ಬೆಂಗಳೂರಿನಲ್ಲಿ ಮತ್ತೆ ತಲೆಯೆತ್ತಿದ ರೈಸ್ ಪುಲ್ಲಿಂಗ್ ದಂಧೆ!
Writing-ಪರಶಿವ ಧನಗೂರು
ಕೊರೋನೋತ್ತರ ಕಾಲದಲ್ಲಿ ಖರ್ಚಿಗೂ ಕಾಸಿಲಿಲ್ಲದೇ ಅಂಡೆಲೆಯುತ್ತಿರುವ ವಂಚಕರ-ಮೋಸಗಾರರ ಮಾಫಿಯಾ ಮತ್ತೇ ರೀಆಕ್ಟೀವ್! ನಗರದಲ್ಲಿ ಸದ್ದಿಲ್ಲದೇ ತಲೆ ಎತ್ತಿದೆ ನೋಟು ಎಕ್ಸ್ಚೇಂಜ್ ಮಾಫಿಯಾ! ಜಾಲ ವಿಸ್ತರಿಸಲು ಪೀಲ್ಡಿಗೆ ಇಳಿದ ರೈಸ್ ಫುಲ್ಲಿಂಗ್ ವಂಚಕರು! ಒಂದೆಡೆ ಬಡಜನರು, ಮಧ್ಯಮ ವರ್ಗದ ಜನರು ಸೈಬರ್ ವಂಚನೆಗೊಳಗಾಗಿ ಕಾಸು ಕಳೆದುಕೊಂಡು ಕಕ್ಕಾಬಿಕ್ಕಿಯಾಗಿ ಶಾಕ್ ನಿಂದ ಹೊರಬರುವ ಮೊದಲೇ ಹಣಕ್ಕಾಗಿ ಈಗ ಎಲ್ಲಾ ಕಡೆ ಮೋಸಗಾರರ ವಿವಿಧ ರೀತಿಯ ಗುಂಪುಗಳು ಕಾರ್ಯಾಚರಣೆ ಗಿಳಿದಿವೆಯಂತೆ! ಕೊರೋನಾ ಲಾಕ್ ಡೌನ್ ಸಡಿಲಾಗುತ್ತಿದ್ದಂತೆ ಮನೆಯಿಂದ ಹೊರಗೆ ಬಂದು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವ ದೋ ನಂಬರ್ ದಂಧೆ ಕೋರರ ಗುಂಪುಗಳು, ಈಗಾಗಲೇ ಕೋವಿಡ್ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಮೋಸಗೊಳಿಸಿ ನಿದ್ದೆಗೆಡಿಸಲು ನಿಂತಿದ್ದಾರೆ. ಭೂಗತ ಮಾರುಕಟ್ಟೆಯಲ್ಲಿ ಆರ್.ಪಿ. ಎಂದೇ ಕೋಡ್ ವರ್ಡ್ ನಲ್ಲಿ ಪ್ರಚಲಿತವಿರುವ ರೈಸ್ ಪುಲ್ಲಿಂಗ್ ಎಂಬ ತಾಮ್ರದ ವಸ್ತುವಿನ ಹೆಸರಲ್ಲಿ ವಂಚಕರ ಜಾಲಗಳು ಶ್ರೀಮಂತ ಬಿಸಿನೆಸ್ ಮ್ಯಾನ್ ಗಳನ್ನೇ ಟಾರ್ಗೆಟ್ ಮಾಡಿಕೊಂಡು ಬಲೆಬೀಸಿ ಕಾದಿದ್ದಾರಂತೇ! ಚಿನ್ನದ ಇಟ್ಟಿಗೆ ಮಾರುವ ಕಿರಾತಕರೂ, ನಿಧಿ ಎತ್ತುವ ಹೆಸರಲ್ಲಿ ಮೂಡರನ್ನು ದೋಚುವ ನಿಪುಣರು ನಾನಾ ಬಗೆಯ ವೇಶಗಳಲ್ಲಿ ನಿಮ್ಮ ಮುಂದೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಹುಷಾರಾಗಿರಿ ಎನ್ನುತ್ತಿವೆ ಪೊಲೀಸ್ ಠಾಣೆಗಳು.!
ಈ ದಂಧೆ ಇಂದು ನೆನ್ನೆಯದಲ್ಲ ಸುಮಾರು ಹದಿನೈದು ಇಪ್ಪತ್ತು ವರ್ಷಗಳಿಂದಲೂ ದೇಶಾದ್ಯಂತ ವಿವಿಧ ನಗರಗಳಲ್ಲಿ ಈ ವಂಚಕರ ಜಾಲಗಳು ಸಕ್ರಿಯವಾಗಿವೆ! ಭೂಮಿಯ ಮೇಲೆ ಇಲ್ಲದ ರೈಸ್ ಪುಲ್ಲಿಂಗ್ ಎಂಬ ತಾಮ್ರದ ವಸ್ತುವಿಗಾಗಿ ಈ ಮೂರ್ಖರ ಜಗತ್ತು ಹಿಂದೆ ಬಿದ್ದಿದೆ! ಈ ಆರ್.ಪಿ. ರೈಸ್ ಪುಲ್ಲಿಂಗ್ (ಸಿಡಿಲು ಹೊಡೆದು ವಿಶೇಷ ಶಕ್ತಿ ಇದೆ ಎನ್ನುವ ತಾಮ್ರದ ವಸ್ತು)ಎಂಬ ಸಬ್ಜೆಕ್ಟ್ ನ ಹಿಂದೆ ಬಿದ್ದು ಜೀವನವನ್ನೇ ಹಾಳುಮಾಡಿಕೊಂಡು ಬೀದಿಗೆ ಬಿದ್ದ ಎಷ್ಟೋ ಜನರಿದ್ದಾರೆ! ಸಿನಿಮಾ ರಂಗದ ನಟರು, ಪ್ರೊಡ್ಯೂಸರ್ ಗಳು, ರಾಜಕಾರಣಿಗಳು, ಪೊಲೀಸರು, ಬಿಲ್ಡರ್ ಗಳು, ಬಿಸಿನೆಸ್ ಮ್ಯಾನ್ ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಮಧ್ಯಮವರ್ಗದ ಜನರೂ ಎಲ್ಲರೂ ಇದರ ಹಿಂದೆ ಬಿದ್ದಿದ್ದಾರೆ. ದುಡ್ಡು ಕಳೆದುಕೊಂಡಿದ್ದಾರೆ. ಇದರಿಂದ ಕೆಲವರು ಬೀದಿಪಾಲಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳೂ ಇವೆ! ಈ ರೈಸ್ ಪುಲ್ಲಿಂಗ್ ಎಂಬ ತಾಮ್ರದ ಚೆಂಬಿನ ಇಂಚಿಂಚಿಗೂ ಸಾವಿರಾರು ಕೋಟಿಯಂತೇ!! ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ಡಾಲರ್ ಬೆಲೆಯಂತೇ! ನಾಸಾದ ವಿಜ್ಞಾನಿಗಳೂ, ಬಾಹ್ಯಾಕಾಶ ಸಂಸ್ಥೆ ಇಸ್ರೋದವರೂ, ಡಿ.ಆರ್.ಡಿ.ಓ.ದವರೂ ಕೋಟ್ಯಾಂತರ ರೂಪಾಯಿ ಮೌಲ್ಯದ ಹಣ ಪಡೆದು ಈ ರೈಸ್ ಪುಲ್ಲಿಂಗ್ ಎಂಬ ಸಿಡಿಲು ಬಡಿದ ತಾಮ್ರದ ವಸ್ತು ಕೊಂಡುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರಂತೇ!! ಎಂಬ ಅತ್ಯಾಕರ್ಷಕ ಸ್ಲೋಗನ್ ನೊಂದಿಗೇ ಪ್ರಾರಂಭವಾಗುವ ಇದರ ವ್ಯಾಪಾರ ವಹಿವಾಟಿನ ವ್ಯಾಪ್ತಿ ಸಾವಿರಾರು ಕೋಟಿ ಡಾಲರ್ ವರೆಗೂ ಮುಟ್ಟಿ ಎದುರಿಗಿರುವವರನ್ನು ಆಕರ್ಷಿಸುತ್ತದೆ! ಈ ಸಿಡಿಲಿನ ಶಕ್ತಿಯ ಹಿಂದೆ ಬಿದ್ದು ಲಕ್ಷಾಂತರ ಜನ ಕೋಟ್ಯಾಂತರ ರೂಪಾಯಿ ಹಣ ಮನೆ ಮಠ ಕಳೆದುಕೊಂಡಿರುವುದಂತೂ ದಿಟ. ದೇಶ ವಿದೇಶಗಳಲ್ಲೂ ಈ ರೈಸ್ ಪುಲ್ಲಿಂಗ್ ಏಜೆಂಟರು ವಂಚಕರು ತಮ್ಮ ಶಾಖೆ ಗಳನ್ನೂ ಜಾಲಗಳನ್ನು ವಿಸ್ತರಿಸಿ ಕೊಂಡು ಇಲ್ಲದ ಮ್ಯಾಜಿಕಲ್ ಮೆಟಲ್ ಹೆಸರಿನಲ್ಲಿ ಈ ಮೋಸದ ಇರಿಡಿಯಂ ಸ್ಕ್ಯಾಂಡಲ್ ನಡೆಸುತ್ತಿದ್ದಾರೆ! ಈ ಕರಾಳ ದಂಧೆಯಲ್ಲಿ ನೂರಾರು ಮಂದಿ ಮೀಡಿಯೇಟರ್ಸ್, ಹಲವಾರು ನಕಲೀ ಏಜೆನ್ಸೀಗಳು ಕಾರ್ಯನಿರ್ವಹಿಸುತ್ತಿವೆ.
ಈ ಒರಿಜಿನಲ್ ರೈಸ್ ಫುಲ್ಲರ್ ಡಿವೈಸ್ ಅನ್ನು ಮುಟ್ಟಿದರೆ ಅದರ ಶಕ್ತಿ ಹಾಳಾಗಿಬಿಡುತ್ತದೆ ಎಂದು ನಂಬಿಸುವ ವಂಚಕರು ಅದನ್ನು ಪರೀಕ್ಷಿಸಲು ಅದಕ್ಕಾಗಿಯೇ ಇರುವ ನಕಲೀ .ಡಿ.ಆರ್.ಡಿ.ಓ. ಮತ್ತು ನಾಸಾ ಏಜೆನ್ಸೀಸ್ ಗಳ ಏಜೆಂಟರೆಂಟರನ್ನು ವಿಮಾನದಲ್ಲಿ ಕರೆಸುತ್ತೇವೆಂದು ಅದಕ್ಕಾಗಿಯೇ ಪರ್ಚೇಸರ್ ಎನಿಸಿಕೊಂಡವರಿಂದ ಕೋಟ್ಯಾಂತರ ರೂಪಾಯಿ ಅಡ್ವಾನ್ಸ್ ಹಣ ಪಡೆಯುವ ವಂಚಕರು ಸೇಪ್ಟೀ ಜಾಕೇಟ್ ಹೆಸರಲ್ಲಿ ಗಗನಯಾತ್ರಿಗಳು ದರಿಸುವಂತಹ ಉಡುಪು ಖರೀದಿಸಿ ತಂದು ತಾಮ್ರದ ಚಂಬಿನ ಎದುರು ಪರೀಕ್ಷೆಯ ನಾಟಕ ಮಾಡಲು ವಿಜ್ಞಾನಿಗಳನ್ನು ಕರೆಸಿದ್ದೇವೆಂದು ನಾಟಕಮಾಡುತ್ತಾರೆ! ಅದರಿಂದ ಹೊರಬರುವ ರೇಡಿಯೇಷನ್ ನಿಂದು ಬಚಾವಾಗಲು ವಿಶೇಷ ಧಿರಿಸು ಬೇಕೆಂದು ಲಕ್ಷಾಂತರ ರೂಪಾಯಿ ಅಡ್ವಾನ್ಸ್ ಪಡೆದು ನಕಲಿ ಸೈಂಟಿಸ್ಟ್ ಗಳನ್ನು ಕರೆಸಿ ಆರ್.ಪಿ.ಟೆಸ್ಟ್ ಮಾಡಿಸುವುದಾಗಿ ನಂಬಿಸಿ, ಯಾರಿಗೂ ಗೊತ್ತಿಲ್ಲದಂತೆ ಬ್ಯಾಟರಿ ಟೆಸ್ಟ್ ನಲ್ಲಿ ಯಾಮಾರಿಸಿ ಒರಿಜಿನಲ್ ಪೀಸ್ ಇದೇ ಎಂದು ನಂಬಿಸುತ್ತಾರೆ! ಇದನ್ನು ಸ್ಯಾಟಲೈಟ್ ಸಂಶೋಧನೆ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದು ನಂಬಿಸಿ ಯಾಮಾರಿಸಿ ಕೆಲಸಕ್ಕೆ ಬಾರದ ಖಾಲಿ ತಾಮ್ರದ ಚಂಬನ್ನು ಕೈಗೆ ಕೊಟ್ಟು ಪರಾರಿಯಾಗುತ್ತಾರೆ.
ದೆಹಲಿ ಆಂದ್ರ, ಹೈದರಾಬಾದ್ ಕಾಕಿನಾಡ, ಕೇರಳ ಮಹಾರಾಷ್ಟ್ರ, ಪುಣೆ, ಬಾಂಬೆ,ಗುಜರಾತ್, ಬೀಮಾವರಂ, ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬೆಂಗಳೂರಿನ ಸೀತಾ ಸರ್ಕಲ್ ನಲ್ಲಿ ಇದೇ ರೈಸ್ ಪುಲ್ಲಿಂಗ್ ಗ್ಯಾಂಗ್ ಗಳು ಬೀಡುಬಿಟ್ಟಿರುತ್ತವೆ. ಟೈಮಿಗೆ ಸರಿಯಾಗಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಬ್ರೋಕರ್ ಗಳು ಕೋಟಿಗಟ್ಟಲೆ ಡಾಲರ್ ಗಟ್ಟಲೆ ರೈಸ್ ಪುಲ್ಲಿಂಗ್ ಏಜೆಂಟರು ಮಾತನಾಡುತ್ತಾ ಟೈಂ ಪಾಸ್ ಮಾಡುತ್ತಿರುತ್ತಾರೆ! ಮೆಜೆಸ್ಟಿಕ್ ನ ಲಾಡ್ಜ್ ಗಳಲ್ಲಿ ರೂಮು ಮಾಡಿಕೊಂಡು ಡೂಪ್ಲಿಕೇಟ್ ಚೊಂಬು ತೋರಿಸುತ್ತಾ ಗಿರಾಕಿಗಳನ್ನು ಲಾಡ್ಜ್ ಗೆ ಕರೆದು ಅಡ್ವಾನ್ಸ್ ಪಡೆದುಕೊಂಡೇ ಎಷ್ಟೋ ಜನ ಜೀವನ ಮಾಡುತ್ತಿದ್ದಾರೆ! ದಿಡೀರ್ ಶ್ರೀಮಂತರಾಗಲು ಆಸೆ ಪಡುವವರನ್ನೆ ಟಾರ್ಗೆಟ್ ಮಾಡಿಕೊಂಡು ಕಾರ್ಯಾಚರಣೆ ಗಿಳಿಯುವ ಈ ರೈಸ್ ಪುಲ್ಲಿಂಗ್ ವಂಚಕರ ತಂಡ ಈ ವಿಶೇಷ ಶಕ್ತಿ ಇರುವ ವಸ್ತು ನಿಮ್ಮ ಮನೆಯಲ್ಲಿದ್ದರೇ ನಿಮ್ಮ ಸಂಪತ್ತು ದ್ವಿಗುಣಗೊಳ್ಳುತ್ತದೆ ಎಂದು ಬಿಸಿನೆಸ್ ಮ್ಯಾನ್ ಗಳನ್ನು ನಂಬಿಸಿ ಬಲಿಪಶು ಮಾಡುತ್ತಾರೆ. ಆರ್. ಪಿ ಗೂ ಇನ್ಸೂರೆನ್ಸ್ ಇದೆ ಎಂದು ನಂಬಿಸುತ್ತಾರೆ! ಒಟ್ಟಾರೆ ಇದೊಂದು ಹುರುಳಿಲ್ಲದ ವಂಚನೆಯ ಅಟ. ಒಮ್ಮೊಮ್ಮೆ ವ್ಯಾಪಾರ ಕುದುರಿಸಿದ ನಂತರ ಈ ರೈಸ್ ಪುಲ್ಲಿಂಗ್ ವಂಚಕರು ಹಣ ತರಿಸಿಕೊಂಡು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿವೆ. ಕೆಲವೊಮ್ಮೆ ಹಣ ಬದಲಾವಣೆಯಾಗುವ ಟೈಮಿಗೇ ನಕಲೀ ಪೊಲೀಸರನ್ನು ನುಗ್ಗಿಸಿ ಹಣ ಕಿತ್ತುಕೊಂಡು ಕಳುಹಿಸಿರುವ ಪ್ರಕರಣಗಳೂ ವರದಿಯಾಗಿವೆ. ಎಷ್ಟೋ ಪ್ರಕರಣಗಳಲ್ಲಿ ಕಂಪ್ಲೇಂಟ್ ಕೊಡದೆ ಇರುವುದರಿಂದ ಹಲವು ಈಚೆಗೇ ಬರುವುದಿಲ್ಲ! ಹಾಗೆಯೇ ನಂದಿ ವಿಗ್ರಹ,ನಾಗಮಣಿ, ಕಪ್ಪು ಹರಿಸಿನ, ಡಬಲ್ ಎಂಜಿನ್ (ಎರಡು ತಲೆ ಹಾವು)ತಿಮಿಂಗಿಲ ವಾಂತಿ, ತಾಮ್ರದ ಪುರಾತನ ಕಾಲದ ಶಾಸನಗಳು, ಓಬಿರಾಯನ ಕಾಲದ ಹಳೇ ನಾಣ್ಯಗಳು, ಚಿನ್ನದ ಇಟ್ಟಿಗೆ, ಈಸ್ಟ್ ಇಂಡಿಯಾ ಕಂಪನಿಯ 1818 ಇಸವೀ ಬಾಂಡ್ ಪೇಪರ್, 1616ರ ಚೇಳು ಗುರುತಿನ ಈಸ್ಟ್ ಇಂಡಿಯಾ ಕಂಪನಿ ಕಾಪರ್ ಸೀಟ್ ಗಳ ಹೆಸರಲ್ಲಿಯೂ ಕೂಡ ವಂಚನೆ ನಡೆಯುತ್ತಿದೆ! ಇಂತಹ ವಿಚಿತ್ರ ವಸ್ತುಗಳ ಮಾರಾಟದ ಜಾಲವೇ ಕೆಲಸ ಮಾಡುತ್ತಾ ಇವುಗಳಿಗೆಲ್ಲಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ.
ಕೋಟ್ಯಾಂತರ ರೂಪಾಯಿ ಲೆಕ್ಕದಲ್ಲಿ ಹಣ ಸಿಗುತ್ತದೆ ಎಂದು ನಂಬಿಸಿ ಮೇಲಿನ ಎಲ್ಲಾ ವಸ್ತುಗಳನ್ನು ನಕಲಿಯಾಗಿ ಸ್ರಷ್ಠಿಸಿ ಅವುಗಳ ಬೆಲೆ ಕೋಟ್ಯಾಂತರ ರೂಪಾಯಿ ಎಂದು ನಂಬಿಸಿ ವ್ಯಾಪಾರ ನಡೆಸಿ ಮೋಸ ಮಾಡುತ್ತಲೇ ಬದುಕುತ್ತಿರುವ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ. ಆಟೋ ಫೈರ್ ಆಗುವ ಈಸ್ಟ್ ಇಂಡಿಯಾ ಕಂಪನಿ ಬಾಂಡ್ ಪೇಪರ್ ಬೆಲೆ ಕೋಟಿಯಂತೇ! ಚೇಳು ಗುರುತಿನ ಪೇಪರ್ ಬೆಲೆ 25ಲಕ್ಷವಂತೆ! ಕ್ಯಾನ್ಸರ್-ಏಡ್ಸ್ ಗೆ ಔಷದಿ ಎಂದು ಹಬ್ಬಿಸಿರುವ ಕಪ್ಪು ಹರಿಸಿನ ಕೆ.ಜಿ.ಗೆ ಮೂರು ಕೋಟಿಯಂತೇ! ಸಮುದ್ರದಲ್ಲಿ ಸಿಗುವ ತಿಮಿಂಗಿಲ ವಾಂತಿ ಕೇಜಿಗೊಂದು ಕೋಟಿಯಂತೇ! ಕೋಟಿಗಟ್ಟಲೆ ಹಣದ ಕನಸಿನ ಲೋಕದಲ್ಲಿ ತೇಲುವಂತೆ ಮಾಡುವ ಈ ದೋ ನಂಬರ್ ದಂಧೆಯ ವಸ್ತುಗಳ ವ್ಯಾಪಾರದ ಸುಳಿಯಲ್ಲಿ ಸಿಲುಕಿ ಎಷ್ಟೋ ಜನರು ದಿನ ನಿತ್ಯ ಹಣ ಕಳೆದುಕೊಂಡು ಮೋಸ ಹೋಗುತ್ತಿದ್ದಾರೆ. ಅಬ್ದುಲ್ ಸ್ವಾಮಿ ಎಂಬ ವೇಲೂರಿನ ನಿದಿಗಳ್ಳ ಸ್ವಾಮೀಜಿಯೊಬ್ಬ ನಿಮ್ಮ ಜಮೀನಿನಲ್ಲಿ ನಿಧಿಇದೆ ಅಷ್ಟದಿಗ್ಭಂದನ ಹಾಕಿ ನಿಧಿ ಎತ್ತಿ ಕೊಡುತ್ತೇನೆ, ಎರಡು ಲಕ್ಷ ಪೂಜೆಗೆ ಹಣ ಕೊಡಿ ಎಂದು ಕಳ್ಳೆಪುರಿ-ನಿಂಬೆಹಣ್ಣಿನಿಂದಲೇ ಇಂದ್ರಜಿತ್ ಎಂಬ ಕಣ್ ಕಟ್ ವಿದ್ಯೆ ಮಾಡ್ತೀನಿ ನಿಧಿ ಕಾಯುತ್ತಿರುವ ಸರ್ಪಗಳನ್ನು ಪಕ್ಕಕ್ಕೆ ಸೇರಿಸುತ್ತೇನೆ! ಎಂದು ಖಾಲಿ ಚಂಬಿಗೆ ಇದ್ದಿಲು ತುಂಬಿಕೊಟ್ಟು ಯಾಮಾರಿಸುವ ನಿಧಿ ಕಳ್ಳರ ಗ್ಯಾಂಗ್ ಅಮಾಯಕರ ಜಮೀನಿಗೆ ವಕ್ಕರಿಸಬಹುದೆಂದು ಪೊಲೀಸರು ಎಚ್ಚರಿಸುತ್ತಿದ್ದಾರೆ. ಕಾಡುಗಳಲ್ಲಿ ಪಾಳುಬಿದ್ದ ಗುಡಿಗಳಲ್ಲಿ ನಿಧಿ ಹುಡುಕುತ್ತಿರುವ ನಿಧಿ ಕಳ್ಳರ ಗ್ಯಾಂಗ್ ಪುರಾತನ ದೇವಾಲಯಗಳ ಗರ್ಭಗುಡಿಯ ಕೆಳಗೆ ನಿಧಿ ಇದೆಯೆಂದು ನಡುರಾತ್ರಿಯಲ್ಲಿ ಬೇಟೆಗಿಳಿದಿದೆಯಂತೆ! ಮಡಿಕೇರಿ ತಮಿಳುನಾಡಿನ ಕಾಡುಗಳಲ್ಲಿ ಕೋಟಿಗಳ ಆಸೆಗೆ ಬಿದ್ದು ಕಪ್ಪುಹರಿಸಿನ ಹುಡುಕುತ್ತಿರುವ ತಂಡಗಳೇ ಇವೆಯಂತೇ! ಕರ್ನಾಟಕದ ಪೊಲೀಸರು ಕೂಡ ಈ ರೈಸ್ ಪುಲ್ಲಿಂಗ್ ಇರಿಡಿಯಮ್ ಸ್ಕ್ಯಾಂಡಲ್ ಹಿಂದೆ ಬಿದ್ದು ಇದುವರೆಗೂ ಹಲವಾರು ವಂಚಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
2020ರ ಫೆಬ್ರವರಿ ಯಲ್ಲಿ ರೈಸ್ ಪುಲ್ಲಿಂಗ್ ಒರಿಜಿನಲ್ ಪರೀಕ್ಷೆ ನಡೆಸಲು 25ಲಕ್ಷ ಖರ್ಚಾಗುತ್ತದೆಂದು ನಂಬಿಸಿ ವಿದೇಶಿ ವಿಜ್ಞಾನಿಗಳಂತೆ ವೇಷದರಿಸಿ ಆ ನಕಲಿ ವಿಜ್ಞಾನಿಗಳಿಗೆ ಇಬ್ಬರು ಗನ್ ಮ್ಯಾನ್ ಗಳನ್ನು ಸ್ರಷ್ಠಿಸಿ ಕೋಟಿ ಕೋಟಿ ದೋಚಲು ಹೊರಟಿದ್ದ ಮಹಾರಾಷ್ಟ್ರದ ಪುಣೆಯ ನೀವಾಸಿ ವಿಕಾಸ್ ಕುಕಾಸ್ ಎಂಬ ವಂಚಕಿ ಸೆರಿದಂತೆ ಆಕೆಯ ತಂಡದಲ್ಲಿದ್ದ ಪ್ರಮುಖ ಆರೋಪಿ ಸಿದ್ದೇಶ್ವರ ಸೋನ್ ಕಾಂಬ್ಳೆ, ಚಂದ್ರಕಾಂತ್, ಬನ್ಷಿಲಾಲ್ ದುಷಿಯಾ, ರಾಕೇಶ್ ,ಬನ್ಸೋಡೆ, ಎಂಬುವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಸೆಪ್ಟೆಂಬರ್ 2021ರಲ್ಲಿ ಆಂದ್ರ ಪ್ರದೇಶದ ಗುಂತಕಲ್ ಮೂಲದ ಶೇಖ್ ಮತ್ತು ಜರೀನಾ ಅವರ ಏಜೆಂಟರಾದ ರಾಘವೇಂದ್ರ ಪ್ರಸಾದ್, ಫರೀದಾ, ನಯೀಮುಲ್ಲಾ, ಮುದಾಸೀರ್ ಎಂಬುವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಸ್ಯಾಂಕಿ ರಸ್ತೆಯ ತುಲಿಪ್ ಹೋಟೆಲ್ ನಲ್ಲಿ ವಂಚಿಸುತ್ತಿದ್ದಾಗ ಬಂಧಿಸಲಾಗಿತ್ತು. 2018ರಲ್ಲಿ ಶಿವಾಜಿನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಕನಕಲಕ್ಷ್ಮಿ ಮತ್ತು ಇನ್ಸ್ಪೆಕ್ಟರ್ ನದಾಫ್ ಎಂಬುವರು ಇದೇ ರೈಸ್ ಪುಲ್ಲಿಂಗ್ ದಂಧೆಯಲ್ಲಿ ಭಾಗಿಯಾಗಿ ಶಿರಾದ ಡಾಬಾ ರಾಜಣ್ಣ ಎಂಬುವರು ಜೊತೆಗೆ ಸೇರಿ ಬಳ್ಳಾರಿ ಜಿಲ್ಲೆಯ ಸುಧಾಕರ್ ರೆಡ್ಡಿ ಎಂಬುವರಿಗೆ ಹದಿನೇಳು ಲಕ್ಷ ಪಡೆದು ವಂಚಿಸಿದ್ದು ತನಿಖೆಯಿಂದ ಸಾಬೀತಾಗಿ ಇಬ್ಬರು ಪೊಲೀಸರ ವಿರುದ್ಧ ಹೈಕೋರ್ಟ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿತ್ತು! ಹಾಗೆಯೇ 2019ರಲ್ಲಿ ನಗರದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಮೇಗೌಡ ಎಂಬುವರ ಬಳಿ 50ಲಕ್ಷ ದೋಚಿ ಪರಾರಿಯಾಗಿದ್ದ ರೈಸ್ ಪುಲ್ಲಿಂಗ್ ವಂಚಕರನ್ನು ಬಂಧಿಸಲಾಗಿತ್ತು. ಆಂಧ್ರದ ವಂಸಿಕ್ರಷ್ಣ ಎಂಬುವರಿಗೆ ಎರಡುವರೆ ಕೋಟಿ ರೈಸ್ ಪುಲ್ಲಿಂಗ್ ಹೆಸರಲ್ಲಿ ವಂಚಿಸಿದ್ದ ಚಿಕ್ಕಬಳ್ಳಾಪುರದಲ್ಲಿ ವಂಚಕಿ ಅರ್ಚನಾ, ಶ್ರೀಪತಿ, ಶ್ರೀಹರಿ ಮತ್ತು ಕನ್ನಡ ಚಲನಚಿತ್ರ ನಟ ಶಂಕರ್ ಎಂಬುವರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು! ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕ್ರಿಷ್ಣ ಮೂರ್ತಿಗೆ ಆರುವರೆ ಕೋಟಿ ವಂಚಿಸಿದ ಆರೋಪದಲ್ಲಿ ಹಲಸೂರು ನಿವಾಸಿ ಸಗಾಯ್ ರಾಜ್ , ವೆಂಕಟೇಶ್, ಸತೀಶ್,ಪ್ರಭಾ ಎಂಬುವರನ್ನು 2015ರಲ್ಲಿ ಬಂಧಿಸಲಾಗಿತ್ತು! ಮೈಸೂರಿನ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ತಮಿಳು ನಾಡು ಕೇರಳ ಮೂಲದ ರೈಸ್ ಪುಲ್ಲಿಂಗ್ ವಂಚಕರನ್ನು 2021ರಲ್ಲಿ ಜೈಲಿಗಟ್ಟಲಾಗಿತ್ತು.
2018ರಲ್ಲಿ ರೈಸ್ ಪುಲ್ಲಿಂಗ್ ದಂಧೆಗೆ ಮುಖ್ಯಮಂತ್ರಿಯೊಬ್ಬರ ಹೆಸರು ಬಳಸಿ 350ಜನ ಸಾರ್ವಜನಿಕರಿಗೆ 25ಕೋಟಿ ವಂಚಿಸಿದ್ದ ಆನೇಕಲ್ ಚೂಡಳ್ಳಿ ನಿವಾಸಿ ರಾಮಚಂದ್ರಾಚಾರಿ ಎಂಬಾತ ಹಣ ವಾಪಸ್ ಕೇಳಿದಾಗ ವಿಷಕುಡಿವ ನಾಟಕವಾಡಿ ಜೈಲು ಸೇರಿದ್ದೆ! ಚಾಮರಾಜನಗರ ಚನ್ನಪ್ಪನಪುರದ ಚೋಳರ ಕಾಲದ ವೀರಭ್ರದ್ರೇಶ್ವರ ದೇವಾಲಯದ ಕಳಸದ ಮೆಲೆ ಕಣ್ಣು ಹಾಕಿ ರೈಸ್ ಪುಲ್ಲಿಂಗ್ ವೀಡಿಯೋ ಚಿತ್ರೀಕರಿಸಿದ್ದವರನ್ನು ಇತ್ತೀಚೆಗೆ ಬಂಧಿಸಿ ಜೈಲಿಗಟ್ಟಲಾಗಿದೆ!
ನಾಸಾ ಏಜೆನ್ಸೀಸ್, ಇಸ್ರೋ,ಡಿ.ಅರ್.ಡಿ.ಓ.(ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ) ನಕಲಿ ಏಜೆನ್ಸಿಗಳ ಹೆಸರಲ್ಲಿ ವಂಚನೆ ನಡೆಯುತ್ತಲೇ ಇದೆ! ರೈಸ್ ಪುಲ್ಲಿಂಗ್ ವಂಚಕರ ಬಳಿ ಆರ್.ಬಿ.ಐ.ನ ಫೇಕ್ ಡೆಪಾಸಿಟ್ ಸರ್ಟಿಫಿಕೇಟ್, ಅಮೆರಿಕನ್ ರೇಡಿಯಮ್ ಸೊಸೈಟಿ ಫೇಕ್ ಮನೀ ಲಾಂಡ್ರಿಂಗ್ ಕ್ಲಿಯರೆನ್ಸ್ ಸೆರ್ಟಿಫಿಕೇಟ್, ಫೇಕ್ ಲ್ಯಾಭೋರೇಟರೀ ರೈಸ್ ಪುಲ್ಲಿಂಗ್ ರಿಪೋರ್ಟ್ ಗಳು ಇರುವುದರಿಂದ ವಿದ್ಯಾವಂತ ಜನರು ಬೇಗನೆ ಮೋಸ ಹೋಗುತ್ತಿದ್ದಾರೆ! ಇತ್ತೀಚೆಗಂತೂ ಪ್ರದಾನ ಮಂತ್ರಿ ಮೋದೀಜಿ ಎರಡು ಸಾವಿರ ರೂಪಾಯಿ ನೋಟನ್ನು ಬ್ಯಾನ್ ಮಾಡುವ ಯೋಚನೆಯಲ್ಲಿದ್ದಾರೆಂದು ವದಂತಿ ಹಬ್ಫಿಸುತ್ತಿರುವ ವಂಚಕರ ಗುಂಪು ಗಳು ನೋಟ್ ಎಕ್ಸ್ ಚೇಂಜ್ ರ್ಯಾಕೆಟ್ ಹುಟ್ಟುಸಾಕಿದ್ದಾರೆ. ‘ಪಿಂಕು-ಗ್ರೀನ್..ಯಾವುದಿದೇ?’ ಎಕ್ಸ್ ಚೇಂಜ್ ಮಾಡ್ತೀವಿ 2000ಕೋಟಿ ಇದ್ರೆ ನೋಡಿ.. ಬ್ಯಾನ್ ಆಗಿರುವ ಓಲ್ಡ್ ನೋಟು ಗಳಿದ್ದರೂ ಕೊಡಿ ಎಕ್ಸ್ ಚೇಂಜ್ ಮಾಡ್ತೀವಿ ಎಂದು ಹಣ ತರಿಸಿಕೊಂಡು ರಾಬರಿ ಮಾಡುವ ತಂಡಗಳು ನಗರದಲ್ಲಿ ಸದ್ದಿಲ್ಲದೇ ಕಾರ್ಯಾಚರಣೆ ನಡೆಸುತ್ತಿರುವ ಸುದ್ದಿ ಹರಿದಾಡುತ್ತಿದೆ. ಹೂಸೂರು ರಸ್ತೆಯ ಪರಪ್ಪನ ಅಗ್ರಹಾರ ಪೊಲೀಸರು ನಕಲೀ ನೋಟ್ ಎಕ್ಸ್ ಚೇಂಜ್ ವಂಚಕರನ್ನು ಇತ್ತೀಚೆಗಷ್ಟೇ ಬಂಧಿಸಿ ಜೈಲಿಗಟ್ಟಿದ್ದಾರೆ.
ದುಡಿದು ತಿನ್ನಲಾರದ ವಂಚಕರು ಜೀವನವನ್ನೇ ವಂಚಕ ವ್ರತ್ತಿಗೆ ಮುಡುಪಾಗಿಟ್ಟು ಈ ರೈಸ್ ಪುಲ್ಲಿಂಗ್ ನಂತಹ ಕರಾಳ ದಂಧೆಗೆ ಇಳಿದು ಜನರನ್ನು ಮೋಸಗೊಳಿಸುತ್ತಾ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗಲು ಕಾರಣರಾಗಿದ್ದಾರೆ. ಈ ರೈಸ್ ಪುಲ್ಲಿಂಗ್ ದಂಧೆಗೆ ಕಡಿವಾಣ ಹಾಕಲು ಸರಿಯಾದ ಕಾನೂನು ಜಾರಿಯಾಗದಿದ್ದರೇ ಅವರು ಬುದ್ಧಿ ಕಲಿಯುವುದಿಲ್ಲ. ಏಕೇಂದರೇ ಇಷ್ಟೇಲ್ಲಾ ವಂಚನೆ ಮಾಡಿದರೂ ಅವರ ಮೇಲೆ ಬೀಳುವುದು ಕೇವಲ ವಂಚನೆಯ ಕೇಸು ಅಷ್ಟೆ. ಆದ್ದರಿಂದ ನಮ್ಮ ಕಾನೂನಿನ ಕೈ ಬಲವಾದಾಗ ಮಾತ್ರ ಇಂತಹ ವಂಚನೆಗಳು ಕಡಿಮೆಯಾಗಲು ಸಾಧ್ಯ.