ಕಣ್ಣಪ್ಪ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

Share

ಕಣ್ಣಪ್ಪ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

by-ಕೆಂಧೂಳಿ

ತೆಲುಗಿನ ಖ್ಯಾತ ನಟ ಡಾ. ಮೋಹನ್‍ ಬಾಬು, ಹೆಮ್ಮೆಯಿಂದ ನಿರ್ಮಿಸಿರುವ ‘ಕಣ್ಣಪ್ಪ’ ಚಿತ್ರವು ಏಪ್ರಿಲ್‍ 25ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ತಾಂತ್ರಿಕ ಕೆಲಸಗಳು ವಿಳಂಬವಾದ್ದರಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೀಗ ಚಿತ್ರತಂಡವು ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಚಿತ್ರವು ಜೂನ್‍ 27ರಂದು ಜಗತ್ತಿನಾದ್ಯಂತ ಪ್ಯಾನ್‍ ಇಂಡಿಯಾ ಚಿತ್ರವಾಗಿ ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

‘ಕಣ್ಣಪ್ಪ’ ಚಿತ್ರವು ಡಾ. ಮೋಹನ್‍ ಬಾಬು ಮತ್ತು ಅವರ ಮಗ ವಿಷ್ಣು ಮಂಚು ಅವರ ಕನಸಿನ ಕೂಸಾಗಿದ್ದು, ಇದೊಂದು ಬರೀ ಚಿತ್ರವಾಗದೆ ಒಂದು ಅಭೂತಪೂರ್ವ ಅನುಭವವಾಗಬೇಕು ಎಂಬ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಚಿತ್ರವು ಅದ್ಭುತವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ನಿರೀಕ್ಷೆಗೆ ತಕ್ಕ ಹಾಗೆ ನಿಲುಕಲಿದೆ ಎಂದು ಚಿತ್ರತಂಡ ನಂಬಿದೆ.

ಶುಕ್ರವಾರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ಮೋಹನ್‍ ಬಾಬು, ವಿಷ್ಣು ಮಂಚು, ಪ್ರಭುದೇವ ಮತ್ತು ಚಿತ್ರದ ಕಾರ್ಯಕಾರಿ ನಿರ್ಮಾಪಕ ವಿನಯ್‍ ಮಹೇಶ್ವರಿ ಹಾಜರಿದ್ದರು. ಚಿತ್ರ ಯಶಸ್ವಿಯಾಗಲೆಂದು ಹಾರೈಸಿರುವ ಯೋಗಿ ಆದಿತ್ಯನಾಥ್‍, ಚಿತ್ರವು ದೇಶಾದ್ಯಂತ ಜನರಿಗೆ ಇಷ್ಟವಾಗಲಿದೆ ಎಂದು ನಂಬಿಕೆ ವ್ಯಕ್ತಪಡಿಸಿದ್ದಾರೆ. ಆದಿತ್ಯನಾಥ್‍ ಅವರ ಶುಭ ಹಾರೈಕೆಗಳಿಂದ ಚಿತ್ರತಂಡ ಖುಷಿಯಾಗಿದ್ದು, ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಎ.ವಿ.ಎ. ಎಂಟರ್ಟೈನ್ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಅಡಿ ಡಾ. ಮೋಹನ್‍ ಬಾಬು ನಿರ್ಮಿಸಿರುವ ‘ಕಣ್ಣಪ್ಪ’ ಚಿತ್ರವನ್ನು ಮುಕೇಶ್‍ ಕುಮಾರ್ ಸಿಂಗ್‍ ನಿರ್ದೇಶನ ಮಾಡಿದ್ದಾರೆ. ಇದುವರೆಗೂ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಗಳು, ಪೋಸ್ಟರ್ ಗಳು ಮತ್ತು ಹಾಡುಗಳು ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ತೀವ್ರ ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರದ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ, ಪ್ರಚಾರ ಕಾರ್ಯಗಳು ಸಹ ಭರದಿಂದ ಸಾಗುತ್ತಿದ್ದು, ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಆಗುವ ನಿರೀಕ್ಷೆ ಇದೆ.

‘ಕಣ್ಣಪ್ಪ’ ಚಿತ್ರದಲ್ಲಿ ಶಿವಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ನಟಿಸಿದ್ದು, ಡಾ. ಮೋಹನ್‍ ಬಾಬು, ಶರತ್‍ ಕುಮಾರ್, ಮಧು, ದೇವರಾಜ್‍, ಮುಕೇಶ್‍ ರಿಶಿ, ಬ್ರಹ್ಮಾನಂದಂ ಮುಂತಾದವರು ನಟಿಸಿದ್ದು, ಪ್ರಭಾಸ್‍, ಅಕ್ಷಯ್‍ ಕುಮಾರ್, ಮೋಹನ್‍ ಲಾಲ್‍, ಕಾಜಲ್‍ ಅಗರ್ವಾಲ್‍ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸ್ಟೀಫನ್‍ ದೇವಸ್ಸಿ ಸಂಗೀತವಿದ್ದು, ಶೆಲ್ಡನ್‍ ಚಾವ್‍ ಅವರ ಛಾಯಾಗ್ರಹಣವಿದೆ.

Girl in a jacket
error: Content is protected !!