writing-ಪರಶಿವ ಧನಗೂರು
ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಸಾಫ್ಟವೇರ್ ಸಿಟಿ, ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಬೆಂಗಳೂರು ನಗರ ಈಗ ಕ್ರೈಂಸಿಟಿ..! ಮಾಫಿಯಾಗಳ ಮಹಾಗರ..! ಗ್ಯಾಂಗ್ ಸ್ಟರ್ ಗಳ-ಗ್ಯಾಂಗ್ ವಾರ್ ಗಳ ಗಾರ್ಡನ್ ಸಿಟಿ..!ಕೊಲೆಗಳ ನಗರವೆಂಬ ಕುಖ್ಯಾತಿಗೆ ತುತ್ತಾಗಿದೆ. ಕೋರೋನ ಲಾಕ್ ಡೌನ್ ನಲ್ಲಿ ಯಾವುದೇ ಕ್ರೈಂ ರೇಟ್ ಇಲ್ಲದೆ ತಣ್ಣಗಿದ್ದ ಬೆಂಗಳೂರು ಮಹಾನಗರದಲ್ಲಿ, ಈಗ ಲಾಕ್ ಡೌನ್ ಸಡಿಲಾಗುತ್ತಿದ್ದಂತೆ ಮತ್ತೆ ಎಂದಿನಂತೆ ರೌಡಿಗಳು ತಮ್ಮ ಹಳೇ ಚಾಳಿ ಮುಂದುವರಿಸುತ್ತಿದ್ದು, ಜನಸಾಮಾನ್ಯರು ಬೆಚ್ಚಿ ಬೀಳುವಂತೆ,
ಹಾಡುಹಗಲೇ ನಡುಬೀದಿಯಲ್ಲಿ ಕೊಲೆಗಳನ್ನು ಮಾಡೀ ನಗರದ ಶಾಂತಿ ಸುವ್ಯವಸ್ಥೆಗೆ ಬೆಂಕಿಹಚ್ಚುತಿದ್ದಾರೆ. ಒಂದೆಡೆ ಜನಪ್ರತಿನಿಧಿಗಳೆನಿಸಿಕೊಂಡ ಮಾಜೀ ಕಾರ್ಪೋರೇಟರ್ ಗಳನ್ನು ಮಹಿಳೆಯೆನ್ನದೆಯೂ ನಡುಬೀದಿಯಲ್ಲಿ ಎದೆಗೆ ಇರಿದು ಸಾಯಿಸುತ್ತಿದ್ದರೇ, ಮತ್ತೊಂದೆಡೆ ರೌಡಿ ಗುಂಪುಗಳು ತಮ್ಮ ತಮ್ಮಲ್ಲೇ ಹಳೇ ದ್ವೇಷ-ವೈಮನಸ್ಸಿನಿಂದ, ರಸ್ತೆಯಲ್ಲಿ ಮಚ್ಚು ಲಾಂಗುಗಳನ್ನಿಡಿದು ಹೊಡೆದಾಟ, ಗ್ಯಾಂಗ್ ವಾರ್ ಗಳಿಗೆ ಇಳಿದಿದ್ದಾರೆ! ಬೆಂಗಳೂರಿನ ಭೂಗತ ಜಗತ್ತು ಸದ್ದಿಲ್ಲದೆ ಒಳಗೊಳಗೇ ಕೊತಕೊತನೇ ಕುದಿಯುತ್ತಿರುವಂತೆ, ಗ್ಯಾಂಗ್ ಸ್ಟರ್ ಗಳು, ಪರಸ್ಪರ ತಮ್ಮ ಶತ್ರು ಪಡೆಗಳ ಮೇಲೆ ಗ್ಯಾಂಗ್ ವಾರ್ಗೆ ಸಂಚು ರೂಪಿಸಿ ಹೊಂಚು ಹಾಕಿ ಕಾದು ಕುಳಿತಿರುವಂತೆ ಭಾಸವಾಗುತ್ತಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಭೂಮಿ ಬೆಲೆ ಗಗನ ಮುಟ್ಟಿದ ಮೇಲೆ ರಿಯಲ್ ಎಸ್ಟೇಟ್ ಸೆಟ್ಲ್ ಮೆಂಟ್ ಹಣಕಾಸು ವ್ಯವಹಾರಗಳಲ್ಲಿ ತೊಡಗಿಸಿಕೊಂಡ ಬೆಂಗಳೂರಿನ ಮಾಫಿಯಾ ಡಾನ್ ಗಳು, ತಮ್ಮ ತಮ್ಮಲ್ಲೇ ಒಂದೇ ಗ್ಯಾಂಗ್ ಗಳಲ್ಲೇ ಹಣಕಾಸು ವ್ಯವಹಾರಗಳಲ್ಲಿ, ಪಾರ್ಟ್ನರ್ಷಿಫ್ ಗಳಲ್ಲಿ ಜಗಳ ತಂದಿಟ್ಟು ಕೊಂಡು ಪರಸ್ಪರ ಸ್ನೇಹಿತರೇ ಶತ್ರುಗಳಾಗಿ, ಒಬ್ಬರನ್ನೊಬ್ಬರು ಕೊಲ್ಲುವ ಮಟ್ಟಕ್ಕೆ ದ್ವೇಷ ಕಟ್ಟಿಕೊಂಡು, ಕತ್ತಿಮಸೆಯುತ್ತಾ ಕತ್ತಲಿನಲ್ಲಿ ಸ್ಕೆಚ್ಚು ರೂಪಿಸುತ್ತಾ ಕೆಂಡಕಾರುತ್ತಿರುವ ಎಲ್ಲಾ ಲಕ್ಷಣಗಳು ಈಗ ಬೆಂಗಳೂರಿನ ಅಂಡರ್ ವರ್ಲ್ಡ್ ನ ಲ್ಯಾಂಡ್ ಮಾರ್ಕ್ ನಲ್ಲಿ ಭವಿಷ್ಯದ ಬ್ಲೂಪ್ರಿಂಟ್ ನಂತೆ ಗೋಚರಿಸುತ್ತಿವೆ! ಬೆಂಗಳೂರಿನಲ್ಲೀಗ ಎತ್ತನೋಡಿದರೂ ಪುಡಿರೌಡಿಗಳದೇ ಹವಾ-ಕಾರುಬಾರು. ಏರಿಯಾ-ಬೌಂಡರಿ ಗೆರೆಗಳನ್ನು ಎಳೆದುಕೊಂಡು, ರೌಡಿಸಿಂಡಿಕೇಟ್ ಗಳನ್ನು ಸೆಟ್ ಮಾಡಿಕೊಂಡು, ಇಡೀ ಬೆಂಗಳೂರನ್ನು ಶಿಷ್ಯರೆಂಬ ಸೇನಾಧಿಪತಿಗಳ ಸುಪರ್ದಿಗೆ ಬಿಟ್ಟು ತಮ್ಮ ಭೂಗತ ಜಗತ್ತಿನ ಸಾಮ್ರಾಜ್ಯದ ವಿಸ್ತಾರ ವಿಸ್ತರಣೆಯಲ್ಲಿ ಮುಳುಗಿರುವ ಬೆಂಗಳೂರಿನ ಗ್ಯಾಂಗ್ ಸ್ಟರ್ ಗಳು, ಕೊರೋನಾ ಕಂಟಕ ಕಳೆದು, ಸಣ್ಣಗೇ ವ್ಯಾಪಾರ ವಹಿವಾಟು ಪ್ರಾರಂಭವಾಗುತ್ತಲೇ ಹಫ್ತಾ ವಸೂಲಿ, ರೋಲ್ ಕಾಲ್ ಮಾಮೂಲಿ, ಸೆಟ್ಲ್ ಮೆಂಟ್, ಹಣಕಾಸು ವ್ಯವಹಾರಗಳಲ್ಲಿ ಮೂಗುತೂರಿಸುತ್ತಾ, ಸಮಾಜವಿರೋಧಿ ಚಟುವಟಿಕೆಗಳಲ್ಲಿ ಮುಳುಗೇಳುತ್ತಾ, ಜನಸಾಮಾನ್ಯರಿಗೂ, ಈ ಸಾಮಾಜಿಕ ವ್ಯವಸ್ಥೆಗೂ ಮಗ್ಗಲು ಮುಳ್ಳಾಗಿ ಕಾಡುತ್ತಾ, ಕಾಟ ಕೂಡುತ್ತಾ ವಿಜ್ರಂಭಿಸುತ್ತಾರೆ. ಇದಕ್ಕೆಲ್ಲಾ ಕಾರಣ ನಮ್ಮ ಹುಳುಕಿನ ಕಾನೂನು ಸುವ್ಯವಸ್ಥೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು.

ಬೆಂಗಳೂರುಡಾನ್ ಪಟ್ಟಕ್ಕಾಗಿ ದಾಯಾದಿ ಕಲಹ!!
ಇದು ಯಾವುದೇ ಬೆಂಗಳೂರಿನಂತ ನಗರದಲ್ಲಿ ಆಗಾಗ ನಡೆಯುತ್ತಲೇ ಇರುವ ಸಹಜ ಸಮರ! ಗ್ಯಾಂಗ್ ಸ್ಟರ್ ಗಳು ಹಣದಾಸೆಗೋ, ಮತ್ಯಾವುದೋ ಮಿಸ್ ಅಂಡರ್ ಸ್ಟಾಂಡಿಂಗ್ ಮಾತಿಗೋ ತಮ್ಮ ತಮ್ಮಲ್ಲೇ ಕಚ್ಚಾಡಿಕೊಂಡು ಪರಸ್ಪರ ಬಡಿದಾಡಿ ಕೊಂಡು
ಒಂದೇ ತಟ್ಟೆಯಲ್ಲಿ ಮೃಷ್ಟಾನ್ನ ಭೋಜನ ಹಂಚಿ ಕೊಂಡು ತೀಂದವರೇ ಮಚ್ಚು ಹಿಡಿದು, ಒಬ್ಬರನ್ನೊಬ್ಬರ ಕೊಚ್ಚಿ ಕೊಲ್ಲುತ್ತಾ, ‘ಅಣ್ ತಮ್ಮ..ಮಚ್ಚಾ ಬಾಮೈದಾ..ಗುರು-ಬಾಸ್.. ಸ್ವಾಮಿ-ದೇವರು!’ ಎಂದು ಜತೆಯಲ್ಲಿದ್ದಾಗ ಬಾಯ್ ತುಂಬಾ ಕೂಗಿ ಹೊಗಳಿ ಓಲೈಸುತ್ತಿದ್ದ ಶಿಷ್ಯಂದಿರೇ, ಸ್ನೇಹಿತರೇ ರಾತ್ರೋರಾತ್ರಿ ಶತ್ರುಗಳಾಗಿ ಪರಿವರ್ತಿತರಾಗಿ ಬೀದಿ ಬೀದಿಗಳಲ್ಲಿ ‘ನಕ್ಕನ್..!ಗಾಂಡೂ..!ಚೂತ್ಯಾ ನನ್ಮಗಾ..!ಸಡೇ ನನ್ಮಗಾ .. ವಿಕೇಟ್ ಎತ್ತೋದೇ..!ಕೈ ಕಾಲು ಲ್ಯಾಪ್ಸ್ ಮಾಡ್ತಿನಂತೇಳೂ..!’ ಅಂತಾ ಅವಾಜ್ ಬಿಡೋಕೆ ಸುರುಮಾಡಿಬಿಡ್ತಾರೇ..! ಅದೇ ಅಂಡರ್ ವರ್ಲ್ಡ್ ನ ಅಸಲೀ ಸತ್ಯ!; ಅಂತಿಮ ಸತ್ಯವೂ ಅದೇ! ರೌಡಿಸಂ ಫೀಲ್ಡ್ ನಲ್ಲಿ ‘ಶತ್ರುಗಳನ್ನು ಮನೆಗೆ ನುಗ್ಗಿ ಹೊಡೀಬಾರದೂ..! ಹೆಂಡತಿ ಮಕ್ಕಳ ಕಣ್ಣೆದುರು ಕೊಲ್ಲಬಾರದೂ..!’ ಎಂಬ ಹಳೇ ಕಾಲದ ಪೈಲ್ವಾನ್ ರ ತೋಳ್ ತಾಕತ್ತಿನ ರೌಡಿಗಳ ನಿಯತ್ತಿನ ನಿಯಮಗಳನ್ನೆಲ್ಲಾ ಇಂದಿನ ಮರಾಮೋಸದ ಕಿರಾತಕ ಕಿಲ್ಲರ್ ಗಳೆನಿಸಿಕೊಂಡಿರುವ ಹೊಸ ರೌಡಿಗಳು ಮುರಿದು ಗಾಳಿಗೆತೂರಿ, ‘ಶತ್ರುಗಳನ್ನು ಹೇಗಾದರೂ ಸರಿ ಸದೆಬಡಿಯಬೇಕು. ಹಗಲಲ್ಲಾದರೂ ಸರಿ.. ಇರುಳಲ್ಲಾದರೂ ಸರಿ..ಮನೆಯಲ್ಲಾದರೂ ಓಕೇ ಮಸಣದಲ್ಲಾದರೂ ಬೆಟರ್..!

ಎದುರಾಳಿಯ ಹೆಣ ಬೀಳಬೇಕೂ.. ಅಷ್ಟೇ..!’ ಇದೂ ಈಗಿನ ಅಂಡರ್ ವರ್ಲ್ಡ್ ನ ಅಲಿಖಿತ ನಿಯಮ! ಶತ್ರು ಸಂಹಾರವೇ ಪರಮಗುರಿ..ಅದು ಯಾವರೀತಿಯಲ್ಲಾದರೂ ಸರಿ. ಎಂಬ ಖತರ್ನಾಕ್ ಮಾಸ್ಟರ್ ಮೈಂಡ್ ಗಳು, ಕೊಲೆಯ ಸ್ಕೆಚ್ಚಿನ ಬ್ಲೂ ಪ್ರಿಂಟ್ ರೆಡಿಮಾಡಿಕೊಡುವ ಗೇಮ್ ಪ್ಲಾನರ್ ಗಳು, ಮಾಹಿತಿ ಹೆಕ್ಕಿ ಕೊಡುವ ಆಳ್ಕಾಟಿಗಳು, ಇನ್ ಫಾರ್ಮರ್ಸ್, ವೆಪನ್ ಸಪ್ಲಯರ್ಸ್, ಮಚ್ಚುಗಳಿಗೇ ವಿಷಬಳಿಯುವ ಕ್ರೂರಿಗಳು, ಫೀಲ್ಡಿಂಗ್ ಮಾಡುವ ಫೀಲ್ಡರ್ ಗಳು, ರೈಡರ್ ಗಳು ನಂತರ ಬಹು ಮುಖ್ಯವಾಗಿ ಬ್ಯಾಟ್ಸ್ಮನ್ ಗಳು..! ಇವರೆಲ್ಲರ ಸಂಘಟಿತ ಅಪರಾಧವೆಂಬ ಕೊಲೆಯಲ್ಲಿ ಬಲಿಯಾಗುವ ಮಾನವ ಇಲ್ಲಿ ಜೀವಕ್ಕೆ ಬೆಲೆಯೇ ಇಲ್ಲದ ಖಾಲೀ ವಿಕೆಟ್ ಅಷ್ಟೇ..!! ಎಲ್ಲಿಗೆ ಬಂದು ನಿಂತಿದೆ ನೋಡಿ ನಮ್ಮ ಮಹಾನಗರಗಳ ದುನಿಯಾ..! ದುರಂತವೆಂದರೆ ಈ ಭೂಗತ ಜಗತ್ತಿನ ಯುದ್ಧದಲ್ಲಿ ಬಲಿಪಶು ಗಳು-ಬೀದಿ ಹೆಣಗಳು ತೊಂಬತ್ತು ಪರ್ಸೆಂಟ್ ಯುವಕರು! ಏಕೆಂದರೆ ಈ ಅಂಡರ್ ವರ್ಲ್ಡ್ ಡಾನ್ ಪಟ್ಟ ವೆಂಬುದು ಅಷ್ಟು ದೊಡ್ಡ ಆಕರ್ಷಣೆಯನ್ನು, ಕಾಲದಿಂದ ಕಾಲಕ್ಕೆ ತನ್ನ ಕ್ರೇಜ್ ಹೆಚ್ಚಿಸಿಕೊಂಡೇ ಬರುತ್ತಿದೆ! ಅದಕ್ಕಾಗಿಯೇ ನಮ್ಮ ಸಿನಿಮಾಗಳೂ ಮೀಸಲಾಗುತ್ತಿವೆ. ರೌಡಿಗಳ ಆತ್ಮಚರಿತ್ರೆಗಳು ಮೂರು ಮೂರು ಪಾರ್ಟ್ ಗಳಲ್ಲಿ ಸಿನಿಮಾ ಗಳಾಗಿ ಯಶಸ್ವಿ ಮಾಡುತ್ತವೆ! ಭೂಗತ ಜಗತ್ತಿನ ರಕ್ತ ಚರಿತ್ರಗಳ ಕತೆಗಳಿಗೆ ಇಂದಿಗೂ ಡಿಮ್ಯಾಂಡ್ ಜಾಸ್ತಿ ಆಗಿದೇ! ಕ್ರೈಂ ಸ್ಟೋರಿಗಳು, ಬೆಚ್ಚಿ ಬೀಳಿಸುವ ಕ್ರೈಂ ನ್ಯೂಸ್ ಡೈರಿಗಳು ಟಿ.ಆರ್.ಪಿ.ಯಲ್ಲಿ ಸದಾ ಮುಂದು!

ಕಲಾಸಿಪಾಳ್ಯ..ಶಿವಾಜಿನಗರ.. ಮೆಜೆಸ್ಟಿಕ್.. ಬೆತ್ತನಗೆರೆ.. ಶ್ರೀರಾಂಪುರ..ಹೆಸರಿನ ಸಿನಿಮಾ ಗಳು ಯುವಕರನ್ನು ಹಿಡಿದಿಟ್ಟ ಕಾರಣಕ್ಕೆ ಕೆಲವು ನಟರು ಇಂದಿಗೂ ಚಾಲ್ತಿಯಲ್ಲಿದ್ದಾರೆ! ರೌಡಿಗಳನ್ನೂ ಸೆಲೆಬ್ರಿಟಿಗಳಂತೆ ಕೊಂಡಾಡುತ್ತಿರುವ ಈ ಕಾಲಘಟ್ಟದಲ್ಲಿ ಹಾದಿ ತಪ್ಪಿದ ಯುವಜನತೆ ಹಣದಾಸೆಗೆ, ರೌಡಿಗಳಾಗಿ ಡಾನ್ ಪಟ್ಟಕ್ಕೆ ಬಡಿದಾಡಿ ಬೀದಿಯಲ್ಲಿ ಹೆಣವಾಗುತ್ತಿರುವುದು ಈ ಕಾಲದ ಕರಾಳ ದುರಂತವಾಗಿದೆ. ಈಗ ಬೆಂಗಳೂರಿನಲ್ಲಿ ಮಾಜೀ ರೌಡಿಗಳೆಲ್ಲ ಯೂಟ್ಯೂಬ್ ಚಾನೆಲ್ ಗಳಲ್ಲಿ ತಮ್ಮ ಪುರಾತನ ಕಥೆ ಹೇಳಿಕೊಂಡು ಕಾಲಕಳೆಯುತ್ತಿರುವಾಗಲೇ, ಹೊಸ ತಲೆಮಾರಿನ ಯುವಕರ ಗುಂಪುಗಳು ಬೆಂಗಳೂರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಧಾವಂತದಲ್ಲಿ ಅಣ್ಣ ತಮ್ಮಂದಿರಂತಿದ್ದವರೇ ಡಾನ್ ಪಟ್ಟಕ್ಕಾಗಿ ಪರಸ್ಪರ ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಎಲ್ಲಾ ಕಾಲಘಟ್ಟದಲ್ಲಿಯೂ ಇದೇ ತರಹವೇ ನಡೆದುಕೊಂಡೇ ಬಂದಿದೆ. ಶಿಷ್ಯಂದಿರೇ ಬಾಸ್ ಅನ್ನು ಮುಗಿಸುವುದು. ಸ್ನೇಹಿತರೇ ತಮ್ಮ ಗ್ಯಾಂಗ್ ಲೀಡರ್ ಅನ್ನು ಸಾಯಿಸಿ ಏರಿಯಾಗಳಲ್ಲಿ ಹೆಸರು ಮಾಡುವುದು. ಹಣದಾಸೆಗೇ ಈ ಗ್ಯಾಂಗ್ ನಿಂದ ಮತ್ತೊಂದು ಗ್ಯಾಂಗ್ ಸ್ಟರ್ ಗಳ ಜೊತೆ ಕೈಜೋಡಿಸುವುದು. ಈಗಲೂ ಇದೇ ನಡೆಯುತ್ತಿದೆ.

ಬೆಂಗಳೂರಿನ ಬೀದಿಗಳಲ್ಲಿ ಬೀಮಾತೀರದ ಬಂದೂಕುಗಳು!!
ಒಂದು ಕಡೆ ಈ ರೀತಿ ಬೆಂಗಳೂರು ಭೂಗತ ಜಗತ್ತಿನಲ್ಲಿ ಕೋಲಾಹಲವೆದ್ದು ಒಂದೇ ಗ್ಯಾಂಗ್ ನ ನಟೋರಿಯಸ್ ರೌಡಿಗಳೆಲ್ಲಾ ಬೆಂಗಳೂರಿನ ಡಾನ್ ಪಟ್ಟಕ್ಕಾಗಿ ಬಡಿದಾಡಿಕೊಳ್ಳುತ್ತಿರುವಾಗಲೇ ಮತ್ತೊಂದು ಆಘಾತಕರ ಸುದ್ದಿ ಹರಿದಾಡುತ್ತಿದೆ. ಭೀಮಾ ತೀರದಿಂದ ತಂದ ಕಂಟ್ರಿ ಮೇಡ್ ಪಿಸ್ತೂಲುಗಳನ್ನು ಬೆಂಗಳೂರಿನ ಗಲ್ಲಿ ಗಲ್ಲಿಗಳ ರೌಡಿಗಳು ಕೈಗೆ ಸಪ್ಲೈ ಮಾಡಿ ಸಿಸಿಬಿ ಪೊಲೀಸರ ಕೈಲಿ ಸತೀಶನೆಂಬ ರೌಡಿ ಸೆರೆಯಾಗಿರುವುದು ಆತಂಕಕಾರಿ ಸಂಗತಿಯಾಗಿದೆ! ಅಂದ್ರ ಮೂಲದ ಕಲ್ಬುರ್ಗಿಯ ರೌಡಿ ಮಾರ್ಕೆಟ್ ಸತೀಶ್ ಅಲಿಯಾಸ್ ಸಂಗ ಸತ್ಯಾನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಆಂಧ್ರದ ಹೈದರಾಬಾದಿನಲ್ಲಿ ಬಂಧಿಸಿ ಆತನ ಇಬ್ಬರು ಸಹಚರರನ್ನು ಬೆಂಗಳೂರಿನ ಇಸ್ರೋ ಲೇಔಟ್ ನಲ್ಲಿ ಹಿಡಿದು ಅವರಿಂದ ಮೂರು ಅಕ್ರಮ ನಾಡ ಬಂದೂಕು ಮತ್ತು ಹದಿನೈದು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಡಾನ್ ಗಳಿಂದ ಹಿಡಿದು ಪುಡಿ ರೌಡಿಗಳಿಗೂ ಈತ ಗನ್ ಮಾರಿರುವ ಶಂಕೆಯಿದೆ! ಈತ ಅಕ್ರಮ ಪಿಸ್ತೂಲು ಡೀಲಿಂಗ್ ದಂಧೆ ಯಲ್ಲಿ ತುಂಬಾ ಹಳೆಯ ಪಾತಕಿ. ಗುಲ್ಬರ್ಗ ನಗರದಲ್ಲಿ ತನ್ನ ರೌಡಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಈ ಮಾರ್ಕೆಟ್ ಸತೀಶ್ ಅಲ್ಲಿನ ಸಂಗಂ ಥಿಯೇಟರ್ ನಲ್ಲಿ ಇಸ್ಪೀಟ್ ಅಡ್ಡೆ ನಡೆಸುತ್ತಾ ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟವನು ಕೆಲವು ಭ್ರಷ್ಟ ಪೊಲೀಸರು ಇವನಿಂದ ಹಫ್ತಾ ಪಡೆದು, ಕೆ.ಜಿ ಗಟ್ಟಲೆ ಚಿನ್ನ ಪಡೆದು ಇವನನ್ನು ಬಳಸಿಕೊಂಡು ಬೆಳೆಸಿದ ಪರಿಣಾಮ ಈತ ಗುಲ್ಬರ್ಗದ ಜೆಡಿಎಸ್ ಲೀಡರ್ ಶ್ರೀಕಾಂತ್ ರೆಡ್ಡಿ ಎಂಬಾತನನ್ನು ಕೊಲ್ಲಲು ಪ್ರಯತ್ನಿಸಿ ಹೆಸರು ಬೆಳೆಸಿಕೊಂಡ, ಮೈಮೇಲೆ ಮೂವತ್ತು ಕೇಸುಗಳೂ ಬಿದ್ದವು! ಆ ನಂತರ ದಲಿತ ಹುಡುಗರನ್ನು ಜೊತೆಯಲ್ಲಿಟ್ಟುಕೊಂಡು ಕೊಲೆ, ಹಲ್ಲೆ. ಮುಂತಾದ
ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಮುಳುಗೇಳುತ್ತಾ ಹವಾ ಮೇಂಟೇನ್ ಮಾಡುತ್ತಾ ಮೆಲ್ಲಗೆ ಜೈಲಿನೊಳಗಿದ್ದ ಬಿಹಾರ, ಮಧ್ಯಪ್ರದೇಶದ ಕಂಟ್ರಿ ಗನ್ ಸಪ್ಲೈ ಯರ್ ಗಳ ಸ್ನೇಹ ಬೆಳೆಸಿಕೊಂಡು ಅವರಿಂದ ನಾಡ ಬಂದೂಕು ತರಿಸಿಕೊಂಡು ರಾಜ್ಯಾದ್ಯಂತ ಕಂಟ್ರಿ ಪಿಸ್ತೂಲ್ ಡೀಲಿಂಗ್ ದಂಧೆ ಸುರುಹಚ್ಚಿಕೊಂಡ! ಕೇವಲ ಹತ್ತು ಇಪ್ಪತ್ತು ಸಾವಿರಕ್ಕೆ ಅವರಿಂದ ಗನ್ ತರುತ್ತಿದ್ದ ರೌಡಿ ಮಾರ್ಕೆಟ್ ಸತೀಶ್ ಬೆಂಗಳೂರಿನ ರೌಡಿಗಳಿಗೆ ಎಂಬತ್ತು ಸಾವಿರ ಲಕ್ಷಕ್ಕೆಲ್ಲಾ ಮಾಡುತ್ತಿದ್ದನಂತೆ! ನಾಲ್ಕು ವರ್ಷಗಳ ಹಿಂದೆ ಶ್ರೀರಂಗಪಟ್ಟಣದ ರಾಬರ್ ಬಾಂಬೆ ಕಲೀಂ ಎಂಬಾತನಿಗೇ ಗನ್ ಮಾರಿದ್ದ ಪ್ರಕರಣದಲ್ಲಿ ಈತನನ್ನು ಅಲ್ಲಿನ ಪೊಲೀಸರು ಹಿಡಿದು ತಂದಿದ್ದರು.

ಮೀಸೆ ಮೂಡದ ಹುಡುಗರ ಕೈಗೆಲ್ಲ ಕಂಟ್ರಿ ಮೇಡ್ ಪಿಸ್ತೂಲು ಕೊಡುವುತ್ತಿದ್ದ ಈತನಿಗೆ ಕಾನೂನು ರೀತಿ ಅಂದೇ ಶಿಕ್ಷೆಯಾಗಿದ್ದರೇ ಈಗ ಬೆಂಗಳೂರಿನಲ್ಲಿ ಈತನ ಗನ್ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿರಲಿಲ್ಲ. ಈ ಕಂಟ್ರಿ ಪಿಸ್ತೂಲ್ ವೆಪನ್ ಮಾಫಿಯಾ ಇತ್ತೀಚೆಗಂತೂ ಎಲ್ಲಾ ಕಡೆ ತಲೆ ಎತ್ತಿದೆ. ಕವಿ ಕಲ್ಬುರ್ಗಿಯ ಕೊಲೆ, ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಮತ್ತು ಬೆಂಗಳೂರಿನಲ್ಲಾದ ಕಡಬಗೆರೆ ಶ್ರೀನಿವಾಸ್ ಶೂಟ್ ಔಟ್ ನಲ್ಲೂ ಇದೇ ಕಂಟ್ರಿ ಪಿಸ್ತೂಲ್ ವೆಪನ್ ಬಳಸಿರುವುದು ತನಿಖೆ ಯಿಂದ ಬಯಲಾಗಿತ್ತು! ರಸ್ತೆ ರಾಬರೀ, ಗಲಾಟೆಯಲ್ಲಿಯೂ ಈ ನಾಡ ಬಂದೂಕುಗಳ ಸದ್ದು ಕೇಳಿಬರುತ್ತಿದೆ! ಆಟದ ಸಾಮಾನುಗಳಂತೆ ಇಷ್ಟು ಸಿಂಪಲ್ಲಾಗಿ ಸುಲಭವಾಗಿ ಈ ಕಂಟ್ರಿ ಮೇಡ್ ಪಿಸ್ತೂಲುಗಳನ್ನು ಮಾರುತ್ತಿದ್ದಾರೆಂದರೆ ಆಶ್ಚರ್ಯ ವಾಗುತ್ತದೆ!, ಬೆಂಗಳೂರಿನಲ್ಲಿ ಎಲ್ಲಾ ಪುಡಿರೌಡಿಗಳು, ಡಾನ್ ಗಳು ಗ್ಯಾಂಗ್ ಸ್ಟರ್ ಗಳ ಬಳಿಯೂ ಇಂತಹ ಗನ್ ಗಳಿವೆಯಂತೆ! ಎಲ್ಲಾ ರೌಡಿ ಗುಂಪುಗಳಿಗೂ ಹಣದಾಸೆಗೆ ಗನ್ ಸಪ್ಲೈ ಮಾಡಿರುವ ಈ ರೌಡಿ ಕಲ್ಬುರ್ಗಿಯ ಸತೀಶನ ಕುಕ್ರತ್ಯದಿಂದ ಬೆಂಗಳೂರಿನಲ್ಲೀಗ ಗನ್ ಗಳಿಂದ ಫೈರಿಂಗ್ ಗ್ಯಾಂಗ್ ವಾರ್ ಗಳಾಗುವ ಎಲ್ಲಾ ಸಾಧ್ಯತೆಗಳೂ ಇವೆಯಂತೆ! ಮಾರತ್ತಳ್ಳಿ ರಿಂಗ್ ರೋಡಿನ ರೌಡಿಶೀಟರ್ ರೋಹಿತ್ ಎಂಬಾತನಿಗೆ ಗನ್ ಮಾರಿದ್ದ ಸತೀಶ ರೋಹಿತನ ವಿರೋಧಿ ಕಾಡುಬೀಸನಹಳ್ಳಿ ಸೋಮನಿಗೂ ಗನ್ ಮಾರಿರುವ ಸಾಧ್ಯತೆಗಳಿರುತ್ತವೆ! ಇವನಿಗೆ ಹಣ ಮುಖ್ಯ ಬೆಂಗಳೂರಲ್ಲಿ ಯಾರು ಯಾರನ್ನು ಸುಟ್ಟು ಕೊಂದರೆ ಇವನಿಗೇನೂ ನಷ್ಟವಿಲ್ಲ! ಏಕೆಂದರೆ ಸಿಸಿಬಿ ಪೊಲೀಸರು ರೋಹಿತ್ ಮತ್ತು ಸೋಮನನ್ನು ಬಂಧಿಸಿದಾಗ ಇಬ್ಬರ ಬಳಿಯೂ ಕಂಟ್ರಿ ಪಿಸ್ತೂಲ್ ವೆಪನ್ ಸಿಕ್ಕಿವೆ! ಮಂಗಳೂರಿನ ಶಾರ್ಪ್ ಶೂಟರ್ ಗಳು ಈಗ ಸುಫಾರಿ ಕಿಲ್ಲಿಂಗ್ ಗಾಗಿ ಬೆಂಗಳೂರಿಗೆ ಕಾಲಿಟ್ಟಿರುವುದರಿಂದ ಬೆಂಗಳೂರಿನಲ್ಲಿ ಈಗ ರೌಡಿ ಸತೀಶ ತಂದು ಮಾರಿರುವ ಬೀಮಾತೀರದ ವಿಜಯಪುರ ಕಲ್ಬುರ್ಗಿಯ ಕಂಟ್ರಿ ಮೇಡ್ ಗನ್ ಗಳ ಸದ್ದು ಜೋರಾಗಿಯೇ ಕೇಳುವ ಸಾಧ್ಯತೆ ಹೆಚ್ಚಾಗಿದೆ!

ಯಾವುದೇ ವ್ಯಕ್ತಿ ಗನ್ ಬಳಸಬೇಕೆಂದರೆ ಸರ್ಕಾರದಿಂದ ಪರ್ಮಿಷನ್ ಲೈಸೆನ್ಸ್ ಬೇಕು. ಆದರೇ ಹವಾ ಮೇಂಟೇನ್ಗಾಗಿ, ಶೋಕಿಗಾಗಿ ಕೆಲವು ಪುಡಿ ರೌಡಿಗಳಿಗಳೂ ಈಗ ಇಂತಹ ಕಂಟ್ರಿ ಪಿಸ್ತೂಲ್ ಇಟ್ಕೊತಿದಾರೇ! ಭೀಮಾ ತೀರದ ಮಹಾದೇವ ಸಾವುಕಾರನ ಮೇಲಾದ ಗನ್ ಫೈರಿಂಗ್, ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಮೇಲೆ ಫೈರಿಂಗ್ ಮಾಡಿದ್ದ ರೌಡಿ ಶೀಟರ್ ಮುನ್ನಾ ಇದೇ ಕಂಟ್ರಿ ಪಿಸ್ತೂಲ್ ಬಳಸಿದ್ದು. ಭೀಮಾ ತೀರದ ಭಾಗಪ್ಪ ಹರಿಜನನ ಮೇಲೂ ಹಡಪದ್ ಕಂಟ್ರಿ ಮೇಡ್ ಬಂದೂಕಿಂದಲೇ ದಾಳಿ ಮಾಡಿದ್ದ. ಅಂದರೇ ರೌಡಿ ಗಳ ಪಾಲಿನ ನೆಚ್ಚಿನ ವೆಪನ್ ಈ ಕಂಟ್ರಿ ಪಿಸ್ತೂಲ್! ಈಗ ಸ್ಥಳೀಯವಾಗಿ ಭೀಮಾ ತೀರದ ಹಳ್ಳಿಗಳಲ್ಲಿ ಕಲ್ಬುರ್ಗಿಯ-ವಿಜಾಪುರದ ಕಾಡುಗಳಲ್ಲಿ ಈ ಕಂಟ್ರಿ ಮೇಡ್ ಗನ್ ತಯಾರಿಸುವ ಜಾಲಗಳಿವೆಯೆಂಬ ಅನುಮಾನ ಗಳಿವೆ. ಹಣದಾಸೆಗೆ ರಾಜ್ಯದ ಮೂಲೆ ಮೂಲೆಯ ರೌಡಿಗಳಿಗೂ ಗನ್ ಸಪ್ಲೈ ಮಾಡುತ್ತಿರುವ ಈ ಭೀಮಾ ತೀರದ ಗನ್ ಡೀಲಿಂಗ್ ದಂಧೆಯ ಪಾತಕಿಗಳನ್ನು ತಕ್ಷಣದ ಪೊಲೀಸ್ ಖಡಕ್ ಕಾರ್ಯಾಚರಣೆಯಿಂದ ಎಡೆಮುರಿಕಟ್ಟಬೇಕಿದೆ.