ಡಾ.ಶಿವಕುಮಾರ ಕಂಪ್ಲಿ,ಸಹಾಯಕ ಪ್ರಾಧ್ಯಾಪಕರು,
ದಾವಣಗೆರೆ ವಿಶ್ವವಿದ್ಯಾಲಯ.
ಕಾದು..ಕಾದು ಕುದಿವ ಕುದಿ ಎಸರು
ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯಾ?
ಕ್ಷಮೆ ದಮೆ ಶಾಂತಿ ಸೈರಣೆಯಿರಲು
ಸಮಾಧಿಯ ಹಂಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ
ಚೆನ್ನಮಲ್ಲಿಕಾರ್ಜುನಾ?
‘ಆತ್ಮ ಕಥನಗಳೆಂದರೆ ಸೋಸಿದ ಜೀವನ ಚಿತ್ರಗಳು, ಕೆಲವೊಮ್ಮೆ ಇವು ತಮ್ಮದೇ ವ್ಯಕ್ತಿತ್ವ ವಿಜೃಂಭಿಸಿಕೊಳ್ಳುವ ಕಥನಗಳಂತೆಯೂ ಕಾಣುತ್ತವೆ’ ಎಂಬ ಹೇಳಿಕೆಯನ್ನ ಹುಸಿಗೊಳಿಸುವಂತೆ ಛಿದ್ರಗೊಳಿಸುವಂತೆ ವಿಜಯಮ್ಮನವರ ಆತ್ಮಕಥನದ ಹೆಣಿಗೆಯಿದೆ.
ಬ್ರಾಹ್ಮಣ ಮಹಿಳೆಯರೆಂದರೆ ಕೋಮಲ ಮುಗ್ದ ಎಂಬತೆ ಚಿತ್ರಿಸಿದ ಅನೇಕ ಸಾಹಿತ್ಯಿಕ ಸಿದ್ಧ ರೂಪವನ್ನ ಒಡೆದು ಬೋಲ್ಡ ಆಗಿ ನಿಂತ ಸತ್ಯಶೋಧಕರ ಹೊಸದೊಂದು ಶಾಸನದಂತೆ ಇದು ಕಾಣುತ್ತದೆ.ಕಷ್ಟ, ಕಣ್ಣೀರು, ಸವಾಲುಗಳ ಮೂರು ಹೆಣಿಗೆಗಳ ಈ ಕಥನ ನಗರದ ಮಧ್ಯಮ ವರ್ಗದ ಹೆಣ್ಣೊಬ್ಬಳ ಅಸಹಾಯಕತೆಯ ಹಲವು ಕಟ್ಟುಗಳನ್ನಹೊಂದಿದೆ.
ಸಂಪ್ರದಾಯಿಕ ಕುಟುಂಬದೊಳಗೆ ಹೆಣ್ಣುಮಕ್ಕಳು ಹೇಗೆ ಹಗಲಿರುಳು ಕತ್ತೆ ತರ ದುಡಿದರೂ ಯಾಕೆ ಅಲಕ್ಷಕ್ಕೆ ಗುರಿಯಾಗುತ್ತಾರೆ? ತೀರಾ ಅಲ್ಪವೆನ್ನಿಸುವ ಕನಸುಗಳನ್ನೂ ನನಸಾಗಿಸಿಕೊಳ್ಳದೆ ಒಂದು ಜೀವಮಾನವನ್ನೇ ತೊಳಲಾಟಕ್ಕೊಡ್ಡಿ ನಿರ್ಜೀವವಾಗುತ್ತಾರೆ ಎಂಬ ಸಂಗತಿಗಳೂ ಇಲ್ಲಿ ಅಚ್ಚರಿ ಹುಟ್ಟಿಸುವಂತೆ ದಾಖಲುಗೊಂಡಿವೆ.ಇದು ಒಬ್ಬರ ಆತ್ಮಕಥನವೆಂದು ಕರೆದಾಗಲೂ ಇದು ತನ್ನ ಆಳದ ನೋವು, ಕನಸುಗಳ ಸ್ವರೂಪಗಳಿಂದ ಛಲದ ನಿರೂಪಣೆಗಳಿಂದ ತನ್ನ ಬೆನ್ನ ಹಿಂದಿನ ಹೆಣ್ಣ ಬಳಗದ ಕೆಲವು ಕಥನಗಳೆಂಬತೆಯೂ ಕಾಣುತ್ತದೆ.ನೇರನೋಟಕ್ಕೆ ಇದೊಂದು ವ್ಯಕ್ತಿ ಕಥನದಂತೆ ಕಂಡರೂ ತನ್ನದೇ ವಾರೆನೋಟಗಳಿಂದ ಇದು ಚಾರಿತ್ರಿಕ ಕಟ್ಟಿನಂತೆಯೂ ಕಾಡಬಲ್ಲದು.
ದಾವಣಗೆರೆ ಹೊಸಪೇಟೆ ಮತ್ತು ಬೆಂಗಳೂರುಗಳ ನಡುವೆ ಜೀಕುವ ಇಲ್ಲಿನ ನೆನಪಿನ ಉಯ್ಯಾಲೆಯಲ್ಲಿ ದಟ್ಟವಾದ ಗೃಹಲೋಕದ ವಿವರಗಳಿವೆ ಹಾಗೇ ಒಪ್ಪಿತ ಸಮಾಜಿಕ ಆವರಣಗಳ ಲಕ್ಷ್ಮಣ ರೇಖೆಗಳನ್ನ ಸ್ಪೋಟಿಸುವ ಗಟ್ಟಿ ದನಿಯಿದೆ.ಹೆಣ್ಣುತನದ ನಯ ವಿನಯದ ಆವರಣದೊಳಕ್ಕೆ ಇಳಿವ ಗಂಡಿನ ನಿರಂತರ ಕ್ರೌರ್ಯಗಳನ್ನ ದಂಗು ಬಡಿಸುವಂತೆ ‘ಅಬ್ಬಾ? ಎನ್ನುವಂತೆ ನಿರೂಪಿಸುವ ಈ ಕಥನ ತನ್ನ ನಿರ್ಭಿಡೆಯ ಸಾಲುಗಳ ತಾಕತ್ತಿನಿಂದಲೇ ಈ ಕಥನ ಮಧ್ಯಮ ವರ್ಗದ ಸಂಪ್ರದಾಯಿಕ ಹೆಣ್ಣ ಕುಟುಂಬಗಳ ಗುಪ್ತ ಜಗತ್ತಿನ ಸುಪ್ತ ಚಾರಿತ್ರಿಕ ದಾಖಲಾತಿಯಂತೆ ಕಾಣುತ್ತದೆ.
ಇದು ಸ್ತ್ರೀ ಬರಹವಾದರೂ ಇಲ್ಲಿ ವಿಜೃಂಭಿಸುವುದು ಬಹು ಬಗೆಯ ಪುರುಷಲೋಕ.ದಾಂಪತ್ಯ ಸಂಬಧಗಳ ಗರಡಿಯಲ್ಲಿ ಧಣಿವ ಈ ಕಥನವು ಮಹಿಳೆಯೆಂಬ ಕಪ್ಪು ಬಿಳುಪಿನ ಸಿದ್ಧ ಶೃಂಗಾರ ಕಲ್ಪನೆಯನ್ನ, ಮೋಹಕ ಶೈಲಿಗಳನ್ನ ಮೀರುತ್ತ ಓಲ್ಡ ಮಾಡಲ್ ನೊಳಗಿನ ಬೋಲ್ಡ ಗುಂಡಿಗೆಯನ್ನ ಗಂಡುಗಳ ಬೆರಳಿಡಿದೇ ತನ್ನ ಸುತ್ತಲ ಗಂಡುಲೋಕಗಳನ್ನ ಚಿತ್ತಾಗಿಸುತ್ತದೆ.
ಮುಗ್ದತೆ ಮತ್ತು ಪಾವಿತ್ರ್ಯತೆಗಳೆಂಬ ‘ಸಾಮಾಜಿಕ ಮೌಲ್ಯ? ಗಳನ್ನ ಬೆನ್ನಟ್ಟಿದ ಮಹಿಳೆಯು ಹೇಗೆ ಸಾವಿನ ಅಂಚಿಗೆ ಜೀವಂತಿಕೆಯ ತುದಿಗೆ ತುಯ್ದಾಡುತ್ತಾಳೆ,ತನ್ನವರು ಮತ್ತು ನೆರೆಯವರನ್ನ ಬಾಳ ಬೆಂಕಿಯ ನಿಕಷಕ್ಕೊಡ್ಡುತ್ತಲೇ ಸಾಮಾಜಿಕ ಆವರಣಕ್ಕೆ ಕಾಲಿಡುತ್ತಾಳೆ.ಈ ಕಥನದಲ್ಲಿ ಹೆಸರಾಂತ ಸಾಹಿತಿಗಳು,ಕಲಾವಿದರು ಹೇಗೆಲ್ಲಾ ಮಳ್ಳರು,ನಾಜೂಕಯ್ಯರು ಆಗಿರುತ್ತಾರೆ ಎಂಬುದನ್ನ ಬಹು ಸೂಕ್ಷ್ಮವಾಗಿಯೇ ಬಯಲುಗೊಳಿಸುತ್ತಾರೆ.
ಶ್ರದ್ಥಾವಂತ ಗೃಹಿಣಿಯ ಅಲಕ್ಷಿತ ಜಗ ಸುತ್ತುವ ಈ ಕಥನವು ಸ್ತ್ರೀಯ ಕಣ್ಣೆದುರ ಅಡುಗೆ ಮನೆ ಶ್ರಮವನ್ನ ಕತ್ತಲ ಕೋಣೆಗಳ ಜೈವಿಕ ಸಂಯಮಗಳನ್ನ ನಿರ್ಭಿಡೆಯಾಗಿ ಕಟ್ಟಿಕೊಡುತ್ತದೆ. ಸ್ವಾರ್ಥವೇ ಕೇಂದ್ರವಾದ ಸುಖವೇ ಪ್ರಧಾನವಾದ ಪುರುಷಜಗತ್ತಿನ (ಬಹುಶಃ ಮೇಲ್ವರ್ಗವೆಂಬ ವ್ಯಂಗ್ಯ) ಕಾಮ ಕಲ್ಪನೆಗಳು,ವಾಂಛೆಗಳು ಹೇಗೆಲ್ಲಾ ಹೆಣ್ಣನ್ನ ಹಾಸಿ ಉಣ್ಣಲು ಬಯಸುತ್ತವೆ? ಅದಾಗದಾಗಲೂ ಹೇಗೆ ಸಿಕ್ಕ ಸಿಕ್ಕ ಪದಾರ್ಥಗಳಿಂದ ತನ್ನ ತೆವಲುತೀರಿಸಿಕೊಂಡು ಬೀಸಿ ಒಗೆಯುತ್ತವೆ!೧) ಹೆರಿಗೆಗೆ ಬಂದವಳ ಮೇಲೂ ಎರಗುವುದು,೨)ಗರ್ಭ ಕಳೆಯಬೇಕೆಂದು ಮೇಲೆ ಬಿದ್ದು ಬಸುರಿಯ ಹೊಟ್ಟೆ ಒತ್ತುತ್ತ ಅವಳ ಬಾಯನ್ನೂ ,ಅಳುವ ಕಂದನ ಬಾಯನ್ನೂ ಒತ್ತಿ ಅಕ್ರಮಿಸುವುದು ೩) ಪೋಲಿ ಗೆಳೆಯರ ಮಾತುಗಳನ್ನೇ ಹೊತ್ತು ತಂದು ತನ್ನ ಗರ್ಭಿಣಿ ಹೆಂಡತಿಯನ್ನ ಬಗೆ ಬಗೆಯಲ್ಲಿ ಪೀಡಿಸುವುದು..ಒಂದಾ .. ಎರಡಾ ..ಇಂತಹ ಅಕ್ರಮಣಕ್ಕೇ ಸಾಕ್ಷಿಯಾದ ರಕ್ತದ ಬಟ್ಟೆಗಳನ್ನೇ ಮೈ ಜುಂ ಎನಿಸುವಂತೆ ತೋರುವ ಲೇಖಕಿಯ ಒಡಲಾಳದೊಳಗೆ ಎಂತಹ ಅದುಮಿಡಲಾರದ ಕುದಿ ಎಸರ ಸಮುದ್ರವಿದೆ ಎಂಬುದನ್ನ ಕಾಣಲಾದರೂ ಈ ಕೃತಿಯನ್ನೊಮ್ಮೆ ಓದಲೇಬೇಕು.
ಒಂದುರೀತಿಯಲ್ಲಿ ಇದು ಹೆಣ್ಣ ಕಥನವಾದರೂ ಇದು ಗಂಡಸರಿಗೆ ಮಾತ್ರ ಕಡ್ಡಾಯ ಎನ್ನುವಂತೆಯೂ ಈ ಓದನ್ನ ವಿಧಿಸಬಹುದೇನೋ? ಶುದ್ಥತೆ ಪುರುಷರಿಗೇಕಿಲ್ಲ ಸ್ತ್ರೀ ಯ ಸಣ್ಣ ತಪ್ಪಿಗೆ ಸಾಯುವ ತನಕವೂ ಹಠ ಸಾಧಿಸುವ ಗಂಡಸರ ಮೌಲ್ಯ ಲೋಕವನ್ನ ಲೇಖಕಿಯು ಎಳೆದೆಳೆದು ಚಲ್ಲಾಡಿದ್ದಾರೆ.ಈ ಕಥನಕ್ಕೆ ಗಂಡು ವಿರೋಧೀ ಗುಣವಿಲ್ಲ ಇಲ್ಲಿ ಅಪ್ಪನೆಂಬ ಆಕಾಶ, ತಾತಾನೆಂಬುವ ಹೊಂಬೆಳಕು ಮೈದುನ ಚಿಕ್ಕಪ್ಪರೆಂಬ ಸಿಹಿತೊರೆಗಳ ನಡುವೆ ಹಾಯುವ ಅನೇಕ ತಂಗಾಳಿಗಳಂತಹ ಗಂಡಸರ ಸಿಹಿ ಬಾಳುಗಳ ಚಂದದ ಕುಸುರಿಯ ಎಳೆಗಳೂ ಈ ಕಥನಕ್ಕೊಂದು ಘನತೆ ತಂದೊಡ್ಡಿವೆ.
ಹಲವು ಬದುಕು, ಹಲವು ಸಾಧನೆ, ಹಲವು ಭಾವಗಳಿಂದ ತುಂಬಿ ಹರಿವ ಈ ಕಥನದ ಅಲೆಗಳು ತನ್ನ ಬಹುರೂಪಿ ನೆಲೆಗಳಿಂದಲೇ ಸಾಮಾನ್ಯ ಮಧ್ಯಮ ವರ್ಗದ ಮಹಿಳೆಯೂ ಕೂಡ ಜಡ ಆವರಣಗಳನ್ನ ದಿಟ್ಟತನದಿಂದ ದಾಟಬಲ್ಲಳು. ಸಾಧಕಿಯೂ ಆಗಬಲ್ಲಳೆಂಬ ಆಶಾವಾದವನ್ನ ಬಿತ್ತುವ ಈ ಕಥನ ಸಾಹಸಿಯೊಬ್ಬಳ ಸಹನಾಯಾತ್ರೆಯಂತಿದೆ.
ಈ ಕಥನದ ಶೀರ್ಷಿಕೆಗೆ ಸಾಕ್ಷಿಯಂತೆ ಇಲ್ಲಿ ಬ್ರಹ್ಮಣ ವರ್ಗದ ಬಗೆ ಬಗೆಯ ಅಡುಗೆಯ ಗಮಲೂ ಕಾಡಿಸುವಂತಿವೆ.ಸಾಮಾನ್ಯ ಮಹಿಳೆ ತನ್ನ ಅಡುಗೆ ಮತ್ತು ಅಲಂಕಾರಗಳಿಂದಲೇ ಚಿತ್ರಣಗೊಳ್ಳುವ ಬರಹಗಳ ನಡುವೆ ಭಿನ್ನವಾಗಿ ಸೆಳೆವ ಈ ಗೃಹಿಣಿ ತನ್ನ ಬೆವರ ಶ್ರಮವನ್ನ ತನಗಾಗಿ ಮೀಸಲಾಗಿಸದೇ ತನ್ನವರ ಹಿತಕ್ಕಾಗಿಯೇ ಮೀಸಲಾಗಿಸುವ ಪರಿ ಇಷ್ಟವಾಗುತ್ತದೆ. ಅಂತಹ ಭಿನ್ನ ಹೆಣ್ಣು ಜೀವಗಳನ್ನೂ ಇಲ್ಲಿ ತಂದು ನಿಲ್ಲಿಸಿದ್ದಾರೆ.ಜೀವನ ಕಥನವಾದರೂ ಇದು ಬಹುಕಾಲ ಒಳಗೇ ಹುದುಗಿದ ನೋವ ಕಥನ. ಹಲವರ ಒತ್ತಾಸೆಯ ಮೇರೆಗೆ ಹೊರಗೆ ಬಂದಿದೆ. ಈ ನೋವ ಕಥನ ಅಸಲಿಗೆ ನೊಂದ ನೋವ ನೋಯದವರೆತ್ತಬಲ್ಲರಯ್ಯ ಎಂಬಂತಿದೆ.