writing-ಪರಶಿವ ಧನಗೂರು
ದುಬೈ ನಲ್ಲಿ ಕುಳಿತಿರುವ ಕುಖ್ಯಾತ ಗ್ಯಾಂಗ್ ಸ್ಟರ್ ಕಾಲಾ ಜತೇಡಿಯಾನ ಹುಡುಗನನ್ನು ಕೊಂದು ದೆಹಲಿಯಾಚೆಗಿನ ಅಂತಾರಾಷ್ಟ್ರೀಯ ಭೂಗತ ಜಗತ್ತಿನ ದ್ವೇಷ ಕಟ್ಟಿಕೊಂಡಿರುವ ಒಲಿಂಪಿಕ್ ಕುಸ್ತಿ ಪಟು ಸುಶೀಲ್ ಕುಮಾರ್ ಈಗ ಕುಂತಲ್ಲೇ ಬೆವೆತು ಹೋಗಿದ್ದಾನೆ. ಹಲವಾರು ವರ್ಷ ಉತ್ತರಪ್ರದೇಶ, ಜಾರ್ಖಂಡ್, ಹರಿಯಾಣ ಮೂಲದ ಗ್ಯಾಂಗ್ ಸ್ಟರ್ ಗಳ ಅಂಡರ್ವರ್ಲ್ಡ್ ನಂಟಿನಲ್ಲಿದ್ದ ಕುಸ್ತಿ ಪಟು ಸುಶೀಲ್ ಕುಮಾರ್ ಗೆ ಭೂಗತ ಜಗತ್ತು ಮರಾಮೋಸದ ಕತ್ತಲ ಜಗತ್ತು ಅದು ಬೆನ್ನಹಿಂದಿನಿಂದ ಯಾಮಾರಿಸಿ ಬಾರಿಸುತ್ತಾರೆ ಎಂಬುದು ಗೊತ್ತು. ರೌಡಿಸಂ ಫೀಲ್ಡ್ ನಲ್ಲಿರುವ ಫೈಟರ್ ಗಳು ಕುಸ್ತಿ ಪೈಲ್ವಾನ್ ರ ರೀತಿ ನೂರಾರು ಜನರೆದುರು ಅಖಾಡದಲ್ಲಿ ಎದುರಿಗೇ ಬಂದು ಬರಿಗೈಲಿ ಫೈಟ್ ಮಾಡುವುದಿಲ್ಲ.
ಎಲ್ಲೋ ಕುಳಿತ ತನ್ನ ಬಾಸ್ ಅಣತಿಯ ಮೇರೆಗೆ ಹಿಂಬಾಲಿಸಿ, ಸಂಚು ರೂಪಿಸಿ ಹಿಂದಿನಿಂದ ಹೊಡೆದು ಕತ್ತಲಲ್ಲಿ ಕಣ್ಮರೆಯಾಗುತ್ತಾರೆ. ಅಂತ ಒಂದು ಕರಾಳ ಲೋಕವಾದ ಭೂಗತ ಲೋಕದೊಂದಿಗೇ ಸ್ನೇಹ ಸಂಬಂಧ ಒಡನಾಟ ಹೊಂಜಿದ್ದೇ ಪೈಲ್ವಾನ್ ಸುಶೀಲ್ ಕುಮಾರ್ ಮೊದಲ ತಪ್ಪು. ಆರಂಭದಿಂದಲೂ ದೆಹಲಿಯ ರೌಡಿಗಳು, ಗ್ಯಾಂಗ್ ಸ್ಟರ್ ಗಳೊಂದಿಗೆ ಗಳಸ್ಯ ಕಂಟಸ್ಯ ನಿಕಟ ಸಂಪರ್ಕದಲ್ಲಿದ್ದ ಸುಶೀಲ್ ಕುಮಾರ್ ರೌಡಿಗಳ ಎಣ್ಣೆ ಪಾರ್ಟಿಗಳಿಗೆ ಹೋಗಿ ಭಾಗವಹಿಸುವುದು, ರೌಡಿಗಳ ಕಾರ್ಯಕ್ರಮಗಳಿಗೆ ತನ್ನ ಶಿಷ್ಯರಾದ ಪೈಲ್ವಾನ್ ಹುಡುಗರನ್ನು ಬಾಡಿಗಾರ್ಡ್ ಗಳಾಗಿ, ಬೌನ್ಸರ್ ಗಳಾಗಿ ಕಳುಹಿಸುವುದು, ದೆಹಲಿಯ ಚಿಕ್ಕ ಪುಟ್ಟ ಸೆಟ್ಲಮೆಂಟ್ ಗಲಾಟೆಗಳಲ್ಲಿ ರೌಡಿಗಳಿಗೆ ಬೆನ್ನು ಹಿಂದೆ ಇರಲು ಸುಶೀಲ್ ಕುಮಾರ್ ತನ್ನ ಹುಡುಗರನ್ನು ಸರಬರಾಜು ಮಾಡಿ ರೌಡಿಗಳನ್ನು ಖುಷಿಪಡಿ ಸುತ್ತಿದ್ದ ಎನ್ನಲಾಗುತ್ತಿದೆ.
ಭಾರತ ದೇಶದ ಹೆಮ್ಮೆಯ ಕ್ರೀಡಾ ಪಟು ಎನಿಸಿಕೊಂಡು ನೂರಾರು ಕೋಟಿ ಭಾರತೀಯರ ಪ್ರೀತಿ ಗಳಿಸಿದ್ದ, ಅರ್ಜುನ್ ಪ್ರಶಸ್ತಿ, ಪದ್ಮಶ್ರೀ ಗೌರವ ಮುಡಿಗೇರಿಸಿಕೊಂಡಿದ್ದ ಸುಶೀಲ್ ಕುಮಾರ್ ಗೆ ಇದೆಲ್ಲಾ ಶೋಕಿ ಬೇಕಿತ್ತಾ? ಕುಸ್ತಿ ಅಖಾಡಗಳನ್ನು ರೌಡಿಗಳ ಅಡ್ಡೆಗಳನ್ನಾಗಿ ಪರಿವರ್ತಿಸಿದ್ದನೆಂಬ ಕುಖ್ಯಾತಿಯೂ ಈಗ ಸುಶೀಲ್ ಬೆನ್ನಿಗಂಟಿದೆ. ಅದರಲ್ಲೂ ದೇಶದ ಪ್ರತಿಷ್ಠಿತ ಕುಸ್ತಿ ಪಟು ಗಳನ್ನು ತಯಾರು ಮಾಡುವ ಖ್ಯಾತಿ ಹೊಂದಿದ್ದ ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಈಗಾಗಲೇ ನಡೆಯುತ್ತಿದ್ದ ಪೈಲ್ವಾನರ ರೌಡಿಗಳ ಪಾರ್ಟಿಗಳು, ಮೀಟಿಂಗ್ ಗಳು ಜಗಳಗಳು, ಅದು ಕ್ರಿಮಿನಲ್ ಗಳ ಅಡ್ಡೆ ಎಂಬ ಕುಖ್ಯಾತಿ ತಂದಿದ್ದವು. ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಕ್ರಿಮಿನಲ್ ಗಳ ಅಕ್ರಮ ಚಟುವಟಿಕೆ, ಪೈಲ್ವಾನ್ ಸುಶೀಲ್ ಕುಮಾರ್ ನ ಕಿರಿಕ್ ಗೆ ಹೆದರಿ ಇಲ್ಲಿ ಕುಸ್ತಿ ಪ್ರಾಕ್ಟೀಸ್ ನಡೆಸುತ್ತಿದ್ದ ಪೈಲ್ವಾನರು ಕೋಚ್ ಗಳು ಇಲ್ಲಿಗೆ ಬರುವುದನ್ನೇ ನಿಲ್ಲಿಸಿದ್ದರಂತೆ! ಈಗ ಪೈಲ್ವಾನ್ ಸುಶೀಲ್ ಕುಮಾರ್ ಛತ್ರಸಾಲ್ ಸ್ಟೇಡಿಯಂನಲ್ಲೇ ಗ್ಯಾಂಗ್ ಸ್ಟರ್ ಕಾಲಾ ಜತೇಡಿಯಾನ ಹುಡುಗ ಪೈಲ್ವಾನ್ ಸಾಗರ್ ಧನ್ಕರ್ ನನ್ನು ಹೊಡೆದು ಕೊಂದ ನಂತರ ಛತ್ರಸಾಲ್ ಸ್ಟೇಡಿಯಂಗೆ ಮತ್ತಷ್ಟು ಕಳಂಕ ಅಂಟಿಕೊಂಡಿದೆ.
ಕೆಲವೇ ವರ್ಷಗಳಲ್ಲಿ ರಾಷ್ಟ್ರೀಯ ಕುಸ್ತಿ ಕ್ರೀಡಾಕೂಟ ಗಳ ಮೇಲೆ ಸ್ಟೇಡಿಯಂಗಳ ಮೇಲೆ ಹಿಡಿತ ಸಾಧಿಸಿ ಮೆರೆಯಲು ಹೊರಟಿದ್ದ ಪೈಲ್ವಾನ್ ಸುಶೀಲ್ ಕುಮಾರ್ ಕುಸ್ತಿ ಗೆ ಬೇಕಾಗುವ ಸಹಜ ಒರಟುತನದೊಂದಿಗೇ ಆಂತರ್ಯದಲ್ಲಿ ಅಸಹಜವಾದ ಅಪರಾಧಿ ಮನೋಭಾವ ಹಣದಾಹ ಬೆಳೆಸಿಕೊಂಡಿರುವುದು ನಿಧಾನಕ್ಕೆ ನಿಜವಾಗುತ್ತಾ ಬಂದಿದೆ. ಸದಾ ವಿವಾದಗಳಿಗೇ ಹೆಸರುವಾಸಿಯಾದ ಸುಶೀಲ್ ಕುಮಾರ್ ತನ್ನ ಆಕ್ರಮಣಕಾರಿ ಸ್ವಭಾವದಿಂದ ದೇಶಿ ಕುಸ್ತಿ ಯಲ್ಲಿ ತನ್ನ ಮೀರಿಸಿ ಯಾರೂ ಬೆಳೆಯಬಾರದೆಂಬ ಕೊಳಕು ಮನಸ್ಥಿತಿ ತುಂಬಿಕೊಂಡು ಒಳಗೊಳಗೇ ಕೊತಕೊತನೇ ಕುದಿಯುತಿದ್ದಂತೆಯೇ ತೋರುತ್ತದೆ. ಆತನ ಹೊಟ್ಟೆ ಕಿಚ್ಚಿನ ಸ್ವಭಾವ ಈತನನ್ನು ಒಬ್ಬ ತರಬೇತುದಾರ ಗುರು ಬೆಳೆಸಿದಂತೆ ಮತ್ಯಾರನ್ನೋ ತರಬೇತಿಗೊಳಿಸಿ ಜೊತೆಯಲ್ಲೇ ಬೆಳೆಸುವ ಒಳ್ಳೆಯ ಮನೋಭಾವವೇ ಇಲ್ಲದ ಸುಶೀಲ್ ಕುಮಾರ್ ನ ವರ್ತನೆಗಳು, ಸಹವರ್ತಿ ದೇಶಿ ಕುಸ್ತಿ ಪಟುಗಳಿಗೆ ಎಷ್ಟೋ ಬಾರಿ ನೋವು ತರಿಸಿದೆ; ಅಸಹ್ಯ ಮೂಡಿಸಿದೆ. ಕುಸ್ತಿ ಮೈದಾನದಲ್ಲಿ ಹೊಡೆದಾಡಿ ತಾನೇ ಆಕ್ರಮಣದಿಂದ ಮೆರೆವಂತೆಯೇ ಮೈದಾನದ ಹೊರಗೂ ಹೊಡೆದಾಟ, ಗಲಾಟೆ ವಿವಾದಗಳಲ್ಲೇ ಸುಶೀಲ್ ಕುಮಾರ್ ಹೆಚ್ಚಾಗಿ ಚಿರಪರಿಚಿತನಾಗಿದ್ದಾನೆ. ಕಳಂಕ ಹೊತ್ತುಕೊಂಡಿದ್ದಾನೆ. ಈತನೆದುರು ಸ್ಫರ್ಧಿಸುವವರಿಗೆ ತನ್ನ ಶಿಷ್ಯರಿಂದ, ಪುಡಿರೌಡಿಗಳಿಂದ ಕೊಲೆಬೆದರಿಕೆ ಹಾಕಿಸಿ ಥಳಿಸುವಷ್ಟರ ಮಟ್ಟಿನ ಕೀಳುಮಟ್ಟಕ್ಕೆಲ್ಲಾ ಹೋಗಿರುವ ಪೈಲ್ವಾನ್ ಸುಶೀಲ್ ಕುಮಾರ್ ಕ್ರೀಡಾ ಸ್ಫೂರ್ತಿ, ಕ್ರೀಡಾ ಮನೋಭಾವ ಮೆರೆವುದರಲ್ಲಿ ಸೋತಿದ್ದಾನೆ. ದೇಶೀ ಕ್ರೀಡೆಯಲ್ಲಿ ಈ ಮಟ್ಟಿಗಿನ ಸಣ್ಣ ತನವನ್ನು ಯಾರೂ ಪ್ರದರ್ಶಿಸಿರಲಿಲ್ಲ.
೨೦೧೮ರ ಕಾಮನ್ ವೆಲ್ತ್ ಗೇಮ್ಸ್ ಟ್ರಯಲ್ ರೌಂಡಿನಲ್ಲಿ ಈತನೆದುರು ಸ್ಫರ್ಧಿಸಿದ್ದ ಪ್ರವೀಣ್ ರಾಣಾ ಎಂಬ ಕುಸ್ತಿ ಪಟುವಿಗೆ ತನ್ನ ಚೇಲಾಗಳಿಂದ ಥಳಿಸಿ ಸ್ಪರ್ಧಿಸದಂತೆ ಹೆದರಿಸಿದ್ದು ತೀರಾ ನಾಚಿಕೆಗೇಡು ಮತ್ತು ಪೈಲ್ವಾನ್ ಪದಕ್ಕೇ ಕಳಂಕ. ಹಾಗೆಯೇ ೨೦೧೬ರಲ್ಲಿ ರಿಯೋ ಒಲಿಂಪಿಕ್ಸ್ ಗೆ ಆಯ್ಕೆ ಯಾಗಿದ್ದ ನರಸಿಂಹ ಯಾದವ್ ಎಂಬ ಕುಸ್ತಿ ಪಟುವಿನ ವಿರುದ್ಧ ಆಯ್ಕೆ ಪ್ರಶ್ನಿಸಿ ಕೋರ್ಟಿಗೆ ಹೋಗಿದ್ದ ಸುಶೀಲ್ ಕುಮಾರ್ ಇನ್ನೊಬ್ಬ ಕ್ರೀಡಾ ಪಟುವಿನ ಏಳ್ಗೆ ಸಹಿಸದೆ ಹೊಟ್ಟೆ ಕಿಚ್ಚು ಪಟ್ಟು ಕೋರ್ಟಿನಿಂದ ಚೀಮಾರಿ ಹಾಕಿಸಿಕೊಂಡಿದ್ದ. ನಂತರ ಇದೇ ನರಸಿಂಹ ಯಾದವ್ ನನ್ನು ಒಲಿಂಪಿಕ್ಸ್ ಗೆ ಹೋಗದಂತೆ ತಡೆಯಲು ನರಸಿಂಹ ಯಾದವ್ ಊಟದಲ್ಲಿ ಮಾದಕದ್ರವ್ಯ ಬೆರೆಸಿ ಆತನ ಭವಿಷ್ಯ ಹಾಳುಮಾಡಿದ ಆಪಾದನೆಯೂ ಈ ಮಹಾನುಭಾವ ಪೈಲ್ವಾನ್ ಸುಶೀಲ್ ಕುಮಾರ್ ಮೇಲೆಯೇ ಇದೆ. ತನ್ನ ಹೆಸರಿನಲ್ಲಿರುವ ಒಲಿಂಪಿಕ್ಸ್ ಪದಕ ಪಡೆದ ರೆಕಾರ್ಡ್ ಗಳು ಹಾಗೆಯೆ ಇರಲೀ ಮತ್ತೊಬ್ಬರಿಗೆ ದಕ್ಕಬಾರದೆನ್ನುವ, ಜನಮಾನಸದಲ್ಲಿ ತಾನೇ ಕುಸ್ತಿ ಲೋಕದ ಶೂರ-ಒಲಿಂಪಿಕ್ಸ್ ಸರದಾರ ಎನ್ನುವುದು ಬೇಗನೆ ಅಳಿಸಿಹೋಗಬಾರದೆನ್ನುವ ದುರಾಸೆಯಿಂದ ಹೀಗೆ ಮತ್ತೊಬ್ಬ ಕುಸ್ತಿ ಪಟು ವಿನ ಆಹಾರದಲಿ ಮಾಧಕಡ್ರಗ್ಸ್ ಕಲೆಸಿ ಭವಿಷ್ಯ ಹಾಳುಮಾಡುವುದೆಷ್ಟು ಸೇರಿ? ಇದರಿಂದ ಭಾರತದ ಕ್ರೀಡಾ ಜಗತ್ತಿಗೆ ತಾನೆ ನಷ್ಟ? ನಮ್ಮ ದೇಶದಲ್ಲಿ ಸುಶೀಲ್ ಕುಮಾರ್ ಗಿಂತಲೂ ಉತ್ತಮವಾಗಿ ಕುಸ್ತಿ ಆಡುವ ಪ್ರತಿಭೆಗಳು ಇದ್ದರೂ ಇಂತಹ ತುಳಿಯುವ ವ್ಯಕ್ತಿಗಳಿಂದಲೇ ತಾನೇ ಮತ್ತಷ್ಟು ಒಲಿಂಪಿಕ್ಸ್ , ಕಾಮನ್ ವೆಲ್ತ್ ಗೇಮ್ಸ್ ಪದಕಗಳು ನಮ್ಮ ದೇಶಕ್ಕೆ ಕೈತಪ್ಪಿ ಹೋಗುತ್ತಿರುವುದು. ಇಷ್ಟು ಹೀನ ಕೊಳಕು ಮನಸ್ಥಿತಿಯ ಕ್ರಿಮಿನಲ್ ಮೈಂಡೆಡ್ ಕುಸ್ತಿ ಪಟು ಸುಶೀಲ್ ಕುಮಾರ್ ೨೦೧೯ರಲ್ಲಿ ವಿಶ್ವಚಾಂಪಿಯನ್ ಶಿಪ್ ಕುಸ್ತಿ ಪಂದ್ಯಾಟದಲ್ಲೇ ಜಿತೇಂದ್ರ ಎಂಬ ಪೈಲ್ವಾನ್ ನನ ಕೈಬೆರಳುಮುರಿದು ಎಡಗಣ್ಣಿಗೆ ವಿನಾಕಾರಣ ಹೊಡೆದು ಗುದ್ದಿ ಅಸಹ್ಯವಾಗಿ ವರ್ತಿಸಿ ಕ್ರೀಡಾ ನಿಯಮಗಳನ್ನೇ ನುಂಗಿನೀರುಕುಡಿದಿದ್ದ. ಈತನ ಹಾವಳಿಯಿಂದ ಬೇಸತ್ತ ದೇಶಿಯ ಹಲವಾರು ಕುಸ್ತಿ ಪಟುಗಳಾದ ಪ್ರವೀಣ್, ಜಿತೇಂದ್ರ ಕುಮಾರ್, ವೀಶ್ವಕುಸ್ತಿ ಚಾಂಪಿಯನ್ ಶಿಪ್ ಪದಕ ಗೆದ್ದಿದ್ದ ಬಜರಂಗ್ ಪೂನಿಯಾ, ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಕುಸ್ತಿ ಪಟು ಯೋಗೇಶ್ವರ್ ದತ್ ಮತ್ತೊಬ್ಬ ಕೋಚ್ ರಾಂಪಾಲ್ ಮುಂತಾದವರು ದೆಹಲಿಯ ಪ್ರತಿಷ್ಠಿತ ಕುಸ್ತಿ ಆಖಾಡವಾದ ಛತ್ರಸಾಲ್ ಸ್ಟೇಡಿಯಂಗೆ ಬರುವುದನ್ನೇ ಬಂದ್ ಮಾಡಿದ್ದರಂತೇ! ಇದರಿಂದ ನಮ್ಮ ದೇಶಿ ಕ್ರೀಡೆ ಕುಸ್ತಿಗೆ ಆದ ನಷ್ಟಕ್ಕೆ ಯಾರು ಹೊಣೆ?
ಶೋಕಿಗೆ ಮಾಡಿದ ವೀಡಿಯೋ ಶೂಲವಾಯ್ತು..!
ತನ್ನ ವಿರೋಧಿಗಳಿಗೆ ತಾನೆಷ್ಟು ಡೇಂಜರ್, ತನ್ನ ತಾಕತ್ತೇನು ತನ್ನ ಹಿಂದೆ ದೆಹಲಿಯ ಯಾವ ಗ್ಯಾಂಗ್ ಸ್ಟರ್ ಗಳಿದ್ದಾರೆಂದು ತಿಳಿಸಲು ಕುಸ್ತಿ ವೀರ ಸುಶೀಲ್ ಕುಮಾರ್ ತಾನೇ ಈ ಹೊಡೆದಾಟದ ಸಂಪೂರ್ಣ ವೀಡಿಯೊವನ್ನು ಚಿತ್ರೀಕರಣ ಮಾಡಿಸಿ ಇಟ್ಟುಕೊಂಡು, ಹಾಕಿ ಸ್ಟಿಕ್ ಮತ್ತು ದೊಣ್ಣೆ ಗಳಿಂದ ಮಾಫಿಯಾ ಡಾನ್ ಕಾಲಾ ಜತೇಡಿ ಭಂಟ ದೆಹಲಿಯ ರೌಡಿಶೀಟರ್ ಸೋನು ಮಹಲ್ ಮತ್ತು ಪೈಲ್ವಾನ್ ಸಾಗರ್ ಧನ್ಕರ್ ಗೆ ಮಾರಣಾಂತಿಕ ವಾಗಿ ಹೊಡೆಯುತ್ತಿರುವ ಆ ವೀಡಿಯೋ ಕ್ಲಿಪ್ ಅನ್ನು ತನ್ನ ವಿರೋಧಿ ಬಣಗಳ ಗ್ಯಾಂಗಿನ ವಾಟ್ಸಾಪ್ ಗ್ರೂಫ್ ನಲ್ಲಿ ಹರಿಯಬಿಟ್ಟು ಮಜಾ ತೆಗೆದುಕೊಳ್ಳಲು, ಬಿಟ್ಟಿಪ್ರಚಾರ ಗಿಟ್ಟಿಸಿಕೊಳ್ಳಲು ನೋಡಿದ ಸುಶೀಲ್ ಕುಮಾರ್ ಗೆ ಈಗ ಇದೇ ಛತ್ರಸಾಲ್ ಸ್ಟೇಡಿಯಂನ ಹೊಡೆದಾಟದ ವೀಡಿಯೋ ಶೂಲವಾಗಿ ಕೊರಳಿಗೆ ಸುತ್ತಿಕೊಂಡು ಜೈಲಿನ ಬಾಗಿಲನ್ನು ತಟ್ಟಿಸಿದೆ.
ಸೈಬರ್ ಕ್ರೈಂ ಪೊಲೀಸಿಂಗ್ ಇನ್ ವೆಸ್ಟಿಗೇಷನ್ ಯುಗದಲ್ಲಿ ಕೇವಲ ಮೊಬೈಲ್ ಲೊಕೇಶನ್, ಟವರ್ ಸ್ಪಾಟ್ ಎಕ್ಸಾಂ ಗಳಲ್ಲೇ ನೂರಾರು ಕ್ರಿಮಿನಲ್ ಪ್ರಕರಣಗಳನ್ನು ನಿಮಿಷಾರ್ಧದಲ್ಲಿ ಬೇಧಿಸಿ ಮುನ್ನುಗ್ಗುತ್ತಿರುವ ಪೊಲೀಸ್ ಚಾಣಾಕ್ಷತೆ ಮುಂದೆ ಈ ಹೊಡೆದಾಟದ ನೇರಾನೇರ ವಿಡಿಯೋ ತುಣುಕುಗಳು ಯಾವರೀತಿಯ ಪ್ರತಿಕೂಲ ಸಾಕ್ಷ್ಯ ಗಳಾಗಿ ಪರಿಗಣನೆಗೊಳಗಾಗಿ ಭವಿಷ್ಯಕ್ಕೆ ಮುಳುವಾಗಬಲ್ಲವು ಎಂಬ ಕನಿಷ್ಠ ಜ್ಞಾನವೂ ಇಲ್ಲದ ಈ ಪೈಲ್ವಾನ್ ಸುಶೀಲ್ ಕುಮಾರ್ ಹೊಡೆದಾಟವನ್ನೇ ವಿಡಿಯೋ ಚಿತ್ರೀಕರಿಸಿ ಪ್ರಚಾರಕ್ಕೆ ಹಾತೊರೆಯುತ್ತಾನೆಂದರೇ, ಆತನ ಆತನ ದುರಹಂಕಾರ ಅಜ್ಞಾನಕ್ಕೇ ನಾವೇನೆನ್ನಬೇಕೇಳಿ. ಸಾಮಾಜಿಕ ಜಾಲತಾಣಗಳು ವಿಶ್ವದಾದ್ಯಂತ ಈಗ ಪರಸ್ಪರ ಕೊಂಡಿಯಾಗಿದ್ದು ಕ್ಷಣಾರ್ಧದಲ್ಲಿ ಒಂದು ಸುದ್ದಿ, ಫೋಟೋ, ವಿಡಿಯೋ ಲಕ್ಷಾಂತರ ಜನರನ್ನು ಮುಟ್ಟಿ ಮುನ್ನುಗ್ಗುತ್ತಿರುತ್ತದೆ. ಇಂತಹ ಕಾಲದಲ್ಲಿ ಅದೂ ಟಿ.ಆರ್.ಪಿ.ರೇಟಿಂಗ್ ನ ಹೊಡೆದಾಟದ ವಿಡಿಯೋ ತುಣುಕುಗಳಂತು ಮಾಧ್ಯಮದಲ್ಲಿ, ಸೋಷಿಯಲ್ ಮೀಡಿಯಾ ಗಳಲ್ಲಿ ದಿನನಿತ್ಯ ತರೇವಾರೀ ತಲೆಬರಹ, ತಿರುಚಿದ ತಪ್ಪು ಮಾಹಿತಿಗಳೊಂದಿಗೆ ಟ್ರೆಂಡಿಂಗ್ ನಲ್ಲಿರುತ್ತವೆ.
ಅಂತದ್ದರಲ್ಲಿ ಈ ವಿಶ್ವವಿಖ್ಯಾತಿಯ ದಂಗಲ್ ವೀರನ ರಿಯಲ್ ಸ್ಟ್ರೀಟ್ ಫೈಟ್ ಬಡಿದಾಟದ ಹಸಿಹಸಿ ವೀಡಿಯೋ ಪೋಲೀಸರ ಕೈಸೇರಲು ಎಷ್ಟು ಸಮಯ ಬೇಕು? ಕೊನೆಗೆ ಅದೇ ಆಯಿತು. ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಪೈಲ್ವಾನ್ ಸುಶೀಲ್ ಕುಮಾರ್ ನಿಂದ ಒದೆ ತಿಂದವನು ಆಸ್ಪತ್ರೆಯಲಿ ಉಸಿರು ಚೆಲ್ಲಿದ ಸುದ್ಧಿ ಗೊತ್ತಾದ ತಕ್ಷಣ ಇದೇ ಸುಶೀಲ್ ಕೊಲೆ ಕೇಸಿಗೆ ನೀರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿ ತಲೆಮರೆಸಿಕೊಂಡ. ಯಾವಾಗ ತಾನೇ ಚಿತ್ರೀಕರಿಸಲೇಳಿದ್ದ ಛತ್ರಸಾಲ್ ಸ್ಟೇಡಿಯಂ ಹೊಡೆದಾಟದ ವೀಡಿಯೋ ಲೀಕ್ ಆಗಿ ವೈರಲ್ ಆಗುತ್ತಿದ್ದಂತೆಯೇ ಆತನಿಗೆ ಮೈನಡುಕ ಸುರುವಾಯಿತು. ಒಂದುಕಡೆ ಗ್ಯಾಂಗ್ ಸ್ಟರ್ ಗಳ ಕಾಟ ಮತ್ತೊಂದೆಡೆ ದೆಹಲಿಯ ಪೊಲೀಸರ ಹುಡುಕಾಟ. ಈ ವಿಶ್ವವಿಖ್ಯಾತ ಕುಸ್ತಿ ಪಟುವನ್ನು ತೋರಿಸಿ ಪೊಲೀಸರಿಗೇ ಹಿಡಿದು ಕೊಟ್ಟವರಿಗೇ ಒಂದು ಲಕ್ಷ ರೂಪಾಯಿ ಇನಾಮು ಕೂಡ ಘೋಷಣೆಯಾಯಿತು. ತನ್ನ ಪ್ರಭಾವ ಬಳಸಿ ಸೆರೆಂಡರ್ ಆಗಲು ಒದ್ದಾಡುತಿದ್ದವನನ್ನು ದೆಹಲಿಯ ಚಾಣಾಕ್ಷ ಪೊಲೀಸರು ವಿಶ್ವ ಕುಸ್ತಿ ದಿನದಂದೇ ಹೆಡೆಮುರಿ ಕಟ್ಟಿ ಬಂಧಿಸಿದ್ದು ವಿಪರ್ಯಾಸ.