ ತೀರ್ಮಾನ; ಸರ್ಕಾರ ಹಸ್ತಕ್ಷೇಪ ಇಲ್ಲ: ಡಿ.ಕೆ.ಶಿ
by-ಕೆಂಧೂಳಿ
ಬೆಂಗಳೂರು, ಫೆ.07-“ಮೆಟ್ರೋ ಪ್ರಯಾಣ ದರ ಹೆಚ್ಚಳದ ಬಗ್ಗೆ ಬಿಎಂಆರ್ ಸಿಎಲ್ ತೀರ್ಮಾನ ಮಾಡುತ್ತದೆ. ಇದಕ್ಕಾಗಿ ನ್ಯಾಯಮೂರ್ತಿ ನೇತೃತ್ವದಲ್ಲಿ ಕೇಂದ್ರದ ಸಮಿತಿ ರಚಿಸಲಾಗಿದ್ದು, ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರು ಅಭಿವೃದ್ದಿಗೆ ಸಂಬಂಧಿಸಿದ ಇಲಾಖೆಗಳು, ಪ್ರಾಧಿಕಾರದ ಅಧಿಕಾರಿಗಳ ಜೊತೆ ನಗರ ಪ್ರದಕ್ಷಿಣೆ ನಡೆಸಿದ ನಂತರ ಬಿಎಂಆರ್ ಸಿಎಲ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಮಾತನಾಡಿದರು.
ಮೆಟ್ರೋ ಪ್ರಯಾಣ ಟಿಕೆಟ್ ಹಾಗೂ ಕುಡಿಯುವ ನೀರಿನ ದರ ಹೆಚ್ಚಳದ ಬಗ್ಗೆ ಕೇಳಿದಾಗ, “ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಈಗಾಗಲೇ ನಿಗಮವು ಒಂದು ತೀರ್ಮಾನ ತೆಗೆದುಕೊಂಡಿದೆ. ನಾನು ಆ ವರದಿಯಲ್ಲಿ ಏನಿದೆ ಎಂದು ಮೂಗು ತೂರಿಸಲು ಹೋಗುವುದಿಲ್ಲ” ಎಂದರು.
ನೀರಿನ ದರ ಏರಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ
ನೀರಿನ ದರ ಏರಿಕೆ ಬಗ್ಗೆ ಕೇಳಿದಾಗ, “ಕುಡಿಯುವ ನೀರಿನ ದರ ಏರಿಕೆ ವಿಚಾರವನ್ನು ಸಚಿವ ಸಂಪುಟ ಸಭೆಯ ಮುಂದೆ ಇಡಲಾಗುವುದು. ನೀರಿನ ದರ ಏರಿಕೆಯಾಗಿ 14 ವರ್ಷಗಳಾಗುತ್ತಾ ಬಂದಿದೆ. ಮಂಡಳಿಗೆ ವರ್ಷಕ್ಕೆ ₹ 1 ಸಾವಿರ ಕೋಟಿ ನಷ್ಟವಾಗುತ್ತಿರುವ ಕಾರಣಕ್ಕೆ ದರ ಏರಿಕೆ ಅನಿವಾರ್ಯವಾಗಿದೆ. ಬಿಡ್ಲ್ಯೂ ಎಸ್ ಎಸ್ ಬಿ ಅವರು ಈಗಾಗಲೇ ವರದಿ ನೀಡಿದ್ದು ಇದನ್ನು ಕ್ಯಾಬಿನೆಟ್ ಮುಂದೆ ಇಡಲಾಗುವುದು” ಎಂದರು.
ವಿದ್ಯುತ್ ದರ ಏರಿಕೆ ವಿಚಾರವಾಗಿ ಕೇಳಿದಾಗ, ಕಳೆದ ಬಾರಿ ವಿದ್ಯುತ್ ದರ ಕಡಿಮೆ ಮಾಡಿದ್ದೇವೆ. ಇದನ್ನು ಒಮ್ಮೆಯೂ ಮಾಧ್ಯಮಗಳು ತೋರಿಸುವುದಿಲ್ಲ. ಕೇವಲ ದರ ಏರಿಕೆ ಬಗ್ಗೆ ಮಾತ್ರ ಸುದ್ದಿ ಮಾಡುತ್ತೀರಿ” ಎಂದರು.
“ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ, ನೂತನ ಮೆಟ್ರೋ ಮಾರ್ಗಗಳು ಹೋಗುವ ಕಡೆ ಡಬಲ್ ಡೆಕ್ಕರ್ ನಿರ್ಮಾಣ ಸೇರಿದಂತೆ ನಗರ ಸೌಂದರ್ಯೀಕರಣಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದರು.
“ಹೆಬ್ಬಾಳ, ಗೊರಗುಂಟೆಪಾಳ್ಯ, ಬಿಇಎಲ್ ಕಡೆಯ ರಸ್ತೆ, ಲೊಟ್ಟೆಗೊಲ್ಲಹಳ್ಳಿ, ಸುಮ್ಮನಹಳ್ಳಿ ಭಾಗದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಬಿಎಂಆರ್ ಸಿಎಲ್, ಬಿಡಿಎ ಕಮಿಷನರ್ ಗಳು ಒಟ್ಟಿಗೆ ನಗರ ಪ್ರದಕ್ಷಿಣೆ ಹಾಕಿ ಸಂಚಾರ ದಟ್ಟನೆ ಹೆಚ್ಚಿರುವ ಕಡೆ ಅನುಕೂಲವಾಗುವಂತೆ ಎಲ್ಲೆಲ್ಲಿ ಮೇಲ್ಸೇತುವೆ, ಅಂಡರ್ ಪಾಸ್ ಗಳು, ಸುರಂಗ ರಸ್ತೆಗಳು ಮಾಡುವ ಬಗ್ಗೆ ಯೋಜನೆ ಹಾಕಿಕೊಂಡಿದ್ದೇವೆ” ಎಂದು ವಿವರಿಸಿದರು.
“ಈ ಹಿಂದೆಯೇ ಅಧಿಕಾರಿಗಳಿಗೆ ಈ ಬಗ್ಗೆ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಅವರು ವರದಿ ತಯಾರು ಮಾಡಿದ್ದರು. ಆದರೆ ನಾನೇ ಖುದ್ದಾಗಿ ಕಣ್ಣಾರೇ ನೋಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು, ತಾಂತ್ರಿಕ ಸಿಬ್ಬದಿಗಳ ಜೊತೆ ನಗರ ಪ್ರದಕ್ಷಿಣೆ ಮಾಡಿದೆ. ಈ ವೇಳೆ ಎಲ್ಲೆಲ್ಲಿ ಭೂ ಸ್ವಾಧೀನ ಮಾಡಬೇಕು ಎನ್ನುವ ಬಗ್ಗೆಯೂ ಚರ್ಚೆ ಮಾಡಿದ್ದೇನೆ” ಎಂದರು.
“ಭವಿಷ್ಯದಲ್ಲಿ ಮೆಟ್ರೋ ನಿಲ್ದಾಣಗಳು ಇರುವ ಕಡೆ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಪ್ರಸ್ತುತ ಅನೇಕ ಕಡೆ ರಸ್ತೆ ಬದಿ, ಖಾಸಗಿ ಜಾಗಗಳಲ್ಲಿ ವಾಹನಗಳನ್ನು ನಿಲ್ಲಿಸಿ ಮೆಟ್ರೋ ಪ್ರಯಾಣ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಸೂಚನೆ ನೀಡಲಾಗಿದೆ. ಮೂರನೇ ಹಂತದ ಮೆಟ್ರೋ ಮಾರ್ಗ ಅನುಷ್ಠಾನದ ವೇಳೆ ಡಬಲ್ ಡೆಕ್ಕರ್ ವ್ಯವಸ್ಥೆ ಇರಲೇಬೇಕು ಎನ್ನುವ ಪ್ರಮುಖ ತೀರ್ಮಾನ ತೆಗೆದುಕೊಳ್ಳಲಾಗಿದೆ. ದಿನಕಳೆದಂತೆ ಮುಂದಕ್ಕೆ ರಸ್ತೆಗಳನ್ನು ಅಗಲೀಕರಣ ಮಾಡಲು ಕಷ್ಟವಾಗುತ್ತದೆ. ಜೊತೆಗೆ ಭೂ ಸ್ವಾಧೀನ ಪರಿಹಾರವು ಹೆಚ್ಚಳವಾದ ಕಾರಣಕ್ಕೆ ಈ ಪ್ರಮುಖ ತೀರ್ಮಾನ ಮಾಡಲಾಗಿದೆ. ನನಗೆ ಏರ್ ಪೋರ್ಟ್ ರಸ್ತೆಯ ಮೆಟ್ರೋ ಮಾರ್ಗವನ್ನು ಈ ರೀತಿ ಮಾಡಬೇಕು ಎನ್ನುವ ಆಲೋಚನೆಯಿತ್ತು. ಈಗಾಗಲೇ ಪಿಲ್ಲರ್ ಗಳನ್ನು ಹಾಕಿರುವ ಕಾರಣಕ್ಕೆ ಸಾಧ್ಯವಿಲ್ಲ” ಎಂದು ಹೇಳಿದರು.
ಮೆಟ್ರೋ ಪಿಲ್ಲರ್ ಗಳಲ್ಲಿ ಜಾಹೀರಾತಿಗೆ ಅವಕಾಶ
“ಬ್ರಾಂಡ್ ಬೆಂಗಳೂರು ಯೋಜನೆಯಡಿ ನಗರವನ್ನು ಸೌಂದರ್ಯೀಕರಣ ಮಾಡುವ ಸಲುವಾಗಿ ಬಿಬಿಎಂಪಿ, ಬಿಎಂಆರ್ ಸಿಎಲ್ ಒಟ್ಟಿಗೆ ಸೇರಿ ತೀರ್ಮಾನ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಜೊತೆಗೆ ಮೆಟ್ರೋ ಪಿಲ್ಲರ್ ಗಳಲ್ಲಿ ಜಾಹೀರಾತಿಗೆ ಅವಕಾಶ ಮಾಡಿಕೊಡಬೇಕು. ಎರಡೂ ಸಂಸ್ಥೆಗಳು ಶೇ 50:50 ಅನುಪಾತದಲ್ಲಿ ಕೆಲಸ ಮಾಡಬೇಕು, ಆದಾಯವನ್ನು ಇದೇ ಮಾದರಿಯಲ್ಲಿ ಹಂಚಿಕೊಳ್ಳಬೇಕು ಎಂದು ಸೂಚಿಸಲಾಗಿದೆ” ಎಂದರು.