ವಿಪ್ರೋ ಹೆಲ್ತ್ ಕೇರ್ ನಿಂದ ರಾಜ್ಯದಲ್ಲಿ 8,000 ಕೋಟಿ ರೂ. ಹೂಡಿಕೆ
ಬೆಂಗಳೂರು,ಫೆ,12-ವಿಪ್ರೋ-ಜಿಇ ಹೆಲ್ತ್ ಕೇರ್ ಸಂಸ್ಥೆಯು ಕರ್ನಾಟಕದ ಆರೋಗ್ಯಸೇವೆಗಳ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ ಇನ್ನೂ 8,000 ಕೋಟಿ ರೂ. ಹೂಡಿಕೆ ಮಾಡಲಿದೆ. ಇದು ಕಳೆದ ಎರಡು ದಶಕಗಳಲ್ಲಿ ವಿನಿಯೋಗಿಸಿರುವ 32 ಸಾವಿರ ಕೋಟಿ ರೂ. ಬಂಡವಾಳದ ಮುಂದುವರಿದ ಭಾಗವಾಗಿದೆ ಎಂದು ಕಂಪನಿಯ ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥ ಚೈತನ್ಯ ಸರವಟೆ ಹೇಳಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬುಧವಾರ ನಡೆದ `ಜಗತ್ತಿನ ಅಗತ್ಯಗಳಿಗೆ ಮೇಕ್ ಇನ್ ಇಂಡಿಯಾ ಉಪಕ್ರಮ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ವಿಪ್ರೋ-ಜಿಇ ಕೇವಲ ಕಿಲೋಮೀಟರ್ ಅಂತರದಲ್ಲಿ ನಾಲ್ಕು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಇಲ್ಲಿ 30ಕ್ಕೂ ಹೆಚ್ಚು ಔಷಧೋತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ. ಜೊತೆಗೆ 5 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿರುವ ಆರ್ & ಡಿ ಕೇಂದ್ರವನ್ನೂ ವಿಪ್ರೋ ಹೊಂದಿದೆ. ಸಮಾಜದ ಋಣವನ್ನು ತೀರಿಸುವ ನೈತಿಕ ಹೊಣೆಗಾರಿಕೆ ಅರಿತು ಸರಕಾರದ ಹಲವು ಹಲವು ಯೋಜನೆಗಳಲ್ಲೂ ಕಂಪನಿ ಕೈಜೋಡಿಸಿದೆ. ಜತೆಗೆ ರಾಯಚೂರಿನಂತಹ ಹಿಂದುಳಿದ ಜಿಲ್ಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ವಿಪ್ರೊ-ಜಿಇ ಹೆಲ್ತ್ ಕೇರ್ ಇದುವರೆಗೆ 300 ಮಿಲಿಯನ್ ರೋಗಿಗಳಿಗೆ ತನ್ನ ಸೇವೆಗಳನ್ನು ಒದಗಿಸಿದೆ. ಬೇಡಿಕೆ, ಸಾಮರ್ಥ್ಯ ಮತ್ತು ಜನಸಂಖ್ಯೆಗಳೇ ಕರ್ನಾಟಕ ಮತ್ತು ಭಾರತದ ಶಕ್ತಿಗಳಾಗಿವೆ. ವಿಶೇಷವಾಗಿ ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಪೋಷಿಸುವ ಸಂಸ್ಕೃತಿ ಹೊಂದಿದೆ. ಇದರಿಂದಾಗಿ ಇಲ್ಲಿಂದ ಆಫ್ರಿಕಾ ಸೇರಿದಂತೆ ಜಗತ್ತಿನ ನಾನಾ ದೇಶಗಳಿಗೆ ರಫ್ತು ವಹಿವಾಟು ಅಗಾಧವಾಗಿದೆ. ಉದ್ಯಮಗಳ ಜಾಗತಿಕ ಸಾಮರ್ಥ್ಯ ಕೇಂದ್ರಗಳು ನೆಲೆಯೂರಿರುವುದು ರಾಜ್ಯದ ಕೈಗಾರಿಕಾಸ್ನೇಹಿ ನೀತಿಯ ಫಲವಾಗಿದೆ ಎಂದು ಸರವಟೆ ನುಡಿದರು.

Adavatigement
ಬೆಳಗಾವಿ ಏರೋಸ್ಪೇಸ್ ಕೇಂದ್ರ
ಇದೇ ಗೋಷ್ಠಿಯಲ್ಲಿ ಮಾತನಾಡಿದ ಏಕಸ್ ಕಂಪನಿ ಸಿಇಒ ಅರವಿಂದ್ ಮೆಳ್ಳಿಗೇರಿ, `ಬೆಳಗಾವಿಯು ದೇಶದ ವೈಮಾಂತರಿಕ್ಷ ವಲಯದ ಕೇಂದ್ರವಾಗಿ ಹೊರಹೊಮ್ಮಿದ್ದು, ಈ ವಲಯದ ಶೇಕಡ 70ರಷ್ಟು ಬಿಡಿಭಾಗಗಳನ್ನು ಪೂರೈಸುತ್ತಿದೆ. ಇವುಗಳ ಗುಣಮಟ್ಟವು ಯಾವುದೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತಯಾರಾಗುವ ಸಾಧನಗಳಿಗಿಂತ ಕಿಂಚಿತ್ತೂ ಕಡಿಮೆ ಇಲ್ಲ. ಸರಕಾರವು ಮೂಲಸೌಕರ್ಯ ಅಭಿವೃದ್ಧಿಗೆ ಇನ್ನಷ್ಟು ಗಮನ ಹರಿಸಿದರೆ, ಇಡೀ ಜಗತ್ತು ಬೆಳಗಾವಿಯತ್ತ ನೋಡುವ ದಿನ ದೂರವಿಲ್ಲ’ ಎಂದರು.
ದೇಶದಲ್ಲಿ 15 ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ದ್ವಿತೀಯ ಸ್ತರದ ನಗರಗಳಿಗೂ ವಿಮಾನ ಸಂಪರ್ಕ ಸಾಧ್ಯವಾಗಿದೆ. ಏಕಸ್ ಮೂರು ಜಂಟಿ ಸಹಭಾಗಿತ್ವ ಹೊಂದಿದ್ದು, 2 ಮಿಲಿಯನ್ ಗಂಟೆಗಳಷ್ಟು ಅಗಾಧ ಉತ್ಪಾದನಾ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಚೀನಾಕ್ಕೆ ಹೋಲಿಸಿದರೆ ನಮ್ಮಲ್ಲಿ ವೆಚ್ಚವು ಮೂರನೇ ಒಂದು ಭಾಗದಷ್ಟು ಕಡಿಮೆ ಇದೆ. ಈ ನಿಟ್ಟಿನಲ್ಲಿ ಬೆಳಆವಿ ಮತ್ತು ಹುಬ್ಬಳ್ಳಿಯಲ್ಲಿ 5,000 ವೃತ್ತಿಪರರು ಹಗಲಿರುಳೂ ದುಡಿಯುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.