ಮಾನವತೆಯ ಹುಡುಕುತಲಿರುವೆ ……

Share

 

ನಿಶ್ಯಬ್ದ, ನಿರ್ಜನ ರಸ್ತೆಗಳ ನೀರವತೆಯಲಿ
ಮೌನ ಜನನಿಬಿಡ ಗಲ್ಲಿಗಳ ಪಿಸುಮಾತಲಿ
ಪೊಲೀಸರ ಬೂಟಿನ ಶಬ್ದದ ಕರತಾಡನದಲಿ
ಬಣ್ಣದ ಲಾಠಿಯ ಹೊಡೆತದ ರೌದ್ರಾವತೆಯಲಿ

ಮಾನವತೆಯ ಹುಡುಕುತಲಿರುವೆ ……

ಹೊಟ್ಟೆಗೆ ಹಿಟ್ಟಿಲ್ಲದ ಸಂತ್ರಸ್ತರ ಕಣ್ಣ ಕಪ್ಪಿನ ಅಂಚಿನಲಿ
ವೇತನವಿಲದೆ ಮನೆ ಮಾಲೀಕನ ಕಾಲ ಹಿಡಿವ ನಡುಗುವ ಕೈಗಳ ಅಭದ್ರತೆಯಲಿ
ಧ್ವಂಸವಾದ ಭರವಸೆಗಳ ಬೂದಿ ಮಣ್ಣಿನ ತುತ್ತತುದಿಯಲಿ
ನಾಳೆಗಳು ಬಾರದಿರಲಿ ಎಂದು ಆಶಿಸುವ ಹೃದಯಗಳಾವರಣದಲಿ

ಮಾನವತೆಯ ಹುಡುಕುತಲಿರುವೆ ……

ಆಸ್ಪತ್ರೆಯ ಶಿಥಿಲ ಗೋಡೆಗಳ ಬಿರುಕುಗಳಲಿ ಅರಳಿದ ಗಿಡಬಳ್ಳಿಗಳಲಿ
ದಾದಿಯರ ಶ್ವೇತವರ್ಣದುಡಿಗೆಯ ಅಂಚುಗಳಲಿ
ವೈದ್ಯರ ಚಿಂತಾಕ್ರಾಂತ ಮುಖಗಳ ಸುಕ್ಕುನೆರಿಗೆಗಳಲಿ
ಅಸಹಾಯಕ ರೋಗಿಯ ಬಂಧುಜನದ ಆಕ್ರಂದನದಲಿ

ಮಾನವತೆಯ ಹುಡುಕುತಲಿರುವೆ ……

ಸ್ಮಶಾನದ ಹರಿದ ಬೇಲಿಗಳ ಕಿಂಡಿಗಳಲಿ
ದಹಸಂಸ್ಕಾರದ ಅಗ್ನಿಚಿತೆಯ ದಳ್ಳುರಿಯಲಿ
ಮೈಲುದ್ದ ನಿಂತ ಆಂಬುಲೆನ್ಸ್ ಗಳ ಸಾಲುಸಾಲುಗಳಲಿ
ಹೆಣದ ನೆಂಟರ ಹಣ ಪೀಕಿ ಜೋಪಾನವಾಗಿರಿಸುತಿಹ ಜೇಬುಗಳಲಿ

ಮಾನವತೆಯ ಹುಡುಕುತಲಿರುವೆ ……

ಗಂಗೆಯೊಡಲ ಹೆಣಗಳ ರಾಶಿಗಳಲಿ
ಮಗನನು ಹೊತ್ತೊಯ್ದ ಹೆಮ್ಮಾರಿಯ ಶಪಿಸುವ ತಾಯ ಒಡಲ ಉರಿಯ ಶಾಖದಲಿ
ಪೋಷಕರನು ಬೆಂಕಿಗಿಟ್ಟು ತಬ್ಬಲೆಯಾದ ಹಸುಳೆಗಳ ಮುಗ್ದಮುಖದಲಿ
ಗಂಡನನು ಕಳೆದುಕೊಂಡ ವಿಧವೆಯರ ಅಳಿಸಿದ ಕುಂಕುಮದ ರಂಗಿನಲಿ

ಹುಡುಕುತಲೇ ಇರುವೆ ಮಾನವತೆಯ
ಬಣವೆಗೂಡಲಿ ಸೂಜಿ ಹುಡುಕಿದ ಹಾಗೆ

ಹುಡುಕುತಲೇ ಇರುವೆ …..

ಎನ್.ಸಿ. ಶಿವಪ್ರಕಾಶ್
ಮಸ್ಕತ್, ಒಮಾನ್

Girl in a jacket
error: Content is protected !!