ಬೆಂಗಳೂರು,ಏ,೧೪– ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್ ನಿಧನ ಹೊಂದಿದ್ದಾರೆ.
ಅವರಿಗೆ ೭೬ ವರ್ಷ ವಯಸ್ಸಾಗಿತ್ತು ತೀವ್ರ ಹೃದಯಾಘಾತದಿಂದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗಿನ ಜಾವ ೨-೩೦ಕ್ಕೆ ಕೊನೆಯಿಸಿರೆಳೆದರು ಎಂದು ಅವರ ಕುಟುಂಬ ತಿಳಿಸಿದೆ
ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಅವರ ಪಾರ್ಥೀವ ಶರೀರ ಇಡಲಾಗಿದ್ದು ನಟರು,ಕಲಾವಿದರು ಅವರ ದರ್ಶನ ಮಾಡಲಿದ್ದಾರೆ
೧೯೪೯ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಜನಿಸಿದರು. ೧೯೮೫ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಬೆಟ್ಟದ ತಾಯಿ’, ‘ಪೊಲೀಸ್ ಹೆಂಡತಿ’, ‘ಶ್..’, ‘ತರ್ಲೆ ನನ್ಮಗ’ ಹೀಗೆ ಹಲವು ಚಿತ್ರಗಳಲ್ಲಿ ಅವರು ನಟಿಸಿದರು. ೨೦೧೬ರಿಂದ ಈಚೆಗೆ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆಕ್ಟೀವ್ ಆಗಿರಲಿಲ್ಲ. ೨೦೨೨ರ ‘ಮಠ’ ಹಾಗೂ ೨೦೨೩ರ ‘ಉಂಡೇನಾಮ’ ಚಿತ್ರದಲ್ಲಿ ಅವರು ನಟಿಸಿದ್ದರು.
ಜನಾರ್ಧನ್ ಅವರಿಗೆ ಬ್ಯಾಂಕ್ ಜನಾರ್ಧನ್ ಎಂದು ಹೆಸರು ಬರಲೂ ಕೂಡ ಕಾರಣವಿದೆ. ಜನಾರ್ಧನ್ ಅವರು ಚಿತ್ರದುರ್ಗದ ಸಮೀಪದ ಹೊಳಲ್ಕೆರೆ ಬಳಿಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಕಲೆಯ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ, ನಾಟಕಗಳನ್ನು ಮಾಡಿಕೊಂಡಿದ್ದರು. ಅವರ ನಾಟಕವನ್ನು ನೋಡಿ ಧೀರೇಂದ್ರ ಗೋಪಾಲ್ ಅವರು ಇಂಪ್ರೆಸ್ ಆದರು. ಬೆಂಗಳೂರಿಗೆ ಬರುವಂತೆ ಅವರು ಹೇಳಿದ್ದರು.
ನಂತರ ಒಂದೂವರೆ ವರ್ಷ ಬಿಟ್ಟು ಜನಾರ್ಧನ್ ಅವರು ಬೆಂಗಳೂರಿಗೆ ಬಂದರು. ಅವರು ‘ಊರಿಗೆ ಉಪಕಾರಿ’ ಸಿನಿಮಾದಲ್ಲಿ ವಜ್ರಮುನಿ ಬಾಡಿಗಾರ್ಡ್ ಪಾತ್ರ ಮಾಡಿದರು. ವಿಷ್ಣುವರ್ಧನ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಇದ್ದರು. ಜನಾರ್ಧನ್ ಅವರು ಸುಮಾರು ೮೦೦ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಾಟಕಗಳಿಂದ ಆರಂಭ ಆದ ಅವರ ಬದುಕು ನಂತರ ಸಿನಿಮಾಗಳತ್ತ ಹೊರಳಿತು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡೇ ಅವರು ಆರಂಭದಲ್ಲಿ ಚಿತ್ರರಂಗದಲ್ಲಿ ಸಮಯ ಕಳೆದರು. ನಂತರದ ದಿನಗಳಲ್ಲಿ ಅವರಿಗೆ ದೊಡ್ಡ ದೊಡ್ಡ ಆಫರ್‌ಗಳು ಬರೋಕೆ ಆರಂಭ ಆದವು. ಅವರು ಚಿತ್ರರಂಗದಲ್ಲಿ ಬೇಡಿಕೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದರು.