ಬೆಳಗಾವಿ,ಮೇ,೨೪-ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ರಾಯಭಾಗ ತಲ್ಲೂಕಿನ ಮೇಖಳಿಯ ರಾಮಮಂದಿರದ ಲೋಕೇಶ್ವರ ಸ್ವಾಮೀಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ನಗರದ ಲಾಡ್ಜ್ನಲ್ಲಿ ಅತ್ಯಾಚಾರ ಎಸಗಿ ಬಳಿಕ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಬಿಡಲಾಗಿತ್ತು. ಬಾಗಲಕೋಟೆಯ ನವನಗರದ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾದ ನಂತರ ಬೆಳಗಾವಿಯ ಮೂಡಲಗಿಗೆ ವರ್ಗಾವಣೆಯಾಗಿತ್ತು.
ಬಾಲಕಿಗೆ ೧೭ ವರ್ಷ ಆಗಿದ್ದು ಆಕೆ ಹುಷಾರಿಲ್ಲದೇ ಇದ್ದಾಗ ಪೋಷಕರು ಆಕೆಯನ್ನು ಆಗಾಗ ಮಠಕ್ಕೆ ತಂದು ಬಿಟ್ಟು ಹೋಗುತ್ತಿದ್ದರು. ವಾರಗಟ್ಟಲೇ ಮಗಳನ್ನು ಸ್ವಾಮೀಜಿಯ ಸುಪರ್ದಿಗೆ ಒಪ್ಪಿಸಿ ಮಠದಲ್ಲೇ ಬಿಡುತ್ತಿದ್ದರು.
ಹೀಗೆ ಮಠಕ್ಕೆ ಬಂದಿದ್ದ ಬಾಲಕಿಯನ್ನು ಆಕೆಯ ಮನೆಗೆ ಬಿಡಲು ಲೋಕೇಶ್ವರ ಸ್ವಾಮೀಜಿ ತೀರ್ಮಾನಿಸಿದ್ದ. ಮೇ ೧೩ ರಂದು ಇಬ್ಬರು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ರಾಯಚೂರಿನಲ್ಲಿ ೨ ದಿನ ಇದ್ದ ಇವರು ಮೇ೧೫ ರಂದು ಬಾಗಲಕೋಟೆಗೆ ಬಂದಿದ್ದಾರೆ.
ಈ ಎರಡು ಕಡೆ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವ ಬೆದರಿಕೆಯನ್ನು ಹಾಕಿ ಮೇ ೧೬ ರಂದು ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಬಿಟ್ಟು ತೆರಳಿದ್ದಾನೆ.
ಮೇ೧೭ ರಂದು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗುತ್ತದೆ. ವಿಚಾರಣೆಗೆ ಒಳಪಡಿಸಿದಾಗ ಬಾಲಕಿ ನಡೆದ ಎಲ್ಲಾ ಘಟನೆಗಳನ್ನು ವಿವರಿಸಿದ್ದಾಳೆ. ಕೇಸ್ ದಾಖಲಾದ ಬಳಿಕ ಪ್ರಕರಣ ಬೆಳಗಾವಿಯ ಮೂಡಲಗಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
೨೦೨೧ರಲ್ಲಿ ಸ್ವಾಮೀಜಿಗೆ ಧರ್ಮದೇಟು ನೀಡಿ ಗ್ರಾಮಸ್ಥರು ಬುದ್ಧಿವಾದ ಹೇಳಿದ್ದರು. ಮಠದಲ್ಲಿ ಸಾಕಷ್ಟು ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ ಆರೋಪ ;ಲೋಕೇಶ್ವರ ಸ್ವಾಮೀಜಿ ಬಂಧನ
Share