ಬೆಂಗಳೂರು, ಜು,31:ಇತ್ತೀಚೆಗೆ ನಗರದಲ್ಲಿ ಮಿತಿಮೀರುತ್ತಿರುವ ಸಮಾಜ ಘಾತಕ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಈ ಘಟನೆಗಳಿಗೆ ಕಾರಣವಾಗುತ್ತಿರುವ ಪುಡಾರಿಗಳ ಮನೆಮೇಲೆ ದಾಳಿ ಮಾಡಿ 18 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಇಂದು ಬೆಳ್ಳಂಬೆಳಿಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದ್ದು,ಪುಡಾರಿಗಳಿಗೆ ಪುಂಡಾಟ ನಡೆಸದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.
ಈ ದಾಳಿಯಲ್ಲಿ ಕುಖ್ಯಾತ ರೌಡಿಗಳಾದ ಹಂದಿ ಶಿವ,ಅತಾವುಲ್ಲಾ,ತೇಜಸ್,ಮಣಿಕಾಂತ,ಆನಂದ್ ಅಲಿಯಾಸ್ ಬ್ರಿಡ್ಜ್, ಗೆಜ್ಜೆ ವೆಂಕಟೇಶ ಸೇರಿದಂತೆ 63 ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಪುಡಾರಿಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಎಚ್ಚೆತ್ತ ಪೊಲೀಸರು ಕಠಿಣ ಕ್ರಮಕ್ಕೆ ಸಿದ್ಧರಾಗಿದ್ದಾರೆ. ರೌಡಿಗಳನ್ನು ನಿಯಂತ್ರಿಸುವ ಸಲುವಾಗಿ ಸ್ಥಳೀಯವಾಗಿ ಖಾಕಿ ಪಡೆಗೆ ಚುರುಕು ಮುಟ್ಟಿಸಲು ಮುಂದಾದ ಪೊಲೀಸ್ ಕಮಿಷನರ್ , ತಳಮಟ್ಟದಲ್ಲಿ ವ್ಯವಸ್ಥೆಯನ್ನು ಬಿಗಿಗೊಳಿಸಲು ಮುಂದಾಗಿದ್ದಾರೆ.
ಸರಗಳ್ಳತನ, ಸುಲಿಗೆ, ದರೋಡೆ, ಪುಂಡರ ಹಾವಳಿ ತಪ್ಪಿಸಲು ಹೊಸ ಕ್ರಮ ರೂಪಿಸುತ್ತಿರುವ ಪೊಲೀಸ್ ಕಮಿಷನರ್ ಹೊಯ್ಸಳ ಮತ್ತು ಚೀತಾ ವಾಹನಗಳಿಗೆ ಚುರುಕು ಮುಟ್ಟಿಸಿ ಪ್ರತಿ ಏರಿಯಾದಲ್ಲೂ ಕಣ್ಗಾವಲಿಡಲು ಸೂಚಿಸಿದ್ದಾರೆ. ಹೊಯ್ಸಳ ಮತ್ತು ಚೀತಾ ರೌಂಡ್ಸ್ ಮಾಡುವ ಏರಿಯಾದಲ್ಲಿ ಏನೇ ಆದರೂ ಅವರೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿದ್ದು, ಪೊಲೀಸರು ಶಿಸ್ತುಬದ್ಧ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.
ಅನ್ಲಾಕ್ ಬಳಿಕ ಬೆಂಗಳೂರಿನಲ್ಲಿ ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸ ಹೆಚ್ಚಾಗಿರುವುದರಿಂದ ಪೊಲೀಸರು ಕಠಿಣ ಕ್ರಮದ ಮೊರೆ ಹೋಗಿದ್ದು, ಹೊಯ್ಸಳ ಮತ್ತು ಚೀತಾ ವಾಹನಗಳನ್ನು ಕಮಾಂಡ್ ಸೆಂಟರ್ ಮೂಲಕ ಅಪರೇಟ್ ಮಾಡಲು ನಿರ್ಧರಿಸಿದ್ದಾರೆ. ಠಾಣೆ ಸುಪರ್ದಿಯಿಂದ ಕಮಾಂಡ್ ಸೆಂಟರ್ ವ್ಯಾಪ್ತಿಗೆ ಹೊಯ್ಸಳ ಮತ್ತು ಚೀತಾ ವಾಹನಗಳನನ್ನು ಪಡೆಯಲು ಮುಂದಾದ ಕಮಿಷನರ್ ಕಮಲ್ ಪಂತ್, ಪುಂಡ ಪೋಕರಿಗಳ ಪುಂಡಾಟಕ್ಕೆ ಸಂಪೂರ್ಣ ತಡೆ ಒಡ್ಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.