ಆರ್ ಜಿ ಹಳ್ಳಿ ನಾಗರಾಜ್, ಸಾಹಿತಿ,ಪತ್ರಕರ್ತರು
ಬೆಂಗಳೂರು,ಏ,25-ಕನ್ನಡ ಸಾಹಿತ್ಯ ಪರಿಷತ್ತು ಲಂಗೂ ಲಗಾಮಿಲ್ಲದೆ ಓಡುವ ಹುಚ್ಚು ಕುದುರೆಯಂತಾಗಿದೆ. ಅಲ್ಲಿ ಕೂತ ರಾಜ್ಯಾಧ್ಯಕ್ಷರು ಸಾಹಿತ್ಯ ಚಟುವಟಿಕೆ ಬಿಟ್ಟು ಆಜೀವ ಸದಸ್ಯರು ಹಾಗೂ ಅವರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರ ಮೇಲೆ ಕ್ರಮ ಜರುಗಿಸುತ್ತ, ಅವರ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸುವ ಹುಚ್ಚು ನಿರ್ಧಾರ ಕೈಗೊಂಡು; 3 ನೇ ಬಾರಿಗೆ ಬೈಲಾ ತಿದ್ದುಪಡಿಗೆ ಕೈ ಹಾಕಿದ್ದು ಭಾರಿ ಕೋಲಾಹಲ ಉಂಟು ಮಾಡಿದೆ. ತಮಗೆ ಪರಮಾಧಿಕಾರ ಬೇಕೆಂದು ಹಲವು ತಿದ್ದುಪಡಿ ಮಾಡಲು ಹೊರಟ ಜೋಶಿ ಸಾರ್ವಭೌಮತ್ವ ಪಡೆಯಲು, ಆ ಮೂಲಕ ಸರ್ವಾಧಿಕಾರಿ ಆಗಲು ಹೊರಟಿದ್ದುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ನಿರ್ಣಯಕ್ಕೆ ಬ್ರೆಕ್ ಬಿದ್ದು ಅವರಿಗೆ ಮುಖಭಂಗವಾಗಿದೆ.
ಬಳ್ಳಾರಿ ಜಿಲ್ಲೆ ನಂದಿಹಳ್ಳಿಯ ಶ್ರೀ ಕೃಷ್ಣದೇವರಾಯ ವಿವಿ ಆವರಣದ ಪುಟ್ಟ ಸಭಾಂಗಣದಲ್ಲಿ “ಸರ್ವಸದಸ್ಯರ ಸಭೆ” ಕರೆಯಲಾಗಿತ್ತು. ಈ ಸಭೆಯೇ ಅನೈತಿಕ ಹಾಗೂ ಕಾನೂನು ಬಾಹಿರ ಎಂದು ಭಾರೀ ಟೀಕೆ ಬಂದಿದ್ದರಿಂದ ಈ ಸಭೆಯನ್ನೆ ರದ್ದು ಮಾಡುವಂತೆ ಮಾಡಿದ “ಕಸಾಪ ಸಮಾನ ಮನಸ್ಕರ ಸಭೆ” ಏಪ್ರಿಲ್ 24 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಸಮಾವೇಶಗೊಂಡಿತ್ತು. ಈ ಮಹತ್ವದ ಸಭೆಗೆ ಗಾಂಧಿ ಭವನದ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಬೆಂಗಳೂರು, ಮಂಡ್ಯ ಜಿಲ್ಲೆಯ ಇನ್ನೂರಕ್ಕು ಹೆಚ್ವು ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷರು ಪಾಲ್ಗೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷ ಮಹೇಶ ಜೋಶಿಯ ಆಡಳಿತ ವೈಖರಿ, ಅವರ ಸರ್ವಾಧಿಕಾರ ಧೋರಣೆ, ಸೇಡಿನ ಕ್ರಮಗಳನ್ನು ಖಂಡಿಸಿದ್ದಲ್ಲದೆ ತತ್ ಕ್ಷಣ ಸರ್ಕಾರ ಮಧ್ಯ ಪ್ರವೇಶಮಾಡಿ, ಅಧ್ಯಕ್ಷಗಿರಿ ಅಮಾನತ್ತು ಮಾಡಿ ಆಡಳಿತಾಧಿಕಾರಿ ನೇಮಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಯವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಈ ಮಹತ್ವದ ಸಭೆಯ ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಡಾ. ಕೆ. ಮರುಳಸಿದ್ದಪ್ಪ ವಹಿಸಿದ್ದರು. ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಡಾ. ಬಂಜಗೆರೆ ಜಯಪ್ರಕಾಶ್, ಡಾ. ವಸುಂಧರಾ ಭೂಪತಿ, ವಿಧಾನಪರಿಷತ್ತಿನ ಮಾಜಿ ಸದಸ್ಯ ಶ್ರೀಕಂಠೇಗೌಡ, ಮಹಿಳಾ ಹೋರಾಟಗಾರರಾದ ವಿಮಲಾ ವಿ.ಎನ್. ಸುನಂದಾ ಜಯರಾಂ, ಮೀರಾ ಶಿವಲಿಂಗಯ್ಯ, ಕನ್ನಡಪರ ಚಿಂತಕರು ಹೋರಾಟಗಾರರರಾದ ಜಾಣಗೆರೆ ವೆಂಕಟರಾಮಯ್ಯ, ಡಾ. ಜಯಪ್ರಕಾಶ ಗೌಡ, ಕೋಡಿಹೊಸಳ್ಳಿ ರಾಮಣ್ಣ, ಮಾವಳ್ಳಿ ಶಂಕರ್, ಸಿ.ಕೆ. ರಾಮೇಗೌಡ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಮೊದಲಾದವರು ಮಾತಾಡಿ, ಜೋಶಿಯ ಆಡಳಿತವನ್ನು ಕೊನೆಗಾಣಿಸಬೇಕು. ಆತನ ದುರ್ವರ್ತನೆಗೆ ತಕ್ಕ ಶಿಕ್ಷೆಯಾಗಬೇಕೆಂದು ಹಲವು ನಿರ್ಣಯಗಳನ್ನು ತೆಗೆದುಕೊಂಡು ಸರ್ಕಾರದ ಗಮನಕ್ಕೆ ತರಲಾಯಿತು.
ಆ ಮುಖ್ಯ ನಿರ್ಣಯಗಳು :
1. ಕಸಾಪ ಅಧ್ಯಕ್ಷರ ಆರ್ಥಿಕ ಅಶಿಸ್ತು ಹಾಗೂ ಸಮ್ಮೇಳನಗಳ ಹಣ ದುರುಪಯೋಗದ ಬಗ್ಗೆ ವಿಚಾರಣೆ ನಡೆಸಿ, ಸರ್ವಾಧಿಕಾರದ ಅಧಿಕಾರ ನಡೆಸುತ್ತಿರುವ ಅಧ್ಯಕ್ಷಗಿರಿ ಅಮಾನತ್ತಿನಲ್ಲಟ್ಟು, ಆಡಳಿತಾಧಿಕಾರಿ ನೇಮಿಸಬೇಕು.
2. ಅಧ್ಯಕ್ಷರಿಗೆ ಹಿಂದಿನ ಸರ್ಕಾರ ಕೊಟ್ಟಿರುವ ಸಚಿವದರ್ಜೆ ಸ್ಥಾನಮಾನ ತತ್ ಕ್ಷ ಹಿಂಪಡೆಯಬೇಕು.
3. ಹಿಂದೆ ಆಗಿರುವ ಎರಡು ತಿದ್ದುಪಡಿಗಳನ್ನು ರದ್ದುಪಡಿಸಬೇಕು.
4. ಅಮಾನತ್ತು ಮಾಡಿರುವ ಕೆಲವು ಆಜೀವ ಸದಸ್ಯರ ಸದಸ್ಯತ್ವವನ್ನು ವಾಪಾಸು ಪಡೆಯಬೇಕು.
5.ಬಳ್ಳಾರಿ ಸಾಹಿತ್ಯ ಸಮ್ಮೇಳನಕ್ಕೆ ರೂ. 40. ಕೋಟಿ ಕೇಳಲಾಗಿದ್ದು ಅಷ್ಟು ದೊಡ್ಡ ಮೊತ್ತ ತೆರಿದಾರರ ಹಣವಾದ್ದರಿಂದ ಸರ್ಕಾರ ಈ ಹಣ ನೀಡುವುದು ಅಗತ್ಯ ಇಲ್ಲ. ಪರಿಷತ್ತೆ ಹಣ ಕ್ರೋಢೀಕರಣ ಮಾಡಿಕೊಂಡು ಸರಳವಾಗಿ ಸಮ್ಮೇಳನ ನಡೆಸಬೇಕು.
6. ಕಸಾಪ ಅಧ್ಯಕ್ಷರ ಸರ್ವಾಧಿಕಾರ ಧೋರಣೆ ಖಂಡಿಸುವ “ಖಂಡನಾ ನಿರ್ಣಯ”ವನ್ನು ಈ ಸಭೆ ಸರ್ವಾನುಮತದಿಂದ ಪಾಸುಪಾಡಿದೆ.
ಈ ಸಭೆಯ ನಂತರ ರಾಜ್ಯದ ಹಲವು ಜಿಲ್ಲೆಯ ಹಲವು ಸಾಹಿತಿಗಳು, ಕನ್ನಡಪರ ಚಿಂತಕರ ಒಂದು ಸಮಿತಿ ರಚಿಸಲಾಗಿದ್ದು ಅದಕ್ಕೆ ಹಿರಿಯ ಚಿಂತಕ ಡಾ. ಮರುಳಸಿದ್ದಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ಜಾಣಗೆರೆ ವೆಂಕಟರಾಮಯ್ಯ, ಆರ್ ಜಿ ಹಳ್ಳಿ ನಾಗರಾಜರನ್ನು ಸಂಚಾಲಕರನ್ನಾಗಿ ನೇಮಿಸಲಾಯಿತು. ಮುಂದಿನ ಸಮಿತಿಯ ಸಭೆ ಭಾನುವಾರ ಸೇರಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.