ಗ್ರಾಮೀಣ ಭಾಷೆ ಬಳಕೆಯಲ್ಲೂ ಸೈ ಎನಿಸಿಕೊಂಡ ರಾಜಕುಮಾರ್

Share


ಗ್ರಾಮೀಣ ಭಾಷೆ ಬಳಕೆಯಲ್ಲೂ ಸೈ ಎನಿಸಿಕೊಂಡ ರಾಜಕುಮಾರ್

ರಾಜಕುಮಾರ್ ಬಿ.ಸರೋಜಾದೇವಿ ಒಟ್ಟಾಗಿ ಅಭಿನಯಿಸಿದ ಮೊದಲ ಚಿತ್ರ ಹಾಗೂ ನಾಯಕ ನಾಯಕಿಯರು ಮೊದಲ ಬಾರಿಗೆ ಗ್ರಾಮ್ಯ ಭಾಷೆಯನ್ನು ಬಳಸಿದ ಕಪ್ಪು-ಬಿಳುಪು, ಸಾಮಾಜಿಕ ಚಿತ್ರ ಅಣ್ಣತಂಗಿ ೧೯೫೮ರಲ್ಲಿ ಗಿರಿಜಾ ಪ್ರೊಡಕ್ಷನ್ಸ್ ಲಾಂಛನದಡಿ ಬಿಡುಗಡೆಗೊಂಡಿತು. ಟಿ.ಎಸ್.ಕರಿಬಸಯ್ಯ ನಿರ್ಮಾಣ ಮಾಡಿದ ಚಿತ್ರವನ್ನು ಕು.ರ.ಸೀತಾರಾಮಶಾಸ್ತ್ರಿ ನಿರ್ದೇಶಿಸಿದರು. ಕಂದಗಲ್ ವೀರಣ್ಣ ಸಹಾಯಕ ನಿರ್ದೇಶಕರಾಗಿದ್ದರು. ರಾಜಕುಮಾರ್, ಈಶ್ವರಪ್ಪ, ಕೆ.ಎಸ್.ಅಶ್ವತ್, ಟಿ.ಎನ್.ಬಾಲಕೃಷ್ಣ, ನರಸಿಂಹರಾಜು, ಗಣಪತಿಭಟ್, ಆರ್.ಎನ್.ಮಾಗಡಿ, ವಾಸುದೇವ ಗಿರಿಮಾಜಿ, ಗುಗ್ಗು, ಬಿ.ಜಯಮ್ಮ, ಬಿ.ಸರೋಜಾದೇವಿ, ವಿದ್ಯಾವತಿ, ಲಕ್ಷ್ಮೀದೇವಿ ಅಭಿನಯಿಸಿದರು. ತಮಿಳಿನ ’ಮಕ್ಕಳ್ಳೆ ಪೆಟ್ರ ಮಹರಾಸಿ’ ಮೂಲ ಚಿತ್ರವನ್ನು ಆಧರಿಸಿ ಕು.ರ.ಸೀತಾರಾಮಶಾಸ್ತ್ರಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳ್ನು ರಚಿಸಿದರು. ಜಿ.ಕೆ.ವೆಂಕಟೇಶ್ ಸಂಗೀತ ನೀಡಿದ ಚಿತ್ರದಲ್ಲಿ ೭ ಹಾಡುಗಳನ್ನು ಅಳವಡಿಸಲಾಗಿದ್ದು ಪಿ. ನಾಗೇಶ್ವರರಾವ್, ರಾಜೇಶ್ವರಿ ಹಾಗೂ ಸೌಮಿತ್ರಿ ಹಾಡುಗಳನ್ನು ಹಾಡಿದ್ದರು. ಬಾಲ್.ಜಿ.ಯಾದವ್ ಮತ್ತು ತಾತಯ್ಯ ಸಂಕಲನ, ಕೆ.ಪ್ರಭಾಕರ್ ಛಾಯಾಗ್ರಹಣ, ಜಯವಂತ್ ಕಲೆ, ಕೆ.ತಂಗಪ್ಪನ್ ನೃತ್ಯ ನಿರ್ದೇಶನ ಹೊಂದಿದ್ದ ಚಿತ್ರ ಮದರಾಸಿನ ಫಿಲಂ ಸೆಂಟರ್ ಸ್ಟುಡಿಯೊದಲ್ಲಿ ಚಿತ್ರೀಕರಣಗೊಂಡಿತು.

ಚಿತ್ರದಲ್ಲಿ ನಾಯಕ ಬಿಟ್ಟು ಹೋದ ಟವೆಲ್‌ನ್ನು ಪಡೆಯಲು ವಾಪಸ್ ಬರುತ್ತಾನೆ. ಆಗ ನಾಯಕ ನಾಯಕಿಯರ ಸಂಭಾಷಣೆ, ಅಭಿನಯ ಭಂಗಿ, ನವಿರಾಗಿ ಮೂಡಿ ಬಂದಿತ್ತು. ಕು.ರ.ಸೀ ಅವರಿಗೆ ಸಾಹಿತ್ಯದ ಹಾಗೂ ಸಂಗೀತದ ಬಗ್ಗೆ ತಿಳಿವು ಇತ್ತಾದ್ದರಿಂದ ಅವರ ಸಂಭಾಷಣೆ ಹಾಗೂ ಹಾಡಗಳಲ್ಲಿ ಆಕರ್ಷಣೆಯಿರುತ್ತಿತ್ತು. ಶಿವಾಜಿ ಗಣೇಶನ್, ಭಾನುಮತಿ, ಕನ್ನಾಂಬ ಅಭಿನಯದ ’ಮಕ್ಕಳ ಪಟ ಮಹರಾಸಿ’ ತಮಿಳು ಚಿತ್ರದ ಅವತರಣಿಕೆ ಎಂದು ಎಲ್ಲಯೂ ಭಾಸವಾಗದಂತೆ ಚಿತ್ರವನ್ನು ರೂಪಿಸಲಾಗಿತ್ತು. ೧೯೫೮ರ ಏಪ್ರಿಲ್ ೧೫ರಂದು ಚಿತ್ರ ಬೆಂಗಳೂರಿನ ಮೆಜಿಸ್ಟಿಕ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡ ಸಂದರ್ಭದಲ್ಲಿ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಆಗಮಿಸಿದ್ದರು. ಈ ಚಿತ್ರದಲ್ಲಿ ರಾಜಕುಮಾರ್ ಅವರದು ಗ್ರಾಮೀಣ ಭಾಷೆಯಲ್ಲಿ ಮಾತನಾಡುವ ಹಳ್ಳಿಯ ಮುಗ್ಧನೊಬ್ಬನ ಪಾತ್ರ. ಅಂಥದೇ ಪಾತ್ರ ಆ ವೇಳೆಗಾಗಲೇ ದಕ್ಷಿಣ ಭಾರತದಲ್ಲೆಲ್ಲಾ ದೊಡ್ಡ ತಾರೆಯಾಗಿ ಖ್ಯಾತರಾಗಿದ್ದ ಸರೋಜಾದೇವಿಯವರದು.

 

ಆರುನೂರು ಚಿತ್ರಗಳಲ್ಲಿ ಅಭಿನಯಿಸಿದ ಲೀಲಾವತಿ

ಲೀಲಾವತಿ ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾxಷೆಗಳ ಸುಮಾರು ೬೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಡಿ.ಶಂಕರ್‌ಸಿಂಗ್ ಅವರ ಯಶಸ್ವಿ ಚಿತ್ರಗಳಲ್ಲಿ ಒಂದಾದ ‘ನಾಗಕನ್ನಿಕಾ‘ (೧೯೪೯) ಚಿತ್ರದಲ್ಲಿ ನಾಯಕಿ ನಾಗಕನ್ನಿಕೆಗೆ ಗಾಳಿ ಬೀಸುವ ಸಖಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ೧೯೩೭ರಲ್ಲಿ ಜನಿಸಿದದ ಲೀಲಾಕಿರಣ್, ರಂಗಭೂಮಿ ಹಾಗೂ ಚಲನಚಿತ್ರರಂಗದಲ್ಲಿ ಅಭಿನಯಿಸಬೇಕೆಂಬ ಮಹಾಲಿಂಗ ಭಾಗವತರ್ ನೆರವಿನಿಂದ ಸುಬ್ಬಯ್ಯನಾಯ್ಡು ಅವರ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಗೆ ಸೇರಿಕೊಂಡರು. ಪಿ.ಕೆ.ಲಾಲ್ ನಿರ್ದೇಶನದ ‘ಮಾಂಗಲ್ಯ ಯೋಗ‘ (೧೯೫೮) ಅಭಿನಯಿಸಿದ ಮೊದಲ ಚಿತ್ರ. ಬಾಲಕೃಷ್ಣ ಈ ಚಿತ್ರದ ಪ್ರಮುಖ ಪಾತ್ರಧಾರಿ. ಮದರಾಸಿನ ಗೋಲ್ಡನ್ ಸ್ಟುಡಿಯೋದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕನ್ನಡದ ನಾಯಕ ನಟ ರಾಜಕುಮಾರ್ ಚಿತ್ರೀಕರಣ ವೀಕ್ಷಿಸಲು ಬಂದಿದ್ದರು. ಲೀಲಾಕಿರಣ್ ಅವರಲ್ಲಿದ್ದ ಪ್ರತಿಭೆಯನ್ನು ಕಂಡ ರಾಜಕುಮಾರ್ ತಾವು ಇತರ ಕಲಾವಿದರ ಜೊತೆ ನಿರ್ಮಿಸಿದ ‘ರಣಧೀರ ಕಂಠೀರವ‘ (೧೯೬೦) ಚಿತ್ರದಲ್ಲಿ ಅವಕಾಶ ನೀಡಿದರು. ಇದಕ್ಕೂ ಮುನ್ನ ‘ಧರ್ಮವಿಜಯ‘ (೧೯೫೯) ಚಿತ್ರದಲ್ಲಿ ಅಭಿನಯಿಸುವ ಅವಕಾಶವೂ ದೊರಕಿತ್ತು.

‘ದಶಾವತಾರ‘ (೧೯೬೦) ಚಿತ್ರದಲ್ಲಿ ಮೂರು ಪಾತ್ರಗಳು ದೊರೆತವು. ಅನಂತರ ಹತ್ತಾರು ಚಿತ್ರಗಳಲ್ಲಿ ರಾಜಕುಮಾರ್ ಅವರೊಂದಿಗೆ ಜನಪ್ರಿಯ ಜೋಡಿಯಾಗಿ ಕನ್ನಡ ಪ್ರೇಕ್ಷಕರನ್ನು ರಂಜಿಸಿದರು. ಕೆಲವು ಚಿತ್ರಗಳಲ್ಲಿ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ೨೦೦೩ರಲ್ಲಿ ಬಿಡುಗಡೆಯಾದ ‘ಸ್ವಾತಿಮುತ್ತು‘ ಸೇರಿದಂತೆ ಸುಮಾರು ೩೦೦ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇವರ ಏಕೈಕ ಪುತ್ರ ವಿನೋದ್‌ರಾಜ್, ದ್ವಾರಕೀಶ್ ನಿರ್ಮಾಣದ ‘ಡ್ಯಾನ್ಸ್ ರಾಜಾ ಡ್ಯಾನ್ಸ್‘ ಚಿತ್ರದ ಮೂಲಕ ನಾಯಕ ನಟರಾದರು. ಗೆಜ್ಜೆಪೂಜೆ (೧೯೬೯-೭೦), ಸಿಪಾಯಿರಾಮು (೧೯೭೧-೭೨), ಡಾಕ್ಟರ್ ಕೃಷ್ಣ (೧೯೮೯-೯೦) ಚಿತ್ರಗಳು ಇವರಿಗೆ ಪ್ರಶಸ್ತಿಯನ್ನು ತಂದುಕೊಟ್ಟವು ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ೧೯೯೯-೨೦೦೦ನೇ ಸಾಲಿನಲ್ಲಿ ನೀಡಿ ಗೌರವಿಸಿದೆ. ತುಮಕೂರು ವಿಶ್ವವಿದ್ಯಾಲಯ ೨೦೦೮ರಲ್ಲಿ ಗೌರವ ಡಾಕ್ಟರೇಟ್ ನೀಡಿತು.

 

 

Girl in a jacket
error: Content is protected !!