ಲೇಖಕರ ಪರಿಚಯ
ಡಾ,ಶಿವಕುಮಾರ್ ಕಂಪ್ಲಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. ಅಧ್ಯಯನ ಮಾಡಿ ,ತೆಲುಗು ಕವಿ ಶ್ರೀ ಶ್ರೀ ಮತ್ತು ಕನ್ನಡದಲ್ಲಿ ಸಿದ್ದಲಿಂಗಯ್ಯ ಅವರ ಕುರಿತು ತೆಲುಗು ಮತ್ತು ಕನ್ನಡ ತೌಲನಿಕ ಅಧ್ಯಯನಕ್ಕೆ ಪಿಎಚ್ಡಿ ಪದವಿ ದೊರೆತಿದೆ,ಅಗ್ನಿ ಮತ್ತು ಕಿರೀಟ ಕವನ ಸಂಕಲ, ಸೂರ್ಯನಿಗೆ ಗೆಜ್ಜೆಯ ಕಟ್ಟಿ ಅನುವಾದ ಕವನ ಸಂಕಲನ ಪುಸ್ತಕಗಳು ಹೊರಬಂದಿದ್ದು,ಹಲವಾರು ತೆಲುಗು ಕಥೆಗಳನ್ನು ಅನುವಾದ ಮಾಡಿದ್ದಾರೆ, ಅಲ್ಲದೆ ಅವರ ಹಲವಾರು ವಿಮರ್ಶೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಪ್ರಸ್ತುತ ಕೆಂಧೂಳಿ ವಾರಪತ್ರಿಕೆಯಲ್ಲಿ ಅಂಕಣಕಾರರಾಗಿರುವ ಇವರು ಸರ್ಕಾರಿ ಪ್ರಥಮ ದರ್ಜೆ ಸ್ನಾತಕೋತ್ತರಕೇಂದ್ರ ದಾವಣಗೆರೆ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .
ಡಾ.ಶಿವಕುಮಾರ್ ಕಂಪ್ಲಿ
ಭಾಷೆಯೊಡನೆ ಹೊಳೆಯುವ ರೂಪಗಳಲ್ಲಿ ಕಾವ್ಯವೂ ಒಂದು.ಕವಿತೆಯಲ್ಲಿ ಸಾಮಾಜಿಕ ಚಿತ್ರಗಳು ,ನಮ್ಮದೇ ಬದುಕಿನ ಅನುಭವಗಳು ಬೆರಗಾಗುವಂತೆ ಬೆಸೆದುಕೊಂಡಿರುತ್ತವೆ. ಕವಿ ತನಗಾಗಿ ಬರೆದಂತೆ ಇತರರಿಗೂ ಬರೆಯಬಲ್ಲ. ತನ್ನ ಕಾಲವನ್ನ ಬಸಿದು ಸಾರ್ವಕಾಲಿಕವಾಗಿಸಬಲ್ಲ. ಕವಿಗೆ ಹಲವು ದಾರಿಗಳಿವೆ. ಕೆಲವು ಕವಲು ದಾರಿಗಳೂ ಇವೆ.
ಕಾವ್ಯಕ್ಕೆ ಬೇಕಾದ್ದು ಅಲಂಕಾರವೋ? ಸರಳತೆಯೋ? ಬರಹ ತನ್ನನ್ನ ತಣಿಸುವುದೋ? ಓದುಗರ ಮಿಡಿಸುವುದೋ?ಎಂಬ ಪ್ರಶ್ನೆಗಳು ಭಿನ್ನ ರೀತಿಗಳಿಗೆ ಕಾರಣವಾಗಿದೆ. ಎಲ್ಲರೂ ಸಾಗುವ ಹಾದಿಯಲ್ಲಿ ಕಾವ್ಯದ ಪಾದಗಳು ನಡೆದರೆ ಜನರು ಗಮನ ಹರಿಸಲಾರರೆಂದೇ ಕೆಲವರು ವಕ್ರ ಹಾದಿ ತುಳಿದಿದ್ದಾರೆ. ಈ ಹಾದಿಗಳನ್ನೇ ಊರ ಹಾದಿಗಳು ಕಾಲು ಹಾದಿಗಳೆನ್ನಬಹದು. ಕುವೆಂಪು ಪುತಿನ, ಅಡಿಗರ ನಡಿಗೆ ಒಂದು ಬಗೆಯಾದರೆ ಬೇಂದ್ರೆ, ಕಂಬಾರ, ಸಿದ್ಧಲಿಂಗಯ್ಯ ನವರ ನಡಿಗೆ ಮತ್ತೊಂದು ಬಗೆ. ಕಾಲು ಹಾದಿಯಲ್ಲಿ ಹೊಸತನ್ನ ನಿರ್ಮಿಸಿದವರಲ್ಲಿ ಜಿ.ಪಿ.ರಾಜರತ್ನಂ ಕೂಡಾ ಒಬ್ಬರು.ಅವರ ರತ್ನನ ಪದಗಳು ಅಮಲನ್ನ ಅಲ್ಲಲ್ಲಿ ಹಿಡಿದು ಕಾವ್ಯಕ್ಕೆ ತೊಡಿಸಿದವರು.ಕವಿತೆಯ ಮೂಲಕ ಪದ ಮತ್ತು ಪಾದ ವೈಶಿಷ್ಯಗಳನ್ನ ತೋರಿದ ಅಮಲಿನ ಕವಿ ವೈ ಎನ್ ಕೆ.
ಜನದನಿಗಳನ್ನ ಕಾವ್ಯಕ್ಕೆ ಬೇಂದ್ರೆ ಮತ್ತು ಕಂಬಾರರ ನಂತರ ಕಾವ್ಯಕ್ಕಿಟ್ಟು ಜೀವತುಂಬಿದವರು ಕವಿ ಸಿದ್ಧಲಿಂಗಯ್ಯ.ಇವರದು ಮೂಲತಃ ಹಳ್ಳಿ ಪ್ರತಿಭೆ.
ಭೂತಾಯಿ ಸಿಗಲಿಲ್ಲ ಈ ತಾಯಿ ಸಿಕ್ಕವಳೆ
ಕಾಣಿರೋ ಆನಂದವ
ಹೆಂಡ ಬಾಡಿನ ಮುಂದೆ ಇನ್ನು ದೇವರು ಉಂಟೆ
ಮಾಡಿರೋ ದೊಡ್ಡಬ್ಬವ
ಎಂದು ಹೆಂಡ ಮತ್ತು ಬಾಡಿನ ವ್ಯಸನದ ಜನರನ್ನ,ಸಾವ್ಕರ್ರ ಸಾಲಗಳನ್ನ ಅರೆಗಳಿಗೆ ಮರೆವವರನ್ನ, ಗುಟ್ಟನ್ನ ಬಿಚ್ಚುವುದಲ್ಲದೇ ಸ್ವತಂತ್ರ್ಯಾ ನಂತರದ ಬಹು ದೊಡ್ಡ ಭೂಮಿ ಪ್ರಶ್ನೆಯನ್ನ ಅದನ್ನ ಕೊಡಲಾಗದ ನಮ್ಮ ನಿರಾಶದಾಯಕ ಆಡಳಿತ ಮತ್ತು ಸಾಮಾಜಿಕ ಸಂಕಟವನ್ನ ಈ ಕವಿ ಇಲ್ಲಿ ಹರವಿದ್ದಾರೆ.
ಬ್ರಮ್ಮ! ನಿಂಗೆ ಜೋಡಿಸ್ತೀನಿ
ಯೆಂಡ ಮುಟ್ಟಿದ್ ಕೈನ!
ಭೂಮಿ ಉದ್ಕು ಬೊಗ್ಗಿಸ್ತೀನಿ
ಯೆಂಡ ತುಂಬ್ಕೊಂಡ್ ಮೈನ!
ಎಂದು ಹೆಂಡದ ಪದಗಳನ್ನೇ ಕೇಂದ್ರವಾಗಿಸಿಕೊಂಡು ನವೋದಯದ ಭಕ್ತಿ ನೋಟಕ್ಕೊಂದು ಹೊಸ ರೂಪದ ಕವಿತೆ ಕೊಟ್ಟವರು ಜಿ.ಪಿ.ರಾಜರತ್ನಂ.ರತ್ನಂ ಕಾವ್ಯದಲ್ಲಿ ಹೆಂಡವೇ ಕುಟುಂಬ ಸ್ವರೂಪವನ್ನೂ ಮತ್ತು ಲೋಕವನ್ನೂ ಬಿಡಿಸುವ ರೀತಿಯಾಗಿದೆ.
ಪ್ರಸ್ತುತ ಮಧ್ಯಸಾರ ಎಂಬ ಪುಟಾಣಿ ಪುಸ್ತಕದ ಕವಿ ಅಪಾರ ಅವರು ಮಧ್ಯವನ್ನ ಕಾವ್ಯ ಮಾಧ್ಯಮವಾಗಿಸಿದ್ದಾರೆ ಅಂದರೆ ರತ್ನಂ ಹಾಗೂ ವೈ.ಎನ್.ಕೆ.ಯವರನ್ನ ಅರಗಿಸಿಕೊಳ್ಳುತ್ತಲೇ ಕನ್ನಡ ಕಾವ್ಯಕ್ಕೊಂದು ಹೊಸತನ ತಂದಿದ್ದದಾರೆ.ಹೊಸತನ್ನ ಹವ್ಯಾಸವಾಗಿಸಿಕೊಂಡ ಛಂದ ಪ್ರಕಾಶನ ಪ್ರಕಟಿಸಿರುವ ಈ ಪಾಕೇಟ್ ಪುಸ್ತಕ ರೂಪದಲ್ಲೂ ಹೊಸದು ಮಾತ್ರವಲ್ಲ ದನಿಯಲ್ಲೂ ಹೊಸದೆಂಬಂತಿದೆ.’ಮದ್ಯ’ ಇಲ್ಲಿ ನಗರದ ಮಧ್ಯಮ ವರ್ಗದ ಬದುಕಿನ ಮಗ್ಗುಲುಗಳನ್ನ ಥರ್ಟಿ,ಸಿಕ್ಸಟಿ,ನೈಂಟಿ ಎಂಬ ವಿಭಾಗಗಳ ಮೂಲಕ ಏರಿಸುತ್ತಾ ಹೋಗುತ್ತದೆ.
ಬೀರು ವಿಸ್ಕಿ ಜಿನ್ನು ವೈನು
ಪರಮಾತ್ಮ ಒಬ್ನೆ ಹೆಸರು ಬೇರೆ
ಹೆಂಡ ಅಂದ್ರೆ ಇನ್ನೂ ವೈನು
ಕನ್ನಡ ಪದಗಳ ಅಮಲೇ ಬೇರೆ
ಮದಿರೆಯನ್ನ ಮೊದಲಿಂದಲೂ ಸಂಪ್ರದಾಯಿಕರು ಕೀಳಾಗಿ ಕಾಣುತ್ತಲೇ ಬಂದಿದ್ದಾರೆ ಹಾಗೇ ಮದಿರೆಯನ್ನ ಗುಟ್ಟಾಗಿ ಬಹುಸಂಖ್ಯಾತರು ಸೇವಿಸುತ್ತಲೇ ಹೊರಟಿದ್ದಾರೆ.ರಾಜ ಮಹಾರಾಜರಿಂದ ಗುಡಿಸ ತನಕ ಮದಿರೆಯ ಮಡಿಲಲ್ಲಿ ಗಡದ್ದಾಗಿ ಮಲಗಿದವರೇ ಹೆಚ್ಚು. ಗಜಲ್, ಶಾಹಿರಿ ಗಳಂತೆ ಕನ್ನಡದಲ್ಲಿ ಮದ್ಯ ಪದ್ಯಗಳ ಶೋಧಗಳನ್ನ ಮಾಡಬೇಕಿದೆ.
ರೊಕ್ಕ ಇದ್ದರಷ್ಟೇ ಸಾಲದು
ದುಃಖ ಇರಬೇಕು ಕುಡಿಯುವನಿಗೆ
ನಕ್ಕರೇನು ಚಂದ ಕುಡುಕ
ಬಿಕ್ಕಬೇಕು ಎರಡು ಗುಟುಕ ನಡುವೆ
ನಮ್ಮ ಜನ ಒಗ್ಗಟ್ಟನ್ನ ಧರ್ಮದಲ್ಲೇ ಯಾಕೆ ಕಾಣಬೇಕು? ಎಂಬ ಪ್ರಶ್ನೆಗೆ ಎದುರಾಗುವ ಸೆಕ್ಯುಲರ್ ಸ್ಥಳವೇ ಬಾರು. ಈ ಬಾರಿನ ಒಳಕ್ಕಿಳಿದಂತೆಲ್ಲಾ ಹೊಡೆಯುವುದು ಮದಿರೆಯ ನಶೆ ಮಾತ್ರವಲ್ಲ,ಹೆಣ್ಣು,ಅಧಿಕಾರ,ಕೀರ್ತಿ,ದೊಡ್ಡತನ,ಸಣ್ಣತನಗಳೆಲ್ಲಾ ಇಲ್ಲಿ ತೂರಾಡುತ್ತವೆ.
ದೊಡ್ಡ ನೋವ ಹೀರಿ ಕೊಳುವ
ದ್ರವ ತಾರೆ ಹೆಂಡ
ಸಣ್ಣ ತನವ ಕಾರಿಕೊಳಲು
ಕುಡಿವನೆಂಥಾ ಭಂಡ?
ಕುಡುಕನಿಗೆ ಮುಖ್ಯವಾದದ್ದು ತನ್ನ ದುಃಖ ಹಾಗಾಗಿ ಬಾರೊಂದು ಜೀವ ಕೇಂದ್ರ ಆತನಿಗೆ. ಅದು ಆತನಿಗೆ ಖಾಸಗಿ ನೋವನ್ನೂ ಸಾಮಾಜಿಕ ನೋವನ್ನೂ ಬೆಸೆವ ಮೈ ಮತ್ತು ಮನದ ಮಹಲದು. ಕುಡಿತ ದುಃಖವನ್ನ ಮಾತ್ರ ತೋಡದು, ದಂಗು ಬಡಿಸುವ ಪ್ರಶ್ನೆಯನ್ನೂ ಒಡ್ಡುತ್ತದೆ.
ಕರಗುತಿದೆ ಕೊರಗು ಬಾಟಲಿನಲ್ಲಿ
ಕಡೆಗೊಂದೇ ಉಳಿದಿದೆ ಚಿಂತೆ
ಕುಡಿಯಲಾರದ ಅವಳು ಈ ಕ್ಷಣವ
ಹೇಗೆ ನಿಭಾಯಿಸುತಿರುವಳಂತೆ?
ಮಧ್ಯ ಇಲ್ಲಿ ಉಪದೇಶ ನೀಡುವ ಮಾಧ್ಯಮವೂ ಆಗಿದೆ.ಕಿಲಾಡಿ ಕುಡುಕ ಇಲ್ಲಿ “ಉಪದ್ರವ ಮಾಡಿ ದ್ರವದ ಘನತೆ ಕಳೆಯ ಬೇಡಿ” ಎಂದು ಬೇಡಿಕೊಳ್ಳುತ್ತಾನೆ.ಬೇಕಾಬಿಟ್ಟಿ ಕುಡಿದು ಬದುಕನ್ನ ಸರ್ವನಾಶ ಮಾಡಿಕೊಳ್ಳಬೇಡಿ ಎಂದು ವಿನಂತಿಸಿಕೊಳ್ಳುತ್ತಾನೆ.ಕುಡಿದೂ ಪೋಲೀಸರಿಂದ ಹೇಗೆ ಬಚಾವಾಗಬೇಕು ಎಂಬ ಜಾಣ ಸೂತ್ರ ಹೇಳುತ್ತಾನೆ.ಈ ಪದಗಳಲ್ಲಿ ಪಾಡಿನ ಲಹರಿಗಳಿವೆ.ಎಲ್ಲಕ್ಕೂ ಬಾಟಲನ್ನೇ ಅಪ್ಪಿಕೊಂಡ ಒಪ್ಪಿಕೊಂಡ ಬಗೆಬಗೆಯ ಕಿಕ್ಕುಗಳಿವೆ! ರೂಪದ ಭಿನ್ನತೆಗಳನ್ನೇ ಆಶಯವಾಗಿಸಿಕೊಂಡ ಈ ಸಂಕಲನ ಬಾರನ್ನ ಬೋರಾಗದಂತೆ ಕಾಣಿಸಿದೆ.ಹೆದ್ದಾರಿಗಳ ಸೀಳಿ ತೂರಾಡುವ ಕಾಲುದಾರಿಯ ತೋರುವಂತಿದೆ.ಲೈನ್ ಲೈನ್ ಗಳಲ್ಲೂ ವೈನ್,ಜಿನ್ ಗೂ ಮಿಕ್ಕಿದ ನಿಶೆ ತುಂಬಿದ ಪುಟಾಣಿ ಪುಸ್ತಕ ನೋಡುವುದಕ್ಕೂ ಓಡಾಡುತ್ತಲೇ ಓದುವುದಕ್ಕೆ ನಗೆಯಲ್ಲಿ ತೇಲುವುದಕ್ಕೆ ಹೇಳಿಮಾಡಿಸಿದಂತಿದೆ.