ಮೀನಾಕ್ಷಿ ಹರೀಶ್
ಮೀನಾಕ್ಷಿ ಹರೀಶ್ ಅವರು ನಿವೃತ್ತ ಬ್ಯಾಂಕ್ ಉದ್ಯೋಗಿ, ಸಾಹಿತ್ಯ ಸಂಗೀತದ ಕಡೆ ಹೆಚ್ಚು ಒಲುವು ಈಗಾಗಲೇ‘ ಮನಸ್ಸೆಂಬ ಮಾಯೆ-ಪ್ರೀತಿಯೆಂಬ ಭ್ರಮೆ ಹಾಗೂ ನನ್ನ ನೆನಪುಗಳು ಎನ್ನುವ ಎರಡು ಕೃತಿಗಳನ್ನು ಹೊರತಂದಿದ್ದಾರೆ ಆದ್ಯಾತ್ಮಿಕ ಕಡೆ ಹೆಚ್ಚು ಒಲವು ಇರುವ ಕಾರಣ ಆದ್ಯಾತ್ಮಿಕ ಬರಹಗಳನ್ನು ಬರೆದಿದ್ದಾರೆ ಮತ್ತೊಂದು ಕತಾ ಸಂಕಲನ ಹೊರತರಲು ಸಿದ್ದತೆ ಮಾಡಿಕೊಂಡಿದ್ದಾರೆ .
ಸರಳತೆ
“ಅಪ್ಪ ಸಾಕು ಸಾಕು ನೀರು ತುಂಬಾ ಬಿಸಿ ಇದೆ?.’ಹು’…’ಹೂ…” “ಅಳಬೇಡ ಸುಮ್ನಿರು. ಬಿಸಿಬಿಸಿಯಾಗಿ ನೀರ್ ಹಾಕ್ಕೊಂಡ್ರೆ ಮೈಕೈ ನೋವೆಲ್ಲ ಹೋಗುತ್ತೆ, ಚೆನ್ನಾಗಿ ನಿದ್ದೆ ಬರುತ್ತೆ. ಮಗ ಸಿದ್ಧಾರ್ಥನ ತಲೆಯನ್ನೊಮ್ಮೆ ಮೊಟಕಿ ನೀರನ್ನು ಸುರಿದನು ಅಪ್ಪ ಕೇಶವ. ಮಗನ ತಲೆಯನ್ನೆಲ್ಲಾ ವರಿಸಿ ಒಗೆದ ಬಟ್ಟೆಗಳನ್ನು ತೊಡಿಸಿ ಬಚ್ಚಲ ಮನೆಯಿಂದ ಹೊರಗೆ ಕರೆದುಕೊಂಡು ಬಂದನು. ಇದು ಕೇಶವನ ಪ್ರತಿ ಭಾನುವಾರದ ದಿನಚರಿಯಾಗಿತ್ತು. ಅವನ ತುಂಬಿದ ಕುಟುಂಬದಲ್ಲಿ ಅಪ್ಪ-ಅಮ್ಮ, ಒಬ್ಬ ತಂಗಿ, ಹೆಂಡತಿ ಹಾ.ಗೂ ಇಬ್ಬರು ಮಕ್ಕಳು. ಅಷ್ಟಾಗಿ ಹೇಳಿಕೊಳ್ಳದಷ್ಟು ಆಸ್ತಿ ಇಲ್ಲದೆ ಇದ್ದರೂ ಯಾವುದಕ್ಕೂ ತೊಂದರೆ ಇರಲಿಲ್ಲ. ತಂಗಿಯ ಓದು ಅದೇ ವರ್ಷದಲ್ಲಿ ಮುಗಿಯುವುದರಲ್ಲಿತ್ತು. ಅವಳ ಮೊದುವೆಯ ಜವಾಬ್ದಾರಿಯೂ ಇತ್ತು.
ಅಂದು ಭಾನುವಾರವಾಗಿದ್ದರಿಂದ, ಮಕ್ಕಳ ಇಷ್ಟದಂತೆ ಊಟಕ್ಕೆ ಬಿಸಿಬೇಳೆ ಭಾತ್ ಮಾಡಬೇಕಾಗಿತ್ತು. “ಜ್ಯೋತಿ..ಹುರಳೀಕಾಯಿ, ಕ್ಯಾರೆಟ್ಟು ಕೊಡು ನಾನು ಕಟ್ ಮಾಡಿ ಕೊಡ್ತೀನಿ”. ಕೇಶವ ಆದಷ್ಟು ತನ್ನ ಮನೆಯವರಿಗೆ ತನ್ನ ಕೈಲಾದ ಸಹಾಯವನ್ನು ಮಾಡುತ್ತಿದ್ದನು. ಅಡುಗೆ ಮಾಡುವುದಾಗಲಿಲೀ, ಮಕ್ಕಳಿಗೆ ಸ್ನಾನ ಮಾಡಿಸುವುದರಿಂದ ಹಿಡಿದು ಬಟ್ಟೆ ಒಗೆಯುವುದು, ಗಿಡಗಳಿಗೆ ನೀರನ್ನು ಹಾಕುವುದು… ಹೀಗೆ ಎಲ್ಲ ರೀತಿಯ ಕೆಲಸಗಳನ್ನು ಮಾಡುತ್ತಿದ್ದನು.
ಒಂದು ದಿನ ಜ್ಯೋತಿ ತನ್ನ ಗಂಡನ ಬಳಿ ಬಂದು, “ರೀ ನೀವು ಹೀಗೆ ಮಕ್ಕಳಿಗೆ ನೀರು ಹಾಕುವುದಾಗಲೀ, ಬಾಗಿಲಿಗೆ ನೀರು ಹಾಕಿ ಗುಡಿಸುವುದು…. ಈ ತರಹದ ಕೆಲಸಗಳನ್ನೆಲ್ಲಾ ಮಾಡಬೇಡಿ. ನಿಮ್ಮನ್ನು ನೋಡಿ ಅಕ್ಕಪಕ್ಕದ ಮನೆಯವರೆಲ್ಲಾ, ‘ಒಳ್ಳೆ ಹೆಂಗಸಿನ ತರ ಮನೆಕೆಲಸ ಮಾಡುತ್ತಾನೆ’ ಎಂದು ಆಡಿಕೊಂಡು ನಗುತ್ತಾರೆ. ನಾನು ಎಷ್ಟೋ ಸಲ ನನ್ನ ಕಣ್ಣಾರೆ ನೋಡಿದ್ದೇನೆ ಅವರು ನಗುವುದನ್ನು, ನನಗೆ ಮುಜುಗರವಾಗುತ್ತದೆ”.
“ಜ್ಯೋತಿ ಅವರಿವರ ಬಗ್ಗೆ ಯೋಚಿಸಬೇಡ. ಇದು ನನ್ನ ಮನೆ. ನನಗೆ ಇಷ್ಟ ಬಂದ ಹಾಗೆ ನಾನಿರುತ್ತೇನೆ. ಅವರಿವರಿಗೆ ಹೆದರಿ ನಾನು ಬದುಕಬೇಕಾಗಿಲ್ಲ. ಮನೆ ಕೆಲಸ ಮಾಡಿದರೆ ಅವಮಾನವೇನಿಲ್ಲ”.
“ಹಾಗಲ್ಲಾರೀ, ಅಕ್ಕ ಪಕ್ಕದ ಮನೆಯವರು ಬೆಳಗ್ಗೆ ಎದ್ದು ಜಾಗಿಂಗ್ ಅಂತಲೋ, ಕ್ರಿಕೆಟ್ ಅಂತಲೊ ಮತ್ತೆ ಲಾಲಬಾಗ್ ನಲ್ಲಿ ತನ್ನ ಗೆಳೆಯರೊಂದಿಗೆ ವೇಳೆಯನ್ನು ಕಳೆಯುವುದಕೆಂದು ಹೋಗುತ್ತಾರೆ”.
“ನೀವಾದರೋ ಹೆಂಗಸಂತೆ ಮನೆ ಕೆಲಸ ಮಾಡುತ್ತೀರಿ. ನನಗೆ ಇದು ಇಷ್ಟ ವಾಗೋಲ್ಲ”.
“ನನಗೆ ಸಹಾಯಕೆಂದು ಅತ್ತೆ ಮತ್ತು ನಿಮ್ಮ ತಂಗಿ ಹೇಮಾ ಇದ್ದಾರೆ, ಯೋಚಿಸಬೇಡಿ”.
“ಜ್ಯೋತಿ ಅಮ್ಮ ತಮ್ಮ ಕಾಲದಲ್ಲಿ ದುಡಿದು ದುಡಿದು ಸಾಕಾಗಿಹೋಗಿದ್ದಾರೆ”.
” ತಂಗಿ ಇನ್ನೂ ಓದುತ್ತಿದ್ದಾಳೆ”.
“ಆವಳು ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು, ಆಗಲೇ ನನಗೆ ಸಂತೋಷ”.
“ನಿನಗೆ ನನ್ನ ಈ ಗುಣದಿಂದ ಬೇಸರವೇ”?
“ನನ್ನನ್ನು ಗಂಡ ನೆಂದು ಹೇಳಿಕೊಳ್ಳಲು ಅವಮಾನವೇ”? ಅಯ್ಯೋ ’ರಾಮ.. ರಾಮ’, ನಾನೆಂದೂ ಹೀಗೆ ಯೋಚಿಸಿಲ್ಲ ರೀ… ನೀವು ಹೊರಗೆ ದುಡಿಯುವವರು. ಅಲ್ಲಿಯೂ ಕೆಲಸ ಮನೆಯಲ್ಲೂ ಕೆಲಸವೇಕೆಂದು ಹೇಳಿದೆ ಅಷ್ಟೇ.” ಹೆಂಡತಿಯ ಮೇಲೆ ಪ್ರೀತಿ ತುಂಬಿ ಬಂತಾಗಿ ಅವಳನ್ನಪ್ಪಿ ಮುದ್ದಿಸಿದನು ಕೇಶವ.
ಗಂಡನ ಅಪಾರ ಪ್ರೀತಿಯ ಬಂಧನದಲ್ಲಿ ತನ್ನನ್ನು ತಾನೇ ಮರೆತುಹೋಗುತ್ತಿದ್ದಳು ಜ್ಯೋತಿ. ಪ್ರೀತಿ, ವಿಶ್ವಾಸದ ಮುಂದೆ ಅವಮಾನದ ಭಾವನೆಯಾದರೂ ಸುಳಿಯುವುದೇ!. ಅಪ್ಪ ಅಮ್ಮನ ಸಂಭಾಷಣೆಯು ಹೊರಗೆ ಆಟವಾಡುತ್ತಿದ್ದ ಮಗ ಸಿದ್ಧಾರ್ಥನ ಕಿವಿಗೆ ಬಿತ್ತು. ಇನ್ನೂ ೮ನೇ ತರಗತಿಯಲ್ಲಿ ಓದುತ್ತಿದ್ದ ಅವನಿಗೆ ಅಪ್ಪನಿಂದ ಜೀವನದ ಅರ್ಧ ಪಾಠವು ಅರ್ಥವಾಗಿ ಹೋಗಿತ್ತು. ಅಪ್ಪ ಅಮ್ಮನೆಂದರೆ ಏನೋ ಗೌರವ ಅವನಿಗೆ. ಕಷ್ಟದಲ್ಲೂ ಚೆನ್ನಾಗಿ ಓದಿ, ಮುಂದೆ ದೊಡ್ಡ ಕೆಲಸಕ್ಕೆ ಸೇರಿ ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂಬ ಮನಸ್ಥಿತಿಯನ್ನು ಅವನು ಆ ಪುಟ್ಟ ವಯಸ್ಸಿನಲ್ಲಿಯೇ ಹೊಂದಿದ್ದನು.
” ರೀ ಇವತ್ತು ಸ್ವಲ್ಪ ಬೇಗನೆ ಬನ್ನಿ, ಸಾಯಂಕಾಲ ಎಲ್ಲರೂ ದೇವಸ್ಥಾನಕ್ಕೆ ಹೋಗಬೇಕು, ಇಂದು ನಾವು ಮದುವೆಯಾದ ದಿನ”.
“ನಾನೆಂದಾದರೂ ಮರೆತಿದ್ದೇನೆಯೇ ಜ್ಯೋತಿ?”
“ಖಂಡಿತ ನಾನು ಬೇಗನೆ ಬರುತ್ತೇನೆ ನೀವೆಲ್ಲರೂ ರೆಡಿಯಾಗಿರಿ”.
ತನ್ನ ಬೈಸಿಕಲ್ ನ ತಳ್ಳಿಕೊಂಡು, ನಂತರ ಅದರ ಮೇಲೆ ಹತ್ತಿ ಕುಳಿತು ತನ್ನ ಆಫೀಸಿಗೆ ಹೊರಟನು. ಮನೆಯಲ್ಲಿ ಸ್ಕೂಟರ್ ಇದ್ದರೂ ಸಹ, ಕೇಶವ ಬೈಸಿಕಲ್ ನಲ್ಲೇ ತನ್ನ ಕಚೇರಿಗೆ ಹೋಗುತ್ತಿದ್ದನು. ಅವನ ಉದ್ದೇಶ ಹಣವನ್ನು ಉಳಿಸುವುದಕ್ಕಾಗಿರಲಿಲ್ಲ. ಸ್ಕೂಟರ್ ನ ಅವಶ್ಯಕತೆ ಅವನಿಗಿರಲಿಲ್ಲ.
” ವೆಂಕಟೇಶ್ ನಿಮ್ಮ ಪಕ್ಕದ ಮನೆ ಕೇಶವ ಯಾವಾಗಲೂ ಹೆಂಡತಿಯ ಹಿಂದೆ-ಮುಂದೆ ಸುತ್ತುತ್ತಿರುತ್ತಾನೆ. ಅವನನ್ನು ನೋಡಿದರೆ ಅವನು ನಿಜವಾಗಲೂ ಗಂಡಸೇ!! ಎಂದು ನಗು ಬರುತ್ತದೆ”.
“ಹೌದು ಕೃಷ್ಣಮೂರ್ತಿ, ನಾನು ಎಸ್ಟೋ ಬಾರಿ ನನ್ನ ರೂಮಿನ ಕಿಟಕಿಯಿಂದ ನೋಡಿದ್ದೇನೆ”.
ಇಬ್ಬರೂ ಜೋರಾಗಿ ನಕ್ಕರು. ತನ್ನ ಶಾಲೆಯಿಂದ ಮರಳಿ ಮನೆಗೆ ಬರುತ್ತಿದ್ದ ಸಿದ್ದಾರ್ಥನ ಕಿವಿಗೆ ಇವರ ಮಾತುಗಳು ಅಲೆ ಅಲೆಯಾಗಿ ಬಂದು ಅಪ್ಪಳಿಸಿತು. ಬೇಸರಗೊಂಡು ಮನೆಯೊಳಗೆ ಓಡಿ ಬಂದನು. ಪ್ರತಿದಿನವೂ ನಗುನಗುತ ಮನೆ ಒಳಗೆ ಬರುತ್ತಿದ್ದ ಮಗನ ಮುಖವು ಇಂದು ಸಪ್ಪಗಾಗಿ ಇರುವುದನ್ನು ನೋಡಿ ಜ್ಯೋತಿಯು ” ಏನಪ್ಪಾ ಏಕೆ ಸಪ್ಪಗಿದ್ದೀಯ!! ಸರಿ ಇದ್ದೀಯ ತಾನೇ?”.
“ಅಮ್ಮ ನೋಡು ಆ ಪಕ್ಕದ ಮನೆ ವೆಂಕಟೇಶ ಮತ್ತೆ ಕೃಷ್ಣಮೂರ್ತಿಗಳು ಅಪ್ಪನ ಬಗ್ಗೆ ಮಾತಾಡಿಕೊಂಡು ನಗುತ್ತಿದ್ದರು, ಅದಕ್ಕೆ ಅವರನ್ನು ನೋಡಿ ಕೋಪ ಬಂತು ನನಗೆ “.
“ಅಮ್ಮ ವೆಂಕಟೇಶ ರವರ ಮನೆಯಲ್ಲಿ ಇರುವವರು ಮೂರೇ ಜನ, ವೆಂಕಟೇಶ, ಅವರ ಹೆಂಡತಿ ಮತ್ತು ಮಗಳು. ಅವರಿಗೆ ಇನ್ಯಾವ ಜವಾಬ್ದಾರಿ ಇಲ್ಲವೇ ಇಲ್ಲ. ಒಂದೇ ಊರಲ್ಲಿ ಇದ್ದರೂ ಸಹ, ಅಪ್ಪ-ಅಮ್ಮನನ್ನು ದೂರವಿಟ್ಟಿದ್ದಾರೆ. ಅವರಿಗೆ ಇನ್ನೇನು ಕೆಲಸ ಹೇಳು? ಅಪ್ಪನನ್ನು ಆಡಿಕೊಳ್ಳುತ್ತಾರೆ”.
ಮಗನ ಮಾತನ್ನು ಕೇಳಿ ಒಂದು ಕ್ಷಣ ಆಶ್ಚರ್ಯಗೊಂಡು, ಮಗನ ಬಳಿಗೆ ಬಂದು ಮಗನ ತಲೆಯನ್ನು ಸವರಿ ಮುತ್ತಿಟ್ಟಳು. ರಾತ್ರಿ ಈ ವಿಷಯವನ್ನು ಗಂಡನಿಗೆ ತಿಳಿಸಿದಳು. ಮಗನ ಬಗ್ಗೆ ಕೇಶವನಿಗೆ ಗೌರವ ಹುಟ್ಟಿತು.
“ಮಕ್ಕಳು ತಮ್ಮ ಮನೆಯ ಮತ್ತು ಹೊರಗಿನ ಪ್ರಪಂಚದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆಂದು ಅರಿತುಕೊಂಡಳು ಜ್ಯೋತಿ”. ಮಗನ ಸೂಕ್ಷ್ಮ ಬುದ್ಧಿಗೆ ಸಂತೋಷ ಪಟ್ಟಳು.
ಸಾಯಂಕಾಲ ಎಲ್ಲರೂ ಬೇಗನೆ ತಯಾರಾಗಿ ಕುಳಿತಿದ್ದರು. ಕೇಶವ ಬಂದ ತಕ್ಷಣ ಅವನಿಗೆ ಕಾಫಿ ತಿಂಡಿಯ ಉಪಚಾರವನ್ನು ಮಾಡಿ ಅವನೊಂದಿಗೆ ಎಲ್ಲರೂ ದೇವಸ್ಥಾನಕ್ಕೆ ಹೋದರು. ಗಂಡ-ಹೆಂಡತಿಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾಯಿತು. ಇಬ್ಬರ ಮನದಲ್ಲೂ ವೈವಾಹಿಕ ಜೀವನದ ಸಾರ್ಥಕತೆಯ ಭಾವವಿತ್ತು. ಎಲ್ಲರೂ ಮನೆಗೆ ಬಂದು ಊಟ ಮಾಡಿ ತಮ್ಮ ತಮ್ಮ ಕೋಣೆಗೆ ಹೋದರು. ಕೆಲಸ ಮುಗಿಸಿ ತನ್ನ ಕೂಣೆಗೆ ಹೋದ ಜ್ಯೋತಿಗೊಂದು ಆಶ್ಚರ್ಯ ಕಾದಿತ್ತು. ಕೇಶವನು ಜ್ಯೋತಿಯ ಕೈ ಹಿಡಿದೆಲೆಳೆದು ತನ್ನ ಪಕ್ಕ ಕೂರಿಸಿಕೊಂಡನು. ದಿಂಬಿನ ಪಕ್ಕದಲ್ಲಿದ್ದ ರೇಶಿಮೆ ಸೀರೆಯನ್ನು ಅವಳ ಹೆಗಲಮೇಲೆ ಹೊದಿಸಿ ಅವಳನ್ನು ಕಣ್ತುಂಬಾ ನೋಡಿ ಅವಳ ಹಣೆಯನ್ನು ಚುಂಬಿಸಿದನು. ಹೆಂಡತಿಗೆ ಸಿಗಬೇಕಾದ ಪ್ರೀತಿಯಲ್ಲಿ ಒಂದಿಷ್ಟೂ ಕಡಿಮೆ ಮಾಡಿರಲಿಲ್ಲ ಕೇಶವ .
ಅಣ್ಣ ನನ್ನ ’ಎಂಕಾಂ’ ಪರೀಕ್ಷೆಯ ಫಲಿತಾಂಶ ಬಂತು. “ನಾನು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದೇನೆ”.
ಹೇಮಾ ಓಡಿ ಬಂದು ಕಾಫಿ ಕುಡಿಯುತ್ತಿದ್ದ ಅಣ್ಣನಿಗೆ ವಿಷಯವನ್ನು ತಿಳಿಸಿದಳು. ಕೇಶವನಿಗೆ ಎಲ್ಲಿಲ್ಲದ ಸಂತೋಷವಾಯಿತು. ತನ್ನ ಆಸೆ ಫಲಿಸಿತು ಎಂಬ ಸಂತೋಷದಿಂದ, ಅಡುಗೆ ಮನೆಗೆ ಹೋಗಿ ಒಂದಿಷ್ಟು ಸಕ್ಕರೆಯನ್ನು ತಂದು ತಂಗಿಗೆ ತಿನಿಸಿದನು. ಈ ದೃಶ್ಯವನ್ನು ನೋಡಿ ಕೇಶವನ ತಂದೆ ಭಾವುಕರಾದರು.
“ನಾನು ಮಾಡಬೇಕಾದ ಕರ್ತವ್ಯವನ್ನು ನನ್ನ ಮಗ ಮಾಡುತ್ತಿದ್ದಾನೆಂಬ ಹೆಮ್ಮೆ ಯಾದರೂ, ಒಳಗೊಳಗೆ ಮಗನ ಬಗ್ಗೆ ಕನಿಕರ ವಾಯಿತು”.
ತಮ್ಮ ಅನಾರೋಗ್ಯದ ಕಾರಣದಿಂದ, ಮಗ ಕೇಶವನನ್ನು ಹೆಚ್ಚು ಓದಿಸಕ್ಕಾಗಲಿಲ್ಲ. ಹಣದ ಪ್ರಭಾವದಿಂದ ಅವನು ಬರೀ ’ಬಿಕಾಂ’ ಅನ್ನು ಮಾತ್ರ ಓದಿ ಕೆಲಸಕ್ಕೆ ಸೇರಿಬಿಟ್ಟಿದ್ದನು. ಎಲ್ಲಾ ಜವಾಬ್ದಾರಿ ಯನ್ನು ವಹಿಸಿಕೊಂಡಿದ್ದನು. ಈ ವಿಷಯದಲ್ಲಿ ಇಂದಿಗೂ ಕೆಶವನ ತಂದೆ ಕೊರಗುತ್ತಲೇ ಇರುತ್ತಾರೆ. ದುಃಖವನ್ನು ಮರೆತು ಮಗ ಮತ್ತು ಮಗಳಿಗೆ ಹಾರೈಸಿದರು.
ಒಂದೆರಡು ವಾರದಲ್ಲೇ ಹೇಮಾಗೆ ಒಳ್ಳೆಯ ಕೆಲಸ ಸಿಕ್ಕಿತು. ಮನೆಯಲ್ಲಿ ಸಂತೋಷದ ಹೊಳೆ ಹರಿಯಿತು. ಹೇಮಾ ಕೆಲಸಕ್ಕೆ ಹೂಗಲಾರಂಭಿಸಿದಳು. ದಿನಗಳು ಕಳೆದವು… ಒಂದೆರಡು ವರ್ಷದಲ್ಲಿ ತನ್ನ ತಂಗಿಯ ಮದುವೆಯನ್ನು ಚೆನ್ನಾಗಿ ಮಾಡಿದನು. ಅವಳಿಲ್ಲದೆ ಎಲ್ಲರಿಗೂ ಬೇಸರ ವಾಗುತ್ತಿತ್ತು.
ಮಗ ೧೦ನೇ ತರಗತಿಗೆ ಹೋದನು. ಅವನು ಓಡಾಡುವುದಕ್ಕೆ ಒಂದು ಬೈಕ್ ತೆಗೆದು ಕೊಟ್ಟರೆ ಒಳ್ಳೆಯದೇನಿಸಿತು.
“ಸಿದ್ಧಾರ್ಥ ನಾಳೆ ನನ್ನ ಜೊತೆ ಬಾ, ಮೊಪೆಡ್ ಷೋರೂಮ್ಗೆ ಹೋಗಿ ಬರೋಣ. ನಿನಗೊಂದು ಬೈಕ್ ತೆಗೆದುಕೊಡುತ್ತೀನಿ”.
“ಅಯ್ಯೋ ಬೇಡಪ್ಪ ಏಕೆ ಸುಮ್ಮನೆ, ನನಗೇನೂ ತೊಂದರೆ ಆಗುತ್ತಿಲ್ಲ”.
“ನಿನಗೆ ಅರ್ಥ ಆಗಲ್ಲ ತುಂಬಾ ಓಡಾಡೋಕೆ ಇರುತ್ತೆ ಶಾಲೆಗೆ, ಪಾಠಕ್ಕೆ ಅಂತ”.
“ಒಂದು ಕೆಲಸ ಮಾಡಪ್ಪಾ, ನನಗೆ ಬಂದು ಸೈಕಲ್ ತೆಕ್ಕೋಡು”.
“ಸೈಕಲ್ ಯಾಕೋ! ನಿನ್ನ ಸ್ನೇಹಿತರೆಲ್ಲ ಬೈಕ್ನಲ್ಲಿ ಬರುತ್ತಾರಲ್ಲೋ”.
“ನಿನ್ನ ಕಛೇರಿಯಲಿ, ನಿನ್ನ ಸಹದ್ಯೋಗಿಗಳು ಗಾಡಿಯಲ್ಲೇ ಬರುತ್ತಿದ್ದರು, ಆದರೆ ನೀನು ಸೈಕಲ್ನಲ್ಲೇ ಹೋಗುತ್ತಿದ್ದೆ. ನಿನ್ನ ಮಗ ನಾನು. ನಿನ್ನ ಆಚಾರ ವಿಚಾರಗಳೆಲ್ಲ ಬಂಗಾರದಂತೆ”.
ಮಗನ ಸರಳತೆಯನ್ನು ನೋಡಿ ಸಿದ್ಧಾರ್ಥನು ಹೆಮ್ಮೆಪಟ್ಟನು. ಸಿದ್ಧಾರ್ಥ ಅಪ್ಪನನ್ನು ನೋಡಿ ನಗುತ್ತಾ…..
“ನಾನು ಸಹ ನಿನ್ನ ಹಾಗೆಯೇ ಆಗಬೇಕಪ್ಪಾ.”
– ಮೀನಾಕ್ಷಿ ಹರೀಶ್.