ಬೆಂಗಳೂರು,ಜೂ,14: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಪಕ ಕೆ.ಸಿ.ಎನ್.ಚಂದ್ರಶೇಖರ್ ನಿಧನ ಹೊಂದಿದ್ದಾರೆ.
ಅವರಿಗೆ 69 ವರ್ಷ ವಯಸ್ಸಾಗಿತ್ತು ಕೆ.ಸಿ.ಎನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಭಾನುವಾರ ತಡ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಹಾಯಕ ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಕೆಸಿಎನ್ ಚಂದ್ರಶೇಖರ್, ಬಳಿಕ ಖ್ಯಾತ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಕೆಸಿಎನ್ ಮೊದಲು ಡಾ.ರಾಜ್ಕುಮಾರ್ ನಟನೆಯ ಶಂಕರ್ ಗುರು ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಪ್ರಾರಂಭ ಮಾಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು.
ಹುಲಿಯ ಹಾಲಿನ ಮೇವು, ಭಕ್ತ ಜ್ಞಾನದೇವ, ಧರ್ಮ ಯುದ್ಧ, ತಾಯಿ ಸೇರಿದಂತೆ ಅನೇಕ ಅದ್ಭುತ ಸಿನಿಮಾಗಳನ್ನು ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ ಕೆಸಿಎನ್ ಬ್ಯಾನರ್ ಮೂಲಕ ತಮಿಳು, ತೆಲುಗು ಮತ್ತು ಬಂಗಾಳಿ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಇವರಿಗಿದೆ.
2 ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಚಂದ್ರಶೇಖರ್, ಅವರ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದರು. ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಮೂರು ಬಾರಿ ಭಾರತೀಯ ಚಲನಚಿತ್ರ ಒಕ್ಕೂಟದ ಅಧ್ಯಕ್ಷರಾಗಿದ್ದರು.
ಕೆಸಿಎನ್ ಚಂದ್ರಶೇಖರ್ ತಂದೆ ಕೆಸಿಎನ್ ಗೌಡ ಕೂಡ ಪ್ರಸಿದ್ಧ ನಿರ್ಮಾಪಕರು. ಬಬ್ರುವಾಹನ, ದಾರಿ ತಪ್ಪಿದ ಮಗ, ಸತ್ಯ ಹರಿಶ್ಚಂದ್ರ, ಸೇರಿದಂತೆ ಅನೇಕ ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಇಂದು ಕೆಸಿಎನ್ ಚಂದ್ರುಶೇಖರ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.