ಧರ್ಮಸ್ಥಳದಲ್ಲಿ ಗುಂಪು ಘರ್ಷಣೆ; ಯೂಟ್ಯೂಪರ್, ಚಾನೆಲ್ ವರದಿಗಾರನ ಮೇಲೆ ಹಲ್ಲೆ

Share

ಧರ್ಮಸ್ಥಳ, ಆ,07-ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ನೇಮಿಸಿರುವ ಎಸ್ ಐಟಿ ತನಿಖೆ ನಡೆಸುತ್ತಿರುವ ವೇಳೆಯ ಇಲ್ಲಿನ ದೇವಸ್ಥಾನದ ಮುಂದೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಪೊಲೀಸರು ಚದುರಿಸಲು ಲಾಠಿಚಾರ್ಜ್ ಮಾಡಿದ ಘಟನೆ ಜರುಗಿದೆ

ನಂತರ ಒಂದು ಗುಂಪು, ‘ಕ್ಷೇತ್ರಕ್ಕೆ ಕಳಂಕ ತರುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಧರ್ಮಸ್ಥಳ ಪೊಲೀಸ್‌ ಠಾಣೆಯ ಎದುರು ರಾತ್ರಿ ಧರಣಿ ನಡೆಸಿತು.

ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆಯೇ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್‌ ಕೆ. ಅವರು ಧರ್ಮಸ್ಥಳ ಪೊಲೀಸ್‌ ಠಾಣೆಗೆ ಧಾವಿಸಿದರು.

ಇದಕ್ಕೂ ಮುನ್ನ, ಬಿಗ್‌ಬಾಸ್‌ ಸ್ಪರ್ಧಿ ರಜತ್ ಎಂಬವರು ಧರ್ಮಸ್ಥಳ ಗ್ರಾಮದ ಪಾಂಗಾಳದಲ್ಲಿರುವ ದಿ. ಸೌಜನ್ಯಾ ಅವರ ಮನೆಗೆ ಭೇಟಿ ನೀಡಿದ್ದರು. ಈ ಮಾಹಿತಿ ತಿಳಿದು ಅವರನ್ನು ಮಾತನಾಡಿಸಲು ಕೆಲ ಯೂಟ್ಯೂಬರ್‌ಗಳು ಪಾಂಗಾಳ ರಸ್ತೆಯ ಬಳಿ ಸೇರಿದ್ದರು. ಆಗ ಸ್ಥಳಕ್ಕಾಗಮಿಸಿದ ಗುಂಪೊಂದು ಅವರ ಜೊತೆ ವಾಗ್ವಾದ ನಡೆಸಿತ್ತು.

‘ಕುಡ್ಲ ರ‍್ಯಾಂಪೇಜ್‌’ ಯೂಟ್ಯೂಬ್‌ ಚಾನೆಲ್‌ನ ಅಜಯ್ ಅಂಚನ್ ಹಾಗೂ ಕ್ಯಾಮೆರಾಮನ್‌, ‘ಯುನೈಟೆಡ್ ಮೀಡಿಯಾ’ದ ಅಭಿಷೇಕ್‌ ಹಾಗೂ ‘ಸಂಚಾರಿ ಸ್ಟುಡಿಯೊ’ದ ವಿಜಯ್‌ ಅವರ ಮೇಲೆ ಪಾಂಗಾಳದಲ್ಲಿ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಬಳಿಕ ಆ ಗುಂಪಿನಲ್ಲಿದ್ದ ಕೆಲವರು, ‘ಕೆಲವು ಯೂಟ್ಯೂಬರ್‌ಗಳು ಎಸ್‌ಐಟಿ ತನಿಖೆಯ ಕುರಿತು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿ ಎರಡು ವಿಡಿಯೊ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದರು. ‘ಸೌಜನ್ಯಾ’ ಫೋಟೊ ಅಳವಡಿಸಿದ್ದ ವಾಹನದ ಗಾಜನ್ನು ಪುಡಿ ಮಾಡಿದರು’ ಎಂದು ಮೂಲಗಳು ತಿಳಿಸಿವೆ.

ಈ ಹಲ್ಲೆಯನ್ನು ಖಂಡಿಸಿ ಒಂದು ಗುಂಪು ಪಾಂಗಾಳ ರಸ್ತೆ ಬಳಿ ಪ್ರತಿಭಟನೆ ನಡೆಸಿತು. ಇದೇ ವೇಳೆ, ‘ಕ್ಷೇತ್ರಕ್ಕೆ ಕಳಂಕ ಹಚ್ಚಲು ಉದ್ದೇಶಪೂರ್ವಕವಾಗಿ ಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿ ಇನ್ನೊಂದು ಗುಂಪು ಅದೇ ಸ್ಥಳದತ್ತ ಧಾವಿಸಿ ಪ್ರತಿಭಟನೆಗೆ ಮುಂದಾಯಿತು. ಈ ವೇಳೆ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಸ್ಥಳದಲ್ಲಿದ್ದವರನ್ನು ಚದುರಿಸಿದರು.

ಹಲ್ಲೆಗೊಳಗಾದ ಯೂಟ್ಯೂಬರ್‌ಗಳು ಚಿಕಿತ್ಸೆಗಾಗಿ ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಗೆ ವರದಿಗಾರಿಕೆಗಾಗಿ ತೆರಳಿದ್ದ ಏಷ್ಯಾ ನೆಟ್‌ ಸುವರ್ಣ ವಾಹಿನಿಯ ವರದಿಗಾರ ಹರೀಶ್‌ ಹಾಗೂ ಕ್ಯಾಮೆರಾಮನ್ ನವೀನ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವಾಹಿನಿಯ ಮೂಲಗಳು ತಿಳಿಸಿವೆ.

*ಪರಿಸ್ಥಿತಿ ಹತೋಡಿಯಲ್ಲಿದೆ*

ಧರ್ಮಸ್ಥಳದಲ್ಲಿ ಪರಿಸ್ಥಿತಿ ಈಗ ಶಾಂತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ಕೆ. ತಿಳಿಸಿದ್ದಾರೆ.

‘ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಮತ್ತು ಅವರ ಎರಡು ವಾಹನಗಳಿಗೆ ಹಾನಿ‌ ನಡೆಸಿದ ಬಗ್ಗೆ ಹಾಗೂ ಖಾಸಗಿ ನ್ಯೂಸ್ ಚಾನೆಲ್‌ನ ವರದಿಗಾರನ ಮೇಲೆ ನಡೆದ ಹಲ್ಲೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಲಾಗುತ್ತಿದೆ. ಲಾಠಿ ಪ್ರಹಾರ ನಡೆದ ಸ್ಥಳದಲ್ಲಿ, ಧರ್ಮಸ್ಥಳ ಪೊಲೀಸ್ ಠಾಣಾ ಆವರಣದಲ್ಲಿ ಮತ್ತು ಆಸ್ಪತ್ರೆಯ ಮುಂದೆ ಕಾನೂನುಬಾಹಿರವಾಗಿ ಗುಂಪು ಸೇರಿರುವ ಬಗ್ಗೆ ಪ್ರಕರಣ
ದಾಖಲಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

Girl in a jacket
error: Content is protected !!