ಬೆಂಗಳೂರು,ಜು.14- ಐಷಾ ರಾಮಿ ಕಾರುಗಳ ಮಾಲೀಕರನ್ನು ನಂಬಿಸಿ ಕಾರು ಪಡೆದು ಒತ್ತೆಯಿಡುತ್ತಿದ್ದ ಬೃಹತ್ ಜಾಲವನ್ನು ಭೇಟೆಯಾಡಿರುವ ಸಿಸಿಬಿ ಪೊಲೀಸರು, ಹಲವರನ್ನು ಬಂಧಿಸಿ 5 ಕೋಟಿ ಮೌಲ್ಯದ 39 ಕಾರುಗಳು ಹಾಗೂ 58 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ನಗರದ ನಿವಾಸಿಗಳಾದ ನಸೀಬ್, ಮೊಹಮ್ಮದ್ ಅಜುಂ ಮತ್ತು ಮಹೀರ್ ಖಾನ್ ಬಂಧಿತರು. ಆರೋಪಿಗಳು ಐಷಾರಾಮಿ ಕಾರುಗಳನ್ನು ಮರುಮಾರಾಟ ಮಾಡಿಸಿಕೊಡುತ್ತೇವೆ ಎಂದು ಮಾಲೀಕರನ್ನು ನಂಬಿಸಿ ಅವರಿಂದ ಕಾರುಗಳನ್ನು ಪಡೆದುಕೊಳ್ಳುತ್ತಿದ್ದರು. ತದನಂತರ ಮಾಲೀಕರ ಅನುಮತಿ ಇಲ್ಲದೆ ಬೇರೆಯವರ ಬಳಿ ಒತ್ತೆ ಇಡುತ್ತಿದ್ದರು. ಅಲ್ಲದೆ, ಮಾರಾಟ ಮಾಡಿ ಹಣ ಪಡೆದುಕೊಂಡು ಮಾಲೀಕರಿಗೆ ಹಣವನ್ನು ನೀಡದೆ, ಕಾರನ್ನು ವಾಪಸ್ ನೀಡದೆ ವಂಚಿಸುತ್ತಿದ್ದರು.
ಮಾಲೀಕರು ಹಣ ಕೇಳಿದರೆ ಅವರಿಗೆ ಬೆದರಿಕೆಯೊಡ್ಡುತ್ತಾ ತಲೆಮರೆಸಿಕೊಂಡಿದ್ದರು. ಈ ಮೂವರು ವಂಚಕರನ್ನು ಇದೀಗ ಸಿಸಿಬಿ ಪೊಲೀಸರು ಬಂಧಿಸಿ ಚಿತ್ರದುರ್ಗ, ದಾವಣಗೆರೆ, ಭಟ್ಕಳ, ಮೈಸೂರು ಹಾಗೂ ಇನ್ನಿತರ ಕಡೆಗಳಲ್ಲಿ ಮಾರಾಟ ಮಾಡಿದ್ದ ಐಷರಾಮಿ ಕಾರುಗಳಾದ ಕ್ಯಾರವೆಲ್, ಫಾರ್ಚೂನರ್, ಕಿಯಾ ಸೆಲ್ಟೊಸ್, ಎಂಡೀವರ್, ಫೋಕ್ಸ್ ವ್ಯಾಗನ್, ಸ್ಕೋಡ ರ್ಯಾಪಿಡ್, ಎಕ್ಸ್‍ಯುವಿ-100 ಕಾರುಗಳು ಸೇರಿದಂತೆ 3 ಕೋಟಿ ಮೌಲ್ಯದ ಒಟ್ಟು 19 ಐಷರಾಮಿ ಕಾರುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಇನ್ನು ಹಲವರಿಗೆ ವಂಚನೆ ಮಾಡಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆರೋಪಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆ, ಪುಲಿಕೇಶಿನಗರ ಮತ್ತು ವೈಯಾಲಿಕಾವಲ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಈ ಕಾರ್ಯಾಚರಣೆಯನ್ನು ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್, ಉಪಪೊಲೀಸ್ ಆಯುಕ್ತರಾದ ಬಿ.ಎಸ್. ಅಂಗಡಿ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪರಮೇಶ್ವರ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕೈಗೊಂಡು ವಂಚಕರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪೂರ್ವ ವಿಭಾಗ ಪೊಲೀಸರ ಕಾರ್ಯಾಚರಣೆ:
ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿಧ ಪ್ರಕರಣಗಳಲ್ಲಿ 2.25 ಕೋಟಿ ರೂ. ಮೌಲ್ಯದ 20 ವಿವಿಧ ಮಾದರಿಯ ಕಾರುಗಳು ಹಾಗೂ 58 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರುಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಗೋವಿಂದಪುರ ಠಾಣೆ ಪೊಲೀಸರು ಭೇದಿಸಿ ಒಬ್ಬಾತನನ್ನು ಬಂಧಿಸಿ 1.80 ಕೋಟಿ ಮೌಲ್ಯದ 20 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಜಿ ಹಳ್ಳಿ ಠಾಣೆ ವ್ಯಾಪ್ತಿಯ ಎಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಲು ಬಂದಿದ್ದ ಆರೋಪಿಗಳು 75 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದರು. ಈ ಆರೋಪಿಗಳನ್ನು ಪತ್ತೆ ಮಾಡಿ ಹಣವನ್ನು ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ವಾಹನ ಪತ್ತೆಯಾಗಿರಲಿಲ್ಲ. ಈ ನಿಟ್ಟಿನಲ್ಲಿ ವಾಹನವನ್ನು ಪತ್ತೆಮಾಡುವ ಸಲುವಾಗಿ ಗೋವಿಂದಪುರ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ತಂಡ ತನಿಖೆ ಕೈಗೊಂಡಿತ್ತು.
ಆ ಸಂದರ್ಭದಲ್ಲಿ ಟಯೋಟಾ ಇನೋವಾ ಕಾರು ಚಾಲಕ ಶಬ್ಬೀರ್‍ಖಾನ್ ಎಂಬಾತನನ್ನು ವಿಚಾರಣೆ ಮಾಡಿದಾಗ ಅಸಮರ್ಪಕ ಮಾಹಿತಿ ನೀಡಿದ್ದ ಕಾರಣ ವಿಚಾರಣೆ ನಡೆಸಿದಾಗ ತನ್ನ ಸ್ನೇಹಿತರಾದ ಶರಣ್ ಮತ್ತು ಶಕ್ತಿವೇಲು ಎಂಬುವವರೊಂದಿಗೆ ಸೇರಿಕೊಂಡು ಕಾರುಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದನು. ಈ ಪ್ರಕರಣದಲ್ಲಿ ಶಬ್ಬೀರ್‍ಖಾನ್‍ನನ್ನು ಬಂಧಿಸಿದ್ದು, ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಒಟ್ಟಾರೆ 5 ಇನೋವಾ, 2 ಟೆಂಫೋಟ್ರಾವೆಲರ್, ಮಹೀಂದ್ರ ಎಕ್ಸ್‍ಯುವಿ ವಾಹನ, ಮಹೀಂದ್ರಾ ವೆರಿಟ್ಟೋ, ಟಯೋಟಾ ಟಯೋಸ್ 5, ಶಿಫ್ಟ್ ಡಿಸೈರ್ 3, ಹೋಂಡಾ ಅಸೆಟ್ 1, ಟಾಟಾ ವಿಸ್ತಾ 1, ಮಾರುತಿ ಜೆನ್ 1 ಸೇರಿ ಒಟ್ಟು 1 ಕೋಟಿ 80 ಲಕ್ಷ ಮೌಲ್ಯದ 20 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.