ಬೆಂಗಳೂರು,ಅ,02: ಇತ್ತೀಚೆಗಷ್ಟೇ ಒಂದೇ ಕುಟುಂಬದ ಐವರು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಅದೇ ರೀತಿಯ ಘಟನೆ ಮರುಕಳಿಸಿದ್ದು,ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಬೆಂಗಳೂರು ಉತ್ತರ ತಾಲೂಕಿನ ಪ್ರಕೃತಿ ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ.
ತಾಯಿ ಸೇರಿದಂತೆ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದು ಬಳಕಿಗೆ ಬಂದಿದೆ.
ಆತ್ಮಹತ್ಯೆಗೆ ಶರಣಾದವರನ್ನು ವಸಂತಾ(40), ಯಶ್ವಂತ್(15), ನಿಶ್ಚಿತಾ(6) ಎಂದು ಗುರುತಿಸಲಾಗಿದೆ. ರೂಂ ಒಂದರಲ್ಲಿ ತಾಯಿ ಮಗಳು ಒಂದೇ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೊಂದು ಕಡೆ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಕೊರೊನಾ ಸೋಂಕು ತಗುಲಿ ವರ್ಷದ ಹಿಂದೆಯಷ್ಟೇ ವಸಂತಾ ಅವರ ಪತಿ ಮೃತಪಟ್ಟಿದ್ದರು. ಪತಿ ಸಾವಿನ ಬಳಿಕ ಪತ್ನಿ ಮಾನಸಿಕವಾಗಿ ನೊಂದಿದ್ದರು. ಇದರಿಂದ ಹೊರಬಾರಲಾಗದೆ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಮನೆ ಕಟ್ಟಲು ಪತಿ ೪೦ ಲಕ್ಷ ಸಾಲಮಾಡಿದ್ದರು,ಪತಿ ಸಾವಿನ ನಂತರ ಸಾಲ ತೀರಸಲು ಕಷ್ಟವಾಗಿದೆ ಸಂಬಂಧಿಕರು ಯಾರೂ ಸಹಾಯ ಮಾಡದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಗೂ ಮುನ್ನ ಮರಣ ಪತ್ರ ಬರೆದಿರುವ ವಸಂತ ಸಾಲತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದು,ಮನೆ ಮಾರಿ ಸಾಲಗಾರರಿಗೆ ಸಾಲ ಕೊಡಿ ಮತ್ತು ಹುಳಿದ ಹಣವನ್ನು ಅನಾಥಾಶ್ರಮಕ್ಕೆ ನೀಡಿ ಎಂದು ಬರೆದಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾದನಾಯಕನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೂವರು ಕೆಲ ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮನೆಯಿಂದ ಹೊರಬಾರದ ಕಾರಣ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಮನೆಯ ಬಾಗಿಲು ಮುರಿದು ನೋಡಿದಾಗ ಮೂವರು ಸಾವನ್ನಪ್ಪಿರುವ ವಿಷಯ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ.