ಕೆಟ್ಟ ರಾಜಕಾರಣಕ್ಕೆ ಇನ್ನೆಷ್ಟು ಮುಗ್ದರ ಬಲಿ ಬೇಕು?
Writing-ಪರಶಿವ
ಈಗ ಸದ್ಯಕ್ಕೆ ಭಾರತದಲ್ಲಿ ಯಾವ ಧರ್ಮಗಳೂ ಅಪಾಯದಲ್ಲಿ ಇಲ್ಲ! ಮನುಷ್ಯತ್ವ ಅಪಾಯದಲ್ಲಿದೆ! ಮನುಷ್ಯರು ಕೊಲೆಯಾಗುತ್ತಿದ್ದಾರೆ! ಧರ್ಮದ ಅಫೀಮು ಕುಡಿದವರ ಕೈಯಲ್ಲಿ ನಡುಬೀದಿಯಲ್ಲಿ ಮನುಷ್ಯತ್ವ ಕೊಲೆಯಾಗುತ್ತಿದೆ! ಅಮಾಯಕರ ಸಮಾದಿಗಳ ಮೇಲೆ ಸರ್ಕಾರ ರೂಪಿಸುವ ಸಂಚು ನಡೆಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು, ಮುಗ್ಧ ಜನರ ಸಾವಿನಲ್ಲಿ ಲಾಭ ಪಡೆಯಲು ಶವಯಾತ್ರೆಯ ಮೆರವಣಿಗೆಗಳಲ್ಲಿ, ಹಿಂದೂ-ಮುಸ್ಲಿಂ ಹೆಸರಿನಲ್ಲಿ ಧರ್ಮರಾಜಕಾರಣ ಮಾಡುತ್ತಿದ್ದಾರೆ. ಭ್ರಷ್ಟ ರಾಜಕೀಯ ಪಕ್ಷಗಳ ಪುಡಾರಿಗಳ, ನಕಲಿ ದೇಶಪ್ರೇಮಿ ಸಂಘಟನೆಗಳ ಮುಖಂಡರ ಮಾತು ಕೇಳಿಕೊಂಡು ಧರ್ಮರಕ್ಷಣೆಯ ಭ್ರಮೆಯಲ್ಲಿ ಹತ್ಯಾಕಾಂಡ ನಡೆಸಿ ಅನ್ಯ ಧರ್ಮದ ಮುಗ್ಧರನ್ನು ಕೊಂದವರು ತಾವೂ ಮತ್ತೊಂದು ದಿನ ಭಯೋತ್ಪಾದಕರ ಬಾಂಬಿಗೋ ಮತಾಂಧರ ಕೈಯಲ್ಲೋ ಬಲಿಯಾಗುವಾಗ ಯಾವ ರಾಜಕಾರಣಿಯೂ ಬಂದು ಕಾಪಾಡುವುದಿಲ್ಲವೆಂಬ ಕಟು ಸತ್ಯವನ್ನು ಅರ್ಥ ಮಾಡಿಕೊಳ್ಳದ ಹೊರತು ಈ ಹೆಣದ ರಾಜಕಾರಣ ಭಾರತದಲ್ಲಿ ನಿಲ್ಲುವುದಿಲ್ಲ! ಇನ್ನಾದರೂ ಎಲ್ಲಾ ಧರ್ಮಗಳ ಅಮಾಯಕ ಮುಗ್ಧ ಸಾಮಾನ್ಯ ಜನರು ಉದ್ರೇಕದ, ಉಗ್ರಧಾರ್ಮಿಕ, ಪ್ರಚೋದಕ ಭಾಷಣಗಳಿಗೆ ಬಲಿಯಾಗಿ ಪರಸ್ಪರ ಬಡಿದಾಡಿ ಕೊಂಡು ಸಾಯದೆ ಬದುಕು ಕಟ್ಟಿಕೊಳ್ಳಬೇಕಿದೆ. ದೇಶದ್ರೋಹಿ ಕ್ರತ್ಯಗಳನ್ನು ನಡೆಸುವ ಮತಾಂದರನ್ನು ಮಟ್ಟಹಾಕಲು, ಧಾರ್ಮಿಕ ಭಯೋತ್ಪಾದಕರ ಹುಟ್ಟನಡಗಿಸಲು ದೇಶದಲ್ಲಿ ಇರುವ ಕಾನೂನುಗಳನ್ನು ಸಮಂಜಸವಾಗಿ, ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಭಾರತದ ತ್ರಿವರ್ಣ ಧ್ವಜವನ್ನು ಕಿತ್ತೆಸೆಯಬೇಕೆನ್ನುವವರಿಂದ, ಭಾರತವನ್ನು ಒಂದೇ ಧರ್ಮದಡಿ ತರಬೇಕು ಎನ್ನುವವರಿಂದ, ಇಂಡಿಯಾವನ್ನು ಇಸ್ಲಾಮೀಕರಣ ಮಾಡಬೇಕೆಂದು ಹೊರಟ ಉಗ್ರಗಾಮಿಗಳಿಂದ ಈ ಜಾತ್ಯತೀತ ಭಾರತವನ್ನು ಉಳಿಸಿಕೊಳ್ಳಬೇಕಿದೆ!
ಸರ್ವಧರ್ಮಗಳ ಶಾಂತಿಯ ತೋಟವಾಗಿರುವ ಭಾವೈಕ್ಯತೆಯ ಭಾರತ ಇಂದು ಕೋಮುವಾದಿ ಶಕ್ತಿಗಳ ಕೈಗೆ ಸಿಕ್ಕು, ಮತಾಂಧರ ಸಂಚಿಗೆ ನಲುಗಿ ನರಳುತ್ತಿದೆ. ಅದಕ್ಕಾಗಿಯೇ ಹೀಗೆ ಭಾರತದ ಬೀದಿಯಲ್ಲಿ ಯುವಕರ ಹೆಣಗಳು ಉರುಳುತ್ತಿವೆ. ಕೋಮುಗಲಭೆಯ ಜ್ವಾಲೆಯಲ್ಲಿ ಅಮಾಯಕರ ಮನೆಗಳು ಮನಸುಗಳು ಉರಿಯುತ್ತಿವೆ! ಈಗ ಶಿವಮೊಗ್ಗದ ಬೀದಿಯಲ್ಲಿ ಭೀಕರವಾಗಿ ಕೊಲೆಯಾಗಿ ಹೆಣವಾಗಿರುವ ಹರ್ಷ ಎಂಬ ಹುಡುಗ ಇಂತದೇ ಧಾರ್ಮಿಕ ಮೂಲಭೂತವಾದದ ಸಂಚಿಗೆ ಬಲಿಪಶುವಾದ ಹುಂಬ. ಧರ್ಮದ ಗಂಧಗಾಳಿಯೂ ಗೊತ್ತಿಲ್ಲದ ಮೂರ್ಖರು, ದೇಶಪ್ರೇಮದೆಸರಲ್ಲಿ ಸಾವನ್ನೇ ಓಟುಗಳನ್ನಾಗಿಸುವ ಪಾಖಂಡಿ ರಾಜಕಾರಣಿಗಳು ಸೇರಿಕೊಂಡು, ಇಂತಹ ತುಂಬುಕುಟುಂಬದ ಅಮಾಯಕ ಮುಗ್ಧ ಹುಡುಗರನ್ನು ಧರ್ಮದ ಹೆಸರಿನಲ್ಲಿ ಆಕರ್ಷಿಸಿ, ತಮ್ಮ ಸಿದ್ದಾಂತಗಳತ್ತ ಸೆಳೆದು ಮತ್ತೊಂದು ಧರ್ಮದ ಜನರ ಮೇಲೆ ಚೂಬಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇದು ಎಲ್ಲಾ ಧರ್ಮಗಳ ನಾಯಕರೂ ಇತ್ತೀಚೆಗೆ ಮಾಡುತ್ತಿರುವ ಖಂಡನೀಯವಾದ ಕ್ರತ್ಯ. ಆ ಕಾರಣದಿಂದಲೇ ಇಂದು ಸಾವೊಂದನ್ನು ಸಂಭ್ರಮಿಸುವ ಮನಸ್ಥಿತಿ ಮನುಷ್ಯರಲ್ಲಿ ಮೊಳಕೆಯೊಡೆದು ಕುಂತಿದೆ! ಮದುಮಗನಾಗಬೇಕಿದ್ದ ಹರ್ಷನನ್ನು ಕಳೆದುಕೊಂಡು ಆತನ ತಂದೆ ತಾಯಿ, ಕುಟುಂಬ ಎದೆಯೊಡೆದುಕೊಂಡು ಕಣ್ಣೀರಿಡುತ್ತಿದ್ದರೇ, ಆತನ ಕೊಲೆಯನ್ನು ಸಮರ್ಥಿಸಿ ಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿರುವ ‘ಮಂಗಳೂರು ಮುಸ್ಲಿಮ್ಸ್’ ಎಂಬ ಫೇಸ್ಬುಕ್ ಪೇಜ್ ನ ಮೊಹಮ್ಮದ್ ಶಫೀಕ್ ಮತ್ತಿತರರ ವಿರುದ್ಧ ದಾಖಲಾಗಿದೆ! 2015ರಲ್ಲಿ ಮುಸ್ಲಿಂ ಧರ್ಮಗುರುಗಳಾದ ಪ್ರವಾದಿ ಮುಹಮ್ಮದ್ ರವರನ್ನು ಹರ್ಷ ನಿಂದಿಸಿದ್ದಕ್ಕೆ ಪ್ರತೀಕಾರವಾಗಿ ಆತನ ಹತ್ಯೆ ಮಾಡಲಾಗಿದೆ! ಎಂದು ಹಿಂದೂ ಹರ್ಷನ ಸಾವನ್ನು ಮುಸ್ಲಿಂ ಸಮುದಾಯದವರು ಸಮರ್ಥಿಸಿಕೊಂಡಿದ್ದಾರೆ! ಅಲ್ಲದೆ ಪ್ರವಾದಿಯವರನ್ನು ನಿಂದಿಸುವ ಯಾರನ್ನೂ ಅವರು ಎಷ್ಟೇ ಪ್ರಭಾವಿಯಾಗಿದ್ದರೂ ಬಿಡುವುದಿಲ್ಲ! ಎಂದು ಫೆಸ್ಬುಕ್ ಪೋಸ್ಟ್ ನಲ್ಲಿ ಹೇಳಲಾಗಿದೆ. ಹಿಂದೂ-ಮುಸ್ಲಿಮರ ನಡುವೆ ದ್ವೇಷವನ್ನು ಹರಡಿ ಹಿಂಸಾಚಾರಕ್ಕೆ ಪ್ರಚೋದಿಸುವ ಉದ್ದೇಶದಿಂದಲೇ ಇಂತಹ ಸ್ಟೇಟ್ಮೆಂಟ್ ಗಳನ್ನು ಪದೇ ಪದೆ ಹಾಕಲಾಗುತ್ತಿದೆಯೆಂದು ಎಫ್.ಐ.ಆರ್. ನಲ್ಲಿ ಉಲ್ಲೇಖಿಸಲಾಗಿದೆ! ಆದರೆ ಇಲ್ಲಿ ಪೊಲೀಸರ ಕೈಗೆ ಸೆರೆಸಿಕ್ಕಿರುವ ಹರ್ಷನ ಕೊಲೆಗಡುಕರು ನಾವು ವೈಯಕ್ತಿಕ ದ್ವೇಷದಿಂದ ಭಜರಂಗದಳದ ಕಾರ್ಯಕರ್ತ ಹರ್ಷನನ್ನು ಕೊಲೆಮಾಡಿರುವುದಾಗಿ ಉಲ್ಟಾ ಸ್ಟೇಟ್ಮೆಂಟ್ ಕೊಡುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡುತ್ತಿವೆ! ಕೆಲವು ಟಿವಿ ಮಾಧ್ಯಮಗಳಂತೂ ಇದಕ್ಕಾಗಿಯೇ ಕಾದುಕುಳಿತಿದ್ದಂತೆ, ಸುದ್ದಿಯನ್ನು ತಮಗೆ ಬೇಕಾದಂತೆ ತಿರುಚಿ ರಾಜಕಾರಣಕ್ಕೆ, ಕೋಮುಗಲಭೆಗೆ ಪರಿವರ್ತಿಸಲು ಹರಸಾಹಸ ಪಡುತ್ತಿದ್ದಾರೆ! ಹಿಂದೂ ಸಂಘಟನೆಯ ಕಟ್ಟರ್ ಕಾರ್ಯಕರ್ತ ಹರ್ಷಹಿಂದೂವಿನ ಕೊಲೆಗೆ ಕಾರಣ ಹಿಜಾಬ್! ಎಂಬ ಜಡ್ಜ್ ಮೆಂಟ್ ಅನ್ನು ಈಗಾಗಲೇ ಟಿವಿಗಳು ನೀಡಿಯಾಗಿದೆ! ಆದರೆ ಕೊಲೆಗಡುಕರು ನಮಗೂ ಹರ್ಷನಿಗೂ ಬಹಳ ಹಿಂದಿನಿಂದಲೂ ತೀರದ ವೈಯಕ್ತಿಕ ಧ್ವೇಷವಿತ್ತು. ಶಿವಮೊಗ್ಗದ ಕೋರ್ಟಿನಲ್ಲಿ ಅಟ್ಯಾಕ್-ರೀ ಅಟ್ಯಾಕುಗಳಾಗಿದ್ದವು. ನಮ್ಮನು ಹೊಡೆಯಲು ಆತ ಹೊಂಚುಹಾಕುತಿದ್ದ. ಹೆದರಿ ನಾವೇ ಅವನನ್ನು ಹೊಡೆದು ಹಾಕಿದ್ದೇವೆ! ಎಂಬರ್ಥದ ಹೇಳಿಕೆಗಳನ್ನು ವಿಚಾರಣೆಯ ವೇಳೆ ಬಾಯ್ ಬಿಡುತ್ತಿದ್ದಾರಂತೇ! ಶಿವಮೊಗ್ಗದ ಸೀಗೇಹಟ್ಟಿ ಬಳಿಯ ಕಾಮತ್ ಪೆಟ್ರೋಲ್ ಬಂಕ್ ಬಳಿ ಭಾನುವಾರ ರಾತ್ರಿ ಹರ್ಷ ಕೊಲೆಯಾದ ಗಳಿಗೆಯಿಂದ ಆತನ ಕೊಲೆಯ ಕುರಿತು ನಾನಾರೀತಿಯ ಊಹಾಪೋಹಗಳು ಕೇಳಿಬರುತ್ತಿದ್ದವು. ಕೊಲೆಗೆ ಕೋಮುಬಣ್ಢ-ರಾಜಕೀಯ ಬಣ್ಣ ಬಳಿದು ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಿಕೊಂಡು ವಾಗ್ದಾಳಿ ನಡೆಸಿ ಗಾಳಿಯಲ್ಲಿ ಗುಂಡು ನುಗ್ಗಿಸಿದ್ದರು.
ವಿಧಾನಸಭೆಯ ಮೇಲ್ಮನೆಯ ಕಾಂಗ್ರೆಸ್ ನಾಯಕರಾದ ಹರಿಪ್ರಸಾದ್ ರವರು ಬಿಜೆಪಿಯ ಸಚಿವ ಈಶ್ವರಪ್ಪನವರೇ ತಮ್ಮ ‘ರಾಷ್ಟ್ರ ಧ್ವಜ ಪ್ರಕರಣ’ದ ದಿಕ್ಕು ತಪ್ಪಿಸುವ ಸಲುವಾಗಿ ಈ ಕೊಲೆ ಮಾಡಿಸಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದರು! ಪಂಚಾಯಿತ್ ರಾಜ್ ಸಚಿವ ಈಶ್ವರಪ್ಪ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಪ್ರಚೋದನಕಾರಿ ಹೇಳಿಕೆಯಿಂದಲೇ ಮುಸಲ್ಮಾನರು ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷನನ್ನು ಕೊಲೆಮಾಡಿರುವುದಾಗಿ ಹೇಳಿಕೆ ನೀಡಿದ್ದರು! ಈಗಾಗಲೇ ರಾಜ್ಯದಲ್ಲಿ ವಿಧಾನ ಸಭಾ ಚುನಾವಣಾ ಕಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳು ಆರೋಪ, ಪ್ರತ್ಯಾರೋಪಗಳು ಸರ್ವೇ ಸಾಮಾನ್ಯ. ಬಿಜೆಪಿಯವರು ಎಂದಿನಂತೆ ಹಿಂದೂ ಹರ್ಷನ ಸಾವನ್ನು ಮುಸ್ಲಿಂ ಸಮುದಾಯದವರೇ ಮಾಡಿದ್ದರೇ, ಮತಬ್ಯಾಂಕ್ ರಾಜಕೀಯಕ್ಕೆ ‘ಹಿಂದೂಗಳ ಹತ್ಯೆ!’ ಟೈಟಲ್ ಬಳಸಿಕೊಳ್ಳಲು ಹವಣಿಸುತ್ತಿದೆ. ‘ಅಯ್ಯೂ ನಮ್ಮ ಹಿಂದೂ ಹುಲಿ ಹೋಗ್ಬಿಟ್ಟಾ!’ ಹರ್ಷ ರಾಷ್ಟ್ರ ಪ್ರೇಮಿ, ಹುತಾತ್ಮ! ಎಂದೆಲ್ಲಾ ಮೊಸಳೇ ಕಣ್ಣೀರು ಸುರಿಸುತ್ತಿರುವ ದೊಡ್ಡ ದೊಡ್ಡ ರಾಜಕಾರಿಣಿಗಳಿಗೇ ತಾವೇ ಅಲ್ಲವೇ ಆತನ ಸಾವಿಗೆ ಪರೋಕ್ಷ ಕಾರಣ ಎಂದೇಕೆ ಅನಿಸುತ್ತಿಲ್ಲ. ಎಸ್.ಎಸ್.ಎಲ್ಸಿ ಡ್ರಾಪ್ ಔಟ್ ಹರ್ಷನ ತಲೆಯಲ್ಲಿ ‘ರಾಷ್ಟ್ರೀಯತೆಗೆ ಉತ್ತರ ಗೋಡ್ಸೇ!’ ಎಂದು ತುಂಬಿದವರಾರು? ಭಾರತದ ತ್ರಿವರ್ಣ ಧ್ವಜಕ್ಕಿಂತ ಕೇಸರಿ ಧ್ವಜವೇ ಶ್ರೇಷ್ಠವೆಂಬ ದೇಶದ್ರೋಹಿ ಚಿಂತನೆ ಬೆಳೆಸಿದವರಾರು? ಮುಸ್ಲಿಮರ ಬ್ಯಾನರ್ರು, ಬೋರ್ಡುಗಳ ಕೆಳಗೆ ಹಂದಿ ತಲೆಕಡಿದು ನೇತು ಹಾಕುವುದೇ ದೊಡ್ಡ ದೇಶಪ್ರೇಮ! ಎಂದು ಸುಳ್ಳು ಹೇಳಿಕೊಟ್ಟವರಾರು? ನೆಟ್ಟಗೆ ತಂದೆತಾಯಿಗಳ ಜೊತೆಗೆ ಬಾಳಿಬದುಕಬೇಕಾಗಿದ್ದ ಹುಡುಗ ಹಾಳು ಫೇಸ್ಬುಕ್ ಪೋಸ್ಟ್ ಗಳ ಚಟಕ್ಕೆ ಬಿದ್ದು ಬೀದಿಹೆಣವಾಗಿದ್ದು ಯಾವ ಚುನಾವಣಾ ರಾಜಕೀಯ ಪಸಲಿಗೇ? ಇಂಜಿನಿಯರ್ ಒಬ್ಬರ ಬಳಿ ಸಹಾಯಕನಾಗಿದ್ದ ಹರ್ಷ ರಾಷ್ಟ್ರ ವನ್ನು ಪ್ರೀತಿಸುವುದರಲ್ಲಿ ತಪ್ಪೇನಿಲ್ಲ. ಅದು ಆತನ ಕರ್ತವ್ಯ ಕೂಡ. ತನ್ನದೆ ಧರ್ಮವನ್ನು ತಾನು ಸರ್ವಸ್ವತಂತ್ರವಾಗಿ ಮತ್ತೊಬ್ಬರಿಗೆ ತೊಂದರೆಯಾಗದಂತೆ ಆಚರಿಸುವುದು ಆತನ ಆಜನ್ಮ ಸಿದ್ಧ ಹಕ್ಕು. ಆದರೆ ಇಷ್ಟು ಸರಳವಾದ ಧರ್ಮಾಚರಣೆ-ದೇಶಪ್ರೇಮದ ವಿಷಯಗಳು ಒಂದೇ ದೇಶದ, ಒಂದೇ ಬೀದಿಯ ಜನರು ಬಡಿದಾಡಿ ಸಾಯುವಷ್ಟು ಕಗ್ಗಂಟಾಗುತ್ತಿರುವುದೇಕೇ? ಅಕ್ಕಪಕ್ಕದ ಮನೆಯ ಹಿಂದೂ-ಮುಸ್ಲಿಂ ಜನರಲ್ಲಿ ಪರಸ್ಪರ ಜನಾಂಗೀಯ ದ್ವೇಷವನ್ನು ಬಿತ್ತುತ್ತಿರುವವರಾರು? ಕೆಲವು ಮತಾಂಧ ಕೋಮುವಾದಿ ಹಿಂದೂ ಸಂಘಟನೆಗಳು ಹರ್ಷನಂತಹ ಹುಡುಗರ ತಲೆಕೆಡಿಸಿ ಅನ್ಯಕೋಮಿನ ವಿರುದ್ಧ ಎತ್ತಿಕಟ್ಟಿ ಅವರ ಬದುಕನ್ನು ಹಾಳು ಮಾಡುತ್ತಿದ್ದಾರೆ. ನಕಲಿ ಹಿಂದೂ ಸಂಘಟನೆಗಳ ಕೋಮು ಪ್ರಚೋದನಕಾರಿ ಭಾಷಣ ಕೇಳಿದ ಹರ್ಷನಂತವರು ದೇಶದ್ರೋಹಿ ಭಯೋತ್ಪಾದಕರಿಗೆ, ಮತಾಂಧ ಕೋಮುವಾದಿ ಮುಸ್ಲಿಮರಿಗೆ ಕಾನೂನಿನ ಮೂಲಕ ಬುದ್ದಿ ಕಲಿಸುವ ಸಾಂವಿಧಾನಿಕ ದಾರಿಯನ್ನು ತೊರೆದು, ಬೀದಿಗಳಲ್ಲಿ ಗಣೇಶನ ಗಲಾಟೆ ಗಳಂತಹ ಹೊಡೆದಾಟ ಗಳಲ್ಲಿ ಭಾಗವಹಿಸಿ, ಲವ್ ಜಿಹಾದ್ ಹೆಸರಿನಲ್ಲಿ ಹಲ್ಲೆ, ಹೋಂಸ್ಟೇ ಮೇಲೆ ದಾಳಿನಡೆಸುತ್ತಾ ಮೈಮೇಲೆ ಪೊಲೀಸ್ ಕೇಸುಗಳನ್ನು ಹೆಟ್ಟಿಸಿಕೊಂಡು ರೌಡಿಸೀಟರ್ ಗಳಾಗಿ ಹೀಗೆ ಬೀದಿಹೆಣವಾದರೇ ಹೆತ್ತವರಿಗೆ ಯಾರು ದಿಕ್ಕು? ಹರ್ಷ ಕೂಡ ಪ್ರೋಗ್ರೆಸಿವ್ ಹಿಂದೂ ಕಾರ್ಯಕರ್ತನಾಗಿದ್ದನೆನ್ನಲಾಗುತ್ತಿದೆ. ಭಜರಂಗದಳವೆಂಬ ತನ್ನ ಸಂಘಟನೆಯ ಸಿದ್ದಾಂತದ ಕಾರಣಕ್ಕೆ ಮತಾಂತರದ ಹೊಡೆದಾಟವೇ ಆಗಲೀ ಗಣೇಶನ ಗಲಾಟೆಯೇ ಆಗಿರಲೀ ಸದಾ ಮುಂದಿರುತ್ತಿದ್ದನಂತೇ! ಮುಸ್ಲಿಮರು ಮಕ್ಕಾ ಮದೀನಕ್ಕೆ ಸಂಬಂಧಿಸಿದಂತೆ ಬ್ಯಾನರ್ ಒಂದನ್ನು ಶಿವಮೊಗ್ಗದ ಬೀದಿಯಲ್ಲಿ ಹಾಕಿದ್ದಾಗ ಇದೇ ಹರ್ಷ ಆ ಬ್ಯಾನರ್ ಕೆಳಗೇ ಹಂದಿ ತಲೆ ನೇತಾಕಿದ್ದನೆಂಬ ಆಪಾದನೆಯೂ ಇದೆ! ಮುಸ್ಲಿಂ ಯುವತಿಯರನ್ನು ಲವ್ ಮಾಡಿ ಕರೆತಂದವರನ್ನು ಮದುವೆ ಮಾಡಿಸಿ ಹಿಂದೂ ಧರ್ಮಕ್ಕೆ ಮತಾಂತರ ಮಾಡುವ ಕೆಲಸವನ್ನು ಮಾಡುತಿದ್ದನಂತೇ! ದುಡಿದು ಮನೆ ಸಾಕಬೇಕಾದ ಹರ್ಷ ನಕಲಿ ಹಿಂದುತ್ವವಾದಿ ಸಂಘಟನೆಗಳ ಸಹವಾಸಕ್ಕೆ ಬಿದ್ದು ಜೈಲುಗಳಲ್ಲಿಯೂ ಕೊಳೆತಿದ್ದಾನೆ! ಸದಾ ಇಸ್ಲಾಂ-ಮುಸ್ಲಿಂ ದ್ವೇಷದಿಂದ ಕುದಿಯುತ್ತಿದ್ದ ಹರ್ಷ 2015 ರಲ್ಲಿ ಪೈಗಂಬರ್ ಗುರುಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಒಂದನ್ನು ಹಾಕಿ ಕೆಲವು ಮುಸ್ಲಿಂ ಸಮುದಾಯದ ಯುವಕರ ವಿರೋಧ ಕಟ್ಟಿಕೊಂಡಿದ್ದನಂತೇ! ಹಾಗಿದ್ದರೇ ಹರ್ಷನಿಗೇ ಏಳು ವರ್ಷದ ಹಿಂದೆಯೇ ಮೂಹೂರ್ತ ಫಿಕ್ಸ್ ಆಗಿತ್ತೇ? ಆತನ ಚಲನವಲನಗಳ ಮೇಲೆ ನಿಗಾ ಇಟ್ಟುಕೊಂಡು ಕಾದಿದ್ದವರು ಯಾರು? ಈಗಾಗಲೇ ಹರ್ಷನ ಮೇಲೆ ಎರಡು ಬಾರಿ ಕೊಲೆಯತ್ನಗಳಾಗಿದ್ದವೆಂದು ಹೇಳಲಾಗಿದೆ.
ತಂದೆತಾಯಿಗಳ ಬಳಿ ಹರ್ಷನೇ ತನಗೆ ಕೆಲವರಿಂದ ತೊಂದರೆಯಿದೆ ಎಂದು ಹೇಳಿಕೊಂಡಿದ್ದನಂತೇ! ಈಗ ಹರ್ಷನ ತಂದೆ ತಾಯಿಗಳೇ ತಮ್ಮ ಮಗನ ಕೊಲೆಗೆ ಹತ್ತು ಲಕ್ಷ ಸುಫಾರಿ ನೀಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ! ಈಗ ದೇಶಾದ್ಯಂತ ಹಿಜಾಬ್ ಗಲಾಟೆ ಭುಗಿಲೆದ್ದಿದೆ. ಈ ಹಿಜಾಬ್ ಗಲಾಟೆಗೂ ಹರ್ಷನಕೊಲೆಗೂ ಸಂಬಂಧ ಕಲ್ಪಿಸಲಾಗಿದೆ. ಹರ್ಷನೇ ಕೇಸರಿ ಶಾಲುಗಳನ್ನು ಹಿಜಾಬ್ ಗೆ ವಿರುದ್ಧವಾಗಿ ಸರ್ಕಾರಿ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಹಂಚುತ್ತಿದ್ದ ಕಾರಣ ಈತನನ್ನೇ ಟಾರ್ಗೆಟ್ ಮಾಡಿಕೊಂಡು ಒಂದು ಕೋಮಿನವರು ಹಿಜಾಬ್ ಕಾರಣಕ್ಕಾಗಿಯೇ ಹರ್ಷನನ್ನು ಮುಸ್ಲಿಂ ಹುಡುಗರಿಗೆ ಸುಫಾರಿ ಕೊಟ್ಟು ಕೊಲ್ಲಿಸಿದ್ದಾರೆಂಬ ಗುಮಾನಿಯೆದ್ದಿದೆ. ಇದರಲ್ಲಿ ಸುಳ್ಳು ಸತ್ಯ ಎಷ್ಟಿದೆಯೋ? ಪೊಲೀಸರ ತನಿಖೆಯಿಂದ ಮಾತ್ರ ಸಾವಿನ ಸತ್ಯ ಹೊರಬರಬೇಕಿದೆ. ಇದು ಕೇವಲ ವೈಯಕ್ತಿಕ ಧ್ವೇಷವಾಗಿರುವ ಸಾಧ್ಯತೆ ಕಡಿಮೆ ಇದೆ. ಈ ಕೊಲೆಯ ಹಿಂದೆ ಯಾವುದೇ ವ್ಯಕ್ತಿಗಳ ಕೈವಾಡವಿದ್ದರೂ ಅವರನ್ನು ಗಲ್ಲಿಗೇರಿಸಿ. ಯಾವ ಸಂಘಟನೆಗಳ ಕೈವಾಡವಿದ್ದರೂ ನೀಶೇಧಿಷಿ ಎಂದು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಹೇಳಿಕೆ ನೀಡಿದ್ದಾರೆ. ಈಗ ಮಗನನ್ನು ಕಳೆದುಕೊಂಡ ಹರ್ಷನ ತಂದೆತಾಯಿಗಳಿಗೆ ನಿಜವಾಗಿಯೂ ಅನ್ಯಾಯವಾಗಿದೆ. ಬಡ ಮಧ್ಯಮ ವರ್ಗದ ಕುಟುಂಬದ ಮಕ್ಕಳು ಯಾರದ್ದೊ ದಾಳಗಳಾಗಿ ಕೋಮು ಹಿಂಸಾಚಾರಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿರುದ್ಯೋಗಿ ಯುವಕರಿಗೆ ಸರಿಯಾದ ಉದ್ಯೋಗ ಒದಗಿಸುವ ಕೆಲಸ ಮಾಡದೆ ರಾಜಕೀಯ ಪಕ್ಷಗಳು ಈ ರೀತಿ ಅಡ್ಡದಾರಿಗೆ ನೂಕಿ ದೇಶಪ್ರೇಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವ ಕೆಲಸಮಾಡುವುದು ಎಷ್ಟು ಸರಿ? ಅಭಿವೃದ್ಧಿ ಹೆಸರಿನಲ್ಲಿ ಓಟು ಕೇಳಲಾರದ ರಾಜಕೀಯ ಪಕ್ಷಗಳು ಜನರ ಭಾವನಾತ್ಮಕ ವಿಷಯಗಳನ್ನು, ಧಾರ್ಮಿಕ ಸೂಕ್ಷ್ಮ ವಿಷಯಗಳನ್ನು ಕೆದಕಿ ಸಮಾಜದಲ್ಲಿ ಶಾಂತಿ ಕದಡಿ, ಕೋಮು ಸೌಹಾರ್ದತೆ ಹಾಳುಮಾಡಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ.
ನಮ್ಮ ಧರ್ಮವೇ ಶ್ರೇಷ್ಠ ಎಂದು ಜನರನ್ನು ಭ್ರಮಾಲೋಕದಲ್ಲಿ ಮುಳುಗಿಸಿ ಧರ್ಮಧರ್ಮಗಳ ನಡುವೆ ಬಿರುಕು ಮೂಡಿಸುತ್ತಿರುವ ಈ ರಾಜಕೀಯ ಪಕ್ಷಗಳು ಜನರಿಗೆ ಒಳ್ಳೆಯ ಶಿಕ್ಷಣವನ್ನು , ಆರೋಗ್ಯಸೇವೆಯನ್ನು, ಉದ್ಯೋಗವನ್ನು ನೀಡದೆ ಕುಸಿಯುತ್ತಿರುವ ಆರ್ಥಿಕತೆಯನ್ನು ಎತ್ತಿ ಹಿಡಿಯದೇ ಕೇವಲ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಜನರನ್ನು ಬೀದಿಗೆ ತಂದು ನಿಲ್ಲಿಸುತಿದ್ದಾರೆ! ದಿನಬಳಕೆಯ ವಸ್ತುಗಳ ಬೆಲೆಯಾಗಲೀ, ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಯಾಗಲೀ ಜನರು ತಲೆಕೆಡಿಸಿಕೊಳ್ಳುವುದಿಲ್ಲ! ಧರ್ಮದ ಉಳಿವಿಗಾಗಿ ತಮ್ಮದೇ ಖರ್ಚಿನಲ್ಲಿ ಸಾಲಮಾಡಿಕೊಂಡಾದರೂ ಬಡಿದಾಡಲು ಬೀದಿಗಿಳಿಯುವಂತೆ ಜನರನ್ನು ಮಾರ್ಪಾಡು ಮಾಡಲಾಗುತ್ತಿದೆ! ಎಲ್ಲಾ ಧರ್ಮಗಳಲ್ಲೂ ಇರುವ ಮತಾಂದರೂ ತಮ್ಮ ದೇವಾಲಯಗಳ, ಮಸೀದಿಗಳ, ಚರ್ಚ್ ಗಳ ಕಪ್ಪಕಾಣಿಕೆ-ದೇಣಿಗೆ ಹುಂಡಿಕಾಸಿಗಾಗಿ ಜನರನ್ನು ದೇವರು ಧರ್ಮದ ಹೆಸರಿನಲ್ಲಿ ಆಕರ್ಷಿಸಿ ಬಂಡವಾಳ ಮಾಡಿಕೊಂಡು ಬದುಕುತ್ತಿದ್ದಾರೆ. ನಿಮ್ಮ ಧರ್ಮಕ್ಕೆ ಮತ್ತೊಬ್ಬರ ಧರ್ಮದಿಂದ, ನಿಮ್ಮ ದೇವರಿಗೆ ಮತ್ತೊಬ್ಬ ದೇವರಿಂದ ಗಂಡಾಂತರ ಎದುರಾಗಿದೆ! ಎಂದು ಸುಳ್ಳುಗಳನ್ನೆಬ್ಬಿಸಿ, ಅನ್ಯಕೋಮಿನ ಜನರನ್ನು ಪರಸ್ಪರ ಬಡಿದಾಡಿ ಕೊಂಡು ಸಾಯುವಂತೆ ಮಾಡುತ್ತಿರುವ ಎಲ್ಲಾ ಧರ್ಮಗಳ ನಾಯಕರುಗಳ, ನಕಲಿ ದೇಶಭಕ್ತ ಸಂಘಟನೆಗಳ, ಭ್ರಷ್ಟ ರಾಜಕಾರಣಿಗಳ ಮಕ್ಕಳುಗಳ್ಯಾರು ಕೋಮುಗಲಭೆಗಳಲ್ಲಿ, ಧರ್ಮ ಉಳಿಸುವ ಹೋರಾಟದಲ್ಲಿ ಬೀದಿ ಹೆಣವಾಗುವುದಿಲ್ಲ! ಧರ್ಮಕ್ಕಾಗಿ ಪ್ರಾಣ ಕೊಡಬೇಕಾಗಿರುವವರು ಬಡ ಮಧ್ಯಮ ವರ್ಗದ ಕುಟುಂಬದ ಮಕ್ಕಳುಗಳೇ! ಸತ್ಯ ಸಂಗತಿ ಎಂದರೆ ಈಗ ನಿಜವಾಗಿಯೂ ಯಾವ ಧರ್ಮಕ್ಕೂ ಯಾರಿಂದಲೂ ಗಂಡಾಂತರ ಉಂಟಾಗಿಲ್ಲ. ಪ್ರೀತಿ, ಕರುಣೆ ಸ್ನೇಹ, ಬಾತ್ರತ್ವ, ಸಹಬಾಳ್ವೆ, ಸೌಹಾರ್ದತೆ, ಸಮಾನತೆ ಸಾರುವ ಯಾವ ಧರ್ಮವನ್ನು ಯಾವ ಧರ್ಮವೂ ನುಂಗಿಹಾಕಲು ಸಾಧ್ಯವೇ ಇಲ್ಲ! ಕೆಟ್ಟ ಮನಸ್ಥಿತಿಯ ಕ್ರೂರಿಗಳಿಂದ, ಅಸಮಾನತೆ, ಅಸಹಿಷ್ಣುತೆ, ಅಸಹನೆ, ಅಜ್ಞಾನ, ಅಶಾಂತಿ, ಅನಾಗರಿಕತೆ, ಮೂಡನಂಬಿಕೆ ಬಿತ್ತುತ್ತಾ ಇರುವ ಮೂರ್ಖ ಜಾತಿವಾದಿ, ಕೋಮು ವಾದಿಗಳಿಂದ ಕೆಲವು ಧರ್ಮಗಳಿಗೆ ಹಿನ್ನಡೆ ಉಂಟಾಗಿದೆ ಅಷ್ಟೇ. ಹಿಂಸೆಯ ಮೂಲಕ ಧರ್ಮಭೋಧಿಸಲು ಹೊರಟ ಯಾವ ರಾಷ್ಟ್ರವೂ ನೆಮ್ಮದಿಯಾಗಿಲ್ಲ. ಹಿಂಸೆಯನ್ನೆ ತನ್ನ ಧರ್ಮವೆಂದು ಕೊಂಡಿರುವ ಮೂಲಭೂತವಾದಿಗಳನ್ನು ಇತಿಹಾಸ ಉಳಿಸಿ ಕೊಂಡಿಲ್ಲ! ಆದ್ದರಿಂದ ದೇಶದ ಸಮಗ್ರ ಅಭಿವೃದ್ಧಿಗೆ ಭಾರತದಲ್ಲಿರುವ ಎಲ್ಲಾ ಧರ್ಮಗಳ ಜನರ ನಡುವೆ ಸಾಮರಸ್ಯ ಸಹಬಾಳ್ವೆ, ಸಹೋದರತೆಯ ಸಮನ್ವಯತೆಯನ್ನು ಸಾಧಿಸಬೇಕಿದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ, ನಾವು ಒಂದೆ ದೇಶದೊಳಗಿನ ಜನರು ಜಾತಿಮತ ಧರ್ಮಗಳ ಹೆಸರಿನಲ್ಲಿ ಪರಸ್ಪರ ಕೋಮುಗಲಭೆ ಮಾಡಿಕೊಂಡು ಬಡಿದಾಡಿ, ಕಚ್ಚಾಡಿ ಸಾಯುತ್ತಾ ದೆಶದ ಆಂತರಿಕ ಅಭಿವೃದ್ಧಿಗೆ ನಾವೇ ಕಂಟಕವಾಗಿ, ದೇಶದ ಜನರು ಮತ್ತು ದೇಶ ಈ ಧರ್ಮಗಳ ಕಲಹದಿಂದ ಹೊರಬರಲಾಗದೇ ನರಳುತ್ತಾ ಅಭಿವೃದ್ಧಿಯಲ್ಲಿ ಕುಂಟುತ್ತಾ ಸಾಗುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಪ್ರಮುಖ ಕಾರಣ. ರಾಜಕಾರಣ. ನಮ್ಮ ದೇಶದ ರಾಜಕಾರಣದಲ್ಲಿ ಹೊಸ ಕ್ರಾಂತಿ ಮೂಡದೆ ಹೋದರೆ ಜನರು ಹೀಗೆಯೇ ಸುದೀರ್ಘವಾಗಿ, ನಿರಂತರವಾಗಿ ಈ ಭ್ರಷ್ಟಾಚಾರ, ಕೋಮುಗಲಭೆ ಗಳಿಂದ ನರಳಿ ನರಳಿ ಸಾಯಬೇಕಾಗುತ್ತದೆ.
ಶಿವಮೊಗ್ಗದ ಸೀಗೇಹಟ್ಟಿಯ ಭಜರಂಗಿ ಹರ್ಷನ ಹತ್ಯೆಯ ಹಿಂದೆ ಇರುವ ಕಿಂಗ್ ಪಿನ್ ಗಳು ಯಾರು? ಕೊಲೆಗೆ ರಾಜಕೀಯ ಹಿನ್ನೆಲೆಯ ಪ್ರೇರಣೆ ಇತ್ತೇ? ಅಥವಾ ಭಯೋತ್ಪಾದಕ ಸಂಘಟನೆಗಳ ಕೈವಾಡ ಇರುವ ಬಗ್ಗೆ ಮಾಹಿತಿ ಇದ್ದರೆ ಪೊಲೀಸರು ಪತ್ತೆ ಹಚ್ಚಬೇಕಿದೆ. ಈಗ ಕೊಲೆಗಡುಕರಾದ ಕಾಸಿಪ್. ನದೀಂ, ಜಿಲಾನಿ, ಆಸಿಫ್ ಉಲ್ಲಾಖಾನ್, ರಿಯಾನ್ ಶರೀಫ್,ನಿಹಾನ್, ಅಪ್ನಾನ್, ಮುಜಾಹಿದ್ದೀನ್, ಸಲ್ಮಾನ್, ಚಿಕ್ಕು ಇವರೆಲ್ಲರೂ ಸ್ಥಳೀಯರೇ ಆಗಿದ್ದು ಇವರಲ್ಲಿ ಕೆಲವರು ಹರ್ಷನ ಮನೆಯ ಬಳಿಯ ಪಕ್ಕದ ಏರಿಯಾದವರೇ ಆಗಿದ್ದಾರೆ. ಆತನಿಗೂ ಚಿರಪರಿಚಿತರೇ. ಬಿಜೆಪಿಯವರು ಕೊಲೆಗಡುಕರಿಗೆ ಕೇರಳದ ಗುಪ್ತಸ್ಥಳದಲ್ಲಿ ಹತ್ಯೆಗೆ ತರಬೇತಿ ನೀಡಲಾಗಿದೆ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೊಲೆಗಾರರು ಕೊಲೆಯ ನಂತರ ಬೆಂಗಳೂರಿನಲ್ಲಿ ಬಂದು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದರೆಂಬುದು ಕೊಲೆಯ ಸಂಚಿನ ರೂವಾರಿಗಳು ಕರ್ನಾಟಕದ ಹಲವು ಭಾಗಗಳಲ್ಲಿ ಇದ್ದಾರೆಂಬುದನ್ನು ಮೇಲ್ನೋಟಕ್ಕೆ ತೋರಿಸುತ್ತಿದೆ. ಬಿಜೆಪಿ ಪಕ್ಷ ಈ ಕೊಲೆಯ ಹಿಂದೆ ಪಿ.ಎಫ್.ಐ. ಕ್ಯಾಂಪಸ್ ಫ್ರಂಟ್ ಸಂಘಟನೆಗಳ ಕೈವಾಡ ಇದೆ ಎಂದು ಆರೋಪಿಸುತ್ತಿದ್ದಾರೆ. ಹಿಜಾಬ್ ಗಲಾಟೆಯ ಹಿಂದೆಯೂ ಇದೇ ಸಂಘಟನೆಗಳ ಹೆಸರನ್ನೇ ಉಲ್ಲೇಖಿಸಲಾಗಿತ್ತು! ಹಾಗೆಯೇ ಎಸ್.ಡಿ.ಪಿ.ಐ. ಎಂಬ ರಾಜಕೀಯ ಪಕ್ಷದ ಸಹಕಾರವೂ ಬಜರಂಗೀ ಹರ್ಷನ ಕೊಲೆಯಲ್ಲಿ ಇರುವ ಸಾಧ್ಯತೆಯನ್ನು ಪದೆ ಪದೆ ಪುನರುಚ್ಚರಿಸಿ, ಈ ಮುಸ್ಲಿಂ ಸಂಘಟನೆಗಳನ್ನು ಬ್ಯಾನ್ ಮಾಡುವ ಮಾತುಗಳಾಗುತ್ತಿವೆ! ಈ ಕೇಸರೀ ಆಕ್ಟಿವಿಸ್ಟ್ ಹರ್ಷನಿಗೆ ಇಸ್ಲಾಮಿಕ್ ಟೆರರಿಸ್ಟ್ ಗ್ರೂಪ್ ಗಳಿಂದ ಪ್ರಾಣಬೆದರಿಕೆ(ಪತ್ವಾ)ಇತ್ತು ಎನ್ನಲಾಗಿದೆ! ಈಗ ಬೆಂಗಳೂರಿನ ಒಬ್ಬ ಸಂಸದ ಮತ್ತಿಬ್ಬರು ಹಿಂದೂ ಸಂಘಟನೆಗಳ ಕಾರ್ಯಕರ್ತರೂ(ಸಿದ್ದಾಪುರ ಸುತ್ತಮುತ್ತ ಮಸೀದಿಗಳ ಮೈಕ್ ತೆಗೆಸಿದವರು) ಹಿಟ್ ಲಿಸ್ಟ್ ನಲ್ಲಿರುವ ಶಂಕೆಯಿದೆ.
ರಾಜ್ಯದ ಪೊಲೀಸರು ಅವರಿಗೂ ರಕ್ಷಣೆ ಒದಗಿಸಿದ್ದಾರಂತೇ! ಈ ಹಿಟ್ ಲಿಸ್ಟ್ ಪಟ್ಟಿ ತಯಾರಿಸುತ್ತಿರುವ ಸಮಾಜಘಾತುಕ ಶಕ್ತಿಗಳು ಯಾರು? ಈ ರಾಜ್ಯದ ಕಾನೂನು ಸುವ್ಯವಸ್ಥೆಗೆ ಏನಾಗಿದೇ? ಇಂಟೆಲಿಜೆನ್ಸ್ ಫೇಲ್ಯೂರ್ ಆಗಿದೆಯಾ? ರಾಜ್ಯದ ಗ್ರಹಸಚಿವರ ಜಿಲ್ಲೆಯಲ್ಲೇ ವಾರಕ್ಕೆ ನಾಲ್ಕು ಕೊಲೆಗಳಾಗುತ್ತಿವೆ! ಈ ಸಂಘಟಿತ ಅಪರಾಧಿ ಕ್ರತ್ಯವೆಸಗಲು ಸಂಚು ರೂಪಿಸುತ್ತಿರುವ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಪೊಲೀಸರು ಮತ್ತಷ್ಟು ಚಾಣಾಕ್ಷತೆ ತೋರಿಸಬೇಕು. ಹಿಂದೂ ಭಯೋತ್ಪಾದಕ ಸಂಘಟನೆಗಳು ಮೂಡನಂಬಿಕೆ ವಿರೋಧಿ ಹೋರಾಟಗಾರರನ್ನು, ಪ್ರಗತಿಪರ ಚಿಂತಕರನ್ನು, ಪತ್ರಕರ್ತರು, ಬರಹಗಾರರನ್ನು ಗುರಿಯಾಗಿಸಿಕೊಂಡು ನಿಗೂಢ ತಂಡಕಟ್ಟಿ ಕೊಲೆಮಾಡಿಸುತಿದ್ದಾಗ ಪತ್ರಕರ್ತೆ ಗೌರಿ ಲಂಕೇಶ್ ರವರ ಕೊಲೆ ಪ್ರಕರಣವನ್ನು ನಮ್ಮ ಕರ್ನಾಟಕದ ಪೊಲೀಸರೇ ಬೇದಿಸುವವರೆಗೂ ಯಾರಿಗೂ ತಿಳಿದೇ ಇರಲಿಲ್ಲ. ಹಿಂದೂ ಸಂಘಟನೆಗಳ ಕಾರ್ಯಕರ್ತರೂ ಈಗ ಭಯೋತ್ಪಾದಕ ಕ್ರತ್ಯವೆಸಗಲು ಹಿಂದೆ ಮುಂದೆ ನೋಡುತ್ತಿಲ್ಲವೆಂಬುದು ಮಾಲೆಗಾಂವ್ ಬಾಂಬ್ ಬ್ಲಾಸ್ಟ್ ನಂತರ ಸಾಬೀತಾಗಿದೆ. ಮತ್ತೊಂದೆಡೆ ಕರ್ನಾಟಕದವನೇ ಆದ ಮುಜಾಹಿದ್ದೀನ್ ಸಂಘಟನೆಯ ಭಯೋತ್ಪಾದಕ ಯಾಸಿನ್ ಭಟ್ಕಳ್ ನ ಗ್ಯಾಂಗ್ ಸರಣಿ ಬಾಂಬ್ ಬ್ಲಾಸ್ಟ್ ನಡೆಸಿ ಇತ್ತೀಚೆಗೆ ತಾನೆ ಕೋರ್ಟ್ ತೀರ್ಪು ನೀಡಿ ಶಿಕ್ಷೆ ವಿಧಿಸಿದೆ. ಈ ದೇಶದಲ್ಲಿ ಇಂಡಿಯಾ ಪಾಕಿಸ್ತಾನ ವಿಭಜನೆ ಯಾದಾಗಿನಿಂದಲೂ ಇಲ್ಲಿರುವ ಮುಸ್ಲಿಮರು ಭಾರತದವರೇ ಆಗಿದ್ದರೂ, ಬಲಪಂಥೀಯ ಮನಸ್ಥಿತಿ ಜನರು ಗುಪ್ತವಾಗಿ ಸಂಘಟನೆ ಕಟ್ಟಿಕೊಂಡು ಅವರನ್ನು ಧ್ವೇಷಿಸುತ್ತಿರುವುದು ಬಾಬ್ರಿ ಮಸೀದಿ ಧ್ವಂಸ ಪ್ರಕರಣ. ಗುಜರಾತ್ ಹತ್ಯಾಕಾಂಡದಲ್ಲಿ ಸಾಬೀತಾಗಿದೆ. ಇವರ ವಿರುದ್ಧ ಭಾರತದಲ್ಲೇ ಇರುವ ಕೆಲವು ಇಸ್ಲಾಂ ಮೂಲಭೂತವಾದಿ ಸಂಘಟನೆಗಳು, ಮದರಸಾ ಗಳೂ, ಒಳಗೊಳಗೆ ಭಯೋತ್ಪಾದಕರೊಡನೆ ಕೈಜೋಡಿಸಿರುವುದು ಸುಳ್ಳೇನಲ್ಲ.
ಭಾರತ ಸ್ವಾತಂತ್ರ ಬಂದಾಗಿನಿಂದಲೂ ಈ ಆಂತರಿಕ ವಿಭಿನ್ನ ಧರ್ಮಾಚರಣೆಯ ವೈರುಧ್ಯಗಳಿಂದ ಒಳಗೊಳಗೆ ಬೇಯುತ್ತಾ ನಲುಗುತ್ತಿದೆ. ಬಾತ್ರತ್ವ, ಸಹಬಾಳ್ವೆ ಬೋಧಿಸಿ ಭಾರತೀಯರು ನಾವೆಲ್ಲರೂ ಒಂದು ಎಂದು ಈ ಗಾಯವನ್ನು ವಾಸಿ ಮಾಡಬೇಕಾದ ರಾಜಕೀಯ ಪಕ್ಷಗಳು ತಮ್ಮ ಒಟಿನ ರಾಜಕಾರಣಕ್ಕಾಗಿಯೇ ಈ ಹಿಂದೂ-ಮುಸ್ಲಿಂ ಆಂತರಿಕ ಕಚ್ಙಾಟಗಳಿಗೆ ತುಪ್ಪಸುರಿಯುತ್ತಾ, ಅಧಿಕಾರದ ಚುಕ್ಕಾಣಿ ಹಿಡಿಯಲು ತಾವೇ ಕೋಮುಗಲಭೆ ಸ್ರಷ್ಠಿಸಿ ಜನರನ್ನು ದೇವರು ಧರ್ಮದ ಹೆಸರಿನಲ್ಲಿ, ಮಂದಿರ-ಮಸೀದಿ ಮತಾಂತರ, ಲವ್ ಜೆಹಾದ್ , ಹಿಜಾಬ್-ಕೇಸರಿ ಶಾಲುಗಳ ಗಲಾಟೆಗಳಲ್ಲಿ ಮುಳುಗೇಳುವಂತೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೋಮುಗಲಭೆ ಗಳಿಗೆ ಕಾರಣವಾಗುತ್ತಿರುವ ನಿಜವಾದ ಸಂಘಟನೆಗಳನ್ನು ತನಿಖೆ ನಡೆಸಿ ಪತ್ತೆಹಚ್ಚಿ ನಿಷೇಧಿಸಿ ಸೂಕ್ತ ಕ್ರಮ ಕೈಗೊಳ್ಳಲಿ. ಭಜರಂಗದಳದ ಕಾರ್ಯಕರ್ತ ಹರ್ಷನ ಹೆಣವನ್ನು 144 ನಿಷೇದಾಜ್ಞೆಯನ್ನು ಉಲ್ಲಂಘಿಸಿ ಮೆರವಣಿಗೆ ಮಾಡಿಸುವ ಬಿಜೆಪಿ ಸಂಸದರು, ಸಚಿವರು, ಶಾಸಕರ ಉದ್ದೇಶ ವೇನಿತ್ತು? ಶಿವಮೊಗ್ಗದ ಬೀದಿಗಳಲ್ಲಿ ಅಮಾಯಕ ಬೀದಿ ವ್ಯಾಪಾರಿಗಳ ಮೇಲೆ ದಾಳಿಮಾಡಿದ ಉದ್ರಿಕ್ತ ಧರ್ಮಾಂಧರ ಗುಂಪು ಹಾಡು ಹಗಲೇ ಮಚ್ಚು ಲಾಂಗು, ದೊಣ್ಣೆಗಳನ್ನಿಡಿದು ರಸ್ತೆಗಳಲ್ಲಿ ನಿಂತಿದ್ದ ಮೂವತ್ತಕ್ಕೂ ಹೆಚ್ಚಿನ ವಾಹನಗಳನ್ನು ಪುಡಿಮಾಡಿದ್ದಾರೆ. ಹದಿನೈದು ಜನರಿಗೆ ಗಂಭೀರ ಮಾರಣಾಂತಿಕ ಗಾಯಗಳಾಗಿವೆ. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಒಂದು ಕೋಮಿನ ಮನೆಗಳಿಗೆ ನುಗ್ಗಿ ಕಲ್ಲು ತೂರಲಾಗಿದೆ. ಇಷ್ಟೆಲ್ಲಾ ನಡೆದಿರುವುದು ಆಡಳಿತ ಪಕ್ಷದ ರಾಜಕೀಯ ನಾಯಕರ ಇಶಾರೆಯ ಮೇರೆಗೆ! ಶಿವಮೊಗ್ಗ ಈಗಲೂ ಯಾವ ಕ್ಷೇತ್ರದಲ್ಲಾದರೂ ಕೋಮುಗಲಭೆ ಯಿಂದ ಹೊತ್ತಿ ಉರಿಯಬಹುದು. ಬೂದಿ ಮುಚ್ಚಿದ ಕೆಂಡದಂತೆ ಇರುವ ಶಿವಮೊಗ್ಗದ ಮುಸ್ಲಿಮರನ್ನು ಕಾಪಾಡಿ ಎಂಬ #ಸೇವ್ ಶಿವಮೊಗ್ಗ ಮುಸ್ಲಿಂ ಹ್ಯಾಸ್ ಟ್ಯಾಗ್ ದೇಶದಾದ್ಯಂತ ಟ್ರೆಂಡಿಂಗ್ ನಲ್ಲಿ ಮೂರನೇ ಸ್ಥಾನದಲ್ಲಿದ್ದರೇ, #ಹರ್ಷ ನ ಹೆಸರಿನ ಹ್ಯಾಸ್ ಟ್ಯಾಗ್ ದೇಶದಾದ್ಯಂತ ಎರಡನೇ ಸ್ಥಾನದಲ್ಲಿದೆಯೆಂದರೇ ನೀವೇ ಊಹಿಸಿಕೊಳ್ಳಿ ಕೋಮುಗಲಭೆಯ ಭಯದಲ್ಲಿ ಶಿವಮೊಗ್ಗದ ಜನರು ಜೀವ ಕೈಯಲ್ಲಿಡಿದು ಹೇಗೆ ನಡುಗುತ್ತಿರುವ ಹುದು! ಪೊಲೀಸ್ ಇಲಾಖೆ ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿಕೊಂಡು ಶಾಂತಿ ಸೌಹಾರ್ದತೆ ಕಾಪಾಡಲು ಟೊಂಕಕಟ್ಟಿ ನಿಂತಿದ್ದಾರೆ. ಒಬ್ಬ ಬೇಜವಾಬ್ದಾರಿ ಸಚಿವ ಈಶ್ವರಪ್ಪನೇ ದೇಶದ ತ್ರಿವರ್ಣ ಧ್ವಜವನ್ನು ಕಿತ್ತು ಕೇಸರಿ ಧ್ವಜವನ್ನು ಕೆಂಪುಕೋಟೆ ಮೇಲೆ ಹಾಕುತ್ತೇವೆಂದು ದೇಶದ್ರೋಹಿ ಸಂದೇಶವನ್ನು ಯಾವ ಅಳುಕಿಲ್ಲದೆ ಕೊಡುತ್ತಾನೆಂದರೇ, ಇದನ್ನು ಕೇಳಿಸಿಕೊಂಡ ಈ ಕೇಸರಿ ಆಕ್ಟಿವಿಸ್ಟ್ ಗಳಿಗೆ ಮುಸ್ಲಿಮರ ಮೇಲೆ ವಿನಾಕಾರಣ ಮುರಿದುಕೊಂಡು ಬೀಳುವಂತೆ ರಣ ವೀಳ್ಯಕೊಟ್ಟಂತಾಗುವುದಿಲ್ಲವೇ? ಹಿಂದೂ ಕಾರ್ಯಕರ್ತರ ಕೂಲೆಗಳು ಇದೇ ಮೊದಲಲ್ಲ. ಹರ್ಷನದೇ ಕೊನೆಯಾಗುತ್ತದೆಂಬ ಗ್ಯಾರಂಟಿಯೇನೂ ಇಲ್ಲ. ಬೆಂಗಳೂರಿನಲ್ಲಿ ಗಣವೇಶ ತೊಟ್ಟು ಪಥಸಂಚಲನ ಮುಗಿಸಿ ಮನೆಗೆ ಹೊರಟಿದ್ದ ರುದ್ರೇಶ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಲಾಗಿತ್ತು. ಕರಾವಳಿ ತೀರದ ಊರುಗಳಲ್ಲಿ ಹಿಂದೂ ಮುಸ್ಲಿಂ ಸಂಘಟನೆಗಳ ಸಂಘರ್ಷ ಇಂದು ನೆನ್ನೆಯದಲ್ಲ. ಇಲ್ಲಿ ಹಿಂದೂ ಕಾರ್ಯಕರ್ತರ ಕೊಲೆಗಳೂ ಸಾಕಷ್ಟು ಬಾರಿ ಅನುಮಾನಾಸ್ಪದ ರೀತಿಯಲ್ಲಿ ಆಕ್ಸಿಡೆಂಟ್ ಆಗಿ ಪತ್ತೆಯಾಗಿವೆ!ಪರೇಶ್ ಮೇಸ್ತಾ ಎಂಬ ಹಿಂದೂ ಕಾರ್ಯಕರ್ತನನ್ನು 2017 ರಲ್ಲಿ ನಡೆದಿದ್ದ ಹೊನ್ನಾವರ ಪಟ್ಟಣದ ಕೋಮುಗಲಭೆ ವೇಳೆ ಕೆರೆಯಲ್ಲಿ ಮುಳುಗಿಸಿ ಸಾಯಿಸಲಾಗಿತ್ತು!ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳರನ್ನು ಬಿ.ಸಿ.ರೋಡ್ ಸಮೀಪ ಹತ್ಯೆ ಮಾಡಲಾಗಿತ್ತು.ಕಲಬುರಗಿಯ ಅಫಜಲಪುರದ ಮಹಾದೇವ್ ಕಾಳೆ, ಬಳ್ಳಾರಿಯ ರಮೇಶ್ ಬಂಡಿ,ತಿಪಟೂರಿನ ತಿಪ್ಪೇಶ್,ಬೀದರ್ ಜಿಲ್ಲೆಯ ಸುನಿಲ್ ಡೋಂಗ್ರೆ ಹೀಗೆ ಹಲವಾರು ಕಡೆ ರಾಜ್ಯದಲ್ಲಿ ಮುಂಚಿನಿಂದಲೂ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆಯುತ್ತಲೇ ಇವೆ. ಆದರೆ ಪೊಲೀಸರ ಸೂಕ್ತ ತನಿಖೆಯಿಂದ ಮಾತ್ರ ಕೊಲೆಗಡುಕರಿಗೆ ಕಠಿಣ ಶಿಕ್ಷೆ ಕೊಡಿಸಲು ಸಾಧ್ಯ. ಅದನ್ನು ಬಿಟ್ಟು ರಾಜಕಾರಣಿಗಳು ಅಮಾಯಕರನ್ನು ಗುರಿಯಾಗಿಸಿಕೊಂಡು ಕೋಮುಗಲಭೆ ಗಳನ್ನೆಬ್ಫಿಸಲು ಪ್ರಯತ್ನಿಸುವುದು ಈ ರಾಜ್ಯದ ದುರಂತ. ರಾಜ್ಯದ ಯಾವ ಜಿಲ್ಲೆಯಲ್ಲಾದರೂ ಹರ್ಷನ ಕೊಲೆಯ ಕಿಚ್ಚು ಹೊತ್ತಿ ಉರಿದರೂ ಅಚ್ಚರಿಯೇನಿಲ್ಲ! ರಿವೇಂಜ್ ಕಿಲ್ಲಿಂಗ್ ಗಳಾಗುವ ಎಲ್ಲಾ ಲಕ್ಷಣಗಳೂ ಇವೆಯಂತೆ! ಶಿವಮೊಗ್ಗದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿ ಶವಯಾತ್ರೆಯ ಗಲಭೆಯನ್ನು ನಿಯಂತ್ರಿಸಲು ಶ್ರಮಿಸಿದ ಪೊಲೀಸರ ಕಾರ್ಯಾಚರಣೆಯಿಂದಾಗಿ ಹರ್ಷನ ಶವಯಾತ್ರೆಯಲ್ಲಿ ಒಂದೆರಡು ಹೆಣ ಬೀಳಿಸಿ ಕೋಮುಗಲಭೆಯ ಲಾಭ ಪಡೆಯಲು ಹವಣಿಸಿದ್ದ ರಾಜಕೀಯ ಪುಡಾರಿಗಳ ಆಸೆ ನೆರವೇರಲಿಲ್ಲ! ರಾಜಕಾರಣಿಗಳು ನೀಡುತ್ತಿರುವ ಪರಿಹಾರದ ಚೆಕ್ಕುಗಳು ಹರ್ಷನ ಜೀವಕ್ಕೆ ಬೆಲೆಕಟ್ಟಲು, ಆತನ ತಂದೆ ತಾಯಿಗಳಿಗೆ ಸಮಾಧಾನಿಸಲು ಸಾದ್ಯವೇ ಇಲ್ಲ. ‘ಹರ್ಷಾ ಅಮರ್ ರಹೇ!’ ಎಂದು ಪ್ರಾರಂಭವಾಗಿರುವ ಹರ್ಷೋದ್ಗಾರದ ಒಣ ಕೂಗುಗಳು, ಹರ್ಷನ ಕುಟುಂಬದ ಹೆಸರಿನಲ್ಲಿ ಆನ್ಲೈನ್ ನಲ್ಲಿ ನಡೆಯುತ್ತಿರುವ ಚಂದಾ ಚಂದಾ ಎತ್ತುವ ಅಭಿಯಾನಗಳು, ಹುತಾತ್ಮನಾಗುವ ಹುಚ್ಚು ಹಿಡಿಸಿ ಮತ್ಯಾರನ್ನೋ ಈ ಬೀದಿಹೆಣವಾಗುವ ಕೆಲಸಕ್ಕೆ ಕೈ ಬೀಸಿ ಕರೆಯದಿರಲೀ..